ಕೆಲವೇ ತಿಂಗಳುಗಳಲ್ಲಿ ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕಳೆದ ಭಾರೀ ಅತಿ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಪಡೆಯಲಾಗದ ಕಾಂಗ್ರೆಸ್ ಈ ಬಾರಿ ಶತಾಯಗತಾಯ ಅಧಿಕ್ಕಾರಕ್ಕೇರಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಟಿಎಂಸಿ, ಆಪ್ ಸೇರಿದಂತೆ ಇನ್ನಿತರ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
2017ರಲ್ಲಿ ಇತರೆ ಪಕ್ಷಗಳ ಶಾಸಕರನ್ನು ಎಳೆತಂದು ಸರ್ಕಾರ ರಚಿಸಿದ್ದ ಬಿಜೆಪಿ, ಅಂತೂ ಇಂತೂ ಅಧಿಕಾರ ನಡೆಸಿದೆ. ಇದೀಗ ಮುಂದಿನ ಚುನಾವಣೆಯಲ್ಲಿಯೂ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆದರೆ ಗೋವಾ ಫಾರ್ವರ್ಡ್ ಪಾರ್ಟಿ ಮೈತ್ರಿಯಿಂದ ಹೊರನಡೆದು ಕಾಂಗ್ರೆಸ್ ಜೊತೆಸೇರಿದೆ. ಇದು ಬಿಜೆಪಿಗೆ ಕೊಂಚ ಹಿನ್ನಡೆಯಾದಂತಿದೆ.
ಇನ್ನೊಂದೆಡೆ ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದು, ಗೋವಾದ ಹಿಂದಿನ ರಾಜ್ಯಪಾಲರಾಗಿದ್ದ, ಹಾಲಿ ಮೇಘಾಲಯದ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲ್ಲಿಕ್ ಪ್ರಮೋದ್ ಸಾವಂತ್ ವಿರುದ್ಧ ಕಿಡಿಕಾರಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
2019 ರಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ವಲಸೆ ಹೋದಾಗಿನಿಂದ, ಪಕ್ಷವು ತನ್ನ ಪಡೆಗಳನ್ನು ಗಟ್ಟಿಗೊಳಿಸಲು ಹೆಣಗಾಡುತ್ತಿದೆ. ಎಲ್ಲಾ ಪ್ರಾದೇಶಿಕ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪಕ್ಷವು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ತಿಳಿಸಿದ್ದಾರೆ.
40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಮೂವರು ಶಾಸಕರನ್ನು ಹೊಂದಿರುವ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಕಾಂಗ್ರೆಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಇದೀಗ, ಇತರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯೊಂದಿಗೆ ಕೈಜೋಡಿಸಲು ಉತ್ಸುಕವಾಗಿದೆ. ಶನಿವಾರ ಪಕ್ಷದ ನಾಯಕರನ್ನು ಭೇಟಿ ಮಾಡಲು ನವದೆಹಲಿಗೆ ಬಂದಿದ್ದ ಕಾಮತ್ ಅವರು, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷವು ಟಿಎಂಸಿ, ಎಎಪಿ, ಜಿಎಫ್‌ಪಿ, ಎಂಜಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದ ಹೊರತು ಬೇರೆ ದಾರಿಯಿಲ್ಲ. ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿಯ ರಾಷ್ಟ್ರೀಯ ನಾಯಕರು ಚುನಾವಣೆಗೆ ಮುಂಚಿತವಾಗಿ ಮಹಾಮೈತ್ರಿಕೂಟವನ್ನು ರೂಪಿಸಲು ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಬೇಕು ಎಂದು ಕೆಲ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ.
ಆದರೆ ಟಿಎಂಸಿ ಮುಖ್ಯಸ್ಥೆ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಆಪ್ ಕೂಡ ಕಾಂಗ್ರೆಸ್‌ನಿಂದ ದೂರ ನಿಂತಿದೆ. ಅಲ್ಲದೆ ಟಿಎಂಸಿ ಮತ್ತು ಆಪ್ ಸಹ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿವೆ. ಇಂತಹ ಸಂದರ್ಭದಲ್ಲಿ ಮೈತ್ರಿ ಸಾಧ್ಯವೇ ಎಂಬ ಪ್ರಶ್ನೆಗಳು ಮೂಡಿವೆ. ಇವೆಲ್ಲಕ್ಕೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿರುವ ಮಾಜಿ ಶಾಸಕ ಕೋನರೆಡ್ಡಿ


