ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಸುಗ್ರೀವಾಜ್ಞೆ-2025ಕ್ಕೆ ರಾಜ್ಯಪಾಲರು ಬುಧವಾರ (ಜ.29) ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರ ಇದನ್ನು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಸುಗ್ರೀವಾಜ್ಞೆ ಹಿನ್ನೆಲೆ, ಸಾರ್ವಜನಿಕ ಉದ್ದೇಶಕ್ಕಾಗಿ ಬೆಂಗಳೂರು ಅರಮನೆಗೆ ಸಂಬಂಧಿಸಿದ ಜಾಗದ ಯಾವುದೇ ಭಾಗವನ್ನು ಬಳಕೆ ಮಾಡುವ ಮತ್ತು ಅದನ್ನು ನಿಯಂತ್ರಣಕ್ಕೆ ಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕೆ ದೊರೆತಿದೆ.
ರಸ್ತೆ ಅಗಲೀಕರಣದ ಉದ್ದೇಶಕ್ಕೆ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕೆ ಟಿಡಿಆರ್ ಕೊಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಜಾರಿಗೊಳಿಸಿದರೆ ಸರ್ಕಾರಕ್ಕೆ ಸುಮಾರು 3,011 ಕೋಟಿ ರೂಪಾಯಿ ಹೊರೆ ಬೀಳಲಿದೆ. ಅದರಿಂದ ಪಾರಾಗಲು ಶುಕ್ರವಾರ (ಜ.24) ನಡೆದ ಸಚಿವ ಸಂಪುಟ ಸಭೆಯಲ್ಲ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿತ್ತು.
ಸುಗ್ರೀವಾಜ್ಞೆಯ ಮೂಲಕ ಅರಮನೆ ಮೈದಾನ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ವರ್ಗದ ವಿರುದ್ಧ ಯಾರೂ ಸಿವಿಲ್, ಕ್ರಿಮಿನಲ್ ದಾವೆ ಹೂಡಲು ಅವಕಾಶ ಇರದಂತೆ ಮಾಡಲಾಗಿದೆ. ಟಿಡಿಆರ್ ವಿಚಾರದಲ್ಲಿ ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಆದೇಶ ಬಂದರೂ ಅಥವಾ ರಾಜ್ಯ ಸರ್ಕಾರವು ಈ ಹಿಂದೆ ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ ಸರ್ಕಾರವು 1ನೇ ಉಪ ಪ್ರಕರಣದಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಗೆ ಸಂಪೂರ್ಣ ಅಥವಾ ಭಾಗಶಃ ಮುಂದುವರಿಯದಿರಯಲು ಅಧಿಕಾರ ಇರಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರು ಅರಮನೆಯ ಒಟ್ಟಾರೆ ವ್ಯಾಪ್ತಿಯ 427 ಎಕರೆ ಮತ್ತು 16 ಗುಂಟೆಗಳ ಒಟ್ಟು ಮೌಲ್ಯವನ್ನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ 8 & 9ನೇ ಪ್ರಕರಣಗಳ ಅನುಸಾರ 11 ಕೋಟಿ ರೂಪಾಯಿ ಎಂದು ನಿರ್ಧರಿಸಲಾಗಿದೆ. ಕಾಯಿದೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ ಈ ಕಾಯಿದೆಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.
1996 ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಮತ್ತು 16 ಗುಂಟೆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂಪಾಯಿ ನಿಗದಿಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದರೆ, ರಾಜಮನೆತನ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದಿನ ಮಾರುಕಟ್ಟೆ ದರ ಪ್ರತಿ ಎಕರೆಗೆ 200 ಕೋಟಿ ರೂ. ಆಗುತ್ತದೆ.
ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ನೀಡಬೇಕಾಗುತ್ತದೆ. ಒಟ್ಟು ಜಾಗದ ಮೌಲ್ಯ 3,011 ಕೋಟಿ ರೂ. ಆಗಲಿದೆ. ಇದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದೆ.
ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡಲು ಮೋದಿ ಸರ್ಕಾರ ಹುನ್ನಾರ : ಬಡಗಲಪುರ ನಾಗೇಂದ್ರ


