ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, “ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರ; ಕಾನೂನು ಹೋರಾಟ ಮಾಡಲಾಗುವುದು” ಎಂದು ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಅವರ ನಿರ್ಣಯ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರವಾಗಿದೆ. ನಮ್ಮ ಸರ್ಕಾರವನ್ನು ಅಭ್ರಗೊಳಿಸುವ ದೊಡ್ಡ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಈ ಷಡ್ಯಂತ್ರದ ಪಾಲುದಾರರು. ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು.
ನನ್ನ ವಿರುದ್ಧ ದೂರು ಬಂದ ದಿನವೇ ಶೋಕಾಸ್ ನೋಟೀಸ್ ನೀಡಲಾಗಿತ್ತು. ರಾಜ್ಯಪಾಲರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಶಾಸಕರು, ಸಂಪುಟ ಸಚಿವರು, ಪಕ್ಷದ ವರಿಷ್ಠರೆಲ್ಲರೂ ನನ್ನ ಪರವಾಗಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇದು ರಾಜಕೀಯ ಪಿತೂರಿಯಾಗಿದ್ದು, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಅವರು ತಿರುಗೇಟು ನೀಡಿದ್ದಾರೆ.
ಮಾನ್ಯ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಅವರ ನಿರ್ಣಯ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರವಾಗಿದೆ.
ನಮ್ಮ ಸರ್ಕಾರವನ್ನು ಅಭ್ರಗೊಳಿಸುವ ದೊಡ್ಡ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಈ ಷಡ್ಯಂತ್ರದ ಪಾಲುದಾರರು.…
— Siddaramaiah (@siddaramaiah) August 17, 2024
“ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ನನ್ನ ರಾಜೀನಾಮೆ ಕೇಳಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅವರಿಗೆ ಸಹಿಸಲಾಗುತ್ತಿಲ್ಲ .ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ. ಬಿಜೆಪಿಯವರ ಈ ನಿಲುವಿಗ ಈಗ ಜೆಡಿಎಸ್ ನವರೂ ಬೆಂಬಲ ನೀಡಿದ್ದಾರೆ” ಎಂದಿದ್ದಾರೆ.
“ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿಯವರ ವಿರುದ್ಧ ದೂರು ನೀಡಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ. ನವೆಂಬರ್ ತಿಂಗಳಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ಮೇಲೆ ಅನಧಿಕೃತ ಗಣಿಗಾರಿಕೆಗೆ ಪರವಾನಗಿ ನೀಡಿರುವ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೋರಿದ್ದರೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ
ಮೂಡಾ ವಿವಾದದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ನಂತರ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
“ಭ್ರಷ್ಟಾಚಾರದ ಕಳಂಕ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದ್ದು, ಸಿದ್ದರಾಮಯ್ಯನವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾರದರ್ಶಕ ಮತ್ತು ನಿಷ್ಪಕ್ಷವಾತದ ನ್ಯಾಯಾಂಗ ಪ್ರಕ್ರಿಯೆಗೆ ಸಹಕರಿಸಬೇಕು” ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.
“ಗೌರವಾನ್ವಿತ ರಾಜ್ಯಪಾಲರು ತಮ್ಮ ಸಂವಿಧಾನ ದತ್ತ ಅಧಿಕಾರ ಚಲಾಯಿಸಿ ಮುಖ್ಯಮಂತ್ರಿಗಳ ಮುಡಾ ಹಗರಣದ ದೂರಿಗೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಸಾಕಷ್ಟು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಭಂಡತನ ಪ್ರದರ್ಶಿಸುತ್ತಿದ್ದ ಸಿದ್ದರಾಮಯ್ಯನವರು ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಇದನ್ನೂ ಓದಿ; ರಾಜ್ಯಪಾಲರು ಪೂರ್ವಾಗ್ರಹ ಪೀಡಿತರಾಗಿದ್ದು, ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ: ಎಚ್.ಸಿ. ಮಹದೇವಪ್ಪ ಆಕ್ರೋಶ


