ನಾವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲೊಂದಾದ ವಾಟ್ಸಾಪ್ ಬಳಕೆ ಸುರಕ್ಷಿತ ಎಂದುಕೊಳ್ಳುತ್ತಿರುವಾಗಲೇ ಕಳೆದ ವರ್ಷ ಪೆಗಾಸಸ್ ಸ್ಪೈವೇರ್ ಎಂಬ ಇಸ್ರೇಲ್ ಮೂಲದ ಸಾಫ್ಟ್‌ವೇರ್ ಬಳಸಿ ನಮ್ಮ ವಯಕ್ತಿಕ ವಾಟ್ಸಾಪ್ ಅನ್ನು ಕಣ್ಗಾವಲು ಮಾಡಬಹುದು, ಅಲ್ಲಿಯ ಮಾಹಿತಿಯನ್ನು ಕದಿಯಬಹುದು ಎಂಬ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿತು. ಸ್ವತಃ ಇದನ್ನು ಸರ್ಕಾರವೇ ಬಳಸಿ ಹಲವು ಸಾಮಾಜಿಕ ಕಾರ್ಯಕರ್ತರ, ವಕೀಲರ, ಪತ್ರಕರ್ತರ ಮಾಹಿತಿ ಕದ್ದು ಟೀಕೆಗೊಳಗಾಗಿತ್ತು.
ಈಗ ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ನಮ್ಮೆಲ್ಲರ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡುವ ಮತ್ತು ಕ್ರಮತೆಗೆದುಕೊಳ್ಳುವ ಹೊಸ ಅಧಿಕೃತ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂದರೆ ದೇಶದ ಪ್ರತಿಯೊಬ್ಬರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಏನನ್ನು ಬರೆಯಲಾಗುತ್ತದೆ, ಯಾರ ಪರ ಮತ್ತು ವಿರುದ್ಧ ಬರೆಯಲಾಗುತ್ತದೆ, ಟ್ರೆಂಡ್ ಹೇಗಿರುತ್ತದೆ ಎಂಬುದನ್ನು ಮೇಲ್ವಿಚಾರಣೆ ನಡೆಸಲು ಐಟಿ ಕಂಪನಿಗಳಿಗೆ ಜವಾಬ್ದಾರಿ ನೀಡಲು ಸರ್ಕಾರ ಮುಂದಾಗಿದೆ.
ಭಾರತದಂತಹ ವಿಶಾಲ ದೇಶದಲ್ಲಿ ಎಲ್ಲರ ಖಾತೆಗಳನ್ನು ಮಾನಿಟರ್ ಮಾಡಲು ಸಾಧ್ಯವಿಲ್ಲ ಎಂದು ಬಹುತೇಕರು ಭಾವಿಸಿದ್ದಾರೆ. ಅದಕ್ಕಾಗಿಯೇ ಬ್ರಾಡ್ ಕಾಸ್ಟ್ ಎಂಜಿನೀರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಎಂಬ ಸರ್ಕಾರಿ ಸ್ವಾಮ್ಯದ (I and B ಸಚಿವಾಲಯ) ಸಂಸ್ಥೆಯ ಮೂಲಕ ಈ ಕೆಲಸ ನಿರ್ವಹಿಸಲು ಖಾಸಗಿ ಕಂಪನಿಗಳಿಗೆ ಟೆಂಡರ್ ಕರೆದಿದೆ.
ಅವರು ಮಾಡಬೇಕಾದ ಮಾನಿಟರಿಂಗ್ ಸೇವೆಗಳ ಕೆಲಸದ ವ್ಯಾಪ್ತಿ ಈ ಕೆಳಗಿನಂತಿರುತ್ತದೆ:
ಪತ್ತೆ ಹಚ್ಚುವಿಕೆ – ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳನ್ನು ವಿಶ್ಲೇಷಿಸುವುದು.
ನಿರ್ಧಾರ- ಸಮಸ್ಯಾತ್ಮಕವಾಗಿವೆ ಎಂಬ ಪೋಸ್ಟ್‌ಗಳನ್ನು ವಿಂಗಡಣೆ ಮಾಡುವುದು.
ಪಾವತಿಸಿದ ಮತ್ತು ಖಾಸಗಿ ಮಾಧ್ಯಮ ಡೇಟಾವನ್ನು ಒಳಗೊಂಡಂತೆ ಸಂಪೂರ್ಣ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ನಡೆಸುವ ಸಾಮರ್ಥ್ಯವನ್ನು ಅಭಿವೃದ್ದಿಪಡಿಸುವುದು.
ಸೋಷಿಯಲ್ ಮೀಡಿಯಾ ಟ್ರೆಂಡ್ಸ್ ಅನ್ನು ಮಾನಿಟರಿಂಗ್ ಮಾಡುವುದು.
ಸೋಷಿಯಲ್ ಮೀಡಿಯಾದ ಭಾವನೆಗಳನ್ನು ಮೇಲ್ವಿಚಾರಣೆ ಮಾಡುವುದು
ಸೋಶಿಯಲ್ ಮೀಡಿಯಾದ ಸೂಚಕಗಳ ಅನ್ವಯ ಮೇಲ್ವಿಚಾರಣೆ
ಸರ್ಕಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದ ಟ್ರೆಂಡ್‌ಗಳ ಜಾಡು ಹಿಡಿಯುವುದು.
ಸಾಮಾಜಿಕ ಅಭಿಯಾನಗಳು / ಕಾರ್ಯಕ್ರಮಗಳ ಮೇಲ್ವಿಚಾರಣೆ
ಆಲಿಸುವ ಸಾಧನ ಅಭಿವೃದ್ದಿಪಡಿಸುವುದು.
ಕ್ರಿಯಾತ್ಮಕ ಡೇಟಾವನ್ನು ಗುರುತಿಸುವುದು, ಯಾರಿಂದ ಪ್ರಭಾವಿತರಾಗಿದ್ದಾರೆ ಎಂದು ತಿಳಿಯುವುದು ಇತ್ಯಾದಿ
ಆರಂಭಿಕ ಎಚ್ಚರಿಕೆ ನೀಡುವ ವ್ಯವಸ್ಥೆ
ವಿಶ್ಲೇಷಣಾತ್ಮಕ ವರದಿಗಳನ್ನು ರಚಿಸುವುದು
ಇಷ್ಟೆಲ್ಲಾ ಕೆಲಸಗಳನ್ನು ನಿರ್ವಹಿಸಲು, ಡಾಟಾ ಸಂಗ್ರಹಿಸಲು ಐಟಿ ಕಂಪನಿಗಳನ್ನು ಸರ್ಕಾರ ಆಹ್ವಾನಿಸಿದೆ. ಮೇಲಿನ ಇಷ್ಟು ಮಾಹಿತಿ ಸಿಕ್ಕ ನಂತರ ಯಾರು ಸರ್ಕಾರದ ಪರವಿದ್ದಾರೆ ಮತ್ತು ಯಾರು ವಿರುದ್ಧವಿದ್ದಾರೆ ಎಂದು ತಿಳಿದ ಸರ್ಕಾರ ಅವರ ಮೇಲೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಊಹಿಸಿ.
ಈಗಾಗಲೇ ಸರ್ಕಾರಗಳು ಹಲವು ರೀತಿಯಲ್ಲಿ ನಮ್ಮನ್ನು ಮೇಲ್ವಿಚಾರಣೆ ನಡೆಸುತ್ತಿದೆ. ಪ್ರತಿಯೊಬ್ಬ ಪ್ರಜೆಯ ಎಲ್ಲಾ ಮಾಹಿತಿಗಳನ್ನು ಅದು ಪಡೆದುಕೊಂಡಿದೆ. ಈಗ ನಾವು ಮಾಡುವ ಚಟುವಟಿಕೆಗಳನ್ನು ಮಾನಿಟರ್ ಮಾಡುವ ಮೂಲಕ ಸರ್ವೈಲೆನ್ಸ್ ಸ್ಟೇಟ್ ಕಡೆಗೆ ದಾಪುಗಾಲಿಡುತ್ತಿದೆ ಎಂದು ಹಲವು ಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗಿನ ನಿಯಂತ್ರಣದ ಸಂದರ್ಭದ ಕಣ್ಗಾವಲು ಮತ್ತು ಪ್ರಭುತ್ವದ ಬೇಹುಗಾರಿಕೆ


