Homeಮುಖಪುಟಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!

ಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!

1957ರಲ್ಲಿ ಗಾಂಧೀಜಿ ಪೂಜೆ ಪ್ರಾರಂಭಿಸಿದ್ದ ಬಲಿಯಾ ಆಗೇರ ತಮ್ಮ ಅಂತ್ಯದವರೆಗೂ ಒಂದು ದಿನವೂ ದೀಪಾರತಿ ತಪ್ಪಿಸಿದವರಲ್ಲ!! ಆ ನಂತರ ಆತನ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪೂಜೆ ಸಂಪ್ರದಾಯವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ.

- Advertisement -
- Advertisement -

ಅದು ಸ್ವಾತಂತ್ರ್ಯ ಸಂಗ್ರಾಮದ ಆಚೀಚೆಯ ದಿನ ಮಾನೆ; ಇಡೀ ಕರ್ನಾಟಕದಲ್ಲಿ ಗಾಂಧಿ ಜಿಲ್ಲೆ ಎಂಬ ಪ್ರತೀತಿ ಇದ್ದದ್ದು ಉತ್ತರ ಕನ್ನಡಕ್ಕೆ ಮಾತ್ರ! ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತವಾಗಿದ್ದ ಜಿಲ್ಲೆ ಜೊತೆ ಗಾಂಧೀಜಿಗೂ ನಿಕಟ ಒಡನಾಟವಿತ್ತು. ಉತ್ತರ ಕನ್ನಡದಲ್ಲಿ ನಡೆದ ಅಸ್ಪೃಶ್ಯತೆ ವಿರುದ್ಧ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧ ಮತ್ತು ಬ್ರಿಟಿಷರ ವಿರುದ್ಧದ ಹಲವು ಹೋರಾಟಗಳಲ್ಲಿ ಗಾಂಧೀಜಿ ಪಾಲ್ಗೊಂಡು ಪ್ರೇರಣೆ ಆಗಿದ್ದರು. ಜಿಲ್ಲೆಯ ಅಂಕೋಲೆಯಂತೂ ಕರ್ನಾಟಕದ ಬಾರ್ಡೋಲಿ ಎಂದೇ ಹೆಸರುವಾಸಿ. ಇಲ್ಲಾಗಿರುವ ಹತ್ತಾರು ಸ್ವಾತಂತ್ರ್ಯ ಚಳುವಳಿಗಳು ಐತಿಹಾಸಿಕ! ಗಾಂಧಿ ಅನುಯಾಯಿಗಳ ದೊಡ್ಡ ದಂಡೇ ಅಂಕೋಲೆಯ ಹಳ್ಳಿ-ಹಳ್ಳಿಗಳಲ್ಲಿ ತಯಾರಾಗಿತ್ತು.

ಅಂಕೋಲೆಯ ಸುತ್ತಮುತ್ತ “ಆಗೇರ” ಎಂದು ಗುರುತಿಸುವ ದಲಿತ ಸಮುದಾಯವೊಂದಿದೆ. ಇವತ್ತಿಗೂ ತೀರ ಹಿಂದುಳಿದಿರುವ ಈ ಜಾತಿ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದರು. ಅಂಕೋಲೆಯ ವಂದಿಗೆ ಗ್ರಾಮದ ದಲಿತ ಕೇರಿಗೆ 1942ರಲ್ಲಿ ಗಾಂಧೀಜಿ ಬಂದಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಆಗೇರ ಸಮುದಾಯ ಬಲಿಯಾ ಮಾಧು ಆಗೇರಗೆ ಗಾಂಧೀಜಿ ಎಂದರೆ ಸಾಕ್ಷಾತ್ ದೇವರು!! ಗೌಂಡಿ ಉಪಕಸುಬಿನ ಈತ ಕೆಂಪು ಕಡಗಲ್ಲಿನಲ್ಲಿ ಗಾಂಧೀಜಿಯ ಉಬ್ಬುಶಿಲ್ಪ ನಿರ್ಮಿಸಿದ್ದರು. ಮನೆ ಮುಂದೆ ಕಟ್ಟೆಕಟ್ಟಿ ಅದನ್ನಲ್ಲಿ ಪ್ರತಿಷ್ಠಾಪಿಸಿದ್ದರು. ಈ ಗಾಂಧಿ ಪ್ರತಿಮೆಗೆ ಬಲಿಯಾ ಆಗೇರ ದಿನವೂ ಹೂ ಮುಡಿಸಿ ಧೂಪ-ದೀಪದಿಂದ ಪೂಜಿಸುತ್ತಿದ್ದರು.

ಗಾಂಧಿ
ಬಲಿಯಾ ಆಗೇರ ಕೆತ್ತಿ ದಿನವೂ ಪೂಜಿಸುತ್ತಿದ್ದ ಉಬ್ಬುಗಲ್ಲಿನ ಗಾಂಧಿ ಪ್ರತಿಮೆ

ಗಾಂಧಿ ಜಯಂತಿ, ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವದಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದ ಬಲಿಯಾ ಸುತ್ತಲಿನವರಿಗೆ ಅಂದು ಸಿಹಿ ಹಂಚುತ್ತಿದ್ದರು. 1957ರಲ್ಲಿ ಗಾಂಧೀಜಿ ಪೂಜೆ ಪ್ರಾರಂಭಿಸಿದ್ದ ಬಲಿಯಾ ಆಗೇರ ತಮ್ಮ ಅಂತ್ಯದವರೆಗೂ ಒಂದು ದಿನವೂ ದೀಪಾರತಿ ತಪ್ಪಿಸಿದವರಲ್ಲ!! ಆ ನಂತರ ಆತನ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪೂಜೆ ಸಂಪ್ರದಾಯವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ಬಲಿಯಾ ಆಗೇರರ ಮಕ್ಕಳಾದ ಲಿಂಗು ಮತ್ತು ಥಾಕು ಇವತ್ತಿಗೂ ದೇವರಿಗೆ ಪೂಜಿಸುವಷ್ಟೇ ಭಕ್ತಿ-ಗೌರವದಿಂದ ಗಾಂಧಿ ಪ್ರತಿಮೆಗೂ ಆರತಿ ಎತ್ತುತ್ತಿದ್ದಾರೆ.

ನೌಕರಿ-ವ್ಯವಹಾರ ನಿಮಿತ್ತ ಊರಿಂದ ಹೊರಗಿರುವ ಬಲಿಯಾ ಆಗೇರರ ಮೊಮ್ಮಕ್ಕಳು ಮತ್ತು ಪರಿವಾರದವರು ಗಾಂಧಿ ಜಯಂತಿಯಂದು ಮಾತ್ರ ತಪ್ಪದೆ ಊರಿಗೆ ಬರುತ್ತಾರೆ. ಗಾಂಧಿ ಶಿಲ್ಪದ ಮುಂದೆ ಒಟ್ಟಾಗಿ ನಿಂತು ಗೌರವ ಸಲ್ಲಿಸುತ್ತಾರೆ. ಅಂದು ಈ ಆಗೇರ ಕುಟುಂಬದಲ್ಲಿ ವಿಶೇಷ ಪೂಜೋತ್ಸವ; ಹಬ್ಬದ ಸಡಗರ; ನೆಂಟರಿಷ್ಟರಿಗೆಲ್ಲಾ ಸಿಹಿ ಹಂಚಿಕೆ.

ಗಾಂಧಿ
ಬಲಿಯಾ ಆಗೇರ

ಇಲ್ಲಿ ದಾಖಲಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯಿದೆ. ಕಟ್ಟಾ ಗಾಂಧಿವಾದಿಯಾಗಿದ್ದ ಬಲಿಯಾ ಆಗೇರ ತನಗೆ ಸರ್ಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಸೌಲಭ್ಯ ಕೊಡಲು ಬಂದಾಗ ಬೇಡವೆಂದು ನಿರಾಕರಿಸಿದ್ದರು! ತಾನು ಮಾಡಿದ ಹೋರಾಟ ತನ್ನ ಜನ್ಮಭೂಮಿಗಾಗಿ; ಗಾಂಧೀಜಿಗಾಗಿ ಎಂಬ ಅರ್ಪಣಾಭಾವ ಬಲಿಯಾ ಆಗೇರರದಾಗಿತ್ತು; ಇದಕ್ಕೆಲ್ಲಾ ಇನಾಮು ಯಾಕೆಂದು ಆತ ಕೇಳುತ್ತಿದ್ದರು. ಗಾಂಧಿಯನ್ನು ಮತೋನ್ಮತ್ತರಾಗಿ ದ್ವೇಷಿಸುವವರಿಗೆ ಬಲಿಯಾ ಆಗೇರ ಅರ್ಥವಾಗದ ಒಗಟೇ ಬಿಡಿ!! ಗಾಂಧೀಜಿಯನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರನೆಂದು ಮೂದಲಿಸುವ ಬಾಯಿ ಹರುಕ ಧರ್ಮಾತ್ಮ ಸಂಸತ್ತಿನಲ್ಲಿ ಪ್ರತಿನಿಧಿಸುವ ಉತ್ತರಕನ್ನಡಲ್ಲಿ ಅದೇ ಗಾಂಧಿಯನ್ನು ತಲತಲಾಂತರದಿಂದ ಶ್ರದ್ಧೆಯಿಂದ ಪೂಜಿಸುವ ದಲಿತ ಕುಟುಂಬ ಒಂದಿದೇ ಎಂಬುದೇ ಅದ್ಭುತ!!!

  • ಶುದ್ದೋಧನ. ಪತ್ರಕರ್ತರು, ಉತ್ತರ ಕನ್ನಡ.

ಇದನ್ನೂ ಓದಿ: ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

Also Read: When Godse´s Children Rule India, Gandhi is Crucified Everyday

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...