ಆರು ವರ್ಷಗಳ ಹಿಂದೆ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಹೊತ್ತಿರುವ ಶರದ್ ಕಲಾಸ್ಕರ್, ಕರ್ನಾಟಕ ಪೊಲೀಸರ ಮುಂದೆ ಶಾಕಿಂಗ್ ಸತ್ಯಗಳನ್ನು ಹೊರಗೆಡವಿದ್ದಾನೆ. ‘ನಾನು ಎರಡು ಗುಂಡು ಹಾರಿಸಿ ಅವರನ್ನು ಕೊಂದೆ, ಒಂದು ತಲೆಯ ಹಿಂಬದಿಯಿಂದ ಮತ್ತೊಂದು ಅವರ ಬಲಗಣ್ಣಿನ ಮೇಲೆ’ ಎಂದು ತನ್ನ ಹದಿನಾಲ್ಕು ಪುಟಗಳ ತಪ್ಪೊಪ್ಪಿಗೆಯಲ್ಲಿ ತಿಳಿಸಿರುವುದಾಗಿ ಎನ್‌ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗೋವಿಂದ ಪನ್ಸಾರೆ ಮತ್ತು ಪತ್ರಕರ್ತೆ ಗೌರಿ ಲಂಕೇಶ್‌ರ ಹತ್ಯೆಯಲ್ಲೂ ಈತನ ಕೈವಾಡವಿರುವ ಕುರಿತು ತನಿಖೆ ನಡೆಯುತ್ತಿದೆ.
ಗೌರಿ ಲಂಕೇಶರ ಹತ್ಯೆಯ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಒಂದು ವರ್ಷದಿಂದ ಈತನ ವಿಚಾರಣೆ ನಡೆಸಲಾಗುತ್ತಿದೆ. ಅದಕ್ಕೂ ಮೊದಲು ಮಾಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳವು ಪಾಲ್ಗರ್ ಜಿಲ್ಲೆಯಲ್ಲಿರುವ ನರಸೋಪುರ್‌ನ ಅಕ್ರಮ ಪಿಸ್ತೂಲ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಆ ಪ್ರಕರಣದಲ್ಲಿ ಶರದ್ ಕಲಾಸ್ಕರ್‌ನನ್ನು ಬಂಧಿಸಿದ್ದರು. ಗೌರಿ ಹತ್ಯೆಯ ವಿಚಾರಣೆ ಸಮಯದಲ್ಲಿ ಆತ ದಾಬೋಲ್ಕರ್ ಹತ್ಯೆಯ ಗುಟ್ಟು ಬಿಚ್ಚಿಟ್ಟಿದ್ದಾನೆ.
ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಬೆಳಗಿನ ವಾಕಿಂಗ್ ವೇಳೆ ದಾಬೋಲ್ಕರ್ ಹತ್ಯೆ ಮಾಡಲಾಗಿತ್ತು. ಅದಾದ ನಂತರ ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶರ ಹತ್ಯೆಗಳಾಗಿದ್ದವು.
ಮಹಾರಾಷ್ಟ್ರ ಪೊಲೀಸರು ಆತ ಹೇಳಿದ ಗೌರಿ ಹತ್ಯೆ ಕುರಿಯ ಮಾಹಿತಿಗಳನ್ನು ಕರ್ನಾಟಕ ಪೊಲೀಸರ ಜೊತೆ ಹಂಚಿಕೊಂಡ ನಂತರ ಅವನನ್ನು ವಶಕ್ಕೆ ಪಡೆದ ರಾಜ್ಯದ ಎಸ್‌ಐಟಿ ತಂಡ ವಿಚಾರಣೆ ನಡೆಸುತ್ತಿದೆ.
ದಾಬೋಲ್ಕರ್ ಹತ್ಯೆಯ ಕುರಿತ ಘಟನೆಯನ್ನು ಮೆಲುಕು ಹಾಕಿರುವ ಆತ ಕೆಲ ಬಲಪಂಥೀಯ ನಾಯಕರು ತನ್ನನ್ನು ಸಂಪರ್ಕಿಸಿ ಸನಾತನ ಸಿದ್ಧಾಂತ, ಪಿಸ್ತೂಲಿನ ಬಳಕೆ ಮತ್ತು ಬಾಂಬ್ ತಯಾರಿಕೆಯ ತರಬೇತಿ ನೀಡಿದ್ದರು ಎಂದಿದ್ದಾನೆ. ವೀರೇಂದ್ರ ತಾವಡೆ (ಪ್ರಧಾನ ಸಂಚುಗಾರ ಆರೋಪ ಹೊತ್ತಿರುವವನು) ಎಂಬಾತ ನಾವು ಕೆಲ ದುಷ್ಟರಿಗೆ ಅಂತ್ಯ ಹಾಡಬೇಕಿದೆ ಎಂದು ತನ್ನ ಬಳಿ ಹೇಳಿ, ಹತ್ಯೆ ಮಾಡಲು ನನ್ನ ಬ್ರೈನ್‌ವಾಶ್ ಮಾಡಿದ ಎಂಬುದಾಗಿ ಶರದ್ ತಪ್ಪೊಪ್ಪಿಗೆಯಲ್ಲಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ತಾವಡೆ ಸಿಬಿಐ ಪೊಲೀಸರ ಕಸ್ಟಡಿಯಲ್ಲಿದ್ದಾನೆ.
ದಾಬೋಲ್ಕರ್‌ಗೆ ತಲೆಗೆ ಗುರಿಯಿಟ್ಟು ಗುಂಡು ಹಾರಿಸು, ಅವನು ಅಲ್ಲೇ ಬಿದ್ದು ಸಾಯಬೇಕು ಎಂಬ ಸೂಚನೆಯನ್ನು ತಾವಡೆ, ಶರದ್‌ಗೆ ಕೊಟ್ಟಿದ್ದನಂತೆ. ಆತ ಕೊಟ್ಟ ಸೂಚನೆಗಳಂತೆ ದಾಬೋಲ್ಕರ್ ಬೆಳಗಿನ ವಾಕಿಂಗ್‌ಗೆಂದು ಪುಣೆಯ ಓಂಕಾರೇಶ್ವರ್ ಸೇತುವೆ ಬಳಿ ಬಂದಾಗ ಶರದ್ ಕಲಾಸ್ಕರ್ ಗುಂಡು ಹಾರಿಸಿ ಹತ್ಯೆ ಮಾಡಿದ್ದ.
ತಪ್ಪೊಪ್ಪಿಗೆಯಲ್ಲಿ ತಿಳಿಸಿರುವಂತೆ ಶರದ್ ಕಲಾಸ್ಕರ್ ದಾಬೋಲ್ಕರ್‌ಗೆ ಹಿಂಬದಿಯಿಂದ ತಲೆಗೆ ಗುಂಡು ಹಾರಿಸಿದ್ದ. ಅವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವಂತೆಯೇ ಅವರ ಮೇಲೆ ಇನ್ನೊಂದು ಗುಂಡು ಹಾರಿಸಿದ್ದ. ಆದರೆ ಆ ಗುಂಡು ಹೊರಗೆ ಸಿಡಿಯದೆ ಪಿಸ್ತೂಲಿನೊಳಗೇ ಸ್ಟ್ರಕ್ ಆಗಿದ್ದರಿಂದ, ಗುಂಡನ್ನು ಹೊರತೆಗೆದು, ಮತ್ತೊಮ್ಮೆ ಅವರ ಬಲಗಣ್ಣಿನ ಮೇಲೆ ಹಣೆಗೆ ಗುಂಡು ಹಾರಿಸಿದ್ದ. ಆನಂತರ ಎರಡನೇ ಹಂತಕ ಸಚಿನ್ ಅಂಡುರೆ ಕೂಡಾ ಗುಂಡು ಹಾರಿಸಿದ್ದ ಎಂದು ತಪ್ಪೊಪ್ಪಿಗೆಯಲ್ಲಿ ಇರುವುದಾಗಿ ವರದಿ ಹೇಳುತ್ತಿದೆ.
ವೀರೇಂದ್ರ ತಾವಡೆಯೇ ನಂತರ ಶರದ್ ಕಲಾಸ್ಕರ್‌ನನ್ನು, ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾದ ಆರೋಪ ಹೊತ್ತು ಜೈಲಿನಲ್ಲಿರುವ ಅಮೋಲ್ ಕಾಳೆಗೆ ಪರಿಚಯ ಮಾಡಿಕೊಟ್ಟಿದ್ದ ಎಂಬ ಅಂಶವೂ ತಪ್ಪೊಪ್ಪಿಗೆಯಲ್ಲಿದೆ. ಗೌರಿ ಲಂಕೇಶ್‌ರ ಹತ್ಯೆ ಕುರಿತ ಪ್ಲ್ಯಾನ್ ಮಾಡಲಾದ ಹಲವು ಸಭೆಗಳಲ್ಲಿ ಭಾಗಿಯಾಗಿದ್ದಾಗಿ ಕಲಾಸ್ಕರ್ ಒಪ್ಪಿಕೊಂಡಿದ್ದಾನೆ.
2016ರ ಆಗಸ್ಟ್‌ನಲ್ಲಿ ಬೆಳಗಾಂನಲ್ಲಿ ಒಂದು ಸಭೆ ನಡೆಯಿತು. ಅಲ್ಲಿ ನಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿರುವವರು ಯಾರ್ಯಾಲರು ಎಂದು ಪಟ್ಟಿ ಮಾಡಲಾಯ್ತು. ಆ ಪಟ್ಟಿಯಲ್ಲಿ ಗೌರಿ ಲಂಕೇಶರ ಹೆಸರು ಮೊದಲ ಸ್ಥಾನ ಪಡೆದು, ಅವರನ್ನು ಕೊಲೆ ಮಾಡಲು ತೀರ್ಮಾನಿಸಲಾಯಿತು ಎಂದು ತಪ್ಪೊಪ್ಪಿಗೆಯಲ್ಲಿ ಆತ ಹೇಳಿದ್ದಾನೆ. ಒಂದು ವರ್ಷದ ನಂತರ 2017ರ ಆಗಸ್ಟನಲ್ಲಿ ಮತ್ತೊಂದು ಸಭೆ ನಡೆದು, ಅಲ್ಲಿ ಹತ್ಯೆಯ ಯೋಜನೆ ಅಂತಿಮಗೊಂಡಿತ್ತು. ಅದಾದ ಒಂದು ತಿಂಗಳಿಗೆ, ಸೆಪ್ಟಂಬರ್ ೫ರ ರಾತ್ರಿ ಅವರ ಮನೆಯ ಮುಂದೆಯೇ ಗೌರಿ ಲಂಕೇಶರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಈ ಬಂಧನಗಳು ನಡೆಯದಿದ್ದರೆ, ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಬಿ.ಜಿ.ಖೋಲ್ಸೆ ಪಾಟೀಲರನ್ನು ಹತ್ಯೆ ಮಾಡಲು ಯೋಜನೆ ರೂಪಿಸಲಾಗಿತ್ತು ಎಂಬ ಶಾಕಿಂಗ್ ಅಂಶವನ್ನೂ ತನ್ನ ತಪ್ಪೊಪ್ಪಿಗೆಯಲ್ಲಿ ಕಲಾಸ್ಕರ್ ಹೊರಗೆಡವಿದ್ದಾನೆ. 14 ಪುಟಗಳ ಆತನ ತಪ್ಪೊಪ್ಪಿಗೆ ತನಗೆ ಲಭ್ಯವಾಗಿದೆ ಎಂದು ಎನ್‌ಡಿಟಿವಿ ವರದಿ ಪ್ರಕಟಿಸಿದೆ.


