ಮತಾಂಧ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದು, ಅವರು ಇಹಲೋಕ ತ್ಯಜಿಸಿರಬಹುದು. ಆದರೆ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಾಗಲಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಗೋಡ್ಸೆಗೆ
ಮಹಾತ್ಮ ಗಾಂಧಿ ಅವರ ಹತ್ಯೆ ದಿನದ ಅಂಗವಾಗಿ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿಗೂ ಮಹಾತ್ಮಾ ಗಾಂಧಿ ಅವರ ವಿಚಾರಧಾರೆಗಳು, ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪ್ರಸ್ತುತವಾಗಿವೆ ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಜನವರಿ 30, 1948 ರಂದು ಮಹಾತ್ಮ ಗಾಂಧೀಜಿಯವರನ್ನು ಹಂತಕ ಗೋಡ್ಸೆ ಹತ್ಯೆ ಮಾಡಿದ ದಿನ. ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದರು. ಅವರ ಹೋರಾಟದ ಬದುಕು, ಅಹಿಂಸೆ, ಸತ್ಯಾಗ್ರಹ ಇವು ನಮಗೆ ಪ್ರೇರಣೆ. ಜಗತ್ತಿನಲ್ಲಿ ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ” ಎಂದು ಸಿಎಂ ಹೇಳಿದ್ದಾರೆ.
“ದೇಶದಲ್ಲಿ ಬಹಳ ದೀರ್ಘ ಕಾಲ ನಡೆದ ಹೋರಾಟದ ನಾಯಕತ್ವವನ್ನು ಗಾಂಧೀಜಿ ವಹಿಸಿದ್ದರು. 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ಮೊದಲು ದೇಶ, ದೇಶದ ಜನ, ಸಮಾಜ, ಬದುಕನ್ನು ಅರ್ಥಆಡಿಕೊಳ್ಳುವ ಪ್ರಯತ್ನ ಮಾಡಿ, ನಂತರ ಹೋರಾಟವನ್ನು ಪ್ರಾರಂಭಿಸಿದರು. ಸತ್ಯ ಅಹಿಂಸೆಗಳಿಂದ ಕೂಡಿದ್ದ ಹೋರಾಟದಲ್ಲಿ ಸಾವಿರಾರು ಜನ ಪಾಲ್ಗೊಂಡರು. ಅವರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತು, ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾದೆವು.” ಎಂದು ಹೇಳಿದ್ದಾರೆ. ಗೋಡ್ಸೆಗೆ
“ಮಹಾತ್ಮಾ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಈ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ದೇಶ ಹೇಗಿರಬೇಕೆಂದು ಪರಿಹಾರಗಳನ್ನು ನೀಡಿದ್ದರು. ಭಾರತ ದೇಶ ಗ್ರಾಮಗಳ ದೇಶ. ಗ್ರಾಮಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದ್ದರು. ಅದಕ್ಕಾಗಿಯೇ ಗ್ರಾಮ ಸ್ವರಾಜ್ಯ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದರು. ಗ್ರಾಮಗಳು ಸ್ವಾವಲಂಬಿಗಳಾಗಬೇಕು. ಆಗ ಮಾತ್ರ ಜನ, ದೇಶ ಸ್ವಾವಲಂಬಿಗಳಾಗಲು ಸಾಧ್ಯ.” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಭಾರತದಲ್ಲಿ ಗುಡಿ ಕೈಗಾರಿಕೆಗಳು, ಅತಿ ಸಣ್ಣ ಕೈಗಾರಿಕೆಗಳು ಆರ್ಥಿಕತೆಯ ತಳಹದಿ. ಅದಕ್ಕೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದ್ದರು. ಗಾಂಧಿ ಭಾರತ ಕಟ್ಟುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅವರ ಮೌಲ್ಯಗಳನ್ನು ರೂಢಿಸಿಕೊಂಡು ಅದರಂತೆ ನಡೆಯುವ ಪ್ರಯತ್ನ ಮಾಡಬೇಕು.” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂಓದಿ: ಮಣಿಪುರವನ್ನು ವಿಭಜಿಸಲು ಬಯಸುವವರೊಂದಿಗೆ ಕೆಲವು ರಾಜಕಾರಣಿಗಳು ಕೈಜೋಡಿಸಿದ್ದಾರೆ: ಸಿಎಂ ಬಿರೇನ್ ಸಿಂಗ್
ಮಣಿಪುರವನ್ನು ವಿಭಜಿಸಲು ಬಯಸುವವರೊಂದಿಗೆ ಕೆಲವು ರಾಜಕಾರಣಿಗಳು ಕೈಜೋಡಿಸಿದ್ದಾರೆ: ಸಿಎಂ ಬಿರೇನ್ ಸಿಂಗ್


