Homeರಾಜಕೀಯಜಿಟಿಡಿ ಖಾತೆ ಗೋಳಾಟಕ್ಕೆ ಕೆ.ಎಸ್.ರಂಗಪ್ಪ ಕಾರಣ?

ಜಿಟಿಡಿ ಖಾತೆ ಗೋಳಾಟಕ್ಕೆ ಕೆ.ಎಸ್.ರಂಗಪ್ಪ ಕಾರಣ?

- Advertisement -
- Advertisement -

ಕುಮಾರಸ್ವಾಮಿಯವರ ಸರ್ಕಾರಕ್ಕೆ ಪರೀಕ್ಷೆಗಳೋ ಪರೀಕ್ಷೆಗಳು. ತಾವು ಮುಖ್ಯಮಂತ್ರಿಯಾಗುವ ಖಚಿತ ಭರವಸೆಯಿಂದ ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರ ರಚನೆಗೆ ಮುಂದಾದಾಗಿನಿಂದ ಖಾತೆ ಹಂಚಿಕೆಯವರೆಗೆ ಎಚ್‍ಡಿಕೆಗೆ ಒಂದಾದ ಮೇಲೆ ಒಂದು ಅಗ್ನಿಪರೀಕ್ಷೆಗಳು. ಖಾತೆ ಹಂಚಿಕೆಯ ನಂತರವೂ ಖಾತೆಗಳ ವಿಚಾರದಲ್ಲಿ ಅಸಮಾಧಾನಗೊಂಡವರನ್ನು ಸಮಾಧಾನ ಮಾಡುವ ಕೆಲಸ ಮುಂದುವರೆದೇ ಇತ್ತು. ಇದರಲ್ಲಿ ಹೆಚ್ಚು ಸುದ್ದಿಯಾಗಿದ್ದು ಜಿ.ಟಿ.ದೇವೇಗೌಡರಿಗೆ ನೀಡಲಾದ ಉನ್ನತ ಶಿಕ್ಷಣ ಖಾತೆ. ಸಾರ್ವಜನಿಕರಿಂದ ‘ಉನ್ನತ ಶಿಕ್ಷಣ ಖಾತೆ ಪಡೆದ ಏಳನೇ ತರಗತಿ ಶಾಸಕ’ ಎಂಬ ಟೀಕೆಗಳೇ ಜಿ.ಟಿ.ದೇವೇಗೌಡರನ್ನು ದೊಡ್ಡಗೌಡರ ಮನೆ ಮೆಟ್ಟಿಲೇರುವಂತೆ ಮಾಡಿತ್ತೆಂಬ ಸುದ್ದಿ ಹರಿದಾಡಿತ್ತು. ಜನ ತನ್ನ ಶೈಕ್ಷಣಿಕ ಅರ್ಹತೆಯನ್ನಿಟ್ಟುಕೊಂಡು ಗೇಲಿಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಅಥವಾ ತನಗೆ ಶೈಕ್ಷಣಿಕ ಅರ್ಹತೆಯಿಲ್ಲವೆಂಬ ಕೀಳರಿಮೆಯಿಂದಲೋ ಆ ಖಾತೆ ತನಗೆ ಬೇಡ; ಜನರೊಂದಿಗೆ ಒಡನಾಟ ಮಾಡುವಂತಹ, ಫೀಲ್ಡ್‍ನಲ್ಲಿ ಕೆಲಸ ಮಾಡುವಂತಹ ಖಾತೆ ಕೊಡಿ ಎಂದು ದೊಡ್ಡಗೌಡರಲ್ಲಿ ಅಹವಾಲು ಸಲ್ಲಿಸಿದ್ದರು ಎಂಬ ವಿವರಣೆಯೂ ಸುದ್ದಿಯಾಗಿತ್ತು. ಈ ಮಧ್ಯೆ, ಪತ್ರಕರ್ತರೊಡನೆ ಮಾತನಾಡುವ ಸಮಯದಲ್ಲಿ ‘ಸರಿ ಬಿಡಿ, ಈ ಖಾತೆಯನ್ನು ನಾನೇ ಇಟ್ಟುಕೊಳ್ತೀನಿ. ಆಗಬಹುದಾ?’ ಎಂದು ಪತ್ರಕರ್ತರನ್ನೇ ಕೇಳಿದ್ದರು. ಆದರೆ ಈಗ ಜಿಟಿಡಿ ಅದೇ ಖಾತೆಯಲ್ಲಿ ತೃಪ್ತರಾಗಲು ಕಾರಣವೇನು? ಎಂಬ ಪ್ರಶ್ನೆ ಏಳುತ್ತದೆ.
ಜೆಡಿಎಸ್‍ನ ಆರಂಭದಿಂದಲೂ ಪಕ್ಷದ ಜೊತೆಯಲ್ಲಿದ್ದುಕೊಂಡು ಪಕ್ಷವನ್ನು ಬೆಳೆಸಲು ದುಡಿದಿದ್ದ ಜಿಟಿಡಿ 2004-05ರಲ್ಲಿ ಸಿದ್ದರಾಮಯ್ಯನವರ ಜೊತೆ ಸಖ್ಯವಿದ್ದರೂ, ಪಕ್ಷ ಬಿಟ್ಟು ಹೋಗಿರಲಿಲ್ಲ. ಆದರೆ ನಂತರ ಒಂದು ಅವಧಿಗೆ ಬಿಜೆಪಿಯ ಹೊಸ್ತಿಲು ತುಳಿದು ನಂತರ ವಾಪಸ್ಸು ಬಂದಿದ್ದರು. ಮೈಸೂರಿನ ಮಟ್ಟಿಗೆ ಪಕ್ಷದ ಪ್ರಭಾವಿ ನಾಯಕ, ಅಷ್ಟು ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು 27,000 ಮತಗಳ ಲೀಡ್‍ನಲ್ಲಿ ಮಣಿಸಿ, ‘ಜೈಂಟ್ ಕಿಲ್ಲರ್’ ಆಗಿದ್ದ ಗೌಡರನ್ನು ಮಂತ್ರಿಮಂಡಲದಿಂದ ಕಡೆಗಣಿಸುವುದು ಸಾಧ್ಯವಿರಲಿಲ್ಲ. ಸರ್ಕಾರ ಕ್ಯಾಪ್ಟನ್‍ಶಿಪ್ ಪಡೆದಿದ್ದ ಕುಮಾರಣ್ಣ ತನ್ನ ಕುಟುಂಬಕ್ಕೆ ಫಲವತ್ತಾದ ಖಾತೆಗಳನ್ನು ಪಡೆದುಕೊಂಡಿದ್ದರ ಜೊತೆಗೆ ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕರಿಗೂ ಮಂತ್ರಿಮಂಡಲದಲ್ಲಿ ಹೆಚ್ಚಿನ ಖಾತೆಗಳನ್ನು ಕೊಡಲೇಬೇಕಾಗಿತ್ತು. ಹಾಗೆ ನೋಡಿದರೆ ದೊಡ್ಡಗೌಡರು ಜಿಟಿಡಿಗೆ ಫಲವತ್ತಾದ ಖಾತೆಯನ್ನೇ ನೀಡಿದ್ದರು.
ಕುಲಪತಿಗಳನ್ನು ನೇಮಿಸುವ, ಡೀಮ್ಡ್ ಯೂನಿವರ್ಸಿಟಿಗಳ ಸ್ಥಾಪನೆ ಅನುಮತಿ ನೀಡುವುದರ ಜೊತೆಗೆ ಮೆಡಿಕಲ್ ಕಾಲೇಜುಗಳಿಗೂ ಸ್ವಾಯತ್ತತೆ ನೀಡುವ ಅಧಿಕಾರ ಉನ್ನತ ಶಿಕ್ಷಣ ಇಲಾಖೆಗೆ ಇದೆ. ವೃತ್ತಿಪರ ಉನ್ನತ ಶಿಕ್ಷಣದ ಖಾಸಗೀ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿದಾಗ ಒಳ್ಳೆ ‘ಫಲ’ವನ್ನೇ ಉನ್ನತ ಶಿಕ್ಷಣ ಖಾತೆ ನೀಡುತ್ತದೆ ಎಂಬುದು ಜಿಟಿಡಿಗೂ ತಿಳಿದಿತ್ತು. ಹಾಗಾಗಿ ಅಂತಹ ಖಾತೆಯನ್ನು ಸಾರ್ವಜನಿಕರ ಗೇಲಿಗೆ ನಾಚಿ ಬಿಟ್ಟುಬಿಡುವ ಮೂರ್ಖರಾಗಿರಲು ಸಾಧ್ಯವಿಲ್ಲ. ಅಸಲೀ ಸಂಗತಿ ಏನೆಂದರೆ, ಆ ಖಾತೆಯ ನಿರ್ವಹಣೆಗೆ ದೊಡ್ಡಗೌಡರು ಮಾಡಿದ್ದ ಮಾಸ್ಟರ್‍ಪ್ಲಾನ್ ಏನು ಎಂಬ ವಾಸನೆಯನ್ನು ಗ್ರಹಿಸಿದ್ದರಿಂದ ಜಿಟಿಡಿ ಆ ಖಾತೆಯನ್ನು ತಿರಸ್ಕರಿಸಿದ್ದರು.
ದೊಡ್ಡಗೌಡರ ಕುಟುಂಬದಲ್ಲಿ ಒಬ್ಬರಾದ ಮೈಸೂರಿನಲ್ಲಿ ಕಂಟ್ರಾಕ್ಟರ್ ರಂಗಪ್ಪ ಎಂದು ಹೆಸರಾಗಿರುವ ಉನ್ನತ ಶಿಕ್ಷಣದ ಮಾರಾಟಗಾರ ಎಂದೇ ಖ್ಯಾತಿ ಪಡೆದಿರುವ ಕೆ.ಎಸ್.ರಂಗಪ್ಪರನ್ನು ಉನ್ನತ ಶಿಕ್ಷಣ ಖಾತೆಗೆ ಸಲಹೆಗಾರನಾಗಿ ನೇಮಿಸಲು ದೊಡ್ಡಗೌಡರ ಮಾಸ್ಟರ್‍ಮೈಂಡ್ ಕೆಲಸ ಮಾಡಿತ್ತು. ಅವರ ಮೊಮ್ಮಗಳು ರಂಗಪ್ಪ ಅವರ ಸೊಸೆಯಾಗಿದ್ದು, ಆ ಕಾರಣಕ್ಕೇ ರಂಗಪ್ಪರನ್ನು ಚಾಮರಾಜ ಕ್ಷೇತ್ರದಲ್ಲಿ ವಾಸು ವಿರುದ್ದ ಕಣಕ್ಕಿಳಿಸಿದ್ದರು. ಆದರೆ ರಂಗಪ್ಪನವರ ಕೈಚಳಕವನ್ನು ನೋಡಿದ್ದ ಕ್ಷೇತ್ರದ ಜನ ತಮ್ಮ ಕೈಚಳಕ ತೋರಿ ಮೂರನೇ ಸ್ಥಾನ ಕಲ್ಪಿಸಿದರು.
ಭ್ರಷ್ಟಾತಿ ಭ್ರಷ್ಟ, ಫೇಕ್ ಸರ್ಟಿಫಿಕೇಟ್‍ಗಳ ಸರದಾರ ಎಂದು ಮೈಸೂರಿನಲ್ಲಿ ಹೆಸರಾಗಲು ಕಾರಣವಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್‍ಓಯು)ದ ಕುಲಸಚಿವರಾಗಿದ್ದ ರಂಗಪ್ಪ ವಿಶ್ವವಿದ್ಯಾನಿಲಯ ಹಲವು ಅವ್ಯವಹಾರಗಳ ಆರೋಪ ಹೊತ್ತುಕೊಂಡರು. 2009ರಲ್ಲಿ ಮುಕ್ತ ವಿವಿಯಲ್ಲಿ ಅಧಿಕಾರ ಹಿಡಿದ ನಂತರ ಕೆಎಸ್‍ಓಯುನಲ್ಲಿ ಉನ್ನತ ಹುದ್ದೆಗಳಿಂದ ಹಿಡಿದು ಅಟೆಂಡರ್‍ವರೆಗೂ ಒಕ್ಕಲಿಗರನ್ನೇ ತುಂಬಿಸಿಕೊಂಡರೆಂಬ ಆಪಾದನೆ ಹೊಂದಿದ್ದಾರೆ. ತಮ್ಮ ನಂತರದ ಕುಲಪತಿ ಎಂ.ಜಿ.ಕೃಷ್ಣನ್ ಹಾಗೂ ಇತರ 6 ಜನ ಸಂಗಡಿಗರ ಜೊತೆ ಸಿಬ್ಬಂದಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಕಮಿಷನ್ ಪಡೆದುಕೊಂಡರೆಂದೂ, ಅಡ್ಮಿಷನ್ನೇ ಆಗದವರಿಗೆ ಫೇಕ್ ಸರ್ಟಿಫಿಕೇಟ್‍ಗಳನ್ನು ಮಾರಿ ಖಜಾನೆ ತುಂಬಿಸಿಕೊಂಡರೆಂದೂ ವಿವಿ ವಲಯದಲ್ಲಿ ಚಾಲ್ತಿಯಲ್ಲಿದೆ. ಮುಕ್ತ ವಿವಿಯನ್ನೇ ಮುಕ್ತಗೊಳಿಸಿ ಬರಿದು ಮಾಡಿದ್ದಲ್ಲದೆ, ವಿವಿಯು ಸುಪ್ರೀಂ ಕೋರ್ಟ್‍ಗೆ ಅಲೆಯುವಂತೆ ಮಡಿದ ಹಿರಿಮೆಯೂ ಇವರಿಗೇ ಸಲ್ಲಬೇಕೆಂದು ಆ ವಿಚಾರದಲ್ಲಿ ಹೋರಾಟಕ್ಕಿಳಿದಿದ್ದವರ ಅನಿಸಿಕೆ.
ಅಲ್ಲಿಗೇ ನಿಲ್ಲದೇ 2013ರಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವ್ವಾಜ್‍ರೊಂದಿಗೆ ‘ಉತ್ತಮ ಒಡನಾಟ’ ಹೊಂದಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾದರು. ಕಾಂಚಾಣದ ಆಸೆ ತೀರದ ಕಂಟ್ರಾಕ್ಟರ್ ಹಾಸನದ ಹೇಮ ಗಂಗೋತ್ರಿ, ಮಂಡ್ಯದ ಪಿಜಿ ಸೆಂಟರ್ ಸೇರಿದಂತೆ ಮಾನಸಗಂಗೋತ್ರಿಯ ಕ್ಯಾಂಪಸ್‍ಗಳಲ್ಲಿ ಕಟ್ಟಡ ನಿರ್ಮಾಣ, ವಿವಿಯ ‘ಅಭಿವೃದ್ಧಿ ಕಾರ್ಯ’ಗಳು ನಡೆದವು. ಇದೂ ಹಗರಣವೇ ಆಯಿತು. ಇವರ ಭ್ರಷ್ಟಾಚಾರದ ಹಗರಣಗಳನ್ನು ಹೊರತಂದ ಸಾಹಿತಿ ಕೆ.ಎಸ್.ಭಗವಾನ್ ಮತ್ತು ಶಿವರಾಮುರವರು ಮೊಕದ್ದಮೆಗಳನ್ನು ಹೂಡಿ ಹೋರಾಟ ಆರಂಭಿಸಿದರು. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ರಂಗಪ್ಪ ಮತ್ತು 7 ಜನ ಸಂಗಡಿಗರ ವಿರುದ್ದ ಎಫ್‍ಐಆರ್ ಧಾಖಲಾಯಿತು. ಅಂದಿನ ಮೈಸೂರು ಸಿಟಿ ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದರವರು ಸಾರ್ವಜನಿಕ ಸೇವೆ ಸಲ್ಲಿಸಬೇಕಿದ್ದ ಸರ್ಕಾರಿ ನೌಕರನಿಂದ ವಿಶ್ವಾಸ ದ್ರೋಹ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 406 ಮತ್ತು 409ರ ಆಧಾರದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರು.
ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ಜೈಲಿನಲ್ಲಿ ಮುದ್ದೆ ಮುರಿಯಬೇಕಿದ್ದ, ಸರ್ಟಿಫಿಕೇಟ್ ಮಾರಾಟ ಮಾಡಿದರೆಂಬ ಆರೋಪ ಹೊತ್ತಿರುವ ರಂಗಪ್ಪ ಅದೇಗೋ ಹೊರಗಿದ್ದಾರÉ. ಕೋರ್ಟ್ ಕಟಕಟೆಯಲ್ಲಿ ನಿಂತಿರುವ ರಂಗಪ್ಪರಿಗೆ ಬೀಗರು ಎಂಬ ಮಮಕಾರದಿಂದ ದೊಡ್ಡಗೌಡರು ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದರು. ಒಂದುವೇಳೆ ಗೆದ್ದಿದ್ದರೆ, ಫಲವತ್ತಾದ ಹಣಕಾಸು, ಅಬಕಾರಿ, ಲೋಕೋಪಯೋಗಿ, ಇಂಧನ ಖಾತೆಗಳು ಮಕ್ಕಳಲ್ಲೂ, ಅಂಥದ್ದೇ ಲಾಭಭರಿತವಾದ ಸಾರಿಗೆ ಖಾತೆ ಬೀಗರಾದ ತಮ್ಮಣ್ಣರಿಗೂ ಕೊಟ್ಟಂತೆ, ಉನ್ನತ ಶಿಕ್ಷಣ ರಂಗಪ್ಪರಿಗೆ ಪ್ರಾಪ್ತವಾಗುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ತನ್ನ ಕುಟುಂಬದವರಿಗೆ, ಸಂಬಂಧಿಗಳಿಗೆ ವಿಧಾನಸೌಧದಲ್ಲಿ ಒಳ್ಳೊಳ್ಳೆ ಸ್ಥಾನಗಳನ್ನು ಕೊಟ್ಟು ಸಂತೃಪ್ತಿ ಪಡಿಸಿರುವ ಗೌಡರಿಗೆ ಎಲೆಕ್ಷನ್‍ನಲ್ಲಿ ಸೋತು ಚಾನ್ಸ್ ಕಳೆದುಕೊಂಡ ರಂಗಪ್ಪರಿಗೆ ಒಗ್ಗುವ ಸ್ಥಾನಕೊಡದೆ ಇರಲಾಗಲಿಲ್ಲ.
ರಂಗಪ್ಪರನ್ನು ಉನ್ನತ ಶಿಕ್ಷಣದ ಸಲಹೆಗಾರನಾಗಿ ನೇಮಿಸಲು ಅಪ್ಪ-ಮಕ್ಕಳು ನಿರ್ಧರಿಸಿದ್ದಾರೆಂಬ ವಾಸನೆಯನ್ನು ಗ್ರಹಿಸಿದ ಜಿ.ಟಿ.ದೇವೇಗೌಡರು ಮುನಿದೆದ್ದರು. ರಂಗಪ್ಪ ‘ಸಲಹೆಗಾರ’ರಾದರೆ ತನ್ನ ಫಲವತ್ತಾದ ಖಾತೆಯಲ್ಲಿನ ಫಸಲು ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ’ ರಂಗಪ್ಪರ ಪಾಲಾಗುತ್ತದೆ ಎಂದು ಅರ್ಥಮಾಡಿಕೊಂಡರು. ತನ್ನ ತಟ್ಟೆಗೆ ಮತ್ತೊಂದು ಕೈ ಬೀಳುವುದನ್ನು ತಪ್ಪಿಸಲು ಹಾಗೂ ಮೈಸೂರಿನಲ್ಲಿ ಕುಪ್ರಸಿದ್ಧವಾಗಿರುವ ರಂಗಪ್ಪರ ಪುರಾಣ ಇತಿಹಾಸವನ್ನು ನೋಡಿದ್ದರಿಂದ ಹೆದರಿಕೆಯೂ ಆಯಿತು. ಈತ ಇನ್ನೆಷ್ಟು ಹಗರಣಗಳನ್ನು ಮಾಡಿ ತನ್ನ ಹೆಸರನ್ನೂ ಎಲ್ಲಿ ಹಾಳುಮಾಡುತ್ತಾನೋ ಎಂದು ಚಿಂತಿಸಿದ ಜಿಟಿಡಿ ಸಾರ್ವಜನಿಕರು ಮಾಡಿದ ಗೇಲಿಯನ್ನು ದೊಡ್ಡದು ಮಾಡಿ ದೊಡ್ಡಗೌಡರಲ್ಲಿಗೆ ದೌಡಾಯಿಸಿದರು.
ಕುಮಾರಸ್ವಾಮಿ ಇಟ್ಟುಕೊಂಡಿರುವ ಹಣಕಾಸು ಅಥವಾ ಇಂಧನವನ್ನು ಕೊಡುವ ಪ್ರಶ್ನೆಯೇ ಇರಲಿಲ್ಲ. ತಮ್ಮಣ್ಣ ಅಥವಾ ಬಂಡೆಪ್ಪ ಕಾಶೆಂಪೂರ್ ಅವರ ಸಾರಿಗೆ ಅಥವಾ ಸಹಕಾರ ಕಿತ್ತುಕೊಂಡರೆ ಅವರು ಮುನಿಸಿಕೊಳ್ಳುತ್ತಾರೆ. ಹಾಗಾಗಿ ಇದೇ ಖಾತೆಯಲ್ಲಿ ಮುಂದುವರೆಯಿರಿ ಎಂಬ ಸೂಚನೆ ಬಂದಾಗ ಈ ಖಾತೆಯಲ್ಲಿಯೇ ಮುಂದುವರೆಸುವುದಾದರೆ, ತನಗೆ ಯಾವುದೇ ಸಲಹೆಗಾರರ ಅಗತ್ಯವಿಲ್ಲ ಎಂಬ ಸ್ಪಷ್ಟ ಅನಿಸಿಕೆಯನ್ನು ರವಾನಿಸಿದರು.
ಇದನ್ನು ಗೌಡರು ತಳ್ಳಿಹಾಕುವುದು ಕಷ್ಟವಿತ್ತು. ಜಿಟಿಡಿ ಮುನಿಸಿಕೊಳ್ಳುತ್ತಾ ಹೋದರೆ, ಅದಕ್ಕೆ ತಪ್ಪು ಅರ್ಥಗಳು ಬರುವ ಸಾಧ್ಯತೆಯಿತ್ತು. ಚಾಮುಂಡೇಶ್ವರಿ ಬಿಸಿ ಏರುವ ಮುನ್ನ ಸ್ವತಃ ಸಿದ್ದರಾಮಯ್ಯರಿಂದ ಆಹ್ವಾನವಿದ್ದರೂ, ಅವರೊಂದಿಗೆ ಹೋಗದೇ ಪಕ್ಷದಲ್ಲೇ ಉಳಿದಿದ್ದ ಜಿಟಿಡಿಗೆ ಇರುವ ಖಾತೆಗೂ ಕ್ಯಾತೆ ಇಟ್ಟರು ಎಂಬ ಆರೋಪ ಬೇಡವೆಂದು ತೀರ್ಮಾನಿಸಿದರು. ಜಿಟಿಡಿ ಉಳಿದುಕೊಂಡರು; ಈಗ ಸದ್ಯ ರಂಗಪ್ಪ ಸಹಾ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಸರ್ಕಾರ ಮುಂದುವರೆದರೆ ಅವರಿಗೆ ಪುನರ್ವಸತಿ ಕಲ್ಪಿಸುವುದರಲ್ಲಿ ಸಂಶಯವಿಲ್ಲ

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...