Homeಅಂಕಣಗಳುಪುಸ್ತಕ ವಿಮರ್ಶೆ; ಸೋಲಿಗ ಬುಡಕಟ್ಟು ಸಮುದಾಯದ ಆಪ್ತ ಚಿತ್ರಣ; ಪರಿಸರ-ಜೀವಶಾಸ್ತ್ರ ವೈವಿಧ್ಯತೆಯ ಭಂಡಾರ

ಪುಸ್ತಕ ವಿಮರ್ಶೆ; ಸೋಲಿಗ ಬುಡಕಟ್ಟು ಸಮುದಾಯದ ಆಪ್ತ ಚಿತ್ರಣ; ಪರಿಸರ-ಜೀವಶಾಸ್ತ್ರ ವೈವಿಧ್ಯತೆಯ ಭಂಡಾರ

- Advertisement -
- Advertisement -

ಯಾವುದೇ ಸಮುದಾಯದ ಅಥವಾ ಬುಡಕಟ್ಟಿನ ಅಧ್ಯಯನದ ಹಲವು ಮಾದರಿಗಳಿವೆ. ಮಾನವಶಾಸ್ತ್ರೀಯ-ಐತಿಹಾಸಿಕ-ಸಮಾಜಶಾಸ್ತ್ರೀಯ-ಕುಲಶಾಸ್ತ್ರೀಯ ಅಧ್ಯಯನಗಳು ಒಂದು ಕಡೆಯಾದರೆ ಸಮುದಾಯಗಳ ಆಚರಣೆ ಮತ್ತು ಸಾಂಸ್ಕೃತಿಕ ಅಂಶಗಳನ್ನು ಜನಪದೀಯ ಮಾದರಿಯಲ್ಲಿ ದಾಖಲೆ ಮಾಡಿರುವವು ಇನ್ನೊಂದು ಬಗೆ. ಈ ಎಲ್ಲಾ ಅಧ್ಯಯನಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಕರ್ನಾಟಕದ ಚಾಮರಾಜನಗರ-ಮಲೆಮಾದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟದ ಅರಣ್ಯ ಸಾಲಿನಲ್ಲಿ ವಾಸಿಸುವ ಬುಡಕಟ್ಟಾದ ಸೋಲಿಗರ ಚಿತ್ರಣಕ್ಕೆ ಅಕಾಡೆಮಿಕ್ ಮಾದರಿಯದ್ದಲ್ಲದ ಜಾಡನ್ನು ಲೇಖಕ, ಉಪನ್ಯಾಸಕ, ದೀನಬಂಧು ಸಂಸ್ಥೆಯ ಜಿ ಎಸ್ ಜಯದೇವ ಅವರು ತುಳಿದಿದ್ದಾರೆ.

ಜಯದೇವ ಅವರು ರಚಿಸಿರುವ ’ಸೋಲಿಗ ಚಿತ್ರಗಳು: ಆದಿವಾಸಿಗಳ ಬದುಕಿನೊಂದಿಗಿನ ಸ್ಮೃತಿ ಚಿತ್ರಗಳು’, ಒಂದು ಕಡೆ ಸೋಲಿಗ ಬುಡಕಟ್ಟು ಸಮುದಾಯದ ವ್ಯಕ್ತಿಗಳ ಜೊತೆಗಿನ ಲೇಖಕರ ಒಡನಾಟದ ನೆನಪಿನ ಗಣಿಯಿಂದ ತೆಗೆದು ಕಟ್ಟಿದ ಆಪ್ತ ಚಿತ್ರಣವೆನಿಸಿದರೆ, ಮತ್ತೊಂದು ಕಡೆ ಒಂದು ಸಮುದಾಯದ ಜೀವನ ದೃಷ್ಟಿಯ ದಾಖಲೆಯೂ ಆಗಿ, ಮತ್ತವುಗಳು ಪರಿಸರದ ಕಥೆಗಳಾಗಿ, ಜೀವ ವೈವಿಧ್ಯದ ಸಂಭ್ರಮವಾಗಿ, ಕಾಡಿನ ಹಲವು ನಿಗೂಢಗಳ ಕಥಾನಕವಾಗಿ ಹಿಗ್ಗಿ, ಹಲವು ಭಾಗಗಳಲ್ಲಿ ಓದುಗರಿಗೆ ಕಚಗುಳಿ ಇಡುತ್ತಾ, ಮನುಷ್ಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಆಳವಾದ ಆಲೋಚನೆಗೆ ಹಚ್ಚುವ, ಕಾಡು ಹಾಗೂ ವನ್ಯಜೀವಿ ಸಂಕುಲದ ಸಂರಕ್ಷಣೆಯ ಬಗ್ಗೆ ಇರುವ ಹಲವು ಸಿದ್ಧಾಂತಗಳು ಮತ್ತು ವಿಧಾನಗಳನ್ನು ಪ್ರಶ್ನಿಸಿ ಅವುಗಳನ್ನು ಒರೆಗೆ ಹಚ್ಚುವ ದಾಖಲೆಯೂ ಆಗಿದೆ. ಇವೆಲ್ಲವೂ ಹದವಾಗಿ ಬೆರೆತ ಪಾಕ, ಸೋಲಿಗ ಸಮುದಾಯದವರು ಕಾಡಿನಲ್ಲಿ ನೈಸರ್ಗಿಕವಾಗಿ ಸಿಗುವ ಸೊಪ್ಪು ಮತ್ತಿತರ ಅಡುಗೆ ಪದಾರ್ಥಗಳನ್ನೇ ಬಳಸಿ ಮಾಡುವ ಆರೋಗ್ಯಕರ-ರುಚಿಕರ ಖಾದ್ಯದಂತೆ ಆಹ್ಲಾದವೆನಿಸುತ್ತದೆ.

ಕುನ್ನೇಗೌಡರ ಬಗ್ಗೆ ಬರೆದಿರುವ ಅಧ್ಯಾಯದಲ್ಲಿ, ಸೋಲಿಗರು ಮನೆ ಕಟ್ಟುವುದಕ್ಕೆ ಕೋಲು ಮತ್ತು ಹುಲ್ಲೇನೋ ಯಥೆಚ್ಛವಾಗಿ ಸಿಕ್ಕರೂ ಅದನ್ನು ಕಟ್ಟುವುದಕ್ಕೆ ಹಗ್ಗಕ್ಕೆ ಏನು ಮಾಡುತ್ತೀರಿ ಎಂಬ ಲೇಖಕರ ಪ್ರಶ್ನೆಗೆ, ತೆಂಗಿನ ಹುರಿ ಇತ್ತೀಚಿನದ್ದು ಎನ್ನುವ ಕುನ್ನೇಗೌಡರು ಸೊವ್ವೆ ಮರದ ತೊಗಟೆ ಸಿಗಿದು ಗಟ್ಟಿಯಾದ ದಾರ ಮಾಡಿಕೊಳ್ಳುವ, ಅಥವಾ ’ಉರಿಯನ ಅಂಬು’, ’ಕೋಣನ ಅಂಬು’, ’ಕರೂರಿನಾರು’ ಹೀಗೆ ತಮ್ಮ ಪ್ರದೇಶದಲ್ಲಿ ಸಿಗುವ ಹಲವು ಬಗೆಯ ಬಳ್ಳಿಗಳನ್ನು ಹೆಸರಿಸುತ್ತಾ ಹೋಗುತ್ತಾರೆ. ಜೀವವೈವಿಧ್ಯದ ಬಗ್ಗೆ ಅಚ್ಚರಿ ಕುತೂಹಲಗಳನ್ನು ಮೂಡಿಸುವ ಇಂತಹ ಸಂವಾದಗಳು ಪುಸ್ತಕದಲ್ಲಿ ಹೇರಳವಾಗಿವೆ. ಅದೇ ಸಮಯದಲ್ಲಿ ಲಂಟಾನ ವಿಪರೀತವಾಗಿ ಬೆಳೆದಿರುವ ಕಾರಣದಿಂದ ಈ ಬಳ್ಳಿಗಳಿಗೆ ಕುತ್ತು ಬರುತ್ತಿರುವ ವಿಷಯವನ್ನೂ ಕುನ್ನೇಗೌಡರು ಹೇಳುತ್ತಾರೆ. ಲಂಟಾನ ಗಿಡಗಳಿಂದ ಕಾಡಿನ ಜೀವ ವೈವಿಧ್ಯಕ್ಕೆ ಕುತ್ತಾಗುತ್ತಿರುವ ಬಗ್ಗೆ ಲೇಖಕರು ಮಾತನಾಡಿಸಿರುವ ಹಲವು ಸೋಲಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಅದರೆ ಜೊತೆಗೆ ಕಾಡು ಉಳಿಸುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಡುತ್ತಿರುವ ಕೆಲಸ, ಅರಣ್ಯ ಇಲಾಖೆ ರೂಪಿಸಿರುವ ಹಲವು ನೀತಿಗಳು ಹೇಗೆ ಸೋಲಿಗರ ಬದುಕಿಗೆ ಮಾರಕವಾಗಿವೆ ಎಂಬುದು ಕೂಡ ಪುಸ್ತಕದಲ್ಲಿ ಹಲವು ಬಾರಿ ಚರ್ಚೆಯಾಗಿ ಮೂಡಿದೆ.

ಸೋಲಿಗರು ಆಹಾರವಾಗಿ ಬಳಸುವ – ಕಾಡಿನಲ್ಲಿ ಸಿಗುವ ಹಲವು ರೀತಿಯ ಸೊಪ್ಪುಗಳು, ಬೇರೆ ಬೇರೆ ಸಮಯದಲ್ಲಿ ಅರಳುವ ವಿಭಿನ್ನ ಹೂವಿನಿಂದ ಮಕರಂದ ಹೀರಿ ಕಟ್ಟುವ ಜೇನುತುಪ್ಪದ ವಿಭಿನ್ನ ರುಚಿ ಮತ್ತು ವಾಸನೆಯ ಬಗ್ಗೆ ಸೋಲಿಗರಿಗೆ ಇರುವ ಅರಿವು, ಹೀಗೆ ಆ ತಿಳಿವಳಿಕೆಗಳ ಆಕರ-ದಾಖಲೆ ಪುಸ್ತಕವೂ ಇದು.
ಸೋಲಿಗರು ಕಟ್ಟುವ ಗುಡಿಸಲಿಗೆ ಹೊದಿಸುವ ಬಾಣೆ ಹುಲ್ಲು ವಸಾಹತುಶಾಹಿ ಪಂಡಿತರ ಬಾಯಲ್ಲಿ ಹೇಗೆ ಬನಾನಾ ಲೀಫ್ ಆಗಿರಬಹುದು ಎಂಬುದನ್ನು ಜಯದೇವ ವಿವರಿಸುತ್ತಾರೆ. ಆದರೆ ಕಾಡಿನಿಂದ ಬಾಣೆ ಹುಲ್ಲು ಕಾಣೆಯಾಗುತ್ತಿರುವುದು ಸೋಲಿಗರಿಗೆ ಚಿಂತೆಯ ವಿಷಯವಾಗಿದೆ ಎಂಬುದನ್ನೂ ತಿಳಿಸುತ್ತಾರೆ. ಅಚ್ಚುಗೆಗೌಡರು ವಿವರಿಸುವಂತೆ ಬಾಣೆಹುಲ್ಲು ಆನೆಗಳಿಗೆ ಪ್ರಿಯವಾದ ಆಹಾರ. ಆ ಹುಲ್ಲು ಈಗ ಕಡಿಮೆಯಾಗಿರುವುದರಿಂದ, ಆನೆಗಳು ಹೆಚ್ಚೆಚ್ಚು ಮರದ ತೊಗಟೆಗಳನ್ನು ತಿನ್ನಲು ಪ್ರಾರಂಭಿಸಿವೆ ಎನ್ನುವ ಅವರ ಪಾರಂಪರಿಕ ತಿಳಿವಳಿಕೆ ಹೆಚ್ಚು ಅಧ್ಯಯನಕ್ಕೆ ಒಳಪಟ್ಟರೆ ಬಹುಶಃ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಆನೆ (ವನ್ಯಜೀವಿ) ಮತ್ತು ಮನುಷ್ಯನ ಸಂಘರ್ಷಕ್ಕೆ ನಿಜವಾದ ಕಾರಣವನ್ನು ಪತ್ತೆಹಚ್ಚಲು ಇನ್ನಷ್ಟು ಸಹಕರಿಸಬಲ್ಲುದು.

ಪಾರಂಪರಿಕವಾಗಿ ಉರುಳು ಹಾಕಿ ಕಾಡುಹಂದಿಯಂತಹ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದ್ದ ಸೋಲಿಗರಿಗೆ ಈಗ ಅರಣ್ಯ ಕಾನೂನುಗಳು ಅಡ್ಡಿಯಾಗಿವೆ. ಇದರಿಂದ ಕಾಡುಹಂದಿ ಸಂತತಿ ವಿಪರೀತ ಹೆಚ್ಚಾಗಿರುವುದು ಕೂಡ ಸಮಸ್ಯೆಯಾಗಿದೆ. ಕಾಡುಹಂದಿಗಳ ಹಾವಳಿಯಿಂದ ಸೋಲಿಗರ ಸ್ಥಿರ ಆಹಾರವಾದ ರಾಗಿಯನ್ನು ಬೆಳೆದುಕೊಳ್ಳಲು ಕೂಡ ಇಂದು ಅಡ್ಡಿಯಾಗಿದೆ. ಕಾಡಿನಿಂದ ಹೊರದಬ್ಬುವ ಪ್ರಕ್ರಿಯೆಗಳು, ದಾಖಲೆಗಳು ಸಮರ್ಪಕವಾಗಿಲ್ಲ ಎಂಬ ಸೋಲಿಗರಿಗೆ ಕಿರುಕುಳ ನೀಡುವ ಸಂಗತಿಗಳಿಂದ ಹಿಡಿದು ಅವರಿಗೆ ತಮ್ಮ ಜಮೀನುಗಳನ್ನು ನಿರಾಕರಿಸುವುದು ಇಂತವೆಲ್ಲಾ ಸಮಸ್ಯೆಗಳ ಜೊತೆಗೆ, ತಾವು ಅವಿಚ್ಛಿನ್ನವಾಗಿ ಬೆರೆತುಹೋಗಿದ್ದ ಕಾಡು ತಮ್ಮಿಂದಲ್ಲದ ಕಾರಣಕ್ಕೆ ತಮ್ಮ ಕಣ್ಣಮುಂದೆಯೇ ನಾಶವಾಗುತ್ತಿರುವುದನ್ನು ಕಾಣಬೇಕಾದ ಒಡಲಿನ ಸಂಕಟವನ್ನು ಸೋಲಿಗರ ಮಾತುಗಳ ಮೂಲಕವೇ ಲೇಖಕರು ದಾಖಲಿಸುತ್ತಾರೆ. ಇವುಗಳನ್ನು ವಿವರಿಸುವಾಗಲೇ ಕಾಡುನಾಯಿಗಳನ್ನು ಓಡಿಸಿ ಅದರ ಬೇಟೆಯನ್ನು ಕಸಿದು ತರುವ ಸೋಲಿಗರ ಉಪಾಯವನ್ನು ಕುನ್ನೇಗೌಡರು ವಿವರಿಸುವುದು ಅಚ್ಚರಿಯ ವಿಷಯವೆನ್ನಿಸುತ್ತದೆ. ಕಾಡುನಾಯಿಗಳು ನಿಮಗೆ ಏನೂ ಮಾಡಲ್ವಾ ಎನ್ನುವ ಲೇಖಕರ ಪ್ರಶ್ನೆಗೆ “ಇಲ್ಲ ಸ್ವಾಮಿ ಮನುಷ್ಯರ್ ಕಂಡ್ರೆ ಅವಕ್ಕೆ ಭಯ, ಚಿರತೆಗಳನ್ನು ಬೇಕಾದರೆ ಹೆದುರುಸ್ತಾವೆ, ಆದ್ರೆ ಮನಶಾರ್ ಕಂಡ್ರೆ ಅಂಜುಕೆ” ಎನ್ನುತ್ತಾರೆ ಕುನ್ನೇಗೌಡರು.

ಕಾರನ ಕೇತೇಗೌಡರಿಗೆ ಆನೆಯ ಮತ್ತು ಅದು ಬದುಕುವ ರೀತಿಯ ಬಗೆಗೆ ಇರುವ ತಿಳಿವಳಿಕೆ, ತನ್ನ ಕುಲದಿಂದ ಹೊರಗೆ ಮದುವೆಯಾಗಿ ಕಟ್ಟುಪಾಡುಗಳನ್ನು ಮುರಿದಿರುವ ಪುಟ್ಟರಂಗನ ಸಸ್ಯಜ್ಞಾನ (ಕಾಡಿನ ಪಾರಂಪರಿಕ ಸಸ್ಯ-ಮರಗಳ ಜೊತೆಗೆ ಅವುಗಳ ವೈಜ್ಞಾನಿಕ ಹೆಸರುಗಳ ಬಗ್ಗೆ ಅಪಾರ ತಿಳಿವಳಿಕೆ), ಎಣ್ಣೆ ಮರ ಸಂತತಿ ಕಾಣೆಯಾಗುತ್ತಿರುವ ಬಗ್ಗೆ ಅವನ ಆತಂಕ, ಅರಣ್ಯ ಇಲಾಖೆಯ ಅವೈಜ್ಞಾನಿಕ ಕೆಲಸಗಳ ಬಗ್ಗೆ ಅಸಮಾಧಾನ ಹೀಗೆ ಇಲ್ಲಿ ಉದಾಹರಿಸಿದ್ದಕ್ಕೆ ನೂರಾರು ಪಟ್ಟು ಹೆಚ್ಚಿರುವ ಅಚ್ಚರಿ ಮತ್ತು ಆಸಕ್ತಿದಾಯಕ ಸಂಗತಿಗಳನ್ನು ಓದಿಯೇ ಅನುಭವಿಸಬೇಕು.

ಸೋಲಿಗ ಸಮುದಾಯದಲ್ಲಿ ಉನ್ನತ ವ್ಯಾಸಂಗ ಮಾಡಿ ತಮ್ಮ ಸಮುದಾಯದ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿರುವ ಡಾ. ಮಾದೇಗೌಡರು, ಡಾ. ರತ್ನಮ್ಮ ಮತ್ತು ಡಾ. ಜಡೇಗೌಡರ ಬಗೆಗಿನ ಲೇಖಕರ ಒಡನಾಟದ ಅಧ್ಯಾಯಗಳು ಕೂಡ ಮಹತ್ವಾದ ಕಥೆಯೊಂದನ್ನು ಕಟ್ಟಿಕೊಡುತ್ತವೆ. ತಮ್ಮ ವ್ಯಯಕ್ತಿಕ ಏಳ್ಗೆಯ ನಂತರ ತಮ್ಮ ಸಮುದಾಯಕ್ಕೆ ಬೆನ್ನು ತಿರುಗಿಸದೆ, ಅವುಗಳ ಅಭ್ಯುದಯಕ್ಕೆ ಕೆಲಸ ಮಾಡುವ ಬದ್ಧತೆಯ ಮಹತ್ವವನ್ನು ಇವು ಮನಗಾಣಿಸುತ್ತದೆ.

ಪುಸ್ತಕ ಜೀವಶಾಸ್ತ್ರದ ಹಲವು ವಿಶಿಷ್ಟ ಮತ್ತು ವಿಚಿತ್ರ ಸಂಗತಿಗಳ ದಾಖಲೆಯೂ ಕೂಡ. ಇಲ್ಲಿ ಒಂದೆರಡು ಸಂಗತಿಯನ್ನು ಉದಾಹರಿಸಬಹುದಾದರೆ, ’ಚಿಕ್ಕಣ್ಣನ ಡ್ರೈವಿಂಗ್ ಮಹಾತ್ಮೆ ಅಧ್ಯಾಯದಲ್ಲಿ, ಚಿಕ್ಕಣ್ಣ ಆಂಬ್ಯುಲೆನ್ಸ ಓಡಿಸುವಾಗ ಬಂಡೆಗೆ ಗುದ್ದಿ ಮಾಡುವ ಆಕ್ಸಿಡೆಂಟ್‌ನಿಂದ ಬಂಡೆಯ ಕೆಳಗೆ ವಾಸವಿದ್ದ ಚೇಳುಗಳು ಹೊರಬರುತ್ತವೆ. ಚೇಳುಗಳು ಹೇಗೆ ಮೊಟ್ಟೆಯನ್ನು ಹೊರಗೆ ಇಡದೆ ತಮ್ಮ ಶರೀರದಲ್ಲಿಯೇ ಇರಿಸಿಕೊಂಡು ಮರಿ ಮಾಡಿ, ಮರಿಗಳನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಕಾಪಾಡುತ್ತವೆ ಎಂಬಂತಹ ಸಂಗತಿಗಳು ಓದುಗನಿಗೆ ಜೀವಶಾಸ್ತ್ರದ ಬಗ್ಗೆ ಆಸಕ್ತಿ ಹುಟ್ಟಿಸಬಲ್ಲವು. ಅವು ವಿಷಕಾರಿ ಸುಟ್ಟುಬಿಡಬೇಕು ಎಂದು ಹೇಳುವ ಸೋಲಿಗ ಸಮುದಾಯದ ಚಿಕ್ಕಣ್ಣನಿಗೆ ಲೇಖಕರು ಅವುಗಳ ಪಾಡಿಗೆ ಅವನ್ನು ಬಿಟ್ಟುಬಿಡುವಂತೆ ತಿಳಿಹೇಳುತ್ತಾರೆ. 19-20-21ನೇ ಶತಮಾನದ ಬಿಕ್ಕಟ್ಟಿಗೆ ಇದು ರೂಕವಾಗಿಯೂ ನಿಲ್ಲುತ್ತದೆ. ಪಾರಂಪರಿಕ ಜ್ಞಾನ ಕಣ್ಮರೆಯಾಗುತ್ತಿರುವ ಸಮಯದಲ್ಲಿ, ಅದು ಮತ್ತೆ ಯಾವುದೋ ವೈಜ್ಞಾನಿಕ-ಎಕಲಾಜಿಕಲ್ ಅಧ್ಯಯನಕಾರನ ಜೊತೆಗೆ ಅನುಸಂಧಾನ ನಡೆಸಿ ಹೊಸ ಮಾರ್ಗವನ್ನು ಕಂಡುಕೊಳ್ಳುವ ಬಗೆ ಅದು. ಹಾಗೆಯೇ ಕಾಡೆಮ್ಮೆ ದಾಳಿಯಿಂದ ಕೈಕಾಲು ಮುರಿದ ಸ್ಥಿತಿಯಲ್ಲಿ ಸುಮಾರು ಐದು ದಿನ ಕಾಡು ಕುರಿಗಳು ವಾಸಿಸುವ ಮರದ ಪೊಟರೆಯಲ್ಲಿ ಕಳೆದು, ಬದುಕುಳಿಯುವ ಭೂಲೋಕ ಶೆಟ್ಟಿಯ ಕಥೆ ರೋಚಕವಾಗಿದೆ.

ಆದರೆ, ಹಲವು ಅಧ್ಯಾಯಗಳಲ್ಲಿ ಲೇಖಕರು ಯಾವ ಜೀವನದೃಷ್ಟಿಯನ್ನು ಕಾಡಿನ ಹೊರಗಿನ ’ನಾಗರಿಕ’ ಜನಕ್ಕೆ ಹೋಲಿಸಿದಾಗ ಉತ್ಕೃಷ್ಟವಾದದ್ದು ಎಂದು ಕಟ್ಟಿಕೊಡುತ್ತಾರೋ, ಅದು, ಕೊನೆಯಲ್ಲಿರುವ ಸ್ವಾಮಿ ನಿರ್ಮಲಾನಂದ ಅವರ ಬಗೆಗಿನ ಅಧ್ಯಾಯದಲ್ಲಿ ಕೆಡವಿದ್ದಾರೆ ಎಂಬಂತೆ ಓದುಗನಿಗೆ ಭಾಸವಾಗುತ್ತದೆ. ಸ್ವಾಮಿಗಳು ಸರಳ ಜೀವನ ನಡೆಸುವವರು ಹೌದಾದರೂ, ಕಾಡಿನ ಮಧ್ಯ ತಮ್ಮ ಸ್ವ-ಅಭ್ಯುದಯಕ್ಕಾಗಿ ಆಶ್ರಮ ಕಟ್ಟಿಕೊಂಡು ಬಹುತೇಕ ಸಾಮಾನ್ಯ ಮನುಷ್ಯರ ರಾಗದ್ವೇಷಗಳ ಜೊತೆಗೇ ಬದುಕುವುದು ಸೋಲಿಗರ ಜೀವನ ದೃಷ್ಟಿಗೆ ಎಷ್ಟು ತದ್ವಿರುದ್ಧ ಅಲ್ಲವೇ? ಆದರೆ ಲೇಖಕರಿಗೆ ಇವರನ್ನು ಕಂಡರೆ ಒಂದು ರೀತಿಯ ಪೂಜ್ಯ ಭಾವನೆ.

ಸ್ವಾಮಿಗಳ ಬಗೆಗೆ ವರ್ಣಿಸುವ ಸಂಗತಿಗಳು ಕೂಡ ಯಾವುವೂ ಸಾಮುದಾಯಿಕ ದೃಷ್ಟಿಕೋನ ಹೊಂದಿರುವಂಥವಲ್ಲ. ತಾವು ಉರಿಸುವ ಸೀಮೆಎಣ್ಣೆ ಕಲುಷಿತ ಎಂದು ಮಂತ್ರಿಯೊಬ್ಬನಿಗೆ ಕಾಗದ ಬರೆದು ಹೊಸ ಸೀಮೆಎಣ್ಣೆಯ ಸ್ಟಾಕ್ ತರಿಸಿಕೊಳ್ಳುವುದು – ರೈಲಿನಲ್ಲಿ ಯಾರೋ ಶಿಷ್ಯ ಕಳುಹಿಸಿದ್ದ ಒಣ ದ್ರಾಕ್ಷಿಯನ್ನು ನಡುವೆ ಯಾರೋ ತಿಂದು ಹಾಕಿರುವುದನ್ನು ತನಿಖೆ ನಡೆಸುವಂತೆ ರೈಲ್ವೇ ಇಲಾಖೆ ಮೇಲೆ ಒತ್ತಡ ಹಾಕುವುದು – ಜಿಂಕೆ ಮರಿಯನ್ನು ಆಶ್ರಮದಲ್ಲಿ ಸಾಕಿಕೊಂಡು ಅದರ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವುದು – ಇಂತಹ ಸಂಗತಿಗಳು ಕಾಡಿನಿಂದ ಅಥವಾ ಪರಿಸರದಿಂದ ದೂರ ಉಳಿದು ನಾಗರಿಕತೆ ಕಟ್ಟಿಕೊಂಡ ಮನುಷ್ಯನ ಜೀವನದೃಷ್ಟಿಯಷ್ಟೇ ಅಪಾಯಕಾರಿಯಾದವು ಮತ್ತು ಸೋಲಿಗರ ಕಾಡಿನ ಒಡನಾಟದ ದೃಷ್ಟಿಕೋನಕ್ಕೆ ವಿರುದ್ಧವಾದವು. ಆದರೆ ಲೇಖಕರು ಇಂತಹ ಸಂಗತಿಗಳ ಬಗ್ಗೆ ಬರೆಯುವಾಗ ಕಾಡಿನ ಹೊರಗಿನ ಸಾಮಾನ್ಯ ಜನರನ್ನು ಟೀಕಿಸುವ ರೀತಿಯಲ್ಲಿ ಅವನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ.

ಓದುಗರಿಗೆ ಗೊಂದಲದಂತೆ ಭಾಸವಾಗುವ ಕೆಲವು ಕಮೆಂಟ್‌ಗಳು ಅಲ್ಲಲ್ಲಿ ಪುಸ್ತಕದಲ್ಲಿ ವಿರಳವಾಗಿಯಾದರೂ ಕಾಣುತ್ತವೆ. ಮಂಜಿಗುಂಡಿ ಕೇತಮ್ಮ ಅಧ್ಯಾಯದಲ್ಲಿ, ಬಿಳಿಗಿರಿರಂಗಪ್ಪ ದೇವರಿಗೆ ಬಿಟ್ಟಿರುವ ಬಸವ ಕಾಣೆಯಾದಾಗ ಕೇತಮ್ಮ “ಇನ್ನೇನು ಸಾರ್, ಕೊಯ್ಯಾಕ್ಕೆ ಕೊಟ್ಟಿರ್‍ತಾರೆ ಪಾಪಿಗಳು” ಎಂದು ನೊಂದು ಹೇಳಿದಳು ಎನ್ನುವ ಲೇಖಕರು ’ಕೇತಮ್ಮನ ಗೋವು ಪ್ರೀತಿಗೆ ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಇದೊಂದು ಸರಳವಾದ ಜೀವನ ಮೇಲಿನ ಪ್ರೀತಿ, ಸರಳವಾದ ನಂಬಿಕೆ’ ಎನ್ನುತ್ತಾರೆ. ಆದರೆ ಪಶುಸಂಗೋಪನೆ ಯಾವತ್ತೂ ಸೋಲಿಗರ ಜೀವನದ ಭಾಗವೇ ಆಗಿರಲಿಲ್ಲ ಎಂಬುದನ್ನೂ ಲೇಖಕರು ಬೇರೊಂದು ಅಧ್ಯಾಯದಲ್ಲಿ ಖಚಿತವಾಗಿ ದಾಖಲಿಸುತ್ತಾರೆ. ಇಂತಹ ಸಮಯದಲ್ಲಿ ಸೋಲಿಗರಿಗೆ ದನದ ಬಗ್ಗೆ ಪೂಜ್ಯಭಾವನೆ ಬಂದಿರುವುದು ಮುಗ್ಧತನ ಅಲ್ಲ ಅಲ್ಲವೇ? ಅದು ಮತ್ತ್ಯಾರದೋ ಬಹುಸಂಖ್ಯಾತರ ಧಾರ್ಮಿಕ ಭಾವನೆಯ ಯಜಮಾನಿಕೆಯ ರೂಪ ಅಲ್ಲವೇ? ಇದು ಲೇಖಕರಿಗೂ ಗೊಂದಲದ ವಿಷಯ ಇರಬಹುದು.

ಲೇಖಕರು ಯಾವುದೇ ಬಹುಸಂಖ್ಯಾತ ಧಾರ್ಮಿಕ ಭಾವನೆಗೆ ಜೋತು ಬೀಳುವವರಲ್ಲ ಅಥವಾ ಮತ್ತೊಬ್ಬರ ಮೇಲೆ ಹೇರುವವರಲ್ಲ ಎಂಬುದು ಹಲವು ಕಡೆ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬೆಟ್ಟಕ್ಕೊಬ್ಬ ಡಾಗುಟ್ರು ಅಧ್ಯಾಯದಲ್ಲಿ ತಿಗಿನಾರ ಗ್ರಾಮದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಕುಷ್ಠರೋಗ ಪೀಡಿತ ವ್ಯಕ್ತಿಗಳಿರುವ ಬಗ್ಗೆ ತಿಳಿಸಿ, ಕ್ರಿಶ್ಚಿಯನ್ ಮಿಶಿನರಿ ಆ ರೋಗಿಗಳನ್ನು ಶುಶ್ರೂಷೆ ಮಾಡುತ್ತಿರುವುದರ ಬಗೆಗೆ ಬರೆಯುತ್ತ “ಈ ಕ್ರಿಶ್ಚಿಯನ್ ಸೋದರಿಯರ ಮೇಲೆ ಅಪಾರ ಗೌರವ ಹುಟ್ಟಿತು. ’ತಿಗಿನಾರ’ ಎಂಬ ಈ ದುರವಸ್ಥೆಯ ಗ್ರಾಮದಲ್ಲಿ ಇವರು ಹಗಲೂ ಇರುಳೂ ದುಡಿಯುತ್ತಿದ್ದಾರಲ್ಲ, ಭೂತಕಾಲದ ಬಗ್ಗೆ ಹೆಮ್ಮೆಪಡುವ ನಮ್ಮ ಸನಾತನವಾದಿಗಳಿಗೆ ಈ ಗ್ರಾಮದ ದುರವಸ್ಥೆ ಏಕೆ ಕಣ್ಣಿಗೆ ಕಾಣಲಿಲ್ಲ? ಇದೇ ಮುಂತಾಗಿ ಅಲೋಚಿಸುತ್ತಾ ಮನೆಗೆ ಹಿಂತಿರುಗಿದೆ” ಎನ್ನುತ್ತಾರೆ. ಮತ್ತೊಂದು ಕಡೆ ಉತ್ತರ ಭಾರತದಿಂದ ರಕ್ತಚಂದನ ಮರಗಳ ಕೆಳಗೆ ತಪಸ್ಸು ಮಾಡಬೇಕು ಎಂದು ಬರುವ ಸಾಧುವೊಬ್ಬನ ತಿಕ್ಕಲುತನವನ್ನು ಕೂಡ ಬಹಳ ತಮಾಷೆಯಾಗಿ ವಿವರಿಸುತ್ತಾರೆ.

ಬಹುಶಃ ಸೋಲಿಗರ ಜೀವನದಲ್ಲಿ ಒಂದಾಗಿ ಬದುಕುವ ಹವಣೆ, ಆಧುನಿಕ ಶಿಕ್ಷಣ, ಸಮುದಾಯಕ್ಕೆ ಸಹಾಯ ಮಾಡುವ ಸಲುವಾಗಿ ಮಾಡುತ್ತಿರುವ ಕೆಲಸ, ಆಧುನಿಕ ಜಗತ್ತಿನ ಆಧ್ಯಾತ್ಮ ಇವೆಲ್ಲ ಸಂಘರ್ಷಗಳು ಲೇಖಕರನ್ನು ತಮ್ಮ ಈ ಬರಹದಲ್ಲಿಯೂ ಕಾಡಿವೆ ಎಂದೆನಿಸದೆ ಇರದು. ಸೋಲಿಗರಲ್ಲಿ ಶಿಕ್ಷಣ ಪಡೆದವರು ಹೇಗೆ ಸಮುದಾಯದ ಹಿತಚಿಂತನೆ ಮಾಡುತ್ತಿದ್ದಾರೆ ಎಂದು ಬಹಳ ಆತ್ಮೀಯವಾಗಿ ದಾಖಲಿಸುವ ಲೇಖಕರು, ಆದಿವಾಸಿ ಸಮಾವೇಶವೊಂದರಲ್ಲಿ ಲಂಬಾಣಿ ಹುಡುಗಿ ಅಜ್ಮೀರ ಬಾಬ್ಬಿ (ಬಬಿತಾ) ಅವರ ಸಾಧನೆ ಮತ್ತು ಕನಸುಗಳ ಬಗೆಗೆ ಬರೆಯುವಾಗ “ಈಕೆಯನ್ನು ನೋಡುತ್ತಿದ್ದಂತೆ ನನಗೆ ನಮ್ಮ ಎಂ.ಜಿರೋಡ್‌ಗಳಲ್ಲಿ ಬಳುಕುತ್ತ ಓಡಾಡುವ, ಸ್ವಲ್ಪವೂ ಅಂತಸ್ಸತ್ತ್ವವಿಲ್ಲದ ಸಿಟಿ ಹುಡುಗಿಯರು ನೆನಪಿಗೆ ಬಂದರು. ಬಬಿತಳೂ ಆಧುನಿಕ ಪೋಷಾಕಿನ ಬೆಡಗಿನ ಹುಡುಗಿಯಂತೆ ಕಾಣುತ್ತಿದ್ದಳು. ಆದರೆ ಬಡತನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಬದುಕಿನ ಆಳವನ್ನು ಅಳೆದು ಸುರಿದು ನನ್ನವರು ತನ್ನವರು ಎಂಬ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದಾಳೆ ಅನ್ನಿಸಿತು” ಎನ್ನುತ್ತಾರೆ. ಬಬಿತಾಳ ಜೀವನ ದೃಷ್ಟಿಯನ್ನು ಹೊಗಳುವ ಭರದಲ್ಲಿ ಅಷ್ಟೇ ದಮನಿತರಾಗಿರಬಹುದಾದ ಎಂ.ಜಿ ರೋಡ್‌ನಲ್ಲಿ ನಡೆದಾಡುವ ಹುಡುಗಿಯರ ಮೇಲೆ ಮಾಡುವ ಈ ಕಮೆಂಟ್ ಅನವಶ್ಯಕ ಎನಿಸದೆ ಇರದು.

ಹಾಗೆಯೇ ’ಅಚ್ಚುಗೆಗೌಡನ ಕಾಡುಶುಂಠಿಪಾಠ’ ಅಧ್ಯಾಯದಲ್ಲಿ ಲಾಭದ ಕಲ್ಪನೆಯಿಲ್ಲದ ಅಚ್ಚುಗೆಗೌಡರನ್ನು ಹೋಲಿಸುವ ಭರದಲ್ಲಿ “ರೈತರ ಸಮಾವೇಶದಲ್ಲಿ ಎಲ್ಲರ ಎದುರಿಗೆ ವಿಷ ಕುಡಿಯುವ ನಾಟಕ ಮಾಡುತ್ತಾ ದುರಂತ ನಾಯಕರಾಗುವ ರೈತರು ನೆನಪಿಗೆ ಬಂತು” ಎಂದು ದಾಖಲಿಸುತ್ತಾರೆ ಲೇಖಕರು. ಇಂದಿನ ತೀವ್ರ ಅಸಮಾನ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಬಹುತೇಕ ರೈತರು ಕೂಡ ಶೋಷಿತರೇ. ಯಾವ ವ್ಯವಸ್ಥೆ ಬುಡಕಟ್ಟು ಸಮುದಾಯಗಳ ಪಾರಂಪರಿಕ ಜ್ಞಾನವನ್ನು ಅಲ್ಲಗಳೆದು ಕಾಡನ್ನು ದೋಚಿ ಕಾಡಿನ ಪಾರಂಪರಿಕ ನಿವಾಸಿಗಳಾದ ಬುಡಕಟ್ಟಿನವರನ್ನೇ ಒಕ್ಕಲೆಬ್ಬಿಸಲು ಹವಣಿಸುತ್ತಿದೆಯೋ ಅದೇ ವ್ಯವಸ್ಥೆ ಇಂದು ಕೃಷಿ ಮತ್ತು ರೈತರಿಗೆ ಕೂಡ ಮುಳುವಾಗಿದೆ. ಹೀಗಾಗಿ ರೈತರ ಹೋರಾಟವಾಗಲೀ ಅಥವಾ ಬುಡಕಟ್ಟು ಸಮುದಾಯಗಳ ಹೋರಾಟವಾಗಲೀ ಬೇರೆಬೇರೆಯಾದ್ದಲ್ಲ. ಇಂತಹ ಪ್ರಶ್ನೆಗಳ ಜೊತೆಗೆ ಮತ್ತೊಂದು ಮುಖ್ಯ ಪ್ರಶ್ನೆಯೂ ಮೂಡುತ್ತದೆ. ಇಂದು ಅರಣ್ಯಗಳಲ್ಲಿ ನಾಯಿಕೊಡೆಗಳಂತೆ ಏಳುತ್ತಿರುವ ರೆಸಾರ್ಟ್ ವ್ಯವಹಾರಗಳು ಕಾಡಿನ ಪರಿಸರಕ್ಕೆ ಮಾರಕವಾಗಿರುವುದನ್ನು ಹಲವೆಡೆ ದಾಖಲಾಗಿದೆ. ಸೋಲಿಗರ ಬದುಕು ಮತ್ತು ಕಾಡಿನ ಪರಿಸರಕ್ಕೆ ಹಾನಿ ಆಗುತ್ತಿರುವ ಹಲವು ವಿಚಾರಗಳನ್ನು ಲೇಖಕರು ಚರ್ಚಿಸುವಾಗ ಈ ರೆಸಾರ್ಟ್ ಉದ್ದಿಮೆಯ ಬಗ್ಗೆ ಪುಸ್ತಕದಲ್ಲಿ ಎಲ್ಲೂ ಉಲ್ಲೇಖ ಬರದೆ ಇರುವುದು ಸೋಜಿಗವೆನಿಸುತ್ತದೆ.

ಹೀಗೆ ವಿರಳವಾಗಿ ಅಲ್ಲಲ್ಲಿ ಕಂಡ, ಅನಗತ್ಯವಾಗಿದ್ದವೇನೋ ಅನ್ನಿಸುವ ಅಥವಾ ಗೊಂದಲಮಯ ವ್ಯವಸ್ಥೆಯಲ್ಲಿ ಯಾರಿಗಾದರೂ ಕಾಡುವ ಸಮಸ್ಯೆಗಳು ಇವು ಎಂದೆನಿಸುವ ಕೆಲವೇ ಕೆಲವು ಭಾಗಗಳನ್ನು ಹೊರತುಪಡಿಸಿ, ಬಹುತ್ವವನ್ನು, ಜೀವ ವೈವಿಧ್ಯವನ್ನು, ಪರಿಸರದ ಜೊತೆಗಿನ ಮಾನವನ ಸಾವಯವ ಸಂಬಂಧವನ್ನು ಉತ್ತೇಜಿಸುವ, ಆಧುನಿಕತೆಯ ಅಸಮಾನ ಅರ್ಥ ವ್ಯವಸ್ಥೆಯ ವಿಕಾರಗಳು ಸೃಷ್ಟಿಸುವ ಸಮಸ್ಯೆಗಳಿಗೆ ಬುಡಕಟ್ಟಿನ ಪಾರಂಪರಿಕ ತಿಳಿವಳಿಕೆ ಏನಾದರೂ ಪರಿಹಾರ ಸೂಚಿಸಬಲ್ಲದೇ ಎಂಬುದನ್ನು ಅನ್ವೇಷಿಸುವ ಜಾಡಿನಲ್ಲಿ ಸೃಜನಶೀಲವಾಗಿ ಮೂಡಿರುವ ವ್ಯಕ್ತಿಚಿತ್ರ ಮಾದರಿಯ ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವವಾದ ಕೊಡುಗೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...