ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ಹದಿನಾಲ್ಕು ನಿವೇಶನ ಹಂಚಿಕೆ ಮಾಡಿರುವ ಆರೋಪದ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಶನಿವಾರ ಅನುಮತಿ ನೀಡಿದ್ದು, ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರ ಗಣಿ ಹಗರಣದ ವಿರುದ್ಧ ತನಿಖೆ ನಡೆಸಬೇಕೆಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಅನುಮತಿ ಕೇಳಿ 10 ತಿಂಗಳಾದರೂ ಮಾನ್ಯ ರಾಜ್ಯಪಾಲರು ಆ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವೆ ಆಗಿದ್ದ ಶಶಿಕಲಾ ಜೊಲ್ಲೆಯವರ ವಿರುದ್ಧದ ತನಿಖೆಗೆ ಅನುಮತಿ ನೀಡಿ ಎಂದು ಕೋರಿದ್ದ ಕಡತವನ್ನೂ ರಾಜ್ಯಪಾಲರು ಮೂಲೆಗೆ ತಳ್ಳಿದ್ದಾರೆ. ಸಾಲದು ಎಂಬಂತೆ ಮುರುಗೇಶ್ ನಿರಾಣಿಯವರ ತನಿಖೆಗೆ ಸಂಬಂಧಿಸಿದ ಕಡತವೂ ರಾಜ್ಯಪಾಲರ ಕಚೇರಿಯಲ್ಲಿ ಧೂಳು ಹಿಡಿಯುತ್ತದೆ” ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಪರಿಸ್ಥಿತಿ ಹೀಗಿರುವಾಗ ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯೊಬ್ಬ ನೀಡಿರುವ ದೂರನ್ನು ಆಧರಿಸಿ, ರಾತ್ರೋ ರಾತ್ರಿ ನೋಟಿಸ್ ಜಾರಿ ಮಾಡಿ ಈಗ ತನಿಖೆಗೆ ನೀಡಲು ಹೊರಟಿರುವ ರಾಜ್ಯಪಾಲರು, ತಾರತಮ್ಯದಿಂದ ಮತ್ತು ಪೂರ್ವಾಗ್ರಹ ಪೀಡಿತರಾಗಿ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದು ಇವರಿಗೆ ಒಂದು ಕ್ಷಣವೂ ರಾಜ್ಯಪಾಲರಾಗಿ ಮುಂದುವರೆಯುವ ನೈತಿಕತೆ ಇಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ರಾಜಕೀಯ ಪಕ್ಷಗಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಅವರನ್ನು ಮಾನ್ಯ ರಾಷ್ಟ್ರಪತಿಗಳು ಕೂಡಲೇ ವಜಾ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಹುನ್ನಾರ: ರಣದೀಪ್ ಸಿಂಗ್ ಸುರ್ಜೇವಾಲ
“ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿಯು ಮೋದಿ ಸರ್ಕಾರದಿಂದ ರಾಜಕೀಯ ಸೇಡು ತೀರಿಸಿಕೊಳ್ಳುವ ಮತ್ತು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಕಾಯಿದೆಯಾಗಿದೆ. ಬಿಜೆಪಿ ನಾಯಕತ್ವ ಮತ್ತು ಅವರ ಕೈಗೊಂಬೆ ರಾಜ್ಯಪಾಲರಿಂದ ಕಾಂಗ್ರೆಸ್‌ನ ಐದು ಖಾತರಿಗಳನ್ನು ರದ್ದುಗೊಳಿಸುವ ಸಲುವಾಗಿ ಬಿಜೆಪಿಯಿಂದ ಕರ್ನಾಟಕದ ಜನರ ಮೇಲೆ ಪಾತಕಿ ದಾಳಿ! ಬಡವರು, ಹಿಂದುಳಿದವರು, ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿರುದ್ಧ ಬಿಜೆಪಿ ಮತ್ತು ಮೋದಿ ಸರ್ಕಾರದಿಂದ ಷಡ್ಯಂತ್ರ” ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
“ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾದದ್ದು. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾಗದೆ ಬಿಜೆಪಿಯವರು ಇಂತಹ ಷಡ್ಯಂತ್ರ ನಡೆಸಿದ್ದಾರೆ” ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರದಿಂದ ರಾಜಭವನ ದುರ್ಬಳಕೆ: ದಿನೇಶ್ ಗುಂಡೂರಾವ್
“ನಕಲಿ ಹೋರಾಟಗಾರರು ಸೃಷ್ಟಿಸಿದ ಪ್ರಹಸನವನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೆ ರಾಜಭವನವನ್ನು ಕೇಂದ್ರ ದುರ್ಬಳಕೆ ಮಾಡಿಕೊಂಡಿದೆ. ಸಂವಿಧಾನದ 163ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಮಾಡಿರುವ ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ? ಸಿದ್ದರಾಮಯ್ಯ ನವರ ನಿಷ್ಕಳಂಕ ರಾಜಕೀಯ ಬದುಕಿಗೆ ಚ್ಯುತಿ ತರುವ ನಿಮ್ಮ ಪ್ರಯತ್ನಗಳು ಫಲ ನೀಡದು. ಕೇಂದ್ರ ಸರ್ಕಾರ, ಬಿಜೆಪಿ-ಜನತಾದಳ ಹಾಗೂ ಸಂಘ ಪರಿವಾರದ ಷಡ್ಯಂತ್ರವನ್ನು ನಾವು ಹಿಮ್ಮೆಟ್ಟಿಸುತ್ತೇವೆ. ವಿಪಕ್ಷದ ಸರ್ಕಾರವನ್ನು ಉರುಳಿಸುವ ಹೀನ ರಾಜಕೀಯವನ್ನು ಬಿಟ್ಟು ಬಿಜೆಪಿ ರಾಜಧರ್ಮ ಪಾಲಿಸಲಿ” ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ: ರಾಮಲಿಂಗಾ ರೆಡ್ಡಿ
“ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡ ಇದ್ದು, ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದ್ದು, ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
“ಎಚ್.ಡಿ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯೇ ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ. ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ ಕಡತವನ್ನು ಸಹ ಸುಮಾರು 2 ವರ್ಷಗಳಿಂದ ರಾಜ್ಯಪಾಲರು ಬಾಕಿ ಉಳಿಸಿಕೊಂಡಿದ್ದಾರೆ. ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ ನಿದ್ರಾವಸ್ಥೆಯಲ್ಲಿದೆ. ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ” ಎಂದು ವಿವರಿಸಿದ್ದಾರೆ.
“ಬಿಜೆಪಿ ಮತ್ತು ಮಿತ್ರಪಕ್ಷದ ಬಗೆದಷ್ಟು ಲೆಕ್ಕ ಹಾಕದಷ್ಟು ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಇದ್ದು, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ನವರ ವಿಚಾರದಲ್ಲಿ ಮಾತ್ರ ತಮ್ಮ ಮಂತ್ರದಂಡವನ್ನು ಉಪಯೋಗಿಸಿ ಹೇಗಾದರೂ ಮಾಡಿ ಈ ಜನಪರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ಹೊರಟಿರುವುದು ಕಾನೂನು ಬಾಹಿರವಾಗಿದ್ದು, ಇದು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನವಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಭವನವು ಬಿಜೆಪಿ ಕಚೇರಿಯಾಗಿದೆ: ಎಂಬಿ ಪಾಟೀಲ್
“ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ರಾಜಭವನವು ಬಿಜೆಪಿ ಕಚೇರಿಯಾಗಿದೆ! ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಷಡ್ಯಂತ್ರದ ಭಾಗವಾಗಿದೆ. ಮಾಜಿ ಸಿಎಂ ಶ್ರೀ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಸೇರಿದಂತೆ ಇತರೆ ಪ್ರಕರಣಗಳಿಗೆ ಅನುಮತಿ ನೀಡುವಿಕೆಯಲ್ಲಿ ಉತ್ಸಾಹ ತೋರದ ಘನತೆವೆತ್ತ ರಾಜ್ಯಪಾಲರು, ನಮ್ಮ ಸಿಎಂ ವಿರುದ್ಧ ತರಾತುರಿಯಿಂದ ಅನುಮತಿ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಘನತೆಗೆ ಮಸಿ ಬಳಿಯುವ ಹುನ್ನಾರವಿದು. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಜಯದೊರೆಯಲಿದೆ ಎಂಬ ವಿಶ್ವಾಸವೂ ನಮಗಿದೆ” ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ: ಸಾಗರ್ ಖಂಡ್ರೆ
“ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದಿಂದಾಗಿ ರಾಜಭವನವನ್ನು ದುರುಪಯೋಗಪಡಿಸಿಕೊಂಡು ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. 134 ಸೀಟ್ ಗೆದ್ದು ಬಹುಮತದಿಂದ ಅಧಿಕಾರಕ್ಕೆ ಬಂದ ಚುನಾಯಿತ ಸರ್ಕಾರವನ್ನು ಉರುಳಿಸುವ ಬಿಜೆಪಿ ಹಾಗೂ ಜೆಡಿಎಸ್ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಬೀದರ್ ಸಂಸದ ಸಾಗರ್ ಖಂಡ್ರೆ
“ಮುಡಾ ಇಲ್ಲಿ ಯಾವುದೇ ಹಗರಣ ನಡೆದಿಲ್ಲ ಸೈಟ್ ಹಂಚಿಕೆಯಾದಾಗ ಸಿದ್ದಾರಾಮಯ್ಯ ಅವರು ಅಧಿಕಾರದಲ್ಲಿ ಇರಲಿಲ್ಲ ಆವಾಗ ಬಿಜೆಪಿ ಅಧಿಕಾರದಲ್ಲಿ ಇತ್ತು ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದ್ದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿಗಳ ಹೆಸರಿಗೆ ಕಳಂಕ ತರುವ ಕೆಲಸ ಕೇಂದ್ರ ಸರ್ಕಾರ ಹಾಗೂ ರಾಜ್ಯದ ವಿರೋಧ ಪಕ್ಷದವರು ಮಾಡುತ್ತಿದ್ದಾರೆ” ಎಂದಿದ್ದಾರೆ.
“ಹಿಂದುಳಿದ, ಶೋಷಿತ ವರ್ಗದವರು, ಬಡವರು, ನಿರ್ಗತಿಕರು ಹಾಗೂ ಸಾಮಾಜಿಕ ನ್ಯಾಯದ ತತ್ವ ಸಿದ್ಧಾಂತದ ಮೇಲೆ ರಾಜ್ಯದ ಎಲ್ಲ ಸಮುದಾಯಗಳ ಏಳಿಗೆಗಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ಮಾನ್ಯ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದೆ ಹೀಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ; ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ


