ಕೋವಿಡ್ ಮೂರನೇ ಅಲೆ ಅಕ್ಟೋಬರ್‌ನಲ್ಲಿ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಅದಕ್ಕೂ ಮುನ್ನವೇ ಸೆಪ್ಟಂಬರ್ ಅಂತ್ಯದ ಒಳಗೆ ರಾಜ್ಯದ ಪ್ರತಿಯೊಬ್ಬರಿಗೂ ಎರಡು ಡೋಸ್ ಉಚಿತ ಲಸಿಕೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದ ಸಾವಿರಾರು ಕಡೆ ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ಲಸಿಕೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರ ಅದನ್ನು ಮಾರಾಟಕ್ಕೆ ಇಡಕೂಡದು. ಖಾಸಗಿ ಆಸ್ಪತ್ರೆಗಳ ದುಬಾರಿ ಬೆಲೆಯ ಲಸಿಕೆ ದಂಧೆ ನಿಲ್ಲಿಸಬೇಕು. ಕರ್ನಾಟಕದ ಪ್ರತಿಯೊಬ್ಬರಿಗೂ ಜೂನ್ ತಿಂಗಳ ಅಂತ್ಯದೊಳಗೆ ಮೊದಲನೇ ಡೋಸ್ ಕೋವಿಡ್ ಲಸಿಕೆ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಎರಡನೇ ಡೋಸ್ ಉಚಿತವಾಗಿ ನೀಡಬೇಕು. ಚುನಾವಣಾ ಬೂತ್ ಗಳು, ಪೊಲೀಯೋ ವ್ಯಾಕ್ಸಿನ್ ಬೂತ್ ರಚನೆ ಮಾಡುವ ಹಾಗೆ ನಾಗರಿಕರು ನಡೆದುಹೋಗುವಷ್ಟು ಹತ್ತಿರದಲ್ಲೇ ಲಸಿಕೆ ಬೂತ್ ಸ್ಥಾಪಿಸಿ, ಜನರನ್ನು ಕಾಯಿಸದೆ, ಸತಾಯಿಸದೆ ಲಸಿಕೆಗಳನ್ನು ನೀಡಬೇಕು ಎಂದು ಆಗ್ರಹಿಸಲಾಯಿತು.
ಕರ್ನಾಟಕದಲ್ಲಿ ಹಣ ತೆತ್ತರೂ ಸಿಗದ ಲಸಿಕೆ, ಗುಜರಾತಿನಲ್ಲಿ ಉಚಿತವಾಗಿ ಸಿಗುತ್ತಿರುವುದಾದರೂ ಹೇಗೆ? ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಇನ್ನೆಷ್ಟು ಶ್ಮಶಾನಗಳು ನಿರ್ಮಾಣವಾಗಬೇಕು? ಬೇಗ ಲಸಿಕೆ ಕೊಡಿ, ನಾಡಜನರ ಪ್ರಾಣ ಕಾಪಾಡಿ ಎಂಬ ಭಿತ್ತಿಫಲಕಗಳನ್ನು ಹಿಡಿದು ಕರವೇ ಕಾರ್ಯಕರ್ತರು ಮತ್ತು ಜನಸಾಮಾನ್ಯರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಲೇ ತಮ್ಮ ತಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ ಎಂಬ ಹೆಸರಿನಲ್ಲಿ ಇಂದು ಬೆಳಿಗ್ಗೆ 9.10 ಗಂಟೆಗೆ ಏಕಕಾಲದಲ್ಲಿ ಸಾವಿರ ಕಡೆ ಪ್ರತಿಭಟನೆ ನಡೆಸಲು ಕರೆ ನೀಡಲಾಗಿತ್ತು. ಆದರೆ ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆಗಳು ಆರಂಭವಾಗಿವೆ. ಜಗಳೂರು ತಾಲ್ಲೂಕು ಬಸವನಕೋಟೆ ಗ್ರಾಮವೊಂದರಲ್ಲೇ 60 ಪ್ರತಿಭಟನೆಗಳು ನಡೆದಿವೆ. ನಾವು ಆರಂಭದಲ್ಲಿ ಒಂದು ಸಾವಿರ ಪ್ರತಿಭಟನೆಗಳ ಗುರಿಯಿಟ್ಟುಕೊಂಡಿದ್ದೆವು. ಆದರೆ ಪ್ರತಿಭಟನೆಗಳ ಪ್ರವಾಹವೇ ಹರಿದುಬರುತ್ತಿದೆ. ಕೆಲವೊಂದು ಜಿಲ್ಲೆಗಳು ಏಕಾಂಗಿಯಾಗಿಯೇ ಸಾವಿರ ಪ್ರತಿಭಟನೆಗಳನ್ನು ದಾಟುತ್ತಿವೆ ಎಂದು ಕರವೇ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿನೇಶ್ ಕುಮಾರ್ ಎಸ್‌ಸಿ ತಿಳಿಸಿದ್ದಾರೆ.
ಮಾತು ತಪ್ಪದೆ ಲಸಿಕೆ ಕೊಡಿ, ಇಲ್ಲವೆ ಅಧಿಕಾರ ಬಿಡಿ ಮತ್ತು #vaccinatekarnataka ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿಯೂ ಟ್ರೆಂಡ್ ಮಾಡಲು ಕರವೇ ಕಾರ್ಯಕರ್ತರು ಮುಂದಾಗಿದ್ದಾರೆ. ಇಂದಿನ ಪ್ರತಿಭಟನೆಯ ಕೆಲ ಚಿತ್ರಗಳು ಈ ಕೆಳಗಿನಂತಿವೆ.


ಇದನ್ನೂ ಓದಿ; ಪ್ರಧಾನಿ ಭಾಷಣ ಪೂರ್ಣ ಪೊಳ್ಳು- ವೈರಲ್ ಆದ ಶಿವಸುಂದರ್ ಪತ್ರ


