ಕೈಗಾರಿಕೋದ್ಯಮಿ ಗೌತಮ್ ಅದಾನಿ ಭಾನುವಾರ (ಜ.12) ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರನ್ನು ಭೇಟಿ ಮಾಡಿ ಅದಾನಿ ಗ್ರೂಪ್‌ನ ಇಂಧನ ಮತ್ತು ಸಿಮೆಂಟ್ ಯೋಜನೆಗಳಲ್ಲಿ ₹65,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಛತ್ತೀಸ್‌ಗಢ ರಾಜಧಾನಿ ರಾಯ್‌ಪುರದಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಅದಾನಿ ಅವರು ಸಾಯಿ ಅವರನ್ನು ಭೇಟಿಯಾದರು ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸಿಎಂ ಭೇಟಿ ವೇಳೆ, ಅದಾನಿ ಕಂಪನಿಯು ಛತ್ತೀಸ್‌ಗಢದ ರಾಯ್‌ಪುರ, ಕೊರ್ಬಾ ಮತ್ತು ರಾಯ್‌ಗಢದಲ್ಲಿರುವ ತನ್ನ ವಿದ್ಯುತ್ ಸ್ಥಾವರಗಳನ್ನು ವಿಸ್ತರಿಸಲು ₹60,000 ಕೋಟಿ ಹೂಡಿಕೆ ಮಾಡುವುದಾಗಿ ಗೌತಮ್ ಅದಾನಿ ಘೋಷಿಸಿದ್ದಾರೆ. ಈ ವಿಸ್ತರಣೆಯು ಛತ್ತೀಸ್‌ಗಢದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 6,120 ಮೆಗಾವ್ಯಾಟ್‌ಗಳಷ್ಟು ಹೆಚ್ಚಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಹೆಚ್ಚುವರಿಯಾಗಿ, ಗೌತಮ್ ಅದಾನಿಯವರು ರಾಜ್ಯದಲ್ಲಿನ ತಮ್ಮ ಸಮೂಹದ ಸಿಮೆಂಟ್ ಸ್ಥಾವರಗಳ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ₹5,000 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ, ಅದಾನಿ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ಕೌಶಲ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಉಪಕ್ರಮಗಳನ್ನು ಬೆಂಬಲಿಸಲು ರಾಜ್ಯ ಸರ್ಕಾರಕ್ಕೆ ₹10,000 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿಕೆ ತಿಳಿಸಿದೆ.
ರಕ್ಷಣಾ ಸಂಬಂಧಿತ ಉಪಕರಣಗಳ ತಯಾರಿಕೆ ಮತ್ತು ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಛತ್ತೀಸ್‌ಗಢದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಸ್ಥಾಪಿಸುವಲ್ಲಿ ಸಂಭಾವ್ಯ ಸಹಯೋಗಗಳ ಬಗ್ಗೆಯೂ ಗೌಮ್ ಅದಾನಿ ಮತ್ತು ಸಿಎಂ ವಿಷ್ಣು ದೇವ್ ಸಾಯಿ ನಡುವೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಐವರು ನಕ್ಸಲರ ಹತ್ಯೆ
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಯೊಂದಿಗೆ ಭಾನುವಾರ (ಜ.12) ನಡೆದ ಗುಂಡಿನ ಚಕಮಕಿಯಲ್ಲಿ ಐವರು ನಕ್ಸಲರು ಹತರಾಗಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಎಂದು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಈ ವರ್ಷ ಇದುವರೆಗೆ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 14 ಮಂದಿ ನಕ್ಸಲರು ಹತರಾಗಿದ್ದಾರೆ.
ಭದ್ರತಾ ಪಡೆಯ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದ ಅರಣ್ಯದಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ ವಲಯ ಐಜಿಪಿ ಸುಂದರರಾಜ್ ಪಿ ತಿಳಿಸಿದ್ದಾರೆ.
ಮಣಿಪುರ| ಉಗ್ರಗಾಮಿ ಗುಂಪಿಗೆ ₹6 ಕೋಟಿ ನೀಡಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್


