ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ಗಾಝಾದಲ್ಲಿ ಕನಿಷ್ಠ ಎಂಟು ಜನರನ್ನು ಹತ್ಯೆಗೈದಿದೆ. ಹಸಿವು, ಅಪೌಷ್ಠಿಕತೆಯಿಂದ ಸಾವೀಗೀಡಾದವರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಈ ಪೈಕಿ 100 ಮಂದಿ ಮಕ್ಕಳು ಎಂದು ಅಲ್ ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಝಾ ನಗರವನ್ನು ವಶಪಡಿಸಿಕೊಳ್ಳುವ ಮತ್ತು ಸುಮಾರು ಒಂದು ಮಿಲಿಯನ್ ಪ್ಯಾಲೆಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸುವ ಇಸ್ರೇಲ್‌ನ ಯೋಜನೆಯ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಪರೂಪದ ವಾರಾಂತ್ಯದ ಅಧಿವೇಶನವನ್ನು ನಡೆಸಲಿದೆ.
ಈ ನಡುವೆ ಬ್ಯೂನಸ್ ಐರಿಸ್‌ನಿಂದ ಲಂಡನ್ ಮತ್ತು ಇಸ್ತಾನ್‌ಬುಲ್‌ವರೆಗೆ ಪ್ರಪಂಚದಾದ್ಯಂತದ ಪ್ರಮುಖ ನಗರಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದು, ವಿಶ್ವ ನಾಯಕರು ಕ್ರಮ ಕೈಗೊಳ್ಳುವಂತೆ ಮತ್ತು ಗಾಝಾ ಮೇಲಿನ ಇಸ್ರೇಲ್‌ನ ಆಕ್ರಮಣವನ್ನು ಕೊನೆಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಮತ್ತೊಂದೆಡೆ, ಇಸ್ರೇಲ್ ಸೇನೆಯು ಈ ವರ್ಷದ ಆರಂಭದಿಂದ ಆಕ್ರಮಿತ ಪಶ್ಚಿಮ ದಂಡೆಯ ಉತ್ತರ ಭಾಗಗಳಲ್ಲಿನ ಹಲವಾರು ನಿರಾಶ್ರಿತರ ಶಿಬಿರಗಳ ಮೇಲೆ ತೀವ್ರವಾದ ದಾಳಿ ನಡೆಸುತ್ತಿದೆ. ಇದರಿಂದ ನೂರಾರು ಜನರು ಸಾವಿಗೀಡಾಗಿದ್ದಾರೆ. ಹತ್ತಾರು ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ. ದಾಳಿ ಇನ್ನೂ ಮುಂದುವರಿಯುತ್ತಿದೆ.
ಈ ಅಮಾನವೀಯ ಕೃತ್ಯವನ್ನು ಭದ್ರತಾ ಯಶಸ್ಸು ಎಂದು ಹೇಳಿಕೊಂಡಿರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, “ಜೆನಿನ್, ತುಲ್ಕರೆಮ್ ಮತ್ತು ನೂರ್ ಶಮ್ಸ್ ಸೇರಿದಂತೆ ಪಶ್ಚಿಮ ದಂಡೆಯ ನಿರಾಶ್ರಿತರ ಶಿಬಿರಗಳಲ್ಲಿ ನಮ್ಮ ಮಿಲಿಟರಿ ಕಾರ್ಯಾಚರಣೆಯು ಸಕ್ರಿಯವಾಗಿರಲಿದೆ ಎಂದಿದ್ದಾರೆ.
ಇನ್ನೊಂದೆಡೆ ಪ್ಯಾಲೆಸ್ತೀನ್ ಪ್ರಾಧಿಕಾರವನ್ನು ರದ್ದುಗೊಳಿಸುವಂತೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಪ್ಯಾಲೆಸ್ತೀನ್ ಪ್ರಾಧಿಕಾರವನ್ನು ತೆಗೆದು ಹಾಕಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳುವಂತೆ ನಾನು ಪ್ರಧಾನಿ ನೆತನ್ಯಾಹು ಅವರಿಗೆ ಮನವಿ ಮಾಡುತ್ತೇನೆ” ಎಂದಿದ್ದಾರೆ.
“ಇದು ಭಯೋತ್ಪಾದಕ ಅಬು ಮಜೆನ್‌ನ ‘ಪ್ಯಾಲೆಸ್ತೀನ್ ರಾಷ್ಟ್ರದ ಕಲ್ಪನೆಗಳಿಗೆ ನಮ್ಮ ಪ್ರತಿಕ್ರಿಯೆಯಾಗಿರಬೇಕು” ಎಂದು ಹೇಳಿದ್ದಾರೆ.
ಅಲ್ಟ್ರಾನ್ಯಾಷನಲಿಸ್ಟ್ ಯಹೂದಿ ಪವರ್ ಪಾರ್ಟಿಯ ಮುಖ್ಯಸ್ಥರಾಗಿರುವ ಬೆನ್-ಗ್ವಿರ್, ಈ ಹಿಂದೆ ಗಾಝಾದ ಜನಸಂಖ್ಯೆರ ‘ಸ್ವಯಂಪ್ರೇರಿತ ವಲಸೆಗೆ ಕರೆ ನೀಡಿದ್ದರು.
ಅಕ್ಟೋಬರ್ 7, 2023ರಿಂದ ಗಾಝಾ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಇದುವರೆಗೆ ಕನಿಷ್ಠ 61,369 ಜನರು ಸಾವನ್ನಪ್ಪಿದ್ದಾರೆ ಮತ್ತು 152,850 ಜನರು ಗಾಯಗೊಂಡಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಲಂಡನ್‌ನಲ್ಲಿ ನಿಷೇಧಿಸಲ್ಪಟ್ಟ ‘ಪ್ಯಾಲೆಸ್ಟೀನ್ ಆಕ್ಷನ್’ ಗುಂಪಿಗೆ ಬೆಂಬಲ ಸೂಚಿಸಿ ಬೃಹತ್ ಪ್ರತಿಭಟನೆ: 466 ಜನರ ಬಂಧನ


