ಅವಿನ್ಯೊ: ಫ್ರಾನ್ಸ್ಅನ್ನು ಬೆಚ್ಚಿ ಬೀಳಿಸಿದ್ದ ಮತ್ತು ವಿಶ್ವದಾದ್ಯಂತ ಗಮನ ಸೆಳೆದಿದ್ದ ಜಿಸೆಲ್ ಪೆಲಿಕೊ ಅತ್ಯಾಚಾರ ಪ್ರಕರಣದಲ್ಲಿ, ಮಾಜಿ ಪತಿ ಡೊಮಿನಿಕ್ ಪೆಲಿಕೊಗೆ ಫ್ರಾನ್ಸ್‌ನ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
100 ದಿನಗಳ ಸುದೀರ್ಘ ವಿಚಾರಣೆಯ ನಂತರ ಈ ಪ್ರಕರಣದ 50 ಆರೋಪಿಗಳೂ ತಪ್ಪಿತಸ್ಥರು ಎಂದು ನ್ಯಾಯಾಲಯ ಗುರುವಾರ ಪ್ರಕಟಿಸಿತು.
72ರ ಹರೆಯದ ಡೊಮಿನಿಕ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದರೆ, ಇತರರಿಗೆ 3 ರಿಂದ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಜಿಸೆಲ್‌ಗೆ ವರ್ಷವಿಡಿ ಮಾದಕ ದ್ರವ್ಯ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಇತರರಿಗೆ ಅವಕಾಶ ಮಾಡಿಕೊಟ್ಟ ಆರೋಪವು ಮಾಜಿ ಪತಿ ಡೊಮಿನಿಕ್ ಮೇಲಿತ್ತು. ಸತತ 9 ವರ್ಷಗಳ ಕಾಲ ಅಂದರೆ 2011ರಿಂದ 2020ರ ವರೆಗೆ ಫ್ರಾನ್ಸ್‌ನ ದಕ್ಷಿಣ ಪ್ರಾಂತ್ಯದಲ್ಲಿರುವ ಮನೆಯಲ್ಲಿ ಜಿಸೆಲ್ ಮೇಲೆ ಅತ್ಯಾಚಾರ ನಡೆದಿತ್ತು. ಡೊಮಿನಿಕ್‌ಗೆ ಪರಿಚಯಸ್ಥ 50 ಮಂದಿ, ಜಿಸೆಲ್ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ. ಅತ್ಯಾಚಾರ ದೃಶ್ಯವನ್ನು ಡೊಮಿನಿಕ್ ರೆಕಾರ್ಡ್ ಮಾಡುತ್ತಿದ್ದ.
ನ್ಯಾಯಾಲಯ ಕಡಿಮೆ ಶಿಕ್ಷೆ ವಿಧಿಸಿರುವುದನ್ನು ಮಹಿಳಾ ಪರ ಹೋರಾಟಗಾರರು ಮತ್ತು ಜಿಸೆಲ್ ಅವರ ಮೂವರು ಮಕ್ಕಳು ಟೀಕಿಸಿದ್ದಾರೆ. 72ರ ಹರೆಯದ ಜಿಸೆಲ್, ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಈ ಪ್ರಕರಣದ ವಿಚಾರಣೆಯ ವೇಳೆ ಜಿಸೆಲ್ ಅವರಿಗೆ ಬೆಂಬಲ ಸೂಚಿಸಿ ಫ್ರಾನ್ಸ್‌ನಾದ್ಯಂತ ಪ್ರತಿಭಟನೆಗಳು ನಡೆದಿದ್ದವು.
ಇದನ್ನೂ ಓದಿ…ಸಲಿಂಗಿ ಮಹಿಳಾ ಜೋಡಿ ಹಕ್ಕು ಎತ್ತಿ ಹಿಡಿದ ಆಂಧ್ರ ಹೈಕೋರ್ಟ್: ಮತ್ತೆ ಒಂದಾದ ಜೋಡಿ


