ನ್ಯಾಯಪಥ ಪತ್ರಿಕೆಯಲ್ಲಿ ಕೆಲವು ಸಣ್ಣ ಪತ್ರಿಕೆಗಳ, ಜರ್ನಲ್‌ಗಳ ಪರಿಚಯ ಮಾಡಿಕೊಡಲೆಂದು (ಕಿರು ಪರಿಚಯದ ಈ ಅಂಕಣ ಮುಂದಿನ ವಾರದಿಂದ ಪ್ರಾರಂಭವಾಗಲಿದೆ) – ಅದರ ಭಾಗವಾಗಿ ಇಂಡಿಯನ್ ಕಾರ್ಟೂನಿಸ್ಟ್ ಅಸೋಸಿಯೇಷನ್ ಈ ವರ್ಷ ಹೊರತಂದಿರುವ ಕಾರ್ಟೂನಿಸ್ಟ್ ಇಂಡಿಯಾ ಆನ್ಯಯಲ್ 2022 ಜರ್ನಲ್ ತರಲು ಇಂಡಿಯನ್ ಕಾರ್ಟೂನ್ ಗ್ಯಾಲರಿಗೆ ಹೋದೆ. ಗ್ಯಾಲರಿಯಲ್ಲಿ ಯುದ್ಧದ ಥೀಮ್ ಇರುವ ದೇಶವಿದೇಶಗಳ ಕಾರ್ಟೂನ್‌ಗಳ ಪ್ರದರ್ಶನ ನಡೆಯುತ್ತಿದೆ. ಯುದ್ಧ ಯಾರಿಗೂ ಒಳಿತನ್ನು ಮಾಡದ ’ವೇಸ್ಟ್’ ಎಂದು ಎರಡನೇ ವಿಶ್ವಯುದ್ಧದ ನಂತರ ಜಗತ್ತು ಕಂಡುಕೊಳ್ಳಲು ಸ್ವಲ್ಪ ಪ್ರಯತ್ನಿಸಿತಾದರೂ, ತದನಂತರವೂ ಯುದ್ಧಗಳಿಲ್ಲದ ಸಮಯವನ್ನು ಹುಡುಕುವುದು ಕಷ್ಟವೇ. ಈಗ ವ್ಲಾಡಿಮಿರ್ ಪುಟಿನ್ ಎಂಬ ರಷ್ಯಾ ಸರ್ವಾಧಿಕಾರಿಯ ದಾಹ ತಣಿಸಲು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಅಪಾರ ಸಾವುನೋವುಗಳ ಜೊತೆಗೆ, ಉಕ್ರೇನ್‌ನಲ್ಲಿ ಈ ಯುದ್ಧದಿಂದ ಉಂಟಾಗುವ ಭಗ್ನಾವಶೇಷಗಳ ಕಸ ಗುಡಿಸುವವರು ಯಾರು? ಮಾನವ ಸಂಕುಲ ತನ್ನ ನಾಗರಿಕತೆಯಲ್ಲಿ ವಿವಿಧ ಹಂತದಲ್ಲಿ ತ್ಯಾಜ್ಯಗಳ ಜೊತೆಗೆ ಹೋರಾಡುವುದು, ಅದನ್ನು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ಸುದೀರ್ಘ ಚರಿತ್ರೆಯ ಮುಖ್ಯ ಭಾಗವಾಗಿದೆ.
ಕಾರ್ಟೂನಿಸ್ಟ್ ಇಂಡಿಯಾ ಆನ್ಯಯಲ್ ಜರ್ನಲ್ ಒಂದನ್ನು ಕೊಂಡೆ. ಅದನ್ನು ಒಂದು ಪಾರದರ್ಶಕ ಏಕ ಬಳಕೆಯ ಪ್ಲಾಸ್ಟಿಕ್ ಕವರ್‌ನಿಂದ ಸುತ್ತಲಾಗಿತ್ತು. ಧೂಳಿನಿಂದ ಪುಸ್ತಕವನ್ನು ಸಂರಕ್ಷಿಸಲು ಇದು ಉತ್ತಮ ವಿಧಾನ ಎಂಬ ನಂಬಿಕೆಯಿದೆ. ಅಲ್ಲಿಂದ ಅನತಿ ದೂರದಲ್ಲಿರುವ, ರೋಡ್ ಸೈಡ್ ನಾಷ್ಟಾ ಅಂಗಡಿಯೊಂದರ ಮುಂದೆ ನಿಂತೆ. ಸಾಮಾನ್ಯವಾಗಿ ಅಲ್ಲಿ ನಾನು ತಿನ್ನುವ ಮೊಟ್ಟೆದೋಸೆಯನ್ನು ಪ್ಲೇಟಿನಲ್ಲಿ ಹಾಕಿಕೊಡುವಾಗ ಪ್ಲೇಟನ್ನು ಮಾಮೂಲಿನಂತೆ ಪ್ಲಾಸ್ಟಿಕ್ ಶೀಟ್‌ನಿಂದ ಹೊದಿಸಿರಲಿಲ್ಲ. ಏಕೆಂದು ಕೇಳಿದ್ದಕ್ಕೆ, ಆಗಲೇ ಪಕ್ಕದ ಬೀದಿಯಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಪ್ಲಾಸ್ಟಿಕ್ ಬಳಸುವ ಅಂಗಡಿಗಳ ತಲಾಷ್‌ನಲ್ಲಿದ್ದು ದಂಡ ವಿಧಿಸುತ್ತಿರುವುದರ ಮಾಹಿತಿ ತಿಳಿದು, ಇಲ್ಲಿ ಪ್ಲಾಸ್ಟಿಕ್‌ಅನ್ನು ಅವಿತಿಟ್ಟಿದ್ದರು. ತಟ್ಟೆಯ ಮೇಲೆ ಪ್ಲಾಸ್ಟಿಕ್ ಹರಡಿ ಅದರ ಮೇಲೆ ತಿಂಡಿ ಹಾಕಿಕೊಟ್ಟರೆ, ಗ್ರಾಹಕನಿಗೆ ಅದು ಬಹಳ ಸ್ವಚ್ಛ ಎಂಬ ಭಾವ-ಭರವಸೆ, ಅತ್ತ ಅಂಗಡಿಯವರಿಗೂ ತಟ್ಟೆ ತೊಳೆಯುವ ತಾಪತ್ರಯ ಕೆಲಸದಲ್ಲಿ ತ್ರಾಸ ತುಸು ಕಡಿಮೆಯಾಗತ್ತೆ. ಒಟ್ಟಿನಲ್ಲಿ ಸ್ವಚ್ಛತೆಯ ಸೋಗು ಹಾಕಿಕೊಂಡು ಬಂದ ಪ್ಲಾಸ್ಟಿಕ್ ಇಂದು ಎಲ್ಲರ ಮನೆಮನಗಳನ್ನು ಪ್ರವೇಶಿಸಿ, ಅಲ್ಲಿಂದ ನಿರ್ಮೂಲನೆಗೊಳ್ಳಲು ನಿರಾಕರಿಸುತ್ತಿದೆ. ಇಂದು ಜಗತ್ತಿನಲ್ಲಿ ಅತಿ ದೊಡ್ಡ ಮಾರಕ ಕಸವೆಂದು ಪ್ಲಾಸ್ಟಿಕ್ ಪರಿಗಣಿಸಲ್ಪಟ್ಟಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲಾ ರಿಸೈಕ್ಲಿಂಗ್ ಪ್ರಕ್ರಿಯೆಗಳ ಹೊರತಾಗಿಯೂ, ಸಮುದ್ರಗಳಲ್ಲಿ ಬೃಹತ್ ಅವಶೇಷವಾಗಿ ತೇಲುತ್ತಿದೆ. (ಗ್ರೇಟ್ ಫೆಸಿಫಿಕ್ ಸಮುದ್ರದಲ್ಲಿ ಸುಮಾರು 1.6 ದಶಲಕ್ಷ ಚದುರ ಕಿಲೋಮೀಟರ್‌ನಷ್ಟು ಅಂದರೆ ಯುಕೆ ದೇಶದ ವಿಸ್ತೀರ್ಣಕ್ಕೆ ಐದು ಪಟ್ಟು ಹೆಚ್ಚು ದೊಡ್ಡ ಕಸದ ಗುಡ್ಡ ಬೆಳೆದಿದೆ). ಇದು ಜಲಚರಗಳ ಜೀವಕ್ಕೆ ಮಾತ್ರ ಸಂಚಕಾರ ತರದೆ, ಜಲಚರಗಳ ಖಾದ್ಯಗಳ ಮೂಲಕ ಅನಗತ್ಯ ಹಾಗೂ ವಿಷಕಾರಿ ಕಣಗಳು ಆಹಾರ ಸರಪಳಿಯಲ್ಲಿಯೂ ಸೇರಿ ಊಟದ ತಟ್ಟೆಗೂ ಬರುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಸದ್ಯಕ್ಕೆ ಸಮುದ್ರ ಜಲಚರ ಮತ್ತು ಪ್ಲಾಸ್ಟಿಕ್ ಅನುಪಾತ 5:1 ಇದ್ದರೆ, ಜಗತ್ತಿನಾದ್ಯಂತ ಇರುವ ಪ್ಲಾಸ್ಟಿಕ್ ಬಳಕೆ ಇಂದಿನ ಮಟ್ಟದಲ್ಲೇ ಮುಂದುವರೆದರೆ, ಈ ಅನುಪಾತ 2050ರ ಹೊತ್ತಿಗೆ ಅದು 1:1 ಇರಲಿದೆ ಎನ್ನಲಾಗಿದೆ. ಇದು ತಂದೊಡ್ಡಬಲ್ಲ ಅಪಾಯಗಳ ಅಂದಾಜು ನಡೆಯುತ್ತಲೇ ಇದೆ. ಸಮುದ್ರಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ಅನ್ನು ಕ್ಲಿಯರ್ ಮಾಡಲು ತೊಡಗಿದರೆ, ದೇಶಗಳು ಬ್ಯಾಂಕರಪ್ಟ್ ಆಗಲಿವೆ ಅನ್ನುತ್ತವೆ ವರದಿಗಳು. ಆದುದರಿಂದ ಎಲ್ಲಾ ದೇಶಗಳು ಮೌನವಾಗಿ ಕುಳಿತಿವೆ. ಒಟ್ಟಿನಲ್ಲಿ ಬೆಂಗಳೂರು ನಗರ ಕಾರ್ಪೊರೇಶನ್ ಕೂಡ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅಂಗಡಿ ಮುಂಗಟ್ಟುಗಳಲ್ಲಿ ’ದಂಡ’ದ ಭಯವನ್ನು ಉತ್ಪಾದಿಸಲು ಪ್ರಯತ್ನಿಸುತ್ತಿದೆಯೇ ಹೊರತು, ತ್ಯಾಜ್ಯ ನಿರ್ವಹಣೆಯ ತನ್ನ ಕರ್ತವ್ಯದಲ್ಲಾಗಲೀ, ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಮಾರ್ಗದಲ್ಲಾಗಲೀ ಅಥವಾ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯ ಮೂಲವನ್ನು ನಿಯಂತ್ರಿಸಬೇಕಾಗಿರುವ ಕೆಲಸದಲ್ಲಾಗಲೀ ದಕ್ಷತೆಯನ್ನು ಮೆರೆಯುತ್ತಿಲ್ಲ. ಬಿಬಿಎಂಪಿ ಕಸದ ನಿರ್ವಹಣೆಯಲ್ಲಿನ ತನ್ನ ಸೋಲನ್ನು ಕಾಸ್ಮೆಟಿಕ್ ಬದಲಾವಣೆಗಳ ಮೂಲಕ ಮುಚ್ಚಿಕೊಳ್ಳಲೆತ್ನಿಸುತ್ತಿದೆ.

ಕಸ ಭೌತಿಕವಾಗಿ ನಗರಗಳನ್ನು ಎಷ್ಟು ಸಮಸ್ಯೆಯ ಸುಳಿಯಲ್ಲಿ ತಂದು ನಿಲ್ಲಿಸಿದೆಯೋ, ಹಾಗೆಯೇ ಸಾಮಾಜಿಕ ಸಾಮರಸ್ಯ ಸಾಧ್ಯವಾಗದಂತೆ ಅದರ ಬುಡ ಅಲ್ಲಾಡಿಸುತ್ತಿರುವ ರಾಜಕೀಯ ಕಸ ಕೂಡ ಅಷ್ಟೇ ಅಪಾಯಕಾರಿಯಾದದ್ದು. ’ಇಂಡಿಯಾ ಎಗೇನಸ್ಟ್ ಕರಪ್ಷನ್’ ಎಂಬ ಆಂದೋಲನ ಪ್ಲಾಸ್ಟಿಕ್‌ನಂತೆಯೇ ಮೊದಲಿಗೆ ಭ್ರಷ್ಟರನ್ನು ಸ್ವಚ್ಛಗೊಳಿಸುವ ಗೇಮ್‌ಚೇಂಜರ್‌ನಂತೆ ಕಾಣಿಸಿಕೊಂಡರೂ ಕೊನೆಗೆ ಅದರ ಮೂಲಮಂತ್ರವನ್ನು ಮರೆತು ಧಾರ್ಮಿಕ ಅಸಹನೆಯನ್ನು ಸೃಷ್ಟಿಸುವ, ಸರ್ವಾಧಿಕಾರವನ್ನು ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಜನರ ಮನಸುಗಳನ್ನು ಕೆಡಿಸುವ ಕಸವನ್ನು ಅದು ಧಾರಾಳವಾಗಿ ಚೆಲ್ಲಿತು. ಈ ಕಸಕ್ಕೆ ಲ್ಯಾಂಡ್‌ಫಿಲ್‌ಗಳಾಗಿ ಕಂಡದ್ದು ಹೆಚ್ಚಾಗಿ ಟಿವಿ ಮಾಧ್ಯಮಗಳು. ಈಗ ಟಿವಿ ಮಾಧ್ಯಮಗಳಲ್ಲಿ ಉತ್ಪಾದನೆಯಾಗುವ ದಿನನಿತ್ಯದ ಕಸ ಜನರ ಮನಸ್ಸನ್ನು ಕೆಡಿಸುತ್ತಿದೆ. ಥೇಟ್ ಪ್ಲಾಸ್ಟಿಕ್ ಜಗತ್ತಿಗೆ ಗಂಡಾಂತರ ಒಡ್ಡಿರುವಂತೆಯೇ!
ಮುಖ್ಯವಾಹಿನಿ ಎನಿಸಿಕೊಂಡಿರುವ ಮಾಧ್ಯಮಗಳಲ್ಲಿ (ಮುಖ್ಯವಾಗಿ ಟಿವಿಗಳಲ್ಲಿ) ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮಾಡುತ್ತಿರುವ ಕಾರ್ಯಕ್ರಮಗಳು ಎಕ್ಸ್ಪೋನೆನ್ಷಿಯಲ್ ಆಗಿ ಬೆಳೆದಿವೆ ಎನ್ನುತ್ತಾರೆ ಅವುಗಳ ಬಗ್ಗೆ ಅಧ್ಯಯನ ಮಾಡಿರುವವರು. ಅದರಿಂದ ನಷ್ಟಕ್ಕೆ ಒಳಗಾಗಿರುವುದು ಮತ್ತು ಸೊರಗಿ ಕೃಶವಾಗಿರುವುದು ಜನಪರವಾದ ಮತ್ತು ಜನರ ಸಮಸ್ಯೆಗಳನ್ನು ಬಿಂಬಿಸಬೇಕಿರುವ ಕಾರ್ಯಕ್ರಮಗಳು. ಕಸ ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಬೆಟ್ಟದಂತಹ ಸಮಸ್ಯೆಯಾಗಿದ್ದರೂ ಟಿವಿ ಮಾಧ್ಯಮಗಳು ಅದಕ್ಕೆ ಕೊಡುವ ಸಮಯ ನಗಣ್ಯ. ಆದರೆ ಇಲ್ಲೊಂದು ವಿಪರ್ಯಾಸವಿದೆ. ಮಾಧ್ಯಮಗಳು ಉತ್ಪಾದಿಸುವ ಕಸವನ್ನು ಜನ ರಸವತ್ತಾಗಿ ಸವಿದರೆ, ತಾವು ಉತ್ಪಾದಿಸುವ ಭೌತಿಕ ಕಸವನ್ನು ಅಡ್ಡಾದಿಡ್ಡಿಯಾಗಿ ಬಿಸಾಕಿ, ಅದನ್ನು ಗುಡಿಸಿ ಸ್ವಚ್ಛಗೊಳಿಸುವವರನ್ನು ನಿಕೃಷ್ಟವಾಗಿ ಕಾಣುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದೆಲ್ಲವೂ ನಾವು ಸಾಮಾಜಿಕವಾಗಿ ಕಟ್ಟಿಕೊಂಡಿರುವ ಅತಿ ಕೆಟ್ಟ ವಿನ್ಯಾಸ ವ್ಯವಸ್ಥೆಯ ಭಾಗವಾಗಿಹೋಗಿದೆ. ಇನ್ನೂ ಬಹುತೇಕ ಮನೆಗಳಲ್ಲಿ ಯಾವುದು ಹಸಿಕಸ ಯಾವುದು ಒಣಕಸ ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ ಮತ್ತು ತಿಳಿವಳಿಕೆಯ ಕೊರತೆಯಿದೆ. ಅದನ್ನು ವಿಂಗಡಿಸಿದರೂ ಬಿಬಿಎಂಪಿ ಕಾಂಟ್ರಾಕ್ಟರ್‌ಗಳಿಗೆ ಅದು ಬೇಕಾಗಿಲ್ಲ. ರಸ್ತೆಗಳಲ್ಲಿ ಹಾಕದಂತಹ ವ್ಯವಸ್ಥೆ ತಂದಿದ್ದೇವೆಂಬ ಮೇಲ್ಪದರದ ಬದಲಾವಣೆಯಷ್ಟೇ ನಮ್ಮ ಪ್ರಭುತ್ವಕ್ಕೆ ಬೇಕಾಗಿರುವುದು. ಪ್ರಧಾನಿಗಳು ವಿದೇಶಗಳಲ್ಲಿ ಭಾರತ ಬಹಿರಂಗ ವಿಸರ್ಜನೆ ಮುಕ್ತ ದೇಶವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಕೊಚ್ಚಿಕೊಳ್ಳುವಂತೆಯೇ ಇದು!
ಕಳೆದ ವಾರದಿಂದ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಕನಿಷ್ಠ ಸೌಲಭ್ಯಗಳನ್ನು ಕೇಳಿಕೊಂಡು ಪ್ರತಿಭಟನೆ ನಡೆಸಿದವು. ಹಲವು ಗಂಟೆಗಳ ಕಾಲ ಇದರ ಬಗ್ಗೆ ಎಲ್ಲಾ ಟಿವಿಗಳು ಕಾರ್ಯಕ್ರಮಗಳನ್ನು ಮಾಡಬೇಕಿತ್ತು! ಆದರೆ ಮಾರಿಕೊಂಡ ಮಾಧ್ಯಮಗಳು ಒಬ್ಬ ನಟಿಯ ಖಾಸಗಿ ಜೀವನದ ಹಿಂದೆ ಬಿದ್ದು ಅವರ ಚಾರಿತ್ರ್ಯಹರಣಕ್ಕೆ ನಿಂತವು! ಹಗಲುರಾತ್ರಿ ಅದನ್ನೇ ತೋರಿಸಿ ಅಟ್ಟಹಾಸ ಮೆರೆದವು. ಭೌತಿಕ ಹಸಿ ಕಸವನ್ನು ನಿಭಾಯಿಸಿದರೆ ಗೊಬ್ಬರವಾದೀತು. ಅದರ ಬಗ್ಗೆ ಇಂದಲ್ಲ ನಾಳೆ ತಿಳಿವಳಿಕೆ ಮೂಡಿಸುವ ಸಾಧ್ಯತೆಯಂತೂ ತೆರೆದಿದೆ. ಆದರೆ ಈ ಮಾಧ್ಯಮಗಳ ತ್ಯಾಜ್ಯವನ್ನು ನಿರ್ವಹಿಸಲು ಸಾಧ್ಯವಿಲ್ಲ. ಇದು ಪ್ಲಾಸ್ಟಿಕ್‌ಗಿಂತಲೂ ಅಪಾಯ. ಬಯೋಮೆಡಿಕಲ್ ವೇಸ್ಟ್‌ನಂತೆ ಆರೋಗ್ಯವನ್ನು ಮನಸ್ಸುಗಳನ್ನು ಕೆಡಿಸಿ ಕರಪ್ಟ್ ಮಾಡಬಲ್ಲದು. ಇದನ್ನು ನಿರ್ಮೂಲನೆ ಮಾಡದೆ ಜಗಕೆ ಉಳಿವಿಲ್ಲ. ಕುವೆಂಪು ಅವರ ಜಲಗಾರ ನಾಟಕದಲ್ಲಿ ಶಿವನೇ ಜಲಗಾರನ ವೇಷದಲ್ಲಿ ಮೂಡಿಬಂದು ಸಾಂತ್ವನ ಹೇಳುವ ದೃಶ್ಯ ಬರುತ್ತದೆ. ಆದರೆ ಮಾಧ್ಯಮದ ಈ ಕಸ, ’ಮುಸ್ಲಿಂ ಪಾತ್ರವಿದೆ’ ಎಂದು ನಾಟಕ ನಿಲ್ಲಿಸುವ ಮನಸ್ಥಿತಿಯ ಕಸ ಗುಡಿಸಲು ಜನರೇ ಎಚ್ಚರಗೊಳ್ಳಬೇಕು, ತಾವೇ ಸಂಘಟಿತ ಹೋರಾಟ ನಡೆಸಬೇಕಿರುವ ಪರಿಸ್ಥಿತಿ ಇಂದು ಎದುರಾಗಿದೆ.
ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರದಿಂದ ಲಿಖಿತ ವಾಗ್ದಾನ ಪಡೆದಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸೋಣ. ಪೌರಕಾರ್ಮಿಕರನ್ನು ವ್ಯವಸ್ಥೆ ಗೌರವದಿಂದ ನಡೆಸಿಕೊಂಡು ಅವರ ಹಕ್ಕುಗಳನ್ನು ಕಾಪಾಡುವುದು ಅದರ ಕರ್ತವ್ಯವಾದರೇ, ಅವರನ್ನು ಶೋಷಿಸದ ವಾತಾವರಣ ಸೃಷ್ಟಿಸುವಲ್ಲಿ ನಾಗರಿಕರದ್ದೂ ಪಾಲಿದೆ. ಪೌರಕಾರ್ಮಿಕರ ಜೊತೆಗೆ ಸಂಯಮ ಮತ್ತು ಸಹಾನುಭೂತಿಯಿಂದ ವರ್ತಿಸುವುದರಿಂದ ಹಿಡಿದು, ಅವರ ಕೆಲಸ ಅವರಿಗೆ ಹಾನಿಕಾರಕವಾಗಿ ಮಾರ್ಪಾಡಾಗದಂತೆ ಕಸವನ್ನು ನಿರ್ವಹಣೆ ಮಾಡುವುದನ್ನು ನಾಗರಿಕರು ಅದರಲ್ಲೂ ಮಹಾನಗರದ ನಿವಾಸಿಗಳು ಕಲಿತುಕೊಳ್ಳಬೇಕಿದೆ. ಅದು ತುಸು ಕಷ್ಟದಾಯಕವಾದರೂ, ಅನಾನುಕೂಲತೆಯಿಂದ ಕೂಡಿದ್ದರೂ ಶೋಷಣೆಯನ್ನು ಹೆಚ್ಚಿಸುವ ವ್ಯವಸ್ಥೆಯ ಭಾಗವಾಗದಂತೆ ನಮ್ಮನ್ನು ನಾವು ತಿದ್ದಿಕೊಳ್ಳದಿದ್ದರೆ, ಬದಲಾಯಿಸಿಕೊಳ್ಳದಿದ್ದರೆ ಅದು ಅನಾಗರಿಕತೆಯ ಲಕ್ಷಣವಲ್ಲದೆ ಮತ್ತೇನಲ್ಲ.
ಇದನ್ನೂ ಓದಿ: ಸರ್ಕಾರ-ನಾಗರಿಕರ ಉದಾಸೀನತೆ ಮತ್ತು ಜಾತೀಯತೆಯ ಹಿಂಸೆ; ಸುಧಾರಿಸದ ಪೌರಕಾರ್ಮಿಕರ ಜೀವನಮಟ್ಟ ಮತ್ತು ಕೆಲಸದ ಪರಿಸ್ಥಿತಿ


