ಗೌತಮ್ ನೌಲಾಖ ಅವರು 1980ರ ದಶಕದಲ್ಲಿ ’ಇಂಡಿಪೆಂಡೆಂಟ್ ಇನಿಷಿಯೇಟಿವ್ ಆನ್ ಕಾಶ್ಮೀರ್’ ಎಂಬ ಒಂದು ಅಭಿಯಾನವನ್ನು ಆರಂಭಿಸಿದ್ದರು. ಆಗಲೇ ನಾವು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಶ್ಮೀರದ ವಿಷಯದಲ್ಲಿ ಸ್ವಲ್ಪ ಮಟ್ಟಿನ ಗಂಭೀರ ಚರ್ಚೆಯನ್ನು ಮಾಡಿದ್ದು. ನಮ್ಮಲ್ಲಿ ಅನೇಕರು ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯನ್ನು ಹೇಗೆ ರೂಪಿಸುವುದು ಎಂಬ ಬಗ್ಗೆಯೇ ತುಂಬಾ ಗೊಂದಲದಲ್ಲಿದ್ದೆವು ಮತ್ತು ಬಹುತೇಕರಿಗೆ ಐತಿಹಾಸಿಕ ವಾಸ್ತವಾಂಶಗಳ ಬಗ್ಗೆ ತಿಳಿದಿರಲಿಲ್ಲ. ಆಗ ’ಇಕನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ’ಯ ಜೊತೆಗಿದ್ದ ಗೌತಮ್, ಚರ್ಚೆಯ ಕೇಂದ್ರವಾಗಿದ್ದ ಸ್ವಾಯತ್ತತೆಯ ರಾಜಕೀಯ ಪ್ರಶ್ನೆಯನ್ನು ಸ್ಪಷ್ಟವಾಗಿ ವಿವರಿಸಬಲ್ಲ ಕೆಲವರಲ್ಲಿ ಒಬ್ಬರಾಗಿದ್ದರು. ಗೌತಮ್ ಈ ಸಮಸ್ಯೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ಕೆಲವೇ ಕೆಲವರಲ್ಲಿ ಒಬ್ಬರಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನೆಲಮಟ್ಟದ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ತನಿಖೆ ಮಾಡಿ, ಭಾರತದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಚಿಂತನೆಯನ್ನು ರೂಪಿಸಿದ ಹಲವಾರು ಸತ್ಯಶೋಧನಾ ವರದಿಗಳನ್ನು ರೂಪಿಸಿ ನೀಡಿದ್ದರು. ಅದು ಅಲ್ಲಿನ ನಾಡಿ ಮಿಡಿತವನ್ನು ಅರ್ಥಮಾಡಿಕೊಳ್ಳಲು ತವಕಿಸುತ್ತಿದ್ದ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆಯ ಜೊತೆಗೆ ಐಕಮತ್ಯದ ಶಪಥ ಮಾಡಲು ಉತ್ಸುಕರಾಗಿದ್ದ ಎಲ್ಲರಿಗೂ ನೆರವಾಯಿತು.
ಹಿಂಸೆ ಮತ್ತು ಪ್ರತಿ ಹಿಂಸೆ ಹೆಚ್ಚುತ್ತಿದ್ದಂತೆ ಮತ್ತು ಭದ್ರತಾ ಪಡೆಗಳ ದಬ್ಬಾಳಿಕೆ ಮತ್ತು ಉಗ್ರಗಾಮಿಗಳ ದಾಳಿಗಳು ಬಿಡದೆ ಮುಂದುವರಿದಂತೆ, ಗೌತಮ್ ಸೇರಿದಂತೆ, ಭಾರತ ಹಾಗೂ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಹಕ್ಕುಗಳ ಕಾರ್ಯಕರ್ತರು ವಿವೇಕದ ಧ್ವನಿಗಳಾಗಿದ್ದುದು ಮಾತ್ರವಲ್ಲ; ಮಾನವ ಹಕ್ಕುಗಳಿಗೆ ಗೌರವ ನೀಡುವುದು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಅಗತ್ಯವನ್ನು ಒತ್ತಿಹೇಳುವ ಧ್ವನಿಗಳಾಗಿದ್ದರು. ಗೌತಮ್ ಮತ್ತು ಈ ಪ್ರಜಾಸತ್ತಾತ್ಮಕ ಹಕ್ಕುಗಳ ಪರವಾದ ಶಕ್ತಿಗಳು ಜಮ್ಮು ಮತ್ತು ಕಾಶ್ಮೀರದ ಹಾಗೂ ಉಳಿದ ಭಾರತದ ಜನರ ನಡುವಿನ ಅತ್ಯಂತ ಗಟ್ಟಿಯಾದ ಕೊಂಡಿಯಾಗಿದ್ದರು. ಇಂದು ನಾವು ನೋಡುವಂತೆ, ಈ ಐಕಮತ್ಯವು ವರ್ಷಗಳು ಕಳೆದಂತೆ ಬೆಳೆಯುತ್ತಲೇ ಬಂದಿದೆ.
ಇದನ್ನೂ ಓದಿ: ಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್
ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರವಾದ ದಮನದ ನಡುವೆ, ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಯುತ್ತಿರುವಾಗ, ಗೌತಮ್ ನೌಲಾಖ ಅವರು ಭೀಮಾ ಕೋರೆಗಾಂವ್-12’ರಲ್ಲಿ (ಕೆಲ ದಿನಗಳ ಹಿಂದೆ ಬಂಧಿತರಾದ ದಿಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು ಹನ್ನೆರಡನೆಯವರಾದರು) ಒಬ್ಬರಾಗಿ ಪುಣೆಯ ಜೈಲಿನಲ್ಲಿದ್ದಾರೆ. ಅವರು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಪ್ರಸಿದ್ಧ ಕವಿಗಳು, ವಕೀಲರು, ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರೆ. ಭಾರತದ ಪ್ರಭುತ್ವ ಮಾನವ ಹಕ್ಕು ಕಾರ್ಯಕರ್ತರಿಗೆ ಎಷ್ಟು ಬೆದರುತ್ತಿದೆ ಎಂದು ತೋರಿಸುವ ಈ ಸುಳ್ಳು ಪ್ರಕರಣವು ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ- ಅತಾರ್ಕಿಕ ನಿರಂಕುಶ ಬಂಧನಗಳು ಮತ್ತು ಕೋವಿಡ್ ಸೋಂಕಿನ ಹೊರತಾಗಿಯೂ ಜಾಮೀನು ನಿರಾಕರಣೆಯ ವಿರುದ್ಧ- ಬಲವಾದ ಪ್ರತಿಭಟನೆಗಳನ್ನು ಪ್ರೇರೇಪಿಸಿದೆ.

ಗೌತಮ್ ನೌಲಾಖ ಮತ್ತವರ ಸಂಗಾತಿಗಳು ಮಾಡಿರುವ ಕೆಲಸಗಳು ಭಾರತ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ಹೋರಾಟಗಳಿಗೆ ಈಗಲೂ ಸ್ಫೂರ್ತಿ ನೀಡುತ್ತಿವೆ. ನಾನು ಪಿಯುಡಿಆರ್ (ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್, ದಿಲ್ಲಿ) ಮತ್ತು ಪಿಐಪಿಎಫ್‌ಪಿಡಿ (ಪಾಕಿಸ್ತಾನ್- ಇಂಡಿಯಾ ಪೀಪಲ್ಸ್ ಫೋರಂ ಫಾರ್ ಪೀಸ್ ಎಂಡ್ ಡೆಮೋಕ್ರಸಿ) ಸಂಘಟನೆಗಳಲ್ಲಿ ಗೌತಮ್ ಜೊತೆ ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶ ಹೊಂದಿದ್ದೆ. ತಮ್ಮ ದೃಢ ಸಂಕಲ್ಪ, ಉದ್ದೇಶದ ಸ್ಪಷ್ಟತೆ ಮತ್ತು ಧೈರ್ಯದಿಂದ ಒಂದು ತಲೆಮಾರಿನ ಪ್ರಜಾಸತ್ತಾತ್ಮಕ ಮನೋಭಾವದ ಯುವಜನರನ್ನು ಪ್ರೇರೇಪಿಸುತ್ತಲೇ ಇರುವ ಒಂದು ಪೀಳಿಗೆಯ ಸಾಮಾಜಿಕ ಕಾರ್ಯಕರ್ತ ಬುದ್ಧಿಜೀವಿಗಳನ್ನು ಗೌತಮ್ ಪ್ರತಿನಿಧಿಸುತ್ತಾರೆ.
ಸವಾಲುಗಳ ಹೊರತಾಗಿಯೂ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಮತ್ತು ಗೌತಮ್ ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಎಲ್ಲಾ 12 ಮಂದಿ ಹೊರಬಂದು ನಮ್ಮನ್ನು ಮುನ್ನಡೆಸಲು ಖಂಡಿತವಾಗಿಯೂ ನಮ್ಮ ನಡುವೆ ಇರುತ್ತಾರೆ.
ಐಕಮತ್ಯದೊಂದಿಗೆ,
- ಪ್ರೊ. ಮನೋರಂಜನ್ ಮೊಹಂತಿ, ಪ್ರಾಧ್ಯಾಪಕ, ಸಂಶೋಧಕ ಮತ್ತು ಲೇಖಕ. ರಾಜಕೀಯ ಶಾಸ್ತ್ರಜ್ಞರಾಗಿ, ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಹಲವು ಚಳವಳಿಗಳ ಸಂಗಾತಿ ಮೊಹಂತಿಯವರು. ದೆಹಲಿ ವಿಶ್ವವಿದ್ಯಾಲಯ ಸುಧೀರ್ಘ ಸೇವೆ ಸಲ್ಲಿಸಿರುವುದಲ್ಲದೆ, ವಿಶ್ವದ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚೀನಾ ದೇಶದ ಬಗ್ಗೆ ವಿದ್ವತ್ತು ಹೊಂದಿರುವ ಮೊಹಂತಿ ಅವರು ಚೈನಾ ಅಟ್ ಎ ಟರ್ನಿಂಗ್ ಪಾಯಿಂಟ್, ಕಾಂಟೆಂಪೊರರಿ ಇಂಡಿಯನ್ ಪೊಲಿಟಿಕಲ್ ಥಿಯರಿ ಸೇರಿದಂತೆ ಹಲವು ಪುಸ್ತಕಗಳ ಲೇಖಕರು.
ಅನುವಾದ: ನಿಖಿಲ್ ಕೋಲ್ಪೆ
ಇದನ್ನೂ ಓದಿ: ಎಷ್ಟೋ ಆದಿವಾಸಿ ಕುಟುಂಬಗಳ ಪ್ರೀತಿಯ ಪುತ್ರ ಮಹೇಶ್ ರಾವುತ್ ಬಂಧನ ನ್ಯಾಯವೇ?


