ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಹಗ್ಗ-ಜಗ್ಗಾಟ ಕೊನೆಯ ಹಂತಕ್ಕೆ ಬಂದು ತಲುಪಿದೆ. ಶಿವಸೇನೆ ಜತೆ ಕಾಂಗ್ರೆಸ್ ಮತ್ತು ಎನ್ಸಿಪಿ, ಮೈತ್ರಿ ನಿರ್ಣಾಯಕ ಹಂತ ತಲುಪಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್, ಸೇನಾ ನಾಯಕತ್ವದ ಸರ್ಕಾರ ರಚನೆಗೆ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ನವದೆಹಲಿಯಲ್ಲಿ ಸಿಡಬ್ಲ್ಯುಸಿ ಸಭೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಮತ್ತು ಪ್ರಮುಖರು ನಿರ್ಣಾಯಕ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ, ಅಂಬಿಕಾ ಸೋನಿ, ಅಹ್ಮದ್ ಪಟೇಲ್, ಎ.ಕೆ.ಆಂಟನಿ ಮತ್ತು ಇತರೆ ಕಾಂಗ್ರೆಸ್ ಮುಖಂಡರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ 10 ಜನಪಾತ್ ನಿವಾಸದಲ್ಲಿ ಸಭೆ ಸೇರಿದ್ದಾರೆ.
ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಮತ್ತು ಚುನಾವಣಾ ಬಾಂಡ್ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಇನ್ನು ಶಿವಸೇನೆ ನೇತೃತ್ವದ ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಎನ್ಸಿಪಿಯ ಶರದ್ ಪವಾರ್ ಒಪ್ಪಿಕೊಂಡ ನಂತರ ಸಿಡಬ್ಲ್ಯುಸಿ ಸಭೆ ಕರೆಯಲಾಗಿದೆ.
ಇದನ್ನೂ ಓದಿ: ಅರಸು ಪ್ರಶಸ್ತಿ ನಿಲ್ಲಿಸಿದ್ದೇಕೆ? ಬಿ.ಚಂದ್ರೇಗೌಡರ ಪ್ರಶ್ನೆ..
ಕಾಂಗ್ರೆಸ್ ಹಿರಿಯ ಮುಖಂಡ ಪೃಥ್ವಿರಾಜ್ ಚವಾಣ್ ಮಾತನಾಡಿ, ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಸ್ಥಿರ ಮತ್ತು ಜನಪರ ಸರ್ಕಾರ ಬರಲಿದೆ ಎಂದು ನಮಗೆ ಖಾತ್ರಿಯಿದೆ ಎಂದು ಹೇಳಿದರು. ನವದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಐದು ಗಂಟೆಗಳ ಕಾಲ ಸಭೆ ನಡೆಸಿದ ನಂತರ ಪೃಥ್ವಿರಾಜ್ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನಾಳೆ ( ಗುರುವಾರ) ಮತ್ತೆ ಉಭಯ ಪಕ್ಷಗಳು ಜಂಟಿ ಸಭೆ ನಡೆಸಲಿವೆ. ಇದಾದ ನಂತರ ಕಾಂಗ್ರೆಸ್ ಹಾಗೂ ಎನ್ಸಿಪಿ ನಾಯಕರು ಮುಂಬೈನಲ್ಲಿ ಶುಕ್ರವಾರ ಶಿವಸೇನೆ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಸರ್ಕಾರ ರಚನೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ನೀಡುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಸರ್ಕಾರ ರಚನೆಯಾಗಲಿದೆ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಸೂಚಿಸಿದೆ. ಇದೇ ಮೊದಲ ಬಾರಿಗೆ ಸ್ಪಷ್ಟ ಮಾಹಿತಿ ನೀಡಿದೆ.
ನವೆಂಬರ್ ಅಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಲಾಗುವುದು. ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ನಡೆದ ಸಭೆಯ ಬಳಿಕ ಸೋನಿಯಾ ಗಾಂಧಿ ಅವರು ಸೇನಾ ನೇತೃತ್ವದ ಸರ್ಕಾರ ರಚಿಸಲು ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್ಸಿಪಿ ಮುಖಂಡರ ಜತೆ ನಡೆದ ಸಭೆಗೂ ಮೊದಲು ಕಾಂಗ್ರೆಸ್ ಮುಖಂಡರು ಮತ್ತು ರಾಜ್ಯದ ಮುಖಂಡರು ಅರ್ಧಗಂಟೆಗಳ ಕಾಲ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸರ್ಕಾರ ರಚಿಸುವ ಔಪಚಾರಿಕ ಅನುಮೋದನೆ, ಅಧಿಕಾರ ಹಂಚಿಕೆ ಯೋಜನೆ ಮತ್ತು ಮೂರು ಪಕ್ಷಗಳ ಮಧ್ಯೆ ಸಿದ್ಧಗೊಂಡಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಕರಡಿಗೂ ಸೋನಿಯಾ ಗಾಂಧಿ ಅವರು ಅನುಮೋದನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


