ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಪ್ತ ಮತ್ತು ಮಾಜಿ ಸಲಹೆಗಾರ ಅರವಿಂದ್ ಪನಗಾರಿಯಾ ಅವರನ್ನು ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಭಾರತ ಸರ್ಕಾರವು ಭಾನುವಾರ ಅರವಿಂದ್ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದೆ. ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ ಅವರು ಆಯೋಗದ ಕಾರ್ಯದರ್ಶಿಯಾಗಿರುತ್ತಾರೆ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಹಣಕಾಸು ಆಯೋಗ ರಾಜ್ಯಗಳಿಗೆ ತೆರಿಗೆಗಳ ಹಂಚಿಕೆ ಬಗ್ಗೆ ಶಿಫಾರಸ್ಸನ್ನು ಮಾಡುತ್ತದೆ.
ಇದಕ್ಕೂ ಮೊದಲು 2015ರಿಂದ 2017ರವರೆಗೆ ಪನಗಾರಿಯಾ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದರು. ಅರವಿಂದ್ ಪನಗಾರಿಯಾ ಅವರು ಇಂಡೋ–ಅಮೆರಿಕನ್ ಆರ್ಥಿಕ ತಜ್ಞರಾಗಿದ್ದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವಬ್ಯಾಂಕ್, ಐಎಂಎಫ್, ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸಿರುವ ಅವರು ಅಪಾರ ಅನುಭವ ಹೊಂದಿದ್ದಾರೆ.
ಅರವಿಂದ್ ಪನಗಾರಿಯಾ ಅವರಿಗೆ ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿಯಲ್ಲಿನ ಕೊಡುಗೆಗಳಿಗಾಗಿ 2012 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅವರು ಕಾಲೇಜ್ ಪಾರ್ಕ್‌ನಲ್ಲಿರುವ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಪನಗಾರಿಯಾ ಅವರು ಈ ವರ್ಷದ ಆರಂಭದಲ್ಲಿ 2026ರ ವೇಳೆಗೆ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಹೇಳಿದ್ದರು.
5 ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರ ರಚಿಸುವ ಹಣಕಾಸು ಆಯೋಗ ಕೇಂದ್ರ ಹಾಗೂ ರಾಜ್ಯಗಳ ನಡುವೆ ತೆರಿಗೆ ಸಂಗ್ರಹದ ಹಂಚಿಕೆ ಬಗ್ಗೆ ಸಲಹೆ, ಸೂಚನೆ ಹಾಗೂ ಶಿಫಾರಸುಗಳನ್ನು ನೀಡುತ್ತದೆ. ಕೇಂದ್ರ ಸರ್ಕಾರ ಪ್ರತಿ ಶತ 42ರಷ್ಟು ತೆರಿಗೆ ಸಂಗ್ರಹವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ. ಹಣಕಾಸು ಆಯೋಗವು 2025ರ ಅ.31 ರೊಳಗೆ 5 ವರ್ಷದ ತನ್ನ ವರದಿಯನ್ನು ಸಿದ್ದಪಡಿಸಿ ಒಪ್ಪಿಸಬೇಕು. ವರದಿಯು 2026ರ ಏ.1ರಿಂದ ಜಾರಿಗೆ ಬರಲಿದೆ.
Dr Arvind Panagariya, former Vice Chairman, NITI Aayog appointed as Chairman, Finance Commission pic.twitter.com/CuI5MtaMPk
— ANI (@ANI) December 31, 2023
ಇದನ್ನು ಓದಿ: ತೆಹ್ರೀಕ್-ಎ-ಹುರಿಯತ್ ಸಂಘಟನೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಆದೇಶ


