Homeಅಂಕಣಗಳುಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

ಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

- Advertisement -
- Advertisement -

ಸಂಪಾದಕೀಯ |

ಚಳಿಗಾಲ ಮುಗಿದು ತಾಪಮಾನ ಏರುತ್ತಿರುವ ಜತೆಗೇ ಲೋಕಸಭಾ ಚುನಾವಣೆಯ ಬಿಸಿಯೂ ಸೇರಿ ವಾತಾವರಣದ ಶಾಖ ಏರುತ್ತಲಿದೆ. ರಾಜಕಾರಣಿಗಳ ಪ್ರತಿ ನಡೆಯೂ ಆಗಲೇ ಈ ಚುನಾವಣೆಗಳ ಮೇಲೆ ಕಣ್ಣಿಟ್ಟುಕೊಂಡೇ ಜರುಗುತ್ತಲಿದೆ. ಆದರೆ ಈ ಚುನಾವಣೆ ಹಿಂದಿನಂಥದ್ದಲ್ಲ. ಇದು ಈ ದೇಶದ ಪ್ರಜಾತಂತ್ರ ಮತ್ತು ಅದಕ್ಕೆ ಅಡಿಪಾಯವಾಗಿರುವ ಸಂವಿಧಾನವನ್ನು ಜನಸಾಮಾನ್ಯರು ಉಳಿಸಿಕೊಳ್ಳುತ್ತಾರೆಯೋ ಅಥವಾ ಮತ್ತೊಮ್ಮೆ ಹಿಂದುತ್ವ ಫ್ಯಾಸಿಸಂಗೆ ಮೇಲುಗೈ ಆಗುತ್ತದೋ ಎಂಬ ನಿರ್ಣಾಯಕ ಚುನಾವಣೆ ಇದಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರ ಬವಣೆಗೆ ಈಗಲಾದರೂ ಕಿಂಚಿತ್ ಸಮಾಧಾನ ಸಿಗಬಹುದೋ ಎಂಬ ಕಾತರವೂ ಇದೆ. ಇದೇ ಆಶಯದಿಂದ ಈ ದೇಶದ ಜನ ಹಣ-ಹೆಂಡ, ಜಾತಿ ಇತ್ಯಾದಿ ಆಮಿಷಗಳ ನಡುವೆಯೂ ಅಧಿಕಾರರೂಢ ಪಕ್ಷಗಳ ವಿರುದ್ಧ ಮತ ಚಲಾಯಿಸುತ್ತಲೇ ಬಂದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಆಳುವ ಪಕ್ಷ ಅನುಭವಿಸಿದ ಸೋಲೇ ಸಾಕ್ಷಿ. ಉಪಚುನಾವಣೆಯ ಫಲಿತಾಂಶ ಮಹಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸದಿದ್ದರೂ, ಅದು ಜನರ ಆಲೋಚನೆಯ ದಿಕ್ಕನ್ನು ಸೂಚಿಸುವಂತಿರುತ್ತದೆ. ಉದಾಹರಣೆಗೆ, ಉಪಚುನಾವಣೆಗಳ ಫಲಿತಾಂಶ ಭಾಜಪದ ದರ್ಪವನ್ನೂ, ಆತ್ಮವಿಶ್ವಾಸವನ್ನೂ ಕೊಂಚ ಕುಗ್ಗಿಸಿರುವುದು ನಿಜ. ಆದರೆ ಇದರಿಂದ ವಿರೋಧ ಪಕ್ಷಗಳು ಸಂಭ್ರಮಿಸುವ ಹಾಗೇನೂ ಇಲ್ಲ. ಆಳುವ ಪಕ್ಷಗಳ ಮೇಲಿನ ಅಸಮಾಧಾನವನ್ನು ಜನ ಹೊರಹಾಕಿದ್ದಾರೆ ಅಷ್ಟೆ. ಹಾಗೆ ನೋಡಿದರೆ ಭಾರತದ ಮತದಾರರು ತುರ್ತು ಪರಿಸ್ಥಿತಿ ನಂತರ, ಕೆಲವು ಅಪವಾದಗಳನ್ನು ಹೊರತುಪಡಿಸಿ, ನಿರಂತರವಾಗಿ ಅಧಿಕಾರ ವಿರೋಧಿ ನಿಲುವನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ನಮ್ಮ ಚುನಾವಣೆಯ ಸ್ವರೂಪದಲ್ಲೇ ಆಯ್ಕೆಗಳು ತೀರಾ ಮಿತವಾಗಿರುವುದರಿಂದ ಪ್ರತಿ ಬಾರಿಯೂ ಅಧಿಕಾರದಲ್ಲಿ ಇಲ್ಲದ ಪಕ್ಷಗಳು ಮತ್ತೇ ಆಯ್ಕೆ ಆಗುತ್ತಲಿವೆ.
ಈ ಅಧಿಕಾರ ವಿರೋಧಿ ನಿಲುವು ಏನನ್ನೂ ಸೂಚಿಸುತ್ತದೆ? ಅಧಿಕಾರಕ್ಕೆ ಬಂದ ಪ್ರತಿ ಪಕ್ಷವೂ ಜನರನ್ನು ಮೋಸಗೊಳಿಸಿದೆ. ಹೀಗೆ ಮೋಸ ಹೋಗುತ್ತಿದ್ದರೂ, ಜನ ಸಿನಿಕರಾಗದೆ ತಮ್ಮ ಸೀಮಿತ ಆಯ್ಕೆಯನ್ನು ನಿರಂತರವಾಗಿ ತೋರಿಸುತ್ತಲೇ ಇದ್ದಾರೆ. ಅಂದರೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಆದರೆ ಜನರಿಗೆ ಬೇಕಾದ ಬದಲಾವಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಪಕ್ಷಗಳಿಗೆ ಒಂದು ಸಾಧ್ಯವಾಗುತ್ತಿಲ್ಲ; ಅಥವಾ ಅದು ತಿಳಿದಿದ್ದರೂ ಅವರಿಗೆ ಈ ಬದಲಾವಣೆಗಳನ್ನು ತರಲು ಮನಸ್ಸಿಲ್ಲ. ಇನ್ನೂ ಮುಖ್ಯವಾಗಿ ನವಉದಾರೀಕರಣದಿಂದ ಹೊರಬರುವ ತನಕ ಜನಪರ ಬದಲಾವಣೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆಲವು ಜನಪ್ರಿಯ ಕಲ್ಯಾಣಯೋಜನೆಗಳನ್ನು ಮಾತ್ರ ಮುಂದಿಟ್ಟು ಅದೇ ಬದಲಾವಣೆ ಎಂಬಂತೆ ಜನರನ್ನು ಮರಳು ಮಾಡುವುದು ಎಲ್ಲ ಪಕ್ಷಗಳ ಚಾಳಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಹೋಲಿಸಿದರೆ ಇದರಲ್ಲಿ ಬಿಜೆಪಿ ಕೊಂಚ ಭಿನ್ನ ಮತ್ತು ಹೆಚ್ಚು ಅಪಾಯಕಾರಿ. ಅದು ತನ್ನ ಹಿಂದುತ್ವ ಫ್ಯಾಸಿಸಂ ಮೂಲಕ ಹೊಸ “ಹಿಂದೂ ನಾಗರಿಕತೆ”ಯನ್ನು ಕಟ್ಟುವ ಆಮಿಷವನ್ನು ಮುಂದಿಡುತ್ತದೆ. ರಾಮಮಂದಿರ ಕಟ್ಟುವುದು ಅದರ ಪ್ರಕಾರ ಈ ನಾಗರಿಕತೆಯ ಭಾಗ. ಆದರೆ ಮೊನ್ನೆಯ ಚುನಾವಣೆಗಳು ಭಾಜಪದ ಈ ಯೋಜನೆಗೆ ಸೊಪ್ಪು ಹಾಕಿಲ್ಲ. ಅವರಿಗೆ ಏರುತ್ತಿರುವ ನಿರುದ್ಯೋಗ, ಹಣದುಬ್ಬರ, ಜಿ.ಎಸ್.ಟಿ ಮತ್ತು ನೋಟು ಅಮಾನ್ಯೀಕರಣದಿಂದಾದ ತೊಂದರೆ, ಕೃಷಿ ಬಿಕ್ಕಟ್ಟು ಇತ್ಯಾದಿ ಹಾರ್ಡ್‍ಕೋರ್ ಆರ್ಥಿಕ ಕಾರಣಗಳೇ ಮುಖ್ಯವಾಗಿವೆ. ಹೀಗಾಗಿ ರಾಮಮಂದಿರದ ವಿಚಾರ ಕೊಂಚ ಮಟ್ಟಿಗೆ ತನ್ನ ಅಪೀಲನ್ನು ಕಳೆದುಕೊಂಡಿದೆ. ಮೋದಿಯ ವಾಗ್ಝರಿ ಕೂಡ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಕಂಗಾಲಾಗಿರುವ ಮೋದಿ ಈ ಚುನಾವಣೆಯನ್ನು ಸುಭದ್ರ (ಮಜ್ಬೂರ್) ಮತ್ತು ಅಸಹಾಯಕ (ಮಜ್ದೂರ್) ಸರ್ಕಾರದ ನಡುವಿನ ಆಯ್ಕೆ ಎಂದಿದ್ದಾರೆ. ಆದರ ಹಿಂದೆಯೇ ತಮ್ಮ ಪಕ್ಷ ತನ್ನ ಎಲ್ಲ ಹಳೆಯ ಗೆಳೆಯರನ್ನು ಸ್ವಾಗತಿಸುತ್ತದೆ ಎಂದು ಕೂಡ ಹೇಳಿದ್ದಾರೆ. ಇದು ಈ ಬಾರಿ ತಮಗೆ ಭಾರಿ ಬಹುಮತ ಸಿಗಲಾರದು ಎನ್ನುವುದನ್ನು ಬಿಜೆಪ ಈಗಾಗಲೇ ಒಪ್ಪಿಕೊಂಡ ಹಾಗಿದೆ. ಹೀಗಾಗಿ ಈ ಬಾರಿ ಸಮ್ಮಿಶ್ರ ಸರ್ಕಾರ ಹೆಚ್ಚು ಸಂಭವನೀಯ. ಇದು ಕೂಡ ಜನರ ಭ್ರಮನಿರಸನದ ಆಯ್ಕೆಯ ಪ್ರತೀಕವೇ ಹೌದು.
ಇದರಿಂದ ಹೊರಹೊಮ್ಮುವ ಪಾಠಗಳೇನು?
ಮೊದಲಿಗೆ, ಹಿಂದುತ್ವ, ಕೋಮುವಾದ, ರಾಮಮಂದಿರ…. ಇತ್ಯಾದಿ ಭಾವನಾತ್ಮಕ ಅಂಶಗಳು ಜನರಿಗೆ ಬೇಕಾದ ನೆಮ್ಮದಿಯ ಬದುಕು, ಭದ್ರತೆಗಳನ್ನು ನೀಡಲಾಗದು ಎಂಬ ಅರಿವು. ಇದು ಸ್ಪಷ್ಟವಾಗಿ ಗೋಚರವಾಗದಿದ್ದರೂ, ಆಳದಲ್ಲಿ ಕೆಲಸ ಮಾಡಿರುವುದು ನಿಜ. ಹಾಗೆಯೇ, ಈ ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಅಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳು ದುರ್ಲಭವಾಗಿರುವುದು ಇನ್ನೊಂದು. ಮೇಲಾಗಿ, ಅಸಂಘಟಿತ ಕಾರ್ಮಿಕರ, ಮಹಿಳೆ, ದಲಿತ ಮತ್ತು ಇತರೆ ಅಲ್ಪಸಂಖ್ಯಾತರ ಆತಂಕ ಇತ್ಯಾದಿ ವಿಷಯಗಳಿಗೆ ಬೇಕಾದ ಸೂಕ್ತ ಪರಿಹಾರ ಮಾರ್ಗಗಳು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲ ಎಂಬ ಸತ್ಯ.
ಮುಂದಿನ ಚುನಾವಣೆ ಈ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಬೇಕಾಗಿದೆ. ಆದರೆ ಈಗಿನ ರಾಜಕೀಯ ಪಕ್ಷಗಳಲ್ಲಿ ಈ ವಿಚಾರಗಳಿಗೆ ಸಂಬಂಧಪಟ್ಟ ಯಾವುದೇ ಸ್ಪಷ್ಟ ಕಾರ್ಯಯೋಜನೆ ಇಲ್ಲ. ಜಾಗತೀಕರಣ ಮತ್ತು ಖಾಸಗಿಕರಣಕ್ಕೇ ಒತ್ತು ನೀಡುವ ಯಾವ ಪಕ್ಷದಿಂದಲೂ ಈ ಸಂದಿಗ್ಧತೆಯಿಂದ ಹೊರಬರುವ ಮಾರ್ಗವೇ ಇಲ್ಲ. ಹೀಗಾಗಿ ಇಂದು ಪಕ್ಷರಾಜಕಾರಣದಿಂದ ಹೊರತಾಗಿ ಯೋಚಿಸುವ, ನಮ್ಮ ದೇಶದ ಜನ ಕಾಯುತ್ತಿರುವ ಬದಲಾವಣೆಗಳನ್ನು ಜಾರಿಗೆ ತರುವ ಮಾರ್ಗೊಪಾಯಗಳನ್ನು ಜನರ ಮುಂದಿಡುವ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ಅಂಥ ಕಾರ್ಯೊದ್ದೇಶವನ್ನು ಇಟ್ಟುಕೊಂಡು ಹೋರಾಡುವ ಹೊಸ ಯುವ ಶಕ್ತಿಯೊಂದು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ.
ಈ ಕಾರಣಕ್ಕೆ ‘ಬದಲಾವಣೆ ಸಾಧ್ಯ ಮತ್ತು ನನ್ನಿಂದಲೇ ಈ ಬದಲಾವಣೆ ಪ್ರಾರಂಭ’ ಎಂಬ ಅರ್ಥ ಧ್ವನಿಸುವ ‘ಐ ಕ್ಯಾನ್’ (I ಅಂಓ) ಆಂದೋಲನಕ್ಕೆ ಅಖಿಲ ಭಾರತ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದೇ ಆಶಯಗಳನ್ನ ಹೊಂದಿರುವ ಆದರೆ ಕರ್ನಾಟಕದ ಸಂದರ್ಭಕ್ಕೆ ಹತ್ತಿರವಾದ ವಿಚಾರಗಳನ್ನು ಇಟ್ಟುಕೊಂಡು ‘ದೇಶಕ್ಕಾಗಿ ನಾವು – ನಂಗೂ ಸಾಧ್ಯ!’ ಎಂಬ ಘೋಷಣೆಯ ಅಡಿಯಲ್ಲಿ ಯುವ ಜನತೆಯನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಿದೆ. ಇದರಲ್ಲಿ ಜತೆಯಾಗುವ ಕಾರ್ಮಿಕರ, ಮಹಿಳೆಯರ, ನಿರುದ್ಯೋಗಿಗಳ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ವಿಚಾರಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳು ತಮ್ಮ ತಮ್ಮ ಅಜೆಂಡಾಗಳನ್ನೂ, ಅನನ್ಯತೆಗಳನ್ನು ಇಟ್ಟುಕೊಂಡೇ ‘ದೇಶಕ್ಕಾಗಿ ನಾವು’ ಎನ್ನುವ ಸಮಾನ ಆಶಯದೊಂದಿಗೆ ಕೈಜೋಡಿಸಲಿದ್ದಾರೆ. ಇದೊಂದು ರೀತಿಯಲ್ಲಿ ‘ಪ್ರಜಾ ಮಹಾಘಟ ಬಂಧನ’. ಇದು ಬದಲಾವಣೆಗೆ ಹಾತೊರೆಯುವ ಮನಸ್ಸುಗಳೆಲ್ಲಾ ಒಗ್ಗೂಡಿ ನಿಜವಾದ ಜನ ಪರ್ಯಾಯವನ್ನು ಕಟ್ಟುವ ಪ್ರಯತ್ನ. ಇದು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ. ಈ ಆಂದೋಲನಕ್ಕೆ ಧ್ವನಿಗೂಡಿಸಿರುವ ಹಿರಿಯ ಮುತ್ಸದ್ಧಿ ಎ.ಕೆ ಸುಬ್ಬಯ್ಯನವರು ಹೇಳಿರುವ ಹಾಗೆ ಇದು ಯಾವುದೋ ಪಕ್ಷವನ್ನು ಗೆಲ್ಲಿಸಲು ಅಥವಾ ಸೋಲಿಸಲು ನಡೆಯುತ್ತಿರುವ ಆಂದೋಲನವಲ್ಲ. ಪ್ರಜೆಗಳೇ ಪ್ರಜಾಪ್ರÀಭುತ್ವದ ನಿಜವಾದ ಪ್ರಭುಗಳು ಎನ್ನುವುದನ್ನು ರಾಜಕೀಯ ಪಕ್ಷಗಳಿಗೆ ನೆನಪಿಸುವ, ಜನರ ಅಧಿಕಾರಕ್ಕಾಗಿ ಒತ್ತಾಯಿಸುವ ಹೋರಾಟ.
ಇದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಆದಿಯಾಗಿ ಜನಪರವಾಗಿ ಇರುವ ಎಲ್ಲ ಹಿರಿಯ ಕಿರಿಯರೂ ಭಾಗಿಯಾಗಿದ್ದಾರೆ. ನೀವೂ ಕೂಡ ಹೇಳಿ ‘ನಂಗೂ ಸಾಧ್ಯ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...