ಸಹಪಾಠಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್‌ಗೆ ಒಳಗಾದ 11ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿನಿಯ ಕುಟುಂಬಸ್ಥರು ಈ ಸಂಬಂಧ ದೂರು ದಾಖಲಿಸಿದ್ದು, ಆಕೆಯ ಸಹಪಾಠಿಗಳಾದ ನಾಲ್ವರು ಬಾಲಕರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ.
ಬಾಲಕಿಯ ತಂದೆಯ ನೀಡಿದ ಮಾಹಿತಿ ಪ್ರಕಾರ, ಕಳೆದ ಸೋಮವಾರ (ಡಿ.2) ತರಗತಿ ಮುಗಿದ ಬಳಿಕ ವಿದ್ಯಾರ್ಥಿನಿಯನ್ನು ಬಲವಂತವಾಗಿ ನಿರ್ಜನ ಸ್ಥಳಕ್ಕೆ ಕರೆದೊಯ್ದ ಸಹಪಾಠಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತಮ್ಮ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ ಅವರು, ವಿಷಯ ಬಹಿರಂಗಪಡಿಸಿದರೆ, ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ವಿದ್ಯಾರ್ಥಿನಿ ನಡೆದ ಘಟನೆಯನ್ನು ಮಂಗಳವಾರ ತನ್ನ ತಾಯಿಗೆ ತಿಳಿಸಿದ್ದಳು. ಆದರೆ, ಮನೆಯವರು ತಕ್ಷಣ ಈ ಬಗ್ಗೆ ದೂರು ದಾಖಲಿಸಿರಲಿಲ್ಲ. ಅತ್ಯಾಚಾರದ ಬಳಿಕವೂ ಗುರುವಾರದವರೆಗೆ ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಆದರೆ, ಆಕೆಯ ಮೇಲೆ ದೌರ್ಜನ್ಯ ನಡೆಸಿದ ಸಹಪಾಠಿಗಳು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದಾಗ ಇನ್ನಷ್ಟು ನೊಂದಿದ್ದಾಳೆ.
ಶುಕ್ರವಾರ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಶಾಲೆಯವರು ಆಕೆಯ ಗೈರು ಹಾಜರಾತಿಯ ಬಗ್ಗೆ ತಂದೆಗೆ ಮಾಹಿತಿ ನೀಡಿದ್ದಾರೆ. ಗಾಬರಿಗೊಂಡ ತಂದೆ ಮನೆಗೆ ಬಂದಾಗ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದ್ದಾರೆ.
ವರದಿಯೊಂದರ ಪ್ರಕಾರ, ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ವಿಷಯ ಗೊತ್ತಾದ ಬಳಿಕ, ಆಕೆಯ ತಂದೆ ಅದನ್ನು ಗೌಪ್ಯವಾಗಿ ಪರಿಹರಿಸಲು ಪ್ರಯತ್ನಿಸಿದ್ದರು. ಅತ್ಯಾಚಾರವೆಸಗಿದ ಬಾಲಕರನ್ನು ಮನೆಗೆ ಕರೆಸಿ ಮಾತುಕತೆಗೂ ಮುಂದಾಗಿದ್ದರು. ಕುಟುಂಬ ಮತ್ತು ಮಗಳ ಗೌರವ ಕಾಪಾಡಲು ಮುಂದಾಗಿದ್ದರು. ಮಗಳಿಗೂ ಧೈರ್ಯ ತುಂಬಿದ್ದರು. ಆದರೆ, ಈ ನಡುವೆ ಆರೋಪಿ ಬಾಲಕರ ಉಪಟಳ ಹೆಚ್ಚಾಗಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ‘ಜೈ ಶ್ರೀರಾಮ್’ ಕೂಗುವಂತೆ ಒತ್ತಾಯಿಸಿ ಮೂವರು ಮುಸ್ಲಿಂ ಮಕ್ಕಳಿಗೆ ಚಪ್ಪಲಿಯಿಂದ ಥಳಿತ : ಓರ್ವನ ಬಂಧನ


