HomeUncategorizedರೋಗ ನಿರೋಧಕತೆ ಮತ್ತು ಲಸಿಕೆ; ಸಂಶೋಧನೆಯ ಇತಿಹಾಸ ಮತ್ತು ವಿಜ್ಞಾನ: ಭಾಗ-2

ರೋಗ ನಿರೋಧಕತೆ ಮತ್ತು ಲಸಿಕೆ; ಸಂಶೋಧನೆಯ ಇತಿಹಾಸ ಮತ್ತು ವಿಜ್ಞಾನ: ಭಾಗ-2

- Advertisement -
- Advertisement -

ವೈರಸ್‌ಗಳನ್ನು ಕೃತಕ ಆವರಣದಲ್ಲಿ (ಕೋಳಿಯ ಭ್ರೂಣಗಳಲ್ಲಿ) ಬೆಳೆಸುವುದಕ್ಕೆ ಕಲ್ಚರ್ ಎನ್ನುತ್ತಾರೆ, ಈ ರೀತಿ ವೈರಸ್ ಕಲ್ಚರ್ ಮಾಡುವಲ್ಲಿ ಮೊದಲ ಭಾರೀ ಯಶಸ್ಸು ಕಂಡಿದ್ದು 1937ರಲ್ಲಿ. ರಾಕ್‌ಫೆಲರ್ ಸಂಸ್ಥೆಯಲ್ಲಿ ಬ್ಯಾಕ್ಟೀರಿಯತಜ್ಞರು ಸೊಳ್ಳೆಗಳಿಂದ ಹರಡುವ ಹಳದಿ ಜ್ವರ ಎಂಬ ರೋಗ, ಯೆಲ್ಲೋ ಫೀವರ್‌ಗೆ ರಕ್ಷಣೆಯಗಾಗಿ ಸಂಶೋಧನೆ ಮಾಡುತ್ತಿದ್ದರು. ಸೊಳ್ಳೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವದಂತೂ ಅಸಾಧ್ಯವಾಗಿತ್ತು ಹಾಗೂ ಸೋಂಕಿಗೊಳಗಾದ ಮಂಗಗಳು ಉಷ್ಣವಲಯದ ಭೂಭಾಗದಲ್ಲಿ ಈ ರೋಗದ ಆತಂಕ ಸದಾಕಾಲ ಇರುವಂತೆ ಮಾಡಿದ್ದವು. ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಬ್ಯಾಕ್ಟೀರಿಯ ತಜ್ಞ ಮ್ಯಾಕ್ಸ್ ಥೈಲರ್ ಅವರು ಯೆಲ್ಲೋ ಫೀವರ್ ವೈರಸ್ ದುರ್ಬಲಗೊಂಡ ವೈರಸ್‌ಅನ್ನು ಬೆಳೆಸುವ ಕೆಲಸ ಕೈಗೆತ್ತಿಕೊಂಡರು. ಅವರು ಕೇವಲ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುವ ಒಂದು ರೂಪಾಂತರಿ ವೈರಸ್ ಪಡೆಯುವ ಮತ್ತು ಸಂಪೂರ್ಣವಾಗಿ ರೋಗ ನಿರೋಧಕ ಶಕ್ತಿಯನ್ನು ನೀಡುವ ಉದ್ದೇಶದಿಂದ ಆ ವೈರಸ್‌ಅನ್ನು 200 ಇಲಿಗಳ ಮುಖಾಂತರ ಹಾಗೂ ಕೋಳಿಯ ಭ್ರೂಣಗಳ ಮೂಲಕ ಹಾದುಹೋಗುವಂತೆ ಮಾಡಿದರು. ಈ ಸಾಧನೆಗಾಗಿ ಥೈಲರ್ ಅವರಿಗೆ ವೈದ್ಯಕೀಯಶಾಸ್ತ್ರ ಮತ್ತು ಶರೀರಶಾಸ್ತ್ರದಲ್ಲಿ ೧೯೫೧ರಲ್ಲಿ ನೊಬೆಲ್ ಲಭಿಸಿತು.

ಇಷ್ಟೆಲ್ಲ ಆದರೂ, ಗಾಜಿನ ಉಪಕರಣಗಳಲ್ಲಿ ವೈರಸ್‌ಗಳನ್ನು ಕಲ್ಚರ್ ಮಾಡುವುದು ಇತರ ಎಲ್ಲಾ ಮಾಧ್ಯಮಗಳಿಗಿಂತ ಪರಿಣಾಮಕಾರಿಯಾಗಿತ್ತು; ಗಾಜಿನಲ್ಲಿ ಕಲ್ಚರ್ ಮಾಡಿದಲ್ಲಿ ಅದರ ವೇಗ, ಅವುಗಳ ಪರಿಸ್ಥಿತಿಗಳ ಮತ್ತು ಅವುಗಳ ಪರಿಣಾಮಕಾರತ್ವದ ನಿಯಂತ್ರಣವನ್ನು ಮಾಡಬಹುದಾಗಿತ್ತು. 1940ರ ದಶಕದ ಕೊನೆಯಲ್ಲಿ ಹಾರ್ವರ್ಡ್ ಮೆಡಿಕಲ್ ಶಾಲೆಯಲ್ಲಿ ಜಾನ್ ಫ್ರ್ಯಾಂಕ್ಲಿನ್ ಎಂಡರ್ಸ್, ಥಾಮಸ್ ಹಕಲ್ ವೆಲ್ಲೆರ್ ಮತ್ತು ಫ್ರೆಡ್ರಿಕ್ ಚಾಪ್‌ಮನ್ ರಾಬಿನ್ಸ್ ಎಂಬ ಮೂರು ತಜ್ಞರು ಕ್ಯಾರೆಲ್ ವಿಧಾನವನ್ನು ಮತ್ತೆ ಪರೀಕ್ಷಿಸಿದರು. (ಕ್ಯಾರಲ್ 1944ರಲ್ಲಿ ತೀರಿಕೊಂಡರು ಹಾಗೂ ಮುಂದಿನ ಯಶಸ್ಸನ್ನು ನೋಡಲು ಅವರು ಇರಲಿಲ್ಲ.) ಈಗ ಈ ತಜ್ಞರ ಬಳಿ ಕಲ್ಚರ್‌ಅನ್ನು ಕಲುಷಿತಗೊಳಿಸುವ ಬ್ಯಾಕ್ಟೀರಿಯ ವಿರುದ್ಧ ಹೊಸ ಆಯುಧಗಳಿದ್ದವು ಆಂಟಿಬಯಾಟಿಕ್ಸ್. ಅವರು ಕೋಶಗಳನ್ನು ಜೀವಂತವಾಗಿಡಲು ಬಳಸುತ್ತಿದ್ದ ರಕ್ತಕ್ಕೆ ಪೆನಿಸಿಲಿನ್ ಮತ್ತು ಸ್ಟ್ರೆಪ್ಟೋಮೈಸಿನ್ ಸೇರಿಸಿದರು ಹಾಗೂ ಯಾವುದೇ ತೊಂದರೆಯಿಲ್ಲದೇ ವೈರಸ್‌ಗಳನ್ನು ಬೆಳೆಸಬಹುದು ಎಂಬುದನ್ನು ಕಂಡುಕೊಂಡರು. ಒಂದು ರೀತಿಯ ಆವೇಗದಲ್ಲಿ ಅವರುಗಳು ಪೋಲಿಯೋ ಮೈಲೈಟಿಸ್ ವೈರಸ್‌ಅನ್ನು ಬೆಳೆಸುವ ಪ್ರಯತ್ನ ಮಾಡಿದರು. ಅದು ಆ ಮಾಧ್ಯಮದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದನ್ನು ಕಂಡಾಗ ಅವರ ಸಂತೋಷಕ್ಕೆ ಪಾರವಿರಲಿಲ್ಲ. ಇದೇ ಪೋಲಿಯೋ ಮೇಲಿನ ವಿಜಯಕ್ಕೆ ಮಹತ್ವದ ತಿರುವು ನೀಡಿದ ಪ್ರಯೋಗವಾಗಿತ್ತು. ಈ ಮೂವರಿಗೆ 1954ರಲ್ಲಿ ವೈದ್ಯಕೀಯಶಾಸ್ತ್ರ ಮತ್ತು ಶರೀರಶಾಸ್ತ್ರದ ನೊಬೆಲ್ ಲಭಿಸಿತು.

Jonas Salk by Yousuf Karsh

ಈ ಪ್ರಯೋಗದ ನಂತರ ಪೋಲಿಯೋ ಮೈಲೈಟಿಸ್ ವೈರಾಣುವನ್ನು ಒಂದು ಟೆಸ್ಟ್ ಟ್ಯೂಬ್ ಅಂದರೆ ಪ್ರನಾಳದಲ್ಲಿ ಬೆಳೆಯಲು ಸಾಧ್ಯವಾಯಿತು, ಅದಕ್ಕಿಂತ ಮುಂಚೆ ಅತ್ಯಂತ ಹೆಚ್ಚಿನ ವೆಚ್ಚದ ಮತ್ತು ಚಂಚಲ ಸ್ವಭಾವದ ಮಂಗಗಳ ಮೇಲೆ ಅವಲಂಬಿತವಾಗಿರಬೇಕಿತ್ತು. ಇದರಿಂದ ಈ ವೈರಸ್‌ನೊಂದಿಗೆ ಅತಿದೊಡ್ಡ ಪ್ರಮಾಣದ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಯಿತು. ಟಿಷ್ಯೂ ಕಲ್ಚರ್‌ನ ವಿಧಾನದಿಂದಾಗಿ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಜೊನಾಸ್ ಎಡ್ವರ್ಡ್ ಸಾಲ್ಕ್ ಎಂಬ ತಜ್ಞ ಪೋಲಿಯೋ ವೈರಸ್‌ಅನ್ನು ಕೆಮಿಕಲ್‌ನೊಂದಿಗೆ ಪ್ರಯೋಗ ಮಾಡಲು ಸಾಧ್ಯವಾಯಿತು ಹಾಗೂ ಅದರಿಂದ ಕಂಡುಕೊಂಡಿದ್ದೇನೆಂದರೆ ಫಾರ್ಮಾಲ್ಡಿಹೈಡ್ ರಾಸಾಯನಿಕದೊಂದಿಗೆ ಪ್ರಯೋಗ ಮಾಡಿದ ನಂತರವೂ ದೇಹದಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಸೃಷ್ಟಿಸಬಲ್ಲದು ಎಂದು.

ಅದರಿಂದ ಅವರು ಈಗ ಸುಪ್ರಸಿದ್ಧವಾದ ಸಾಲ್ಕ್ ಲಸಿಕೆಯನ್ನು ಕಂಡುಹಿಡಿದರು. ಪೋಲಿಯೊಂದಿದಾಗುವ ಸಾವುಗಳ ಸಂಖ್ಯೆ, ಅದರಿಂದ ಆಗುವ ಭೀಕರ ಪಾರ್ಶ್ವವಾಯು, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹದ್ದು, ಅದರೊಂದಿಗೆ ಪೋಲಿಯೋ ಅಧುನಿಕ ರೋಗವಾಗಿದ್ದರಿಂದ, (1840ಕ್ಕಿಂತ ಮುಂಚೆ ಪೋಲಿಯೋ ಆದ ಯಾವುದೇ ವರದಿಗಳಿಲ್ಲ), ಪೋಲಿಯೋಗೆ ಅತ್ಯಂತ ವಿಖ್ಯಾತ ಫ್ರ್ಯಾಂಕ್ಲಿನ್ ರೂಸ್‌ವೆಲ್ಟ್ ತುತ್ತಾಗಿದ್ದು, ಈ ಎಲ್ಲ ಕಾರಣಗಳು ಮಾನವ ಇತಿಹಾಸದಲ್ಲಿಯೇ ಒಂದು ರೋಗದ ವಿರುದ್ಧ ಅತ್ಯಂತ ಹೆಚ್ಚು ಸಂಭ್ರಮಿಸಲಾದ ಗೆಲುವು ಇದಾಗಿದೆ. 1955ರಲ್ಲಿ ಈ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದ ಮೌಲ್ಯಮಾಪನ ಸಮಿತಿಯ ವರದಿಯನ್ನು ಒಂದು ಹಾಲಿವುಡ್ ಘೋಷಣೆಗಿಂತಲೂ ಅದ್ದೂರಿಯಿಂದ ಸ್ವಾಗತಿಸಲಾಗಿತ್ತು. ಸ್ವಾಭಾವಿಕವಾಗಿಯೇ ನೂಕುನುಗ್ಗಲು, ಕಾಲ್ತುಳಿತ ಉಂಟಾಗುವಂತಹ ರೀತಿಯಲ್ಲಿ, ಬೇರೆ ಯಾವ ಪ್ರದರ್ಶನಕ್ಕೂ ಸಿಗದ ಸಂಭ್ರಮ ಈ ಘಟನೆಗೆ ಸಿಕ್ಕಿತ್ತು. ಆದರೆ ವಿಜ್ಞಾನ ಎಂಬುದು ಸಂಭ್ರಮ ಅಥವಾ ವಿಪರೀತ ಪ್ರಚಾರದ ಮೇಲೆ ಜೀವಿಸುವುದಿಲ್ಲ. ಲಸಿಕೆಗಾಗಿ ಬಂದ ಸಾರ್ವಜನಿಕರ ಒತ್ತಡದ ಕಾರಣದಿಂದ ಕೆಲವು ದೋಷಪೂರಿತ, ರೋಗ ಸೃಷ್ಟಿಸುವಂತಹ ಲಸಿಕೆಗಳೂ ಲಭ್ಯವಾಗುವಂತೆ ಆಯಿತು ಹಾಗೂ ತದನಂತರ ಆದ ಅಪಪ್ರಚಾರವು ರೋಗದ ವಿರುದ್ಧದ ಲಸಿಕೆಯ ಕಾರ್ಯಕ್ರಮಕ್ಕೆ ಹಿನ್ನಡೆಯನ್ನು ತಂದಿಟ್ಟಿತು.

ಆದರೆ ಆ ಹಿನ್ನಡೆ ಕೃತಕವಾಗಿ ಸೃಷ್ಟಿಸಿದ್ದಾಗಿತ್ತು ಹಾಗೂ ಸಾಲ್ಕ್ ಲಸಿಕೆಯು ಸರಿಯಾಗಿ ನಿರ್ಮಿಸಲಾದ, ಪರಿಣಾಮಕಾರಿಯಾದ ಹಾಗೂ ಸುರಕ್ಷಿತವಾದ ಲಸಿಕೆ ಎಂದು ಸಾಬೀತಾಯಿತು. 1957ರಲ್ಲಿ ಪೋಲಿಶ್ ಅಮೆರಿಕನ್ ಸೂಕ್ಷ್ಮ ಜೀವಶಾಸ್ತ್ರಜ್ಞ, ಮೈಕ್ರೋಬಯಾಲಜಿಸ್ಟ್ ಅಲ್ಬರ್ಟ್ ಬ್ರೂಸ್ ಸಾಬಿನ್ ಅವರು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇಟ್ಟರು. ಅವರು ಸತ್ತ ವೈರಸ್‌ಗಳನ್ನು ಬಳಸಿಕೊಳ್ಳದೇ (ಆ ವೈರಸ್‌ಗಳೆಲ್ಲವೂ ಸಂಪೂರ್ಣವಾಗಿ ಸತ್ತಿರದಿದ್ದರೆ ಅಪಾಯಕಾರಿ ಆಗುವ ಸಾಧ್ಯತೆಗಳಿದ್ದವು.) ಜೀವಂತ ವೈರಸ್‌ನ ತಳಿ ಅಥವಾ ಸ್ಟ್ರೇನ್‌ಗಳನ್ನು ಬಳಸಿಕೊಂಡರು, ಆ ತಳಿಗಳು ಸ್ವತಃ ರೋಗವನ್ನು ಸೃಷ್ಟಿಸಲು ಶಕ್ತವಲ್ಲದಿದ್ದರೂ ಸೂಕ್ತ ಆಂಟಿಬಾಡೀಸ್ (ಪ್ರತಿಕಾಯಗಳು)ಗಳನ್ನು ಸೃಷ್ಟಿಸಬಲ್ಲ ಸಾಧ್ಯತೆಗಳನ್ನು ಹೊಂದಿದ್ದವು. ಇಂತಹ ’ಸಾಬಿನ್ ಲಸಿಕೆ’ಯನ್ನು ಬಾಯಿಯಿಂದ ತೆಗೆದುಕೊಳ್ಳಬಹುದಾಗಿತ್ತು ಹಾಗೂ ಅದಕ್ಕೆ ಹೈಪೋಡರ್ಮಿಕ್‌ನ ಅಂದರೆ ಚರ್ಮದ ಕೆಳಗೆ ಚುಚ್ಚುವ ಅವಶ್ಯಕತೆಯೂ ಇರಲಿಲ್ಲ. ಈ ಸಾಬಿನ್ ಲಸಿಕೆಯು ಮೊದಲು ರಷಿಯಾದಲ್ಲಿ ಜನಪ್ರಿಯತೆ ಗಳಿಸಿತು ನಂತರ ಪೂರ್ವ ಯುರೋಪಿನ ದೇಶಗಳಲ್ಲಿ ಜನಪ್ರಿಯವಾಯಿತು. 1920ರ ನಂತರ ಅಮೆರಿಕದಲ್ಲಿಯೂ ಇದರ ಬಳಕೆ ಶುರುವಾಗಿ ಪೋಲಿಯೋ ಮೈಲೈಟಿಸ್‌ನ ಭಯ ಕಡಿಮೆಯಾಯಿತು.

ಈ ಲಸಿಕೆ ಎಂಬುದು ಮಾಡುತ್ತಾದರೂ ಏನು ನಿರ್ದಿಷ್ಟವಾಗಿ?

ಈ ಪ್ರಶ್ನೆಗೆ ಉತ್ತರವು ನಮಗೆ ಒಂದು ದಿನ ರೋಗನಿರೋಧಕ ಶಕ್ತಿ ಅಥವಾ ಇಮ್ಯುನಿಟಿಗೆ ರಾಸಾಯನಿಕ ಕೊಂಡಿಯ ಉತ್ತರವನ್ನು ನೀಡಬಹುದಾಗಿದೆ.

ಐವತ್ತು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಜೀವಶಾಸ್ತ್ರಜ್ಞರಿಗೆ ಗೊತ್ತಿರುವುದೇನೆಂದರೆ, ಒಂದು ಸೋಂಕಿನ ವಿರುದ್ಧ ಹೋರಾಡುವ ರಕ್ಷಣೆಯನ್ನು ಆಂಟಿಬಾಡೀಸ್ ಅಥವಾ ಪ್ರತಿಕಾಯ ಒದಗಿಸುತ್ತವೆಂದು. (ಹೌದು ’ಫ್ಯಾಗೋಸೈಟ್ಗಳೆಂದೂ ಕರೆಯಲಾಗುವ ಬಿಳಿ ರಕ್ತಕಣಗಳು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಇವುಗಳನ್ನು ರಷಿಯಾದ ಜೀವಶಾಸ್ತ್ರಜ್ಞ ಇಲ್ಯಾ ಮೆಚ್ನಿಕೊವ್ ಕಂಡುಹಿಡಿದಿದ್ದರು, ಅವರು ಮುಂದೆ ಹೋಗಿ ಪಾಶ್ಚಿರ್ ನಂತರ ಪ್ಯಾರಿಸ್‌ನಲ್ಲಿನ ಪಾಶ್ಚ್ಚಿರ್ ಸಂಸ್ಥೆಯ ಮುಖ್ಯಸ್ಥರಾದರು ಹಾಗೂ 1908 ರಲ್ಲಿ ವೈದ್ಯಕೀಯಶಾಸ್ತ್ರ ಮತ್ತು ಶರೀರವಿಜ್ಞಾನದಲ್ಲಿ ಇನ್ನೊಬ್ಬ ವಿಜ್ಞಾನಿ ಪಾಲ್ ಐರ್ಲಿಷ್‌ನೊಂದಿಗೆ ನೊಬೆಲ್ ಪ್ರಶಸ್ತಿ ಪಡೆದರು. ಆದರೆ ಫ್ಯಾಗೋಸೈಟ್‌ಗಳು ವೈರಸ್ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುವುದಿಲ್ಲ ಹಾಗೂ ಈಗ ನಾವು ಪರಿಗಣಿಸುತ್ತಿರುವ ರೋಗನಿರೋಧಕ ಶಕ್ತಿ, ಇಮ್ಯುನಿಟಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲ.) ಒಂದು ವೈರಸ್ ಅಥವಾ ದೇಹದ ರಾಸಾಯನಿಕ ರಚನೆಯನ್ನು ಪ್ರವೇಶಿಸುವ ಯಾವುದೇ ಹೊರಗಿನ ವಸ್ತುವನ್ನು ’ಆಂಟಿಜೆನ್ ಎಂದು ಕರೆಯಲಾಗುತ್ತದೆ. ಒಂದು ನಿರ್ದಿಷ್ಟ ಆಂಟಿಜೆನ್ ವಿರುದ್ಧ ಹೋರಾಡಲು ದೇಹವು ಉತ್ಪ್ಪಾದಿಸುವ ಪದಾರ್ಥವೇ ಆಂಟಿಬಾಡಿ. ಆಂಟಿಜೆನ್ ಜೊತೆಗೆ ಸೇರಿಕೊಳ್ಳುವುದರ ಮೂಲಕ ಆಂಟಿಬಾಡಿಯು ಆಂಟಿಜೆನ್ ಕೆಲಸ ಮಾಡದ ಹಾಗೆ ನೋಡಿಕೊಳ್ಳುತ್ತದೆ.

ಆಂಟಿಬಾಡಿ ಸೃಷ್ಟಿಸುವುದಕ್ಕೂ ಮುನ್ನ ಬಹಳ ಕಾಲದವರೆಗೆ ರಾಸಾಯನಿಕಶಾಸ್ತ್ರಜ್ಞರು ಅವುಗಳು ಪ್ರೋಟೀನ್ ಮಾತ್ರ ಆಗಿರಲು ಸಾಧ್ಯ ಎಂದು ತಿಳಿದಿದ್ದರು. ವಿಜ್ಞಾನಿಗಳಿಗೆ ಗೊತ್ತಿದ್ದ ಎಲ್ಲ ಆಂಟಿಜೆನ್‌ಗಳು ಪ್ರೊಟೀನ್ ಆಗಿದ್ದವು ಹಾಗಾಗಿ ಒಂದು ಪ್ರೊಟೀನ್ ಅನ್ನು ಹಿಡಿಯಲು ಇನ್ನೊಂದು ಪ್ರೊಟೀನ್‌ಗೆ ಮಾತ್ರ ಸಾಧ್ಯ ಎಂದು
ಪರಿಗಣಿಸಲಾಗಿತ್ತು. ಒಂದು ನಿರ್ದಿಷ್ಟ ಆಂಟಿಜೆನ್‌ಅನ್ನು ಪ್ರತ್ಯೇಕಿಸಿ, ಅದರ ಜೊತೆಗೆ ಸೇರಿಕೊಳ್ಳುವಂತಹ – ರಚನೆ ಹೊಂದಿರಲು ಪ್ರೊಟೀನ್‌ಗೆ ಮಾತ್ರ ಸಾಧ್ಯ ಎಂದು ನಂಬಲಾಗಿತ್ತು.

1920ರ ದಶಕದ ಆರಂಭದಲ್ಲಿ ಲ್ಯಾಂಡ್‌ಸ್ಟೀನರ್ ಎಂಬ ವಿಜ್ಞಾನಿ (ರಕ್ತದ ಗುಂಪುಗಳನ್ನು ಕಂಡುಹಿಡಿದವರು) ಹಲವಾರು ಪ್ರಯೋಗಗಳನ್ನು ಮಾಡಿದರು; ಈ ಪ್ರಯೋಗಗಳು ಸ್ಪಷ್ಟವಾಗಿ ತೋರಿಸಿದ್ದೇನೆಂದರೆ ಆಂಟಿಬಾಡಿಗಳು ಅತ್ಯಂತ ನಿರ್ದಿಷ್ಟವಾಗಿರುತ್ತವೆ ಎಂದು. ಈ ಆಂಟಿಬಾಡಿಗಳನ್ನು ಸೃಷ್ಟಿಸಲು ಅವರು ಆಂಟಿಜೆನ್‌ಗಳನ್ನು ಬಳಸಲಿಲ್ಲ, ಅದರ ಬದಲಿಗೆ ಅವುಗಳ ರಚನೆಯ ಬಗ್ಗೆ ಚೆನ್ನಾಗಿ ತಿಳಿದಿದ್ದ ತುಂಬಾ ಸರಳ ಕಾಂಪೌಂಡ್ (ಸಂಯುಕ್ತ)ಗಳನ್ನು ಬಳಸಿದರು. ’ಆರ್ಸೆನಲಿಕ್ ಅಸಿಡ್ಸ್’ ಎಂದು ಕರೆಯಲಾಗುವ ಆರ್ಸೆನಿಕ್‌ಅನ್ನು ಬಳಸಿದರು. ಮೊಟ್ಟೆಯ ಬಿಳಿ ಪದಾರ್ಥದಂತಹ ಒಂದು ಸರಳ ಪ್ರೊಟೀನ್‌ನೊಂದಿಗೆ ಸೇರಿಸಿದಾಗ ಆರ್ಸನಲಿಕ್ ಆಮ್ಲವು ಆಂಟಿಜೆನ್ ರೀತಿಯಲ್ಲಿ ಕೆಲಸ ಮಾಡಿತು, ಒಂದು ಪ್ರಾಣಿಗೆ ಚುಚ್ಚುಮದ್ದಿನ ಮೂಲಕ ನೀಡಿದಾಗ ಅದು ಅದರ ರಕ್ತದ ಸೀರಂನಲ್ಲಿ ಆಂಟಿಬಾಡಿ ಸೃಷ್ಟಿಸುವಂತೆ ಮಾಡಿತು.

ಅದಲ್ಲದೇ ಈ ಆಂಟಿಬಾಡಿಯು ಆರ್ಸನಲಿಕ್ ಅಸಿಡ್‌ಗೆ ನಿರ್ದಿಷ್ಟವಾದ ಆಂಟಿಬಾಡಿಯಾಗಿತ್ತು; ಆ ಪ್ರಾಣಿಯ ರಕ್ತದ ಸೀರಂ ಕೇವಲ ಅರ್ಸೆನಿಕ್-ಅಲ್ಬುಮಿನ್ ಸಂಯೋಜನೆಗೆ ಮಾತ್ರ ಅಂಟಿಕೊಳ್ಳುತ್ತಿತ್ತು ಆದರೆ ಕೇವಲ ಅಲ್ಬುಮಿನ್ ಇದ್ದರೆ ಅಂಟಿಕೊಳ್ಳುತ್ತಿದ್ದಿಲ್ಲ. ಕೆಲವು ಸಲ ಕೇವಲ ಅರ್ಸನಲಿಕ್ ಆಮ್ಲದೊಂದಿಗೆ, ಅಂದರೆ ಅಲ್ಬುಮಿನ್‌ನೊಂದಿಗೆ ಸಂಯೋಜನೆ ಮಾಡದೇ ಇರುವ ಆಮ್ಲದೊಂದಿಗೂ ಪ್ರತಿಕ್ರಿಯಿಸುವಂತೆ ಮಾಡಬಹುದಿತ್ತು. ಲ್ಯಾಂಡ್‌ಸ್ಟೀನರ್ ಇನ್ನೊಂದು ಸಂಗತಿಯನ್ನು ಕಂಡುಹಿಡಿದಿದ್ದೇನೆಂದರೆ, ಅರ್ಸನಲಿಕ್ ಆಮ್ಲದ ರಚನೆಯಲ್ಲಿ ಆದ ಬದಲಾವಣೆಗಳು ಆ ಆಂಟಿಬಾಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅರ್ಸನಲಿಕ್ ಆಮ್ಲದ ಒಂದು ವಿಧಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಆಂಟಿಬಾಡಿಗಳು ಅತ್ಯಂತ ಸೂಕ್ಷ್ಮವಾಗಿ ಭಿನ್ನವಾಗಿರುವ ಅರ್ಸನಲಿಕ್ ಆಮ್ಲದ ವಿಧಕ್ಕೆ ಪ್ರತಿಕ್ರಿಯಿಸುತ್ತಿದ್ದಿಲ್ಲ.

ಲ್ಯಾಂಡ್‌ಸ್ಟೀನರ್ ಅವರು ಪ್ರೊಟೀನ್‌ನೊಂದಿಗೆ ಸೇರಿಸಿದಾಗ ಆಂಟಿಬಾಡಿಗಳನ್ನು ಸೃಷ್ಟಿಸುವ ಅರ್ಸನಲಿಕ್ ಆಮ್ಲದಂತಹ ಈ ಸಂಯೋಜನೆಗಳಿಗೆ ’ಹ್ಯಾಪ್ಟನ್ಸ್’ (ಹಿಡಿದುಕೊಳ್ಳು ಎಂದು ಅರ್ಥ ಬರುವ ಗ್ರೀಕ್ ಪದ) ಎಂದು ಕರೆದರು. ಬಹುಶಃ ಪ್ರತಿಯೊಂದು ನೈಸರ್ಗಿಕ ಆಂಟಿಜೆನ್ ತನ್ನ ಮಾಲೆಕ್ಯೂಲ್‌ನಲ್ಲಿ ಒಂದು ನಿರ್ದಿಷ್ಟ ಭಾಗ ಹೊಂದಿದ್ದು, ಅದುವೇ ಹ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಥಿಯರಿಯ ಪ್ರಕಾರ, ಲಸಿಕೆಯಾಗಿ ಕೆಲಸ ಮಾಡುವ ಪ್ರತಿಯೊಂದು ಸೂಕ್ಷ್ಮಾಣು ಅಥವಾ ವೈರಸ್ ಕೋಶಗಳನ್ನು ಹಾನಿಗೊಳಿಸುವ ಸಾಮರ್ಥ್ಯವನ್ನು
ಕಳೆದುಕೊಳ್ಳುವಂತೆ ತನ್ನ ರಚನೆಯನ್ನು ಗಣನೀಯವಾಗಿ ಬದಲಿಸಿಕೊಂಡಿದ್ದರೂ, ಅದರ ಹ್ಯಾಪ್ಟನ್ ಗುಂಪು ಮೂಲರೂಪದಲ್ಲೇ ಇರುವುದರಿಂದ ಆ ನಿರ್ದಿಷ್ಟ ಆಂಟಿಬಾಡಿಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತದೆ.

ನೈಸರ್ಗಿಕ ಹ್ಯಾಪ್ಟನ್‌ಗಳ ರಾಸಾಯನಿಕ ರಚನೆಯನ್ನು ತಿಳಿದುಕೊಳ್ಳುವಂತಾದರೆ ಅದು ನಿಜಕ್ಕೂ ಅದ್ಭುತವಾಗಿರುತ್ತದೆ. ಅದನ್ನು ಗುರುತಿಸಲು ಸಾಧ್ಯವಾದಲ್ಲಿ ಒಂದು ಹ್ಯಾಪ್ಟನ್‌ಅನ್ನು, ಬಹುಶಃ ಇತರ ಅಪಾಯಕಾರಿಯಲ್ಲದ ಪ್ರೊಟೀನ್‌ನೊಂದಿಗೆ ಸೇರಿಸಿ, ಒಂದು ನಿರ್ದಿಷ್ಟ ಆಂಟಿಜೆನ್‌ಗೆ ಆಂಟಿಬಾಡಿಗಳನ್ನು ಸೃಷ್ಟಿಸುವ ಲಸಿಕೆಗಳಂತೆ ಕಾರ್ಯನಿರ್ವಹಿಸುವಂತೆ ಮಾಡಬಹುದು. ಹಾಗೆ ಮಾಡುವುದರಿಂದ
ಯಾವಾಗಲೂ ಒಂದಿಷ್ಟು ಅಪಾಯವನ್ನು ಹೊಂದಿರುವ ಪ್ರಕ್ರಿಯೆಗಳಾದ ವೈರಸ್‌ಗಳನ್ನು ದುರ್ಬಲಗೊಳಿಸುವುದು ಅಥವಾ ಟಾಕ್ಸಿನ್‌ಗಳ ಪ್ರಕ್ರಿಯೆಯ ಅವಶ್ಯಕತೆಯನ್ನು ಕೊನೆಗಾಣಿಸಬಹುದು.

ಒಂದು ಆಂಟಿಜೆನ್ ನಿರ್ದಿಷ್ಟವಾಗಿ ಹೇಗೆ ಒಂದು ಆಂಟಿಬಾಡಿಯನ್ನು ಸೃಷ್ಟಿಸುವಂತೆ ಮಾಡುತ್ತದೆ ಎಂಬುದನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಐರ್ಲಿಷ್ ಅವರ ಪ್ರಕಾರ ದೇಹವು ತನಗೆ ಬೇಕಾದ ಆಂಟಿಬಾಡಿಗಳನ್ನು ಸಣ್ಣ ಪ್ರಮಾಣದಲ್ಲಿ ಹೊಂದಿರುತ್ತದೆ ಮತ್ತು ಒಂದು ಆಂಟಿಜೆನ್ ಆ ಸೂಕ್ತ ಆಂಟಿಬಾಡಿಯೊಂದಿಗೆ ಪ್ರತಿಕ್ರಿಯಿಸಿದಾಗ ಆಗುವ ಪ್ರಕ್ರಿಯೆಯು ಆ ನಿರ್ದಿಷ್ಟ ಆಂಟಿಬಾಡಿಗಳ ಹೆಚ್ಚಿನ ಸರಬರಾಜು ಆಗುವಂತೆ ಪ್ರಚೋದನೆ ಮಾಡುತ್ತದೆ. ಕೆಲವು ರೋಗನಿರೋಧಕ ತಜ್ಞರು ಇಂದಿಗೂ ಈ ಥಿಯರನ್ನು ಅಥವಾ ಇದರ ಪರಿಷ್ಕರಣೆಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ಆದರೆ, ಅರ್ಸನಲಿಕ್ ಆಮ್ಲದಂತಹ ನೈಸರ್ಗಿಕವಲ್ಲದಂತಹ ಪದಾರ್ಥಗಳನ್ನು ಒಳಗೊಂಡಂತೆ, ಎಲ್ಲಾ ಸಂಭಾವ್ಯ ಆಂಟಿಜೆನ್‌ಗಳಿಗೆ ನಿರ್ದಿಷ್ಟ ಆಂಟಿಬಾಡಿಗಳಿಂದ ದೇಹವು ಕೂಡಿರುತ್ತದೆ ಎಂಬುದು ಅಸಾಧ್ಯವಾದದ್ದು ಅನಿಸುತ್ತದೆ.

ಇನ್ನೊಂದು ಪರ್ಯಾಯ ಸಲಹೆ ಏನೆಂದರೆ, ದೇಹವು ಸಾಮಾನ್ಯವಾದ ಪ್ರೊಟೀನ್ ಮಾಲೆಕ್ಯೂಲ್ ಹೊಂದಿದ್ದು, ಅದು ಯಾವುದೇ ಆಂಟಿಜೆನ್‌ಗೆ ಸರಿಹೊಂದುವಂತೆ ಮಾರ್ಪಾಡು ಮಾಡಬಹುದಾಗಿದೆ. ಆಗ ಅದು ಆಂಟಿಜೆನ್ ಒಂದಕ್ಕೆ ಪ್ರತಿಕ್ರಿಯೆಯಾಗಿ ರೂಪುಗೊಳ್ಳುವ ನಿರ್ದಿಷ್ಟ ಆಂಟಿಬಾಡಿಯನ್ನು ರಚಿಸುವ ಟೆಂಪ್ಲೇಟ್ ಆಗಿ ಕೆಲಸ ಮಾಡುತ್ತದೆ. ಪಾಲಿಂಗ್ ಅವರು ಇಂತಹ ಒಂದು ಥಿಯರಿಯನ್ನು 1940ರಲ್ಲಿ ಪ್ರತಿಪಾದಿಸಿದರು. ಅವರು ಸೂಚಿಸಿದ್ದೇನೆಂದರೆ, ನಿರ್ದಿಷ್ಟ ಆಂಟಿಬಾಡಿಗಳು ಒಂದೇ ಮೂಲದ ಮಾಲೆಕ್ಯೂಲ್‌ನ ವಿಭಿನ್ನ ಆವೃತ್ತಿಗಳಾಗಿರುತ್ತವೆ, ವಿಭಿನ್ನ ರೀತಿಗಳಲ್ಲಿ ಸುತ್ತುಕೊಂಡಿರುವುದಷ್ಟೇ ವ್ಯತ್ಯಾಸ, ಆ ಆಂಟಿಬಾಡಿಯು, ಕೈಯಲ್ಲಿ ಹೇಗೆ ಕೈಗವಸು ಹೊಂದಿಕೊಳ್ಳುತ್ತದೆಯೋ, ಅದೇ ರೀತಿಯಲ್ಲಿ ಆಯಾ ಆಂಟಿಜೆನ್‌ಗೆ ಹೊಂದಿಕೊಳ್ಳುತ್ತದೆ.

ಆದರೆ 1969ರ ಹೊತ್ತಿನಲ್ಲಿ ಪ್ರೊಟೀನಿನ ಆಧುನಿಕ ವಿಶ್ಲೇಷಣೆಗಳು ಜೆರಾಲ್ಡ್ ಈಡೆಲ್‌ಮನ್ ಅವರ ತಂಡದ ಹೆಚ್ಚಿನ ಪ್ರಯೋಗಕ್ಕೆ ಸಹಕಾರಿಯಾದವು. ಅವರ ಪ್ರಯೋಗಗಳಲ್ಲಿ ಕಂಡುಕೊಂಡಿದ್ದೇನೆಂದರೆ, ಒಂದು ಟಿಪಿಕಲ್ ಆಂಟಿಬಾಡಿಯ ಅಮಿನೊ ಅಸಿಡ್ ರಚನೆಯು ಸಾವಿರಾರು ಅಮಿನೋ ಅಸಿಡ್‌ಗಳಿಂದ ರಚನೆಯಾಗಿದೆ ಎಂದು. ನಿಸ್ಸಂಶಯವಾಗಿ ಇದರಿಂದ ಮುಂಚೆ ಸಾಧ್ಯವಾಗದ ಹೊಸ ಪ್ರಯೋಗಗಳು ಶುರುವಾದವು; ಇಂತಹ ಅಣುಗಳು ಅಥವಾ ಮಾಲೆಕ್ಯೂಲ್‌ಗಳ ಕೆಲಸ ಮಾಡುವ ವಿಧಾನವನ್ನು ಇನ್ನಷ್ಟು ಸೂಕ್ಷ್ಮತೆಯಿಂದ ತಿಳಿದುಕೊಳ್ಳುವಂತಾಯಿತು.

ಆಂಟಿಬಾಡಿಗಳು ನಿರ್ದಿಷ್ಟತೆಯೇ ಹಲವಾರು ರೀತಿಯಲ್ಲಿ ಅನಾನುಕೂಲತೆಯಾಗಿದೆ. ಒಂದು ವೈರಸ್ ರೂಪಾಂತರಗೊಂಡಾಗ ಅದರ ಪ್ರೊಟೀನ್‌ನ ರಚನೆಯು ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಅದರ ಹಳೆಯ ಆಂಟಿಬಾಡಿಯು ಈ ಹೊಸ ರಚನೆಗೆ ಬಹುತೇಕ ಬಾರಿ ಹೊಂದಿಕೊಳ್ಳುವುದಿಲ್ಲ. ವೈರಸ್‌ನ ಒಂದು ಸ್ಟ್ರೇನ್‌ನ ವಿರುದ್ಧ ಅಭಿವೃದ್ಧಿ ಹೊಂದಿರುವ ರೋಗನಿರೋಧಕ ಶಕ್ತಿ, ಇಮ್ಯುನಿಟಿಯು ಅದೇ ವೈರಸ್‌ನ ಹೊಸ ತಳಿಗೆ ರಕ್ಷಣೆ ನೀಡುವುದಿಲ್ಲ. ಇನ್‌ಫ್ಲುಯೆಂಜಾ ಹಾಗೂ ಸಾಮಾನ್ಯ ನೆಗಡಿಗೆ ಕಾರಣವಾದ ವೈರಸ್‌ಗಳು ಸಣ್ಣ ಸಣ್ಣ ರೂಪಾಂತರ ಹೊಂದುತ್ತಲೇ ಇರುತ್ತವೆ ಹಾಗಾಗಿಯೇ ಈ ರೋಗಗಳು ಪದೇ ಪದೇ ಕಾಡುವುದನ್ನು ನಾವು ನೋಡುತ್ತೇವೆ. ನಿರ್ದಿಷ್ಟವಾಗಿ ಇನ್‌ಫ್ಲುಯೆಂಜಾ ವೈರಾಣುವು ಕೆಲವೊಮ್ಮೆ ಅತ್ಯಂತ ಭೀಕರವಾಗಿರುವ ರೂಪಾಂತರ ಹೊಂದಬಹುದು, ಮತ್ತು ಅದಕ್ಕೆ ರೋಗನಿರೋಧಕ ಶಕ್ತಿಯಿಲ್ಲದ ಜಗತ್ತನ್ನು ಆಶ್ಚರ್ಯಕರವಾಗಿ ಗುಡಿಸಿಕೊಂಡು ಹೋಗುವಂತೆ ಮಾಡಬಹುದು. 1918ರಲ್ಲಿ ಇದೇ ರೀತಿಯಲ್ಲಿ ಮಾರಕವಾದ ಫ್ಲೂ ಬಂದುಹೋಗಿತ್ತು, ಹಾಗೂ 1957ರಲ್ಲಿ ಏಷಿಯನ್ ಫ್ಲೂ ಎಂಬ ಸಾಂಕ್ರಾಮಿಕ ಕೂಡ.

KXKDRK Asian flu in Sweden 1957 (2)

ದೇಹವು ಆಂಟಿಬಾಡಿಗಳನ್ನು ರಚಿಸುವ ತೀಕ್ಷ್ಣ ಕಾರ್ಯಕ್ಷಮತೆಯ ಇನ್ನೊಂದು ದುಷ್ಪರಿಣಾಮವೇನೆಂದರೆ, ದೇಹದ ಒಳಗೆ ಪ್ರವೇಶಿಸುವ ಯಾವುದೇ ಅಪಾಯವನ್ನು ಒಡ್ಡದ ಪ್ರೊಟೀನ್‌ಗಳ ವಿರುದ್ಧವೂ ಇವುಗಳನ್ನು ಉತ್ಪಾದಿಸುವುದು. ಆಗ ದೇಹವು ಆ ಪ್ರೊಟೀನ್‌ಗೆ ’ಸಂವೇದನಾಶೀಲ’ ಅಥವಾ ಸೆನ್ಸಿಟಿವ್ ಆಗುತ್ತದೆ ಹಾಗೂ ಆ ಮೂಲ ಅಪಾಯಕಾರಿಯಲ್ಲದ ಪ್ರೊಟೀನ್ ಮತ್ತೊಮ್ಮೆ ದೇಹವನ್ನು ಪ್ರವೇಶಿಸಿದಲ್ಲಿ ಆಗ ದೇಹವು ಭೀಕರವಾಗಿ ಪ್ರತಿಕ್ರಿಯೆ ನೀಡಬಹುದಾಗಿದೆ. ಆ ಪ್ರತಿಕ್ರಿಯೆ ತುರಿತ, ಕಣ್ಣೀರು, ಮೂಗು ಸೋರುವುದು, ಗಂಟಲು ಕೆರೆತ, ಅಸ್ತಮಾ ಮುಂತಾದ ರೂಪಗಳನ್ನು ಪಡೆಯಬಹುದು. ಕೆಲವು ನಿರ್ದಿಷ್ಟ ಗಿಡಗಳ ಪರಾಗದಿಂದ, ಕೆಲವು ಆಹಾರಗಳಿಂದ, ಪ್ರಾಣಿಗಳ ತುಪ್ಪಳ ಮತ್ತು ತಲೆಹೊಟ್ಟಿನಿಂದ ಇಂತಹ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗಬಹುದು. ಹಾಗೂ ಈ ಅಲರ್ಜಿಯ ಪ್ರತಿಕ್ರಿಯೆ ಎಷ್ಟು ಭೀಕರ ಇರಬಹುದು ಎಂದರೆ, ಅದರಿಂದ ಗಂಭೀರ ಅಂಗವೈಕಲ್ಯ ಅಥವಾ ಸಾವು ಕೂಡ ಉಂಟಾಗಬಹುದು. ಇಂತಹ ಪ್ರತಿಕ್ರಿಯೆಗಳಿಗೆ ’ಅನಾಫೈಲ್ಯಾಕ್ಟಿಕ್ ಶಾಕ್ ಎಂದು ಕರೆಯಲಾಗುತ್ತದೆ, ಇದನ್ನು ಫ್ರಾನ್ಸಿನ ಶರೀರವಿಜ್ಞಾನಿ ಚಾರ್ಲ್ಸ್ ರಾಬರ್ಟ್ ಅವರು ಕಂಡುಹಿಡಿದರು, ಅವರಿಗೆ 1913ರಲ್ಲಿ ಔಷಧಶಾಸ್ತ್ರ ಮತ್ತು ಶರೀರವಿಜ್ಞಾನದ ನೊಬೆಲ್ ದೊರಕಿತು.

ಒಂದರ್ಥದಲ್ಲಿ ಪ್ರತಿಯೊಬ್ಬ ಮಾನವ ಜೀವಿಯು ಇನ್ನೊಬ್ಬ ಮಾನವ ಜೀವಿಗೆ ಹೆಚ್ಚುಕಡಿಮೆ ಅಲರ್ಜಿ ಹೊಂದಿರುತ್ತಾರೆ. ಅಂಗಗಳ ಟ್ರಾನ್ಸ್‌ಪ್ಲಾಂಟ್ ಅಥವಾ ಕಸಿಯನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಮಾಡುವುದು ಸಾಧ್ಯವಾಗುವುದಿಲ್ಲವೇಕೆಂದರೆ ಅದನ್ನು ಪಡೆಯುವ ವ್ಯಕ್ತಿಯ ದೇಹವು ಕಸಿ ಮಾಡಿದ ಕೋಶವನ್ನು ಹೊರಗಿನ ಪ್ರೊಟೀನ್ ಎಂದು ಪರಿಗಣಿಸುತ್ತದೆ ಹಾಗೂ ಅದರ ವಿರುದ್ಧ ಪ್ರತಿಕಾಯ
ಅಂದರೆ ಆಂಟಿಬಾಡಿಗಳನ್ನು ಉತ್ಪಾದಿಸುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಉತ್ತಮ ರೀತಿಯಲ್ಲಿ ಕಸಿ ಮಾಡುವುದು ಸಾಧ್ಯವಾಗುವುದು ಅವರಿಬ್ಬರೂ ತದ್ರೂಪ ಅವಳಿಗಳಿದ್ದಾಗ. ಅವರಿಬ್ಬರ ಒಂದೇ ರೀತಿಯ ಅನುವಂಶಿಕತೆಯು ಅವರಿಗೆ ಒಂದೇ ತೆರನಾದ ಪ್ರೊಟೀನ್‌ಗಳನ್ನು ನೀಡಿರುತ್ತದೆ, ಅವರುಗಳು ಕೋಶಗಳನ್ನು ಅಥವಾ ಇಡೀ ಅಂಗವನ್ನು, ಉದಾಹರಣೆಗೆ ಮೂತ್ರಪಿಂಡದಂತಹ ಅಂಗವನ್ನು ಕಸಿ ಮಾಡಬಹುದು.

ಮೊದಲ ಯಶಸ್ವಿ ಮೂತ್ರಪಿಂಡ ಕಸಿಯನ್ನು ಬೋಸ್ಟನ್‌ನಲ್ಲಿ ಡಿಸೆಂಬರ್ 1954ರಲ್ಲಿ ಮಾಡಲಾಯಿತು. ಆಗ ಒಬ್ಬ ತದ್ರೂಪ ಅವಳಿಯ ದೇಹದಿಂದ ಇನ್ನೊಬ್ಬ ಅವಳಿ ವ್ಯಕ್ತಿಗೆ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಕಿಡ್ನಿ ಪಡೆದ ವ್ಯಕ್ತಿಯು ಎಂಟು ವರ್ಷಗಳ ನಂತರ 1926ರಲ್ಲಿ ಹೃದಯದ ರಕ್ತನಾಳಗಳ ರೋಗದಿಂದ ತನ್ನ ಮೂವತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ಆಗಿನಿಂದ ನೂರಾರು ವ್ಯಕ್ತಿಗಳು ತಮ್ಮ ತದ್ರೂಪ ಅವಳಿಗಳಲ್ಲದೇ ಬೇರೆ ವ್ಯಕ್ತಿಗಳಿಂದ ಕಿಡ್ನಿ, ಮೂತ್ರಪಿಂಡ ಪಡೆದು ಹಲವಾರು ತಿಂಗಳು ಮತ್ತು ಹಲವಾರು ವರ್ಷಗಳ ಕಾಲ ಬದುಕಿದ್ದಾರೆ.

ಶ್ವಾಸಕೋಶಗಳು, ಪಿತ್ತಜನಕಾಂಗ ಅಥವಾ ಯಕೃತ್ತು ಮುಂತಾದ ಇತರ ಅಂಗಗಳನ್ನು ಕಸಿ ಮಾಡುವ ಪ್ರಯತ್ನಗಳು ನಡೆದಿವೆ. ಆದರೆ, ಎಲ್ಲರ ವಿಶೇಷ ಗಮನ ಸೆಳೆದಿದ್ದು ಹೃದಯವನ್ನು ಕಸಿಮಾಡುವ ಪ್ರಯೋಗಗಳು. ಮೊದಲ ಯಶಸ್ವಿ ಹೃದಯ ಕಸಿ ಮಾಡುವ ಪ್ರಯೋಗ ಮಾಡಿದ್ದು ಡಿಸೆಂಬರ್ 1967ರಲ್ಲಿ, ಅದನ್ನು ಕ್ರಿಷ್ಚಿಯಾನ್ ಬರ್ನಾಡ್ ಎಂಬ ದಕ್ಷಿಣ ಆಫ್ರಿಕಾದ ಶಸ್ತ್ರಚಿಕಿತ್ಸಜ್ಞ(ಸರ್ಜನ್) ಕೈಗೆತ್ತಿಕೊಂಡಿದ್ದರು. ಅದರ ಅದೃಷ್ಟವಂತ ಫಲಾನುಭವಿಯಾಗಿದ್ದವರು ದಕ್ಷಿಣ ಆಫ್ರಿಕಾದ ನಿವೃತ್ತ ಹಲ್ಲಿನ ವೈದ್ಯ ಫಿಲಿಪ್ ಬ್ಲೈಬರ್ಗ್, ಅವರು ಇನ್ನೊಬ್ಬರ ಹೃದಯದ ಮೇಲೆ ಹಲವಾರು ತಿಂಗಳು ಬದುಕಿದರು.

ಅದರ ನಂತರ ಕೆಲ ಸಮಯದವರೆಗೆ ಹೃದಯ ಕಸಿ ಮಾಡುವುದರ ಬಗ್ಗೆ ಅತಿ ಹೆಚ್ಚಿನ ಉತ್ಸಾಹ ಕಂಡುಬಂದಿತು ಆದರೆ ಆ ಉತ್ಸಾಹ1969ರ ಕೊನೆಯಲ್ಲಿ ಇಲ್ಲವಾಯಿತು. ಹೊಸ ಹೃದಯವನ್ನು ಪಡೆದವರಲ್ಲಿ ಕೆಲವ ಕೆಲವರು ಹೆಚ್ಚು ಕಾಲ ಬದುಕಿದರು. ಏಕೆಂದರೆ ಟಿಷ್ಯೂ ರಿಜೆಕ್ಷನ್ ಅಂದರೆ ಹೊರಗಿನ ಕೋಶವನ್ನು ನಿರಾಕರಿಸುವ ದೇಹದ ಪ್ರತಿಕ್ರಿಯೆಯ ಸಮಸ್ಯೆಗಳು ಅತ್ಯಂತ ಕಷ್ಟಕರವಾಗಿದ್ದವು. ತನ್ನ ದೇಹದ ಕೋಶವನ್ನು ಹೊರತುಪಡಿಸಿ ಇತರ ದೇಹದ ಕೋಶವನ್ನು ಸ್ವೀಕರಿಸುವಂತೆ ಮಾಡುವ ಅತ್ಯಂತ ದೀರ್ಘ ಪ್ರಯತ್ನಗಳ ಹೊರತಾಗಿಯೂ, ಅವುಗಳನ್ನು ಮೀರುವುದು ಕಷ್ಟವಾಗಿತ್ತು.

ಆಸ್ಟ್ರೇಲಿಯದ ಬ್ಯಾಕ್ಟಿರಿಯಾ ತಜ್ಞ ಮೆಕ್‌ಫಾರ್ಲೇನ್ ಬರ್ನೆಟ್ ಅವರು ಸೂಚಿಸಿದ್ದೇನೆಂದರೆ, ಭ್ರೂಣದ ಜೀವಕೋಶಗಳನ್ನು ಹೊರಗಿನ ಕೋಶಗಳಿಗೆ ರೋಗನಿರೋಧಕ ಶಕ್ತಿ ಬೆಳೆಸುವಂತೆ ಮಾಡಬಹುದು ಹಾಗೂ ಹಾಗೆ ಮಾಡಿದ ನಂತರ ಒಂದು ಸ್ವತಂತ್ರವಾಗಿ ಜೀವಿಸುವ ಪ್ರಾಣಿಯು ಆ ಜೀವಕೋಶ, ಅಥವಾ ಟಿಷ್ಯೂಅನ್ನು ಸಹಿಸಿಕೊಳ್ಳುವಂತೆ ಮಾಡಬಹುದು ಎಂದು. ಇಲಿಗಳ ಭ್ರೂಣಗಳ ಮೇಲೆ ಪ್ರಯೋಗಗಳನ್ನು ಮಾಡಿ ಬ್ರಿಟಿಷ್ ಜೀವಶಾಸ್ತ್ರಜ್ಞ ಪೀಟರ್ ಮೆಡವರ್ ಅವರು ಇದು ಸರಿ ಎಂದು ತೋರಿಸಿದರು. ಇದರ ಪರಿಣಾಮವಾಗಿ ಈ ಇಬ್ಬರೂ ತಜ್ಞರು 1960ರಲ್ಲಿ ಔಷಧಶಾಸ್ತ್ರ ಮತ್ತು ಶರೀರವಿಜ್ಞಾನದ ನೊಬೆಲ್ ಪಡೆದರು.

1962ರಲ್ಲಿ ಜಾಕ್ವೆಸ್ ಫ್ರಾನ್ಸಿಸ್ ಅಲ್ಬರ್ಟ್ ಪಿಯೆರೆ ಮಿಲರ್ ಎಂಬ ಫ್ರಾನ್ಸಿನ ರೋಗನಿರೋಧಕ ತಜ್ಞರು ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತ ಈ ನಿಟ್ಟಿನಲ್ಲಿ ಇನ್ನೊಂದು ಹೊಸ ಆವಿಷ್ಕಾರ ಮಾಡಿದರು; ಭವಿಷ್ಯದಲ್ಲಿ ಈ ಸಹಿಸುವಿಕೆಯನ್ನು ಸಾಧ್ಯವಾಗಿಸುವುದಕ್ಕೆ ಭ್ರೂಣಗಳೊಂದಿಗೆ ಕೆಲಸ ಮಾಡುವುದನ್ನು ಯಾವ ಕಾರಣದಿಂದ ಸಾಧ್ಯವಾಗುತ್ತದೆ ಎಂಬುದನ್ನು ಕಂಡುಹಿಡಿದರು. ಅವರು ದೇಹದಲ್ಲಿರುವ ಥೈಮಸ್ ಎಂಬ ಗ್ರಂಥಿಯು ಆಂಟಿಬಾಡಿಗಳನ್ನು ನಿರ್ಮಿಸುವ ಜೀವಕೋಶವಾಗಿದೆ ಎಂಬುದನ್ನು ತೋರಿಸಿದರು. (ಅದಕ್ಕಿಂತ ಮುಂಚೆ ಆ ಗ್ರಂಥಿ ಯಾವ ಕೆಲಸ ಮಾಡುತ್ತದೆ ಎಂಬುದು ತಿಳಿದಿರಲಿಲ್ಲ.) ಇಲಿಗಳಲ್ಲಿ ಅವುಗಳ ಜನ್ಮದ ಸಮಯದಲ್ಲಿ ಥೈಮಸ್ ಗ್ರಂಥಿಯನ್ನು ತೆಗೆದುಹಾಕಿದಾಗ, ಆ ಇಲಿಗಳು ಮೂರು ಅಥವಾ ನಾಲ್ಕು ತಿಂಗಳಲ್ಲಿ ಸತ್ತುಹೋದವು ಏಕೆಂದರೆ, ವಾತಾವರಣದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವಕ್ಕೆ ಯಾವ ಸಾಮರ್ಥ್ಯವೂ ಇರಲಿಲ್ಲ.

ಒಂದು ವೇಳೆ ಥೈಮಸ್ ಗ್ರಂಥಿಯು ಇಲಿಗಳ ದೇಹದಲ್ಲಿ ಮೂರು ವಾರಗಳ ಕಾಲ ಇರಲು ಬಿಟ್ಟು ನಂತರ ತೆಗೆದಾಗ, ತಮ್ಮ ದೇಹದಲ್ಲಿ ಆಂಟಿಬಾಡಿಗಳನ್ನು ಸೃಷ್ಟಿಸುವ ಕೋಶಗಳನ್ನು ಆ ಸಮಯದಲ್ಲಿ ಅಭಿವೃದ್ಧಿಪಡಿಸಿಕೊಂಡಿರುತ್ತದೆ ಹಾಗೂ ಆಗ ಯಾವುದೇ ಅಪಾಯವಿಲ್ಲದೇ ಥೈಮಸ್ ಗ್ರಂಥಿಯನ್ನು ತೆಗೆದುಹಾಕಬಹುದು. ಯಾವ ಭ್ರೂಣಗಳಲ್ಲಿ ಥೈಮಸ್ ಗ್ರಂಥಿಯು ತನ್ನ ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲವೋ, ಅದನ್ನು ಹೊರಗಿನ ಜೀವಕೋಶವನ್ನು ಸಹಿಸಲು ’ಕಲಿಯುತ್ತಿದೆ’ ಎಂದು ಪರಿಗಣಿಸಬಹುದಾಗಿದೆ. ಭವಿಷ್ಯದಲ್ಲಿ ಥೈಮಸ್ ಅವರ ಮೇಲಿನ ಪ್ರಯೋಗಗಳ ಮೂಲಕ, ಬಹುಶಃ ವಯಸ್ಕರಲ್ಲೂ ಅಗತ್ಯವೆನಿಸಿದಾಗ ಜೀವಕೋಶಗಳ ಸಹಿಸುವಿಕೆಯನ್ನು ಸುಧಾರಿಸುವ ದಿನಗಳೂ ಬರಬಹುದು.

ಇದೆಲ್ಲ ಆದರೂ, ಒಂದು ವೇಳೆ ಜೀವಕೋಶ ನಿರಾಕರಣೆಯ ಸಮಸ್ಯೆಯನ್ನು ಬಗೆಹರಿಸಿದರೂ
ಇನ್ನೂ ಅನೇಕ ಗಂಭೀರ ಸಮಸ್ಯೆಗಳು ಉಳಿದುಕೊಳ್ಳುತ್ತವೆ. ಎಷ್ಟೇ ಆದರೂ, ಒಬ್ಬ ವ್ಯಕ್ತಿ ಒಂದು ಜೀವಂತ ಅಂಗವನ್ನು ಪಡೆಯಬೇಕೆಂದರೆ, ಅದನ್ನು ನೀಡಲು ಸಿದ್ಧವಿರುವ ಇನ್ನೊಬ್ಬ ವ್ಯಕ್ತಿ ಇರಲೇಬೇಕು. ಆಗ ಏಳುವ ಒಂದು ಪ್ರಶ್ನೆ; ಒಬ್ಬ ವ್ಯಕ್ತಿ ಅಥವಾ ಒಬ್ಬ ಸಂಭಾವ್ಯ ಅಂಗಾಂಗ ದಾನಿಯ ಅಂಗಗಳನ್ನು ಯಾವಾಗ ಪಡೆಯಬೇಕು, ಆ ವ್ಯಕ್ತಿಯ ಅಂಗಗಳನ್ನು ಪಡೆಯಬೇಕಿದ್ದರೆ ಆ ದಾನಿಯು ಸತ್ತಿದ್ದಾನೆ/ಳೆ ಎಂದು ಪರಿಗಣಿಸುವುದು ಯಾವಾಗ.

ಆ ನಿಟ್ಟಿನಲ್ಲಿ ಯಾಂತ್ರಿಕ ಅಂಗಗಳನ್ನು ನಿರ್ಮಿಸಿದಲ್ಲಿ ಉತ್ತಮವಾಗಿರಬಹುದಾಗಿದೆ ಏಕೆಂದರೆ, ಆಗ ಅಲ್ಲಿ ಯಾವುದೂ ಜೀವಕೋಶ ನಿರಾಕರಣೆ ಅಥವಾ ನೈತಿಕ ಪ್ರಶ್ನೆಗಳು ಇರುವುದಿಲ್ಲ. 1940ರ ದಶಕದಲ್ಲಿಯೇ ಕೃತಕ ಮೂತ್ರಪಿಂಡಗಳನ್ನು ಬಳಸುವುದು ಶುರುವಾಯಿತು. ಹಾಗೂ ನೈಸರ್ಗಿಕ ಮೂತ್ರಪಿಂಡದ ಕಾರ್ಯವನ್ನು ನಿರ್ವಹಿಸಲು ಆಗದೇ ಇರುವ ರೋಗಿಗಳು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ, ತಮ್ಮ ದೇಹದಲ್ಲಿಯ ರಕ್ತವನ್ನು ತ್ಯಾಜ್ಯಗಳಿಂದ ಮುಕ್ತವಾಗಿಸುವಂತೆ ಶುದ್ಧಗೊಳಿಸಬಹುದಾಯಿತು. ಹೌದು ಇದರಿಂದ ಈ ಸೇವೆಯನ್ನು ಪಡೆಯುವ ಅದೃಷ್ಟ ಹೊಂದಿದವರಿಗೆ ಒಂದು ರೀತಿಯ ನಿರ್ಬಂಧಿತ ಜೀವನವನ್ನು ನೀಡುತ್ತದೆ, ಆದರೆ ಅದು ಸಾವಿಗಿಂತ ಉತ್ತಮ. 1940ರ ದಶಕದಲ್ಲಿ ಸಂಶೋಧಕರು ಕಂಡುಹಿಡಿದಿದ್ದೇನೆಂದರೆ, ಅಲರ್ಜಿಯ ಪ್ರತಿಕ್ರಿಯೆಗಳು ರಕ್ತದಲ್ಲಿ ಹಿಸ್ಟಾಮಿನ್ ಎಂಬ ಪದಾರ್ಥದ ಸಣ್ಣ ಪ್ರಮಾಣದಲ್ಲಿ ಬಿಡುಗಡೆ ಆಗುವುದರಿಂದ ಸಂಭವಿಸುತ್ತವೆ ಎಂದು. ಇದರಿಂದ ಆ ಅಲರ್ಜಿಯ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುವ, ’ಆಂಟಿ-ಹಿಸ್ಟಾಮಿನ್ಗಳ ಸಂಶೋಧನೆ ಸಾಧ್ಯವಾಯಿತು. ಆದರೆ ಅವುಗಳು ಆ ಅಲರ್ಜಿಯ ನಿರ್ಮೂಲನೆ ಮಾಡುವುದಿಲ್ಲ. ಮೊದಲ ಯಶಸ್ವಿ ಆಂಟಿ-ಹಿಸ್ಟಾಮಿನ್‌ಅನ್ನು 1937ರಲ್ಲಿ ಪ್ಯಾರಿಸ್‌ನ ಪಾಶ್ಚರ್ ಸಂಸ್ಥೆಯಲ್ಲಿ ರಾಸಾಯನಿಕ ತಜ್ಞ ಡ್ಯಾನಿಯಲ್ ಬೊವೆಟ್ ಅವರು ಸೃಷ್ಟಿಸಿದರು. ಇದಕ್ಕೆ ಮತ್ತು ಮುಂದೆ ಅವರು ಕಿಮೋಥೆರಪಿಯ ಸಂಶೋಧನೆಗಳಲ್ಲಿ ಮಾಡಿದ ಕೆಲಸಕ್ಕೆ 1957ರಲ್ಲಿ ಔಷಧಶಾಸ್ತ್ರ ಮತ್ತು ಶರೀರವಿಜ್ಞಾನದ ನೊಬೆಲ್ ಪಡೆದರು. ಮೂಗು ಸೋರುವುದು ಮತ್ತು ಇತರ ಅಲರ್ಜಿಯ ಗುಣಲಕ್ಷಣಗಳು ಸಾಮಾನ್ಯ ನೆಗಡಿಯ ತರವೇ ಇದ್ದುದರಿಂದ ಔಷಧ ಕಂಪನಿಗಳು ನಿರ್ಧರಿಸಿದ್ದೇನೆಂದರೆ, ಒಂದು ರೋಗಕ್ಕೆ ಕೆಲಸ ಮಾಡುವ ಔಷಧಿ ಇನ್ನೊಂದಕ್ಕೂ ಮಾಡುತ್ತೆ ಎಂದು ಹಾಗೂ ೧೯೪೯ ಮತ್ತು 1950ರಲ್ಲಿ ದೇಶದಲ್ಲಿ ಆಂಟಿ-ಹಿಸ್ಟಾಮಿನ್ ಮಾತ್ರೆಗಳ ಸುರಿಮಳೆ ಆಯಿತು. (ನೆಗಡಿಗೆ ಆ ಔಷಧಿಗಳು ಏನೋ ಚೂರು ಅಥವಾ ಏನೂ ಮಾಡುತ್ತಿದ್ದಿಲ್ಲ ಎಂದು ತಿಳಿದ ಮೇಲೆ ಅವುಗಳ ಜನಪ್ರಿಯತೆ ಕಡಿಮೆಯಾಯಿತು.)

1937ರಲ್ಲಿ ಪ್ರೊಟೀನ್-ಐಸೋಲೇಟಿಂಗ್ ಅಂದರೆ ಪ್ರೊಟೀನ್‌ಅನ್ನು ಪ್ರತ್ಯೇಕಿಸುವ ವಿಧಾನಗಳನ್ನು ಕಂಡುಕೊಂಡ ನಂತರ ಜೀವಶಾಸ್ತ್ರಜ್ಞರು ಕೊನೆಗೂ ರಕ್ತದಲ್ಲಿ ಈ ಆಂಟಿಬಾಡಿಗಳು ಭೌತಿಕವಾಗಿ ಎಲ್ಲಿರುತ್ತವೆ ಎಂಬುದನ್ನು ಕಂಡುಕೊಂಡರು. ಆಂಟಿಬಾಡಿಗಳು ರಕ್ತದ ಒಂದು ಅಂಶವಾದ ’ಗಾಮಾ ಗ್ಲೊಬುಲಿನ್ನಲ್ಲಿ ಅಡಕವಾಗಿರುತ್ತವೆ ಎಂಬುದು ಗೊತ್ತಾಯಿತು. ವೈದ್ಯರಿಗೆ ಮುಂಚೆಯಿಂದಲೂ ಗೊತ್ತಿರುವ ಸಂಗತಿಯೇನೆಂದರೆ, ಕೆಲವು ಮಕ್ಕಳು ಈ ಆಂಟಿಬಾಡಿಗಳನ್ನು ಸೃಷ್ಟಿಸಲು ಅಸಮರ್ಥರಾಗಿರುತ್ತಾರೆ ಹಾಗೂ ಆ ಕಾರಣಕ್ಕಾಗಿ ಅವರು ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ. 1951ರಲ್ಲಿ ಸೆಪ್ಟಿಸಿಮೀಯಾದ ಅಥವಾ ನೆತ್ತರು ನಂಜಿನ ಗಂಭೀರ ಕಾಯಿಲೆಯಿಂದ ನರಳುತ್ತಿರುವ ೮ ವರ್ಷದ ಬಾಲಕ ವಾಷಿಂಗ್ಟನ್‌ನ ವಾಲ್ಟರ್ ರೀಡ್ ಆಸ್ಪತ್ರೆಗೆ ಬರುತ್ತಾನೆ.

ಅಲ್ಲಿಯ ವೈದ್ಯರು ಆ ಬಾಲಕನ ಪ್ಲಾಸ್ಮಾದ ಎಲೆಕ್ಟ್ರೋಫೊರೆಟಿಕ್ ವಿಶ್ಲೇಷಣೆ ಮಾಡಿದಾಗ ಅವರು ಕಂಡುಕೊಂಡ ದಿಗಿಲುಹುಟ್ಟಿಸುವ ಸಂಗತಿಯೇನೆಂದರೆ, ಆ ಬಾಲಕನ ರಕ್ತದಲ್ಲಿ ಗ್ಯಾಮಾ ಗ್ಲೊಬುಲಿನ್ ಎಂಬುದು ಇರಲೇ ಇಲ್ಲ. ಶೀಘ್ರದಲ್ಲೇ ಇಂತಹ ಇತರ ಪ್ರಕರಣಗಳೂ ಕಾಣಿಸಿಕೊಂಡವು. ಸಂಶೋಧಕರು ಇದಕ್ಕೆ ಕಾರಣವನ್ನು ಕಂಡುಕೊಂಡರು; ಈ ಕೊರತೆಯು ಚಯಾಪಚಯ ಕ್ರಿಯೆಯ (ಮೆಟಬಾಲಿಸಂ) ದೋಷದಿಂದ ಆ ವ್ಯಕ್ತಿಗಳು ಗಾಮಾಗ್ಲೊಬುಲಿನ್‌ಅನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಇದನ್ನು ’ಅಗ್ಯಾಮಾಗ್ಲೊಬುಲಿನೀಮಿಯಾ’ ಎಂದು ಕರೆಯಲಾಯಿತು. ಇಂತಹ ವ್ಯಕ್ತಿಗಳಿಗೆ ಬ್ಯಾಕ್ಟೀರಿಯಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರನ್ನು ಆಂಟಿಬಯಾಟಿಕ್‌ಗಳ ಸಹಾಯದ ಮೂಲಕ ಜೀವಂತವಾಗಿಡಬಹುದು. ಆಶ್ಚರ್ಯಕರ ಸಂಗತಿಯೇನೆಂದರೆ, ಅವರುಗಳು ದಡಾರ, ಚಿಕನ್‌ಪಾಕ್ಸ್‌ನಂತಹ ವೈರಾಣುಗಳಿಂದ ಹಡುವ ಸೋಂಕುಗಳಿಗೆ ರೋಗನಿರೋಧಕ ಶಕ್ತಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿತ್ತು.

ಅಂದರೆ, ವೈರಾಣುಗಳ ವಿರುದ್ಧ, ಆಂಟಿಬಾಡಿಗಳು ಮಾತ್ರ ದೇಹಕ್ಕೆ ರಕ್ಷಣೆ ನೀಡುವುದಿಲ್ಲ. 1957ರಲ್ಲಿ ಅಲಿಕ್ ಐಸ್ಯಾಕ್ಸ್ ಅವರ ನಾಯಕತ್ವದಲ್ಲಿ ಬ್ರಿಟನ್ನಿನ ಬ್ಯಾಕ್ಟಿರಿಯಾ ತಜ್ಞರ ತಂಡವು ತೋರಿಸಿಕೊಟ್ಟಿದ್ದೇನೆಂದರೆ, ದೇಹದಲ್ಲಿ ವೈರಾಣು ಪ್ರವೇಶ ಮಾಡಿದಾಗ ಕೋಶಗಳು ಅದಕ್ಕೆ ಪ್ರತಿಕ್ರಿಯೆಯಾಗಿ ಒಂದು ಪ್ರೊಟೀನ್‌ಅನ್ನು ಬಿಡುಗಡೆ ಮಾಡುತ್ತವೆ; ಆ ಪ್ರೊಟೀನು ವಿಸ್ತಾರವಾದ ಆಂಟಿ-ವೈರಲ್ ಲಕ್ಷಣಗಳನ್ನು ಹೊಂದಿರುತ್ತದೆ. ಹಾಗೂ ಆ ಪ್ರೊಟೀನು ಆ ತಕ್ಷಣದ ಸೋಂಕಿಗೆ ಕಾರಣವಾದ ವೈರಾಣು ಮಾತ್ರ ಅಲ್ಲದೇ ಇತರ ವೈರಾಣುಗಳ ವಿರುದ್ಧವೂ ರಕ್ಷಣೆ ನೀಡುತ್ತದೆ. ಈ ಪ್ರೊಟೀನ್‌ಗೆ ’ಇಂಟರ್‌ಫೆರಾನ್ ಎಂದು ಹೆಸರಿಸಲಾಯಿತು ಹಾಗೂ ಇವಗಳು ಆಂಟಿಬಾಡಿಗಳಿಗಿಂತಲೂ ಶೀಘ್ರವಾಗಿ ಸೃಷ್ಟಿಗೊಳ್ಳುತ್ತವೆ ಹಾಗೂ ಇವುಗಳೇ ಅಗ್ಯಾಮಾಗ್ಲೊಬುಲಿನಿಮಿಯಾದಿಂದ ಬಳಲುತ್ತಿರುವವರಿಗೆ ವೈರಾಣುಗಳ ವಿರುದ್ಧ ಬಂದ ರೋಗನಿರೋಧಕ ಶಕ್ತಿಯ ಹಿಂದಿನ ಕಾರಣವನ್ನು ನೀಡಬಲ್ಲವು. ಅಂದಹಾಗೆ, ವೈರಾಣುಗಳಲ್ಲಿ ಕಾಣಿಸಿಕೊಳ್ಳುವ ಡಬಲ್ ಸ್ಟ್ರ್ಯಾಂಡೆಡ್ ತಳಿಗಳಲ್ಲಿ ಇರುವ ಆರ್‌ಎನ್‌ಎ ಕಾರಣದಿಂದ ಈ ಇಂಟರ್‌ಪೆರಾನ್‌ನ ನಿರ್ಮಾಣ ಆರಂಭಗೊಳ್ಳುತ್ತದೆ.

ಈ ಇಂಟರ್‌ಫೆರಾನ್ ಮಾಡುವುದೇನೆಂದರೆ, ವೈರಸ್ ಪ್ರೊಟೀನ್‌ನ ನಿರ್ಮಾಣವನ್ನು ಮಾತ್ರ ನಿರ್ಬಂಧಿಸುವ ಆಂಟಿ-ವೈರಸ್ ಪ್ರೊಟೀನ್‌ಅನ್ನು ನಿರ್ಮಿಸುವ ಒಂದು ’ಮೆಸೆಂಜರ್ ಆರ್‌ಎನ್‌ಎ’ಯ ನಿರ್ಮಾಣವನ್ನು ನಿರ್ದೇಶಿಸುತ್ತದೆ ಆದರೆ, ಪ್ರೊಟೀನ್‌ಗಳ ಇತರ ವಿಧಾನಗಳನ್ನು ನಿರ್ಬಂಧಿಸುವುದಿಲ್ಲ. ಇಂಟರ್‌ಫೆರಾನ್ ಎಂಬುದು ಆಂಟಿಬಯಾಟಿಕ್ಸ್‌ಗಳಷ್ಟೇ ಸಶಕ್ತವಾಗಿದೆ ಹಾಗೂ ಪ್ರತಿರೋಧವನ್ನು ಪ್ರಚೋದಿಸುವುದಿಲ್ಲ. ಆದರೆ ಇದು ತುಂಬಾ ನಿರ್ದಿಷ್ಟವಾದದ್ದು. ಮನುಷ್ಯರ ಮತ್ತು ಇತರ ಮಂಗಗಳಂತಹ ಸಸ್ತನಿಗಳ(ಪ್ರೈಮೇಟ್) ಇಂಟರ್‌ಫೆರಾನ್ ಮಾತ್ರ ಮನುಷ್ಯರ ಮೇಲೆ ಕೆಲಸ
ಮಾಡಬಲ್ಲದು.

ಡಾ. ಐಸಾಕ್ ಅಸಿಮೋವ್
ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಪ್ರೊಫೆಸರ್ ಆಗಿದ್ದ ದಿವಂಗತ ಐಸಾಕ್ ಅಸಿಮೋವ್, ಸೈನ್ಸ್ ಫಿಕ್ಷನ್ ಬರಹಗಳಿಗೆ ಪ್ರಖ್ಯಾತ. ಅವರ ’ಐ, ರೊಬೋಟ್, ’ಫೌಂಡೇಶನ್ ತ್ರಿವಳಿ’ ಕಾದಂಬರಿಗಳು ಜಗತ್ತಿನೆಲ್ಲಡೆ ಜನಪ್ರಿಯ. ವಿಜ್ಞಾನವನ್ನು ಜನಪ್ರಿಯಗೊಳಿಸಲು ಸಾವಿರಾರು ಲೇಖನಗಳನ್ನು ಅಸಿಮೋವ್ ಬರೆದಿದ್ದಾರೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಇದನ್ನೂ ಓದಿ: ರೋಗನಿರೋಧಕತೆ ಮತ್ತು ಲಸಿಕೆ; ಸಂಶೋಧನೆಯ ಇತಿಹಾಸ ಮತ್ತು ವಿಜ್ಞಾನ: ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

0
ಪ್ರಭುತ್ವಕ್ಕೆ ಸತ್ಯ ನುಡಿಯುತ್ತಿದ್ದ ಖ್ಯಾತ ಪರ್ತಕರ್ತ ರವೀಶ್ ಕುಮಾರ್ ಎನ್‌ಡಿಟಿವಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಎನ್‌ಡಿಟಿವಿ ಅದಾನಿ ತೆಕ್ಕೆಗೆ ಹೋದುದ್ದೆ ಅವರ ರಾಜೀನಾಮೆಗೆ ಪ್ರಮುಖ ಕಾರಣ. ರವೀಶ್ ಕುಮಾರ್‌ರವರಿಗೆ ಗೌರಿ ಸ್ಮಾರಕ ಟ್ರಸ್ಟ್...