ಮುಂಬೈನ ಅಂಧೇರಿಯಲ್ಲಿರುವ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿ 17 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಕಪ್ ಕೋಣೆಗೆ ಸಂಪರ್ಕ ಹೊಂದಿದ್ದ ರಹಸ್ಯ ನೆಲಮಾಳಿಗೆಯೊಳಗೆ ಮಹಿಳೆಯರನ್ನು ಅಡಗಿಸಿಡಲಾಗಿತ್ತು. ಬಾರ್‌ನ ಆವರಣದಲ್ಲಿ ಇರಿಸಲಾದ ಸುಧಾರಿತ ಎಲೆಕ್ಟ್ರಾನಿಕ್ ಸಿಸ್ಟಮ್ ಸಹಾಯದಿಂದ ದಾಳಿಯ ಬಗ್ಗೆ ಬಾರ್ ಸಿಬ್ಬಂದಿ ಅಲರ್ಟ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂಧೇರಿಯಲ್ಲಿರುವ ದೀಪಾ ಬಾರ್‌ನಲ್ಲಿ ಗ್ರಾಹಕರ ಮುಂದೆ ಮಹಿಳೆಯರಿಂದ ನೃತ್ಯ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಲಾಯಿತು. ಆದಾಗ್ಯೂ ಪೊಲೀಸರ ತಂಡಕ್ಕೆ ತಕ್ಷಣವೇ ಯಾವ ಮಹಿಳೆಯರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಬಾತ್ ರೂಮ್, ಸ್ಟೋರ್ ರೂಮ್ ಮತ್ತು ಅಡುಗೆಮನೆಯಂತಹ ಅಡಗು ತಾಣಗಳಲ್ಲಿಯೂ ಮಹಿಳೆಯರು ಪತ್ತೆಯಾಗಲಿಲ್ಲ. ಬಾರ್ ಮ್ಯಾನೇಜರ್, ಕ್ಯಾಷಿಯರ್ ಮತ್ತು ಸಪ್ಲೈಯರ್‌ಗಳನ್ನು ಪದೇಪದೇ ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಾರ್‌ನಲ್ಲಿ ನೃತ್ಯ ಮಾಡಲು ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಬಾರ್ ಸಿಬ್ಬಂದಿ ನಿರಾಕರಿಸುತ್ತಲೇ ಇದ್ದರು.
ಆದರೆ, ಮೇಕಪ್ ಕೊಠಡಿಯಲ್ಲಿದ್ದ ದೊಡ್ಡ ಕನ್ನಡಿ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಿತು. ಕನ್ನಡಿಯನ್ನು ಗೋಡೆಯಿಂದ ತೆಗೆಯುವ ಪ್ರಯತ್ನ ವಿಫಲವಾಯಿತು. ಯಾಕೆಂದರೆ ಕನ್ನಡಿಯನ್ನು ಬಹಳ ವ್ಯವಸ್ಥಿತವಾಗಿ ಜೋಡಿಸಲಾಗಿತ್ತು.
ಕನ್ನಡಿಯನ್ನು ಸುತ್ತಿಗೆಯಿಂದ ಒಡೆದಾಗ ನೆಲಮಾಳಿಗೆ ಇರುವ ಸುರಂಗಮಾರ್ಗ ಪತ್ತೆಯಾಯಿತು. ಈ ಅಡಗುತಾಣದಲ್ಲಿ ಹದಿನೇಳು ಮಹಿಳೆಯರು ಕಂಡುಬಂದರು. ನೆಲಮಾಳಿಗೆಯಲ್ಲಿ ಎಸಿ, ಬೆಡ್‌ಗಳಂತಹ ಎಲ್ಲಾ ಸೌಲಭ್ಯಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬಾರ್‌ನ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ: ಮನುಷ್ಯ ವಿರೋಧಿಗಳೊಂದಿಗೆ ಹೋಗದಿರಿ: ನಿರ್ಮಲಾನಂದನಾಥ ಶ್ರೀಗಳಿಗೆ ಬಹಿರಂಗ ಪತ್ರ
ತುಮಕೂರಿನಲ್ಲಿ ಬೆಳಕಿಗೆ ಬಂದಿತ್ತು ಇಂತಹದ್ದೇ ಪ್ರಕರಣ
ತುಮಕೂರು ಜಿಲ್ಲೆ ಕ್ಯಾತ್ಸಂದ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು.
ಕ್ಯಾತ್ಸಂದ್ರದ ನಂದಿ ಡಿಲೆಕ್ಸ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ತಿಳಿದುಬಂದಿತ್ತು. ಸಾಮಾಜಿಕ ಕಾರ್ಯಕರ್ತರು ಮತ್ತು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಐವರು ಪಿಂಪ್‌ಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದರು.
“ಇಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಹೊಸದಲ್ಲ. ತುಂಬಾ ವರ್ಷಗಳಿಂದಲೂ ನಡೆಯುತ್ತಿದೆ. ಇವೆಲ್ಲ ಸಂಘಟಿತ ಅಪರಾಧಗಳು. ತಮ್ಮ ಸುತ್ತಮುತ್ತ ಇಂತಹ ದಂಧೆ ನಡೆಯುತ್ತಿದೆ ಎಂದು ತಿಳಿಯದ ಅಮಾಯಕ ಸಮಾಜ ಇದಲ್ಲ. ಮಾಧ್ಯಮ, ಪೊಲೀಸರು, ಸಂಘಟನೆ ನಡೆಸುವವರು, ಲಾಯರ್‌ಗಳು ಎಲ್ಲರೂ ಇದರೊಳಗೆ ಇರ್ತಾರೆ” ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದ್ದರು.
“ಕ್ಯಾತ್ಸಂದ್ರ-ಬಟವಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಂಡೋಮ್ ಪ್ರಕರಣದಿಂದ ಇಲ್ಲಿನ ವೇಶ್ಯಾವಾಟಿಕೆ ಬಗ್ಗೆ ಸುಳಿವು ದೊರೆಯಿತು. ಇದೇ ಗುಮಾನಿಯಲ್ಲಿ ತಳ ಮಟ್ಟದಲ್ಲಿ ತನಿಖೆ ನಡೆಸಿದೆವು. ಇಲ್ಲಿಗೆ 2-3 ಬಾರಿ ಬಂದು ಪರೀಕ್ಷಿಸಿದೆವು. ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ದಾಳಿ ನಡೆಸಿದೆವು” ಎಂದು ಸ್ಟ್ಯಾನ್ಲಿ ಅವರು ಮಾಹಿತಿ ನೀಡಿದ್ದರು.
“ತುಮಕೂರು ರಾಷ್ಟ್ರೀಯ ಹೆದ್ದಾರಿಯು ಬೆಂಗಳೂರು, ಮಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಲಿಂಕ್ ಮಾಡುವ ಜಾಗ. ಹೇವಿ ಟ್ರಕ್‌ಗಳು ಇಲ್ಲಿ ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಬೇರೆ. ಹೀಗಾಗಿ ಇಲ್ಲಿ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು, ಶೋಷಿಸಿ ವ್ಯಾಪಾರ ಮಾಡುತ್ತಾರೆ. ಹಲವು ವರ್ಷಗಳಿಂದ ಇದು ಇದೆ. ಇದೊಂದು ದೊಡ್ಡ ದಂಧೆ ಇದು” ಎಂದು ತಿಳಿಸಿದ್ದರು.
ಇದನ್ನೂ ಓದಿರಿ: ಮೋದಿ, ಯೋಗಿ ಆದಿತ್ಯನಾಥರೇ ನೀವು ಚರಿತ್ರೆ ಮುಚ್ಚಿಹಾಕಲು ಹೊರಟಿದ್ದೀರಿ: ವಿಶ್ವನಾಥ್