- Advertisement -
- Advertisement -
ಇಂದು ಗೌರಿ
ಉದಯಿಸಿದ ದಿನ;
ನಾಳೆ ಗಾಂಧಿ
ಅಸ್ತಮಿಸಿದ ದಿನ;
ಈ ಉದಯಾಸ್ತಮಗಳು
ಕಾಲದ ಕಾಕತಾಳೀಯಗಳಲ್ಲ,
ಈ ನೆಲದ ಪ್ರತಿರೋಧದ
ಪುನರಾವರ್ತಿತ ಸಾಕ್ಷ್ಯಗಳು!
ಕೊಲ್ಲುವವರಿಗೆ ಇಲ್ಲಿ
ದೇಹಗಳ ಕೊರತೆಯಿಲ್ಲ,
ಯಾಕೆಂದರೆ
ಸಾಯುವವರಿಗೆ ಸಾವಿನ
ಭೀತಿಯೂ ಇಲ್ಲಿಲ್ಲ;
ಗಾಂಧಿಯನ್ನು ಕೊಂದರು
ಗೌರಿ ಹುಟ್ಟಿದಳು,
ಗೌರಿಯನ್ನು ಕೊಂದರು
ನಾನು ಗೌರಿಗಳಾಗಿ
ಪ್ರತಿಧ್ವನಿಸಿದಳು!
ಆಲೋಚನೆಗಳಿಗೆ
ಸಾವಿಲ್ಲ ಎಂದಮೇಲೆ
ಇಲ್ಲಿ ಹುಟ್ಟುಗಳೂ ನೆಪವಷ್ಟೆ;
ಗಾಂಧಿ ನಿರ್ಗಮಿಸಿದರು
ಗೌರಿ ಅವತರಿಸಿದಳು
ಬಂದೂಕುಗಳು ಬೆಪ್ಪಾದವು…
ಕೂಗುಮಾರಿಗಳ
ಕೇಡಿನಬ್ಬರದ ನಡುವೆ
ನೊಂದ ನಮ್ಮವರ
ನೆಮ್ಮದಿಗಾಗಿ ತುಡಿವ
ದನಿಗಳೂ ನಿರಂತರ;
ಒಮ್ಮೊಮ್ಮೆ ಗಾಂಧಿಯ
ಊರುಗೋಲಾಗಿ
ಮಗದೊಮ್ಮೆ ಗೌರಿಯ
ಹರಿತ ಲೇಖನಿಯಾಗಿ;
ಹುಟ್ಟು ಸಾವುಗಳ
ಚೌಕಟ್ಟು ಕಳಚಿಟ್ಟು
ಮರುಕಳಿಸುವ ಮೈಲುಗಲ್ಲುಗಳಾಗಿ;
ಸೂತಕ-ಸಂಭ್ರಮಗಳ
ಸಮಾಗಮದ
ಗಾಂಧಿಯ ಅಸ್ತಮವಾಗಿ
ಗೌರಿಯ ಉದಯವಾಗಿ…


