ಕಾಂಗ್ರೆಸ್ ತೊರೆದು 2022ರಲ್ಲಿ ಬಿಜೆಪಿ ಸೇರಿದ್ದ ಎಂಟು ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಡ್ಕರ್ ಶುಕ್ರವಾರ (ಅ.1) ತಿರಸ್ಕರಿಸಿದ್ದಾರೆ.
ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ವಿರುದ್ಧ ಮೂರನೇ ಎರಡರಷ್ಟು ಶಾಸಕರು ಬಂಡೆದ್ದರೆ ಅಂಥ ಪ್ರಕರಣದಲ್ಲಿ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಬಾಂಬೆ ಹೈಕೋರ್ಟ್ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅದರ ಅನುಸಾರ ಶಾಸಕರನ್ನು ಅನರ್ಹಗೊಳಿಸಲು ಸಕಾರಣಗಳು ಕಾಣುತ್ತಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.
ಕಾಂಗ್ರೆಸ್‌ನ ಅರ್ಜಿಯ ಅಂಶಗಳು ಅಕ್ಟೋಬರ್ 14 ರಂದು ತಿರಸ್ಕರಿಸಿದ್ದ ಡೊಮಿನಿಕ್ ನೊರೊನ್ಹಾ ಅರ್ಜಿಯನ್ನೇ ಹೋಲುತ್ತದೆ ಎಂದು ಸ್ಪೀಕರ್ ಹೇಳಿದ್ದಾರೆ. ಎಂಟು ಮಂದಿ ಶಾಸಕರ ಅನರ್ಹತೆ ಕೋರಿ ಗೋವಾ ಕಾಂಗ್ರೆಸ್ ನಾಯಕ ಡೊಮಿನಿಕ್ ನೊರೊನ್ಹಾ ಸಲ್ಲಿಸಿದ್ದ ಅರ್ಜಿಯನ್ನು ಅಕ್ಟೋಬರ್ 14ರಂದು ಸ್ಪೀಕರ್ ತಿರಸ್ಕರಿಸಿದ್ದರು.
ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಿರೀಶ್ ಚೋಡನ್ಕರ್, ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಶಾಸಕರಾದ ಮೈಕೆಲ್ ಲೋಬೊ, ದಿಗಂಬರ ಕಾಮತ್, ಅಲೆಕ್ಸಿ ಸೀಕ್ವೇರಾ, ಸಂಕಲ್ಪ್ ಅಮೋನ್ಕರ್, ದೆಲಿಲಹ್ ಹೋಬೊ, ಕೇದಾರ್ ನಾಯ್ಕ, ರಾಜೇಶ್ ಫಲದೇಸಾಯಿ ಮತ್ತು ರೊಡೊಲ್ಫೋ ಫೆರ್ನಾಂಡೀಸ್ ಅವರನ್ನು ಅನರ್ಹತೆಗೊಳಿಸುವಂತೆ ಕೋರಿದ್ದರು.
ಈ ಶಾಸಕರು ಸೆಪ್ಟೆಂಬರ್ 14, 2022ರಂದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ನಾವಿದ್ದೇವೆ. ನಾವು ಪಕ್ಷವನ್ನೇ ಬಿಜೆಪಿಯೊಂದಿಗೆ ವಿಲೀನಗೊಳಿಸುತ್ತೇವೆ ಎಂದಿದ್ದರು ಮತ್ತು ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ಕೋರಿದ್ದರು. ಶಾಸಕರು ಮೂರನೇ ಎರಡರಷ್ಟು ಪಕ್ಷ ತೊರೆದಿರುವ ಕಾರಣ 10ನೇ ಶೆಡ್ಯೂಲ್ ಅವರನ್ನು ರಕ್ಷಿಸುತ್ತದೆ ಎಂದು ಸ್ಪೀಕರ್ ತಾವಡ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ಚುನಾವಣಾ ಆಯೋಗದ ಹೇಳಿಕೆಗೆ ಅಸಮಾಧಾನ : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಕಾಂಗ್ರೆಸ್


