ಬಿಹಾರದಲ್ಲಿ ಆಗಸ್ಟ್ 1ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ‘ಸತ್ತೋಗಿದ್ದಾರೆ’ ಎಂದು ಚುನಾವಣಾ ಆಯೋಗ ಘೋಷಿಸಿರುವ ಏಳು ಜನರ ಗುಂಪನ್ನು ಬುಧವಾರ (ಆ.13) ರಾಹುಲ್ ಗಾಂಧಿ ದೆಹಲಿಯಲ್ಲಿ ಭೇಟಿಯಾದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ, ಏಳು ಜನರ ಗುಂಪು ಬಿಹಾರದಿಂದ ದೆಹಲಿಗೆ ಪ್ರಯಾಣಿಸಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಜೀವನದಲ್ಲಿ ಅನೇಕ ಆಸಕ್ತಿದಾಯಕ ಅನುಭವಗಳು ಆಗಿವೆ. ಆದರೆ, ‘ಸತ್ತ ಜನರೊಂದಿಗೆ’ ಟೀ ಕುಡಿಯುವ ಅವಕಾಶ ಎಂದಿಗೂ ಸಿಕ್ಕಿರಲಿಲ್ಲ. ಈ ವಿಶಿಷ್ಟ ಅನುಭವಕ್ಕಾಗಿ ಚುನಾವಣಾ ಆಯೋಗಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
जीवन में बहुत दिलचस्प अनुभव हुए हैं,
लेकिन कभी 'मृत लोगों' के साथ चाय पीने का मौका नहीं मिला था।इस अनोखे अनुभव के लिए, धन्यवाद चुनाव आयोग! pic.twitter.com/Rh9izqIFsD
— Rahul Gandhi (@RahulGandhi) August 13, 2025
ವಿಡಿಯೋದಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಸತ್ತೋಗಿದ್ದಾರೆ ಎಂದು ಗುರುತಿಸಿರುವ ಗುಂಪಿನೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸುತ್ತಿರುವುದನ್ನು ನೋಡಬಹುದು.
“ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಕಾಣೆಯಾಗಿವೆ ಎಂದು ನಿಮಗೆ ಹೇಗೆ ತಿಳಿಯಿತು?” ಎಂದು ರಾಹುಲ್ ಗಾಂಧಿ ಕೇಳಿದಾಗ, ಏಳು ಜನರ ಗುಂಪಿನ ಒಬ್ಬರು, “ಚುನಾವಣಾ ಆಯೋಗದ ಮತದಾರರ ಪಟ್ಟಿಯ ಮೂಲಕ” ಎಂದು ಉತ್ತರಿಸಿದ್ದಾರೆ. “ಒಂದು ಪಂಚಾಯತ್‌ನಲ್ಲಿ ಕನಿಷ್ಠ 50 ಇಂತಹ ಪ್ರಕರಣಗಳಿವೆ” ಎಂದು ಅವರಲ್ಲಿ ಒಬ್ಬರು ಹೇಳಿದ್ದಾರೆ. “ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಕ್ಷೇತ್ರದಲ್ಲಿ ಅನೇಕ ಮತದಾರರನ್ನು ಸತ್ತೋಗಿದ್ದಾರೆ ಎಂಬುವುದಾಗಿ ತೋರಿಸಲಾಗಿದೆ” ಎಂದಿದ್ದಾರೆ.
ಗುಂಪಿನಲ್ಲಿದ್ದ 85 ವರ್ಷದ ಮಹಿಳೆಯೊಬ್ಬರನ್ನು ತೋರಿಸುತ್ತಾ, “ಚುನಾವಣಾ ಆಯೋಗವು ಅವರನ್ನು ‘ಸತ್ತೋಗಿದ್ದಾರೆ’ ಎಂದು ಘೋಷಿಸಿದೆ ಮತ್ತು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
“ಈ ಜನರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು 4-5 ಗಂಟೆಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ನಿಂತಿದ್ದಾರೆ. ಇವರು ಸತ್ತೋಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿರುವ ಪಟ್ಟಿ ನಮ್ಮಲ್ಲಿದೆ.
ಚುನಾವಣಾ ಆಯೋಗ 65 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಈ ಪೈಕಿ 22 ಲಕ್ಷ ಜನರು ಸತ್ತೋಗಿದ್ದಾರೆ. 35 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಅಥವಾ ಅವರ ಹೆಸರು ಹಲವು ಬಾರಿ ಇತ್ತು ಎಂದು ಚುನಾವಣಾ ಆಯೋಗ ಹೇಳಿದೆ” ಎಂದು ಆ ವ್ಯಕ್ತಿ ರಾಹುಲ್ ಗಾಂಧಿ ಮುಂದೆ ವಿವರಿಸಿದ್ದಾರೆ ಮತ್ತು ಈ 35 ಲಕ್ಷ ಜನರು ಯಾರು?” ಎಂದು ಪ್ರಶ್ನಿಸಿದ್ದಾರೆ.
ಗುಂಪಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ,”ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಇತರ ದಾಖಲೆಗಳನ್ನು ನೀಡಿದ್ದರೂ, ನಾನು ಸತ್ತೋಗಿದ್ದೇನೆ ಎಂದು ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಘೋಷಿಸಿದೆ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಚುನಾವಣಾ ಆಯೋಗ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿಲ್ಲ” ಎಂದಿದ್ದಾರೆ.
ಸಿಬಿಐ ಮತ್ತು ಇಡಿ ವಿಫಲವಾದ್ದರಿಂದ ಬಿಜೆಪಿ ಈಗ ಚುನಾವಣಾ ಆಯೋಗವನ್ನು ಬಳಸುತ್ತಿದೆ: ತೇಜಸ್ವಿ ಯಾದವ್


