Homeಅಂಕಣಗಳುಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ.

- Advertisement -
- Advertisement -

ಕ್ರಿಕೆಟ್‌ನಲ್ಲಿ ಮೀಸಲಾತಿ ನಿಯಮ ಬಂದರೆ ಹೇಗಿರುತ್ತೆ?

* ದಲಿತ ಆಟಗಾರರಿಗೆ ಬೌಂಡರಿ ಲೈನ್ 15 ಗಜ ಕಡಿಮೆ ಇರುತ್ತೆ.

* ಬೌಂಡರಿಗಳನ್ನು ಸಿಕ್ಸರ್ ಎಂದು ಪರಿಗಣಿಸಲಾಗುತ್ತೆ.

* ಸಿಕ್ಸರ್‌ಗಳನ್ನು 8 ರನ್ ಎಂದು ಪರಿಗಣಿಸಲಾಗುತ್ತೆ.

* ದಲಿತ ಬೌಲರ್‌ಗಳಿಗೆ ಒಂದು ಓವರ್‌ನಲ್ಲಿ ಆರು ಬಾಲ್‌ಗಳ ಬದಲಾಗಿ ಐದು ಬಾಲ್‌ಗಳಿರುತ್ತವೆ.

* ದಲಿತ ಫೀಲ್ಡರ್‌ಗಳು ಪಿಚ್ ಕ್ಯಾಚ್ ಹಿಡಿಯಬಹುದು.

ಇಂತಹದ್ದೊಂದು SMS ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಹಲವರು ಆನಂದಿಸುತ್ತಿದ್ದಾರೆ ಕೂಡ. ಆದರೆ ಈ SMSನಲ್ಲಿ ಮೇಲ್ವರ್ಗದವರಿಗೆ ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ ಎಂತಹ ತಾತ್ಸಾರ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ SMSನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ’ದಲಿತರಲ್ಲಿ ಯಾವುದೇ ರೀತಿಯ ಪ್ರತಿಭೆ ಇಲ್ಲ; ಅವರಿಗೆ ಭಾರತದ ಕ್ರಿಕೆಟ್ ಟೀಮ್‌ನಲ್ಲಿ ಮೀಸಲಾತಿ ಕೊಟ್ಟು ಜಾಗ ಕಲ್ಪಿಸಿದರೂ ಅವರಿಗೆ ವಿಶೇಷ ರಿಯಾಯಿತಿಗಳನ್ನು ತೋರಿಸಬೇಕು’ ಎಂಬುದೇ ಆಗಿದೆ.

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಇವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ-ಅಂದರೆ ಸಂವಿಧಾನಬಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ.

ಒಂದುಕ್ಷಣ ಶತಮಾನಗಳ ಕಾಲದಿಂದ ಈ ದೇಶವನ್ನು ಆಳುತ್ತಿರುವ ಮೇಲುಜಾತಿ ಮತ್ತು ಮೇಲುವರ್ಗದವರಲ್ಲೇ ಪ್ರತಿಭೆ ಇದೆ ಎಂದು ಭಾವಿಸೋಣ. ಅದು ಸತ್ಯವಾಗಿದ್ದರೆ ಯಾಕೆ ನಮ್ಮ ಈ ಬೃಹತ್ ದೇಶ ಬ್ರಿಟಿಷರ ವಶವಾಯಿತು? ಯಾಕೆ ಇವತ್ತು ಭಾರತ ಅತಿ ಭ್ರಷ್ಟ ರಾಷ್ಟ್ರಗಳಲ್ಲಿ ಒಂದಾಗಿದೆ? ಯಾಕೆ ಇಲ್ಲಿ ಇನ್ನೂ ಬಡತನ, ಅನಾರೋಗ್ಯ, ಹಸಿವು ತಾಂಡವವಾಡುತ್ತಿದೆ? ಇದಕ್ಕೆಲ್ಲ ಕಾರಣ ಮೇಲುಜಾತಿ, ಮೇಲುವರ್ಗದವರಲ್ಲಿ ಕಿಂಚಿತ್ತೂ ಪ್ರತಿಭೆ ಇಲ್ಲದಿರುವುದು ಎಂದು ತರ್ಕಿಸಬಹುದಲ್ಲವೇ? ತಾವೇ ಉತ್ತಮರು, ಪ್ರತಿಭಾವಂತರು ಎಂಬ ಮೇಲುವರ್ಗದವರ ಕಲ್ಪನೆ ಈ ವಾಸ್ತವಾಂಶಗಳ ಎದುರು ಇನ್ನು ಜೀವಂತವಾಗಿರುವುದೇ ಅವರ ಒಣ ತಿಮಿರಿಗೆ ಸಾಕ್ಷಿ.

ಇತಿಹಾಸದಲ್ಲೂ ಅಷ್ಟೆ. ವೇದ, ಪುರಾಣ ಇತ್ಯಾದಿ ನಿರುಪಯುಕ್ತ ಜ್ಞಾನಗಳ ಭಂಡಾರಗಳಾಗಿದ್ದ ಬ್ರಾಹ್ಮಣಶಾಹಿ ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮಾಡಿದ್ದೇನು? ಧೀರ ಯೋಧರಾದ ಕ್ಷತ್ರಿಯರು ಈ ದೇಶವನ್ನು ವಸಾಹತುಗಳಿಂದ ರಕ್ಷಿಸಿದ ಪರಿ ಎಂತಹದ್ದು? ಲೆಕ್ಕಾಚಾರದಲ್ಲಿ ನಿಸ್ಸೀಮರಾದ ವೈಶ್ಯರು ಇಲ್ಲಿನ ಜನರ ಸ್ವಾವಲಂಬನೆಗೆ ಕಡಿದಿದ್ದಾದರೂ ಏನನ್ನು? ವೇದಗಳ ಹೆಸರಲ್ಲಿ ಜನರ ಶೋಷಣೆ, ರಕ್ಷಣೆ ಹೆಸರಲ್ಲಿ ದಳ್ಳುರಿ, ವ್ಯವಹಾರದ ಹೆಸರಲ್ಲಿ ಜನರಿಗೆ ಮೋಸ ಇದೇ ಈ ಪ್ರತಿಭಾವಂತರ ಆಸಲಿ ಕೊಡುಗೆ!

ಪ್ರತಿಭೆ ದಕ್ಕುವುದು ಜಾತಿಯಿಂದ ಎಂಬುದಂತೂ ಶುದ್ಧ ಸುಳ್ಳು, ಬದಲಾಗಿ ಬೌದ್ಧಿಕ-ಭೌತಿಕ ಸಂಪನ್ಮೂಲಗಳನ್ನು ಪಡೆಯುವುದರಿಂದ ಪ್ರತಿಭೆ ಅರಳುತ್ತದೆ. ಆದರೆ ಹಿಂದೆ ಈ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಸಿಗದಂತೆ ನೋಡಿಕೊಳ್ಳುವುದಕ್ಕೆ ಜಾತಿವ್ಯವಸ್ಥೆ ಇದ್ದರೆ, ಇವತ್ತಿಗೂ ಆ ಜಾತಿವ್ಯವಸ್ಥೆಯ ’ಸ್ವಹಿತಾಸಕ್ತಿಗಳು’ ಇವೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇವತ್ತಿಗೂ ಮೀಸಲಾತಿಯ ಅವಕಾಶವನ್ನು ಪಡೆದು ಮೇಲೆ ಬಂದವರ ಪ್ರಮಾಣ ಅತಿಕಡಿಮೆ ಇದೆ. ಸರ್ಕಾರವೇನೋ ತನ್ನ ಕಚೇರಿಗಳಲ್ಲಿ, ಸಾರ್ವಜನಿಕ ಉದ್ಯಮಗಳಲ್ಲಿ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ಆಧಾರದ ಮೇಲೆ ಹುದ್ದೆಗಳನ್ನು ನೀಡುತ್ತೆ. ಆದರೆ ಈಗಲೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹುದ್ದೆಗಳು, ಸಾರ್ವಜನಿಕ ಉದ್ಯಮಗಳಲ್ಲಿ ಶೇ.80ರಷ್ಟು ಮೀಸಲು ಹುದ್ದೆಗಳು ಖಾಲಿ ಬಿದ್ದಿರುತ್ತ. ಅಂದರೆ ಏನರ್ಥ? ಆರ್ಥ ಇಷ್ಟೇ: ಮೀಸಲಾತಿ ಆಧಾರದ ಮೇಲೆ ಕೆಲಸ ನೀಡಬಹುದು, ಆದರೆ ಆ ಕೆಲಸಕ್ಕೆ ಸೇರಲು ಅವರಿಗೆ ಬೇಕಾದ ಶಿಕ್ಷಣವನ್ನು, ಆ ಶಿಕ್ಷಣವನ್ನು ಪಡೆಯುವಷ್ಟು ಸೌಲತ್ತುಗಳನ್ನು ಸರ್ಕಾರ ಅವರಿಗೆ ನೀಡಿಲ್ಲ. ಆದು ದಲಿತ, ಹಿಂದುಳಿದವರ ತಪ್ಪಲ್ಲ, ಬದಲಾಗಿ ವ್ಯವಸ್ಥೆ ಎಸಗಿರುವ ಘೋರ ಅಪರಾಧ. ಇದನ್ನು ಅರಿಯದ ಮೇಲುವರ್ಗ ಹಿಂದುಳಿದವರ ವಿರುದ್ಧ ಕೆಂಡ ಕಾರುತ್ತಿದೆ.

ಮೊನ್ನೆ, ಮೀಸಲಾತಿಯನ್ನು ವಿರೋಧಿಸುವ ಆಧ್ಯಾಪಕಿಯೊಬ್ಬರು (ಅವರೂ ಮೇಲ್ಜಾತಿ ಲಿಂಗವಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ) ತಮ್ಮ ಭಂಡ ವಾದವನ್ನು ಮಂಡಿಸುತ್ತಾ “ನಾವ್ಯಾಕ್ರಿ ಅವರಿಗೆ ಬಿಟ್ಟುಕೊಡಬೇಕು? ಪ್ರತಿಭೆ ಇದ್ದರೆ ಅವರೇ ಮುಂದೆ ಬರುತ್ತಾರೆ” ಎಂದರು. ಅಷ್ಟೇ ಅಲ್ಲ “ವಿಶ್ವೇಶ್ವರಯ್ಯ ಬಡವರಾಗಿದ್ದರೂ ಬೀದಿದೀಪದ ಅಡಿ ಓದುತ್ತಾ ಮುಂದೆ ಬರಲಿಲ್ಲವೇ?” ಅಂತ ಪ್ರಶ್ನಿಸಿದರು. “ನಿಮಗೆ ಉತ್ತರವಾಗಿ ನಮ್ಮ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಹಾಗೂ ಅಬ್ದುಲ್ ಕಲಾಂರವರ ಉದಾಹರಣೆ ನೀಡಬಲ್ಲೆ. ಈ ದಲಿತ, ಮುಸ್ಲಿಮರಲ್ಲೂ ಪ್ರತಿಭೆ ಇದ್ದದ್ದಕ್ಕೇ ಅವರು ಮುಂದೆ ಬಂದಿದ್ದು. ಆದರೆ ಆ ವರ್ಗದವರಲ್ಲಿ ಪ್ರತಿಭೆ ಇಲ್ಲ ಅಂತ ಹೇಗೆ ಹೇಳುತ್ತೀರಿ? ಸೂಕ್ತ ಅವಕಾಶಗಳನ್ನು ನೀಡಿದರೆ, ಲಕ್ಷಾಂತರ ನಾರಾಯಣ್‌ಗಳೂ, ಕಲಾಂಗಳೂ ಬೆಳಕಿಗೆ ಬರುತ್ತಾರೆ. ಮೇಲುಜಾತಿಯವರ ಆಳ್ವಿಕೆಯಲ್ಲಿ ಈ ದೇಶ ಉದ್ಧಾರ ಆಗಿದ್ದು ಅಷ್ಟಕಷ್ಟೇ. ಈಗ ಇವರಿಗೆ ಅವಕಾಶ ಕೊಟ್ಟು ನೋಡೋಣ. ಆವರಾದರೂ ಈ ದೇಶವನ್ನು ಉಳಿಸಬಹುದು” ಅಂದೆ. “ನಾವ್ಯಾಕೆ ಕೊಡಬೇಕು” ಎಂದು ಹೇಳಿದ್ದ ಅವರಲ್ಲಿ “ನಾವು” ಎಂಬ ಸರ್ವಾಧಿಕಾರಿ ಧೋರಣೆ ಮತ್ತು “ಕೊಡಬೇಕು” ಎಂಬ ಪದದಲ್ಲಿ ಅಸಡ್ಡೆ ಎಷ್ಟಿತ್ತೆಂದರೆ ಅವರೊಂದಿಗೆ ವಾದ ಮಾಡುವುದೂ ನಿರರ್ಥಕ ಎನ್ನಿಸಿ ಸುಮ್ಮನಾದೆ.

ಈ ವರ್ಗದ ಧಿಮಾಕು ಎಂತಹದ್ದೆಂದರೆ, ಅವರಿಗಿಂತಲೂ ಆಪಾರ ಸಂಖ್ಯೆಯಲ್ಲಿರುವ ಹಿಂದುಳಿದವರು ಮತ್ತು ದಲಿತರಿಂದ ತೆರಿಗೆ ಪಡೆಯುವ ಸರ್ಕಾರ ಅವರಿಗೆ ತನ್ನ ಶಾಲಾ, ಕಾಲೇಜುಗಳಲ್ಲಿ ಮೀಸಲಾತಿ ನೀಡಿದರೆ ವಿರೋಧಿಸುತ್ತಾರೆ. “ಪ್ರತಿಭೆ ಇಲ್ಲದವರಿಗೆ ಇಲ್ಲಿ ಯಾಕೆ ಜಾಗ?” ಎಂದು ಕೆಂಡ ಕಾರುತ್ತಾರೆ. ಆದರೆ, ಅವರ ವರ್ಗಕ್ಕೇ ಸೇರಿರುವ ಜನ ಬಡವರ ಭೂಮಿ ದೋಚಿ, ಸರ್ಕಾರದ ಸವಲತ್ತುಗಳನ್ನು ಪಡೆದು ಕ್ಯಾಪಿಟೇಶನ್ ಕಾಲೇಜಿನ ಹೆಸರಲ್ಲಿ ಪ್ರತಿಭೆ ಇಲ್ಲದ ಹಣವಂತರಿಗೆ ಸೀಟು ಕೊಡುವುದನ್ನು ಒಮ್ಮೆಯೂ ಪ್ರಶ್ನಿಸುವುದಿಲ್ಲ. “ಏನ್ರೀ, ಪ್ರತಿಭೆ ಇಲ್ಲದವರೆಲ್ಲ ಈ ಶಿಕ್ಷಣ ಅಂಗಡಿಗಳಲ್ಲಿ ಡಾಕ್ಟರ್‌ರರೂ, ಇಂಜಿನಿಯರೂ ಆಗ್ತಿದ್ದಾರಲ್ರಿ?” ಎಂದು ಪ್ರತಿಭಟಿಸುವುದೂ ಇಲ್ಲ.

ಇಲ್ಲಿ ಕರ್ನಾಟಕದ ರಾಜಕೀಯ ವಲಯದಲ್ಲಿನ ಒಂದೆರಡು ಉದಾಹರಣೆಗಳನ್ನು ಕೊಡಬಹುದು, ಎಲ್ಲರಿಗೂ ಗೊತ್ತಿರುವಂತೆ ಈ ರಾಜ್ಯ ಹೆಚ್ಚು ಲಿಂಗಾಯತ, ಹಲವು ಒಕ್ಕಲಿಗ, ಎರಡು ಬ್ರಾಹ್ಮಣ ಮತ್ತು ಕೆಲವು ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲೆಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ದಕ್ಷತೆಯಿಂದ ದುಡಿದವರೆಂದರೆ ಹಿಂದುಳಿದ ವರ್ಗದ ದೇವರಾಜ ಅರಸು ಮತ್ತು ವೀರಪ್ಪ ಮೊಯ್ಲಿ ಮಾತ್ರ. ಹಾಗೆಯೇ ರಾಮಕೃಷ್ಣ ಹೆಗಡೆ ಅಧಿಕಾರಾವಧಿಗೆ ವರ್ಚಸ್ಸು ತಂದು ಕೊಟ್ಟವರು ಮುಸ್ಲಿಮರಾಗಿದ್ದ ನಜೀರ್ ಸಾಬರು. ಮಿಕ್ಕಂತೆ ಎಲ್ಲಾ ಮೇಲುವರ್ಗದ, ಮೇಲುಜಾತಿಯ ಮುಖ್ಯಮಂತ್ರಿಗಳು ಮಾಡಿದ್ದು ಬರೀ ತೌಡು ಕುಟ್ಟುವ ಕೆಲಸ!

ಆದ್ದರಿಂದ, ಹಿಂದುಳಿದ-ದಲಿತ ಜಾತಿಗಳಿಗೆ ಪ್ರತಿಭೆ ಇಲ್ಲ ಎಂದು ಹೇಳುವುದು ಎಷ್ಟು ಸುಳ್ಳೋ, ಹಾಗೆಯೇ ಈ ದೇಶದಲ್ಲಿ ಜಾತಿ ಆಧಾರದಲ್ಲಿ ಸಾಮಾಜಿಕ ಆರ್ಥಿಕ ವಂಚನೆ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ. ಮೀಸಲಾತಿ ಎಂಬ ಸಾಧನದ ಮೂಲಕ ಈ ಜಾತಿ ಆಧಾರಿತ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನ ಇದೆಯೇ ಹೊರತು ಪ್ರತಿಭೆ ಇಲ್ಲದಿದ್ದರೂ ನೀಡುವ ವಿಶೇಷ ಸವಲತ್ತೇನಲ್ಲ.

(ಇದು ಮೇ 17, 2016ರಂದು ಗೌರಿ ಲಂಕೇಶ್‌ರವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ)


ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...