ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಈಗ ಫಲಿತಾಂಶವೂ ಬಹತೇಕ ಹೊರಬಿದ್ದಾಗಿದೆ. ಆಯ್ಕೆಯಾದವರು ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಈ ಸಂಭ್ರಮಾಚರಣೆ ತನ್ನ ಗೆಲುವಿಗೆ ಸೀಮಿತವಾಗಿರಬೇಕೇ ವಿನಃ ಮತ್ತೊಬ್ಬರ ಸೋಲನ್ನು ಅಣಕಿಸುವಂತಿರಬಾರದು. ಮುಖ್ಯವಾಗಿ ಅದು ಹಾನಿಕಾರಕವಾಗಿಯಂತೂ ಇರಲೇಬಾರದು. ಆದರೆ ಇಲ್ಲೊಂದು ಪ್ರಕರಣದಲ್ಲಿ, ಗೆದ್ದವರು ತನ್ನ ಸಂಭ್ರಮಾಚರಣೆಯ ಪ್ರಯುಕ್ತ ಸೋತವರ ಮನೆಗೆ ನುಗ್ಗಿ ದಾಂಧಲೆ ಮಾಡಿ ಅಲ್ಲಿರುವವರ ಮೇಲೆ ಹಲ್ಲೆ ಮಾಡಿರುವ ಘಟನೆ ಗುಂಡ್ಲುಪೇಟೆಯ ಗ್ರಾಮವೊಂದರಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೋಕಿನ ಹೊಂಗಳ್ಳಿ ಗ್ರಾಮದಲ್ಲಿ ವೀರಶೈವ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯೊಬ್ಬರು ದಲಿತ ಅಭ್ಯರ್ಥಿಯ ಎದುರು ಸ್ಪರ್ಧಿಸಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಈ ಆಯ್ಕೆಯಾದ ಮೇಲ್ಜಾತಿಯವರ ಸಂಭ್ರಮಾಚರಣೆ ದಲಿತರ ಕೇರಿಗೆ ನುಗ್ಗಿ ಪಟಾಕಿ ಸಿಡಿಸಿ ಸಂಭ್ರಮಿಸುವ ಮಟ್ಟಕ್ಕೆ ತಲುಪಿತ್ತು. ಇದರಿಂದ ಗಲಭೆ ಆರಂಭವಾಗಿ, ಜಾತಿನಿಂದನೆ ಮಾಡಿ, ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಮೇಲೆ ಚಪ್ಪಲಿ ಎಸೆದು ನಿಂದಿಸಿ, ಮಕ್ಕಳು ಮಹಿಳೆಯರು ಎನ್ನದೇ ಅವರ ಮೇಲೂ ಹಲ್ಲೆ ನಡೆಸಲಾಗಿದೆ.
ಇಂತಹ ವಿಕೃತ ಘಟನೆಗಳು ನಮ್ಮ ಕಣ್ಣೆದುರಿಗೆ ಸಾಕಷ್ಟಿವೆ. ಇವುಗಳಿಗೆ ಕಾರಣ ಏನೆಂಬುದನ್ನು ಹೋರಾಟಗಾರರು ಮತ್ತು ಚಿಂತಕರಾದ ಕೃಷ್ಣಮೂರ್ತಿ ಚಮರಂ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಆಗ ’ತುಕುಡೆ ಗ್ಯಾಂಗ್’, ಈಗ ಕೃಷಿಕರು: ಸಂಸದೆ ಶೋಭಾ ಕರಂದ್ಲಾಜೆಯ ಇಬ್ಬಂದಿತನ
ನಾನುಗೌರಿ.ಕಾಂ ಜೊತೆ ಮಾತನಾಡಿದ ಕೃಷ್ಣಮೂರ್ತಿ, “ಚುನಾವಣೆಗಳು ಯಾವುದೇ ಇರಲಿ. ಅಲ್ಲಿ ಆಯ್ಕೆಯಾದವರು ಮತ್ತು ಆಯ್ಕೆಯಾಗದವರು ಎಂಬುದಷ್ಟೇ ಮಾನದಂಡ. ಅದು ಸೋಲು ಗೆಲುವು ಎಂಬುದಲ್ಲ. ನಮ್ಮ ಪರಿಭಾಷೆಯೇ ಸರಿಯಿಲ್ಲ. ಆಯ್ಕೆಯಾದವರು ಸಂಭ್ರಮಿಸಬೇಕು. ಆದರೆ ಆ ಸಂಭ್ರಮದಲ್ಲಿ ಆಯ್ಕೆಯಾಗದವರು, ಆಯ್ಕೆಯಾಗದವರ ಬೆಂಬಲಿಗರು ಎಲ್ಲರ ಮೇಲೂ ಸಂಭ್ರಮದ ನೆಪದಲ್ಲಿ ಸಮರ ಸಾರುವುದು ಈಗ ಎಲ್ಲೆಡೆ ವ್ಯಾಪಕವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳು ನಿಜಕ್ಕೂ ರಣರಂಗವೇ ಆಗಿವೆ. ಚುನಾವಣಾ ವ್ಯವಸ್ಥೆ ಜನರನ್ನು ಛಿದ್ರಛಿದ್ರಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಆತಂಕ ವ್ಯಕ್ತಪಡಿಸಿದರು.
“ಇಂದಿನ ಈ ಪರಿಸ್ಥಿತಿಗೆ ನಮ್ಮ ನಡುವಿನ ಮಾಧ್ಯಮಗಳ ಅನೈತಿಕತೆಯೆ ಕಾರಣವಾಗಿದೆ. ಏಕೆಂದರೆ, ಚುನಾವಣೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿನ ಒಂದು ಪ್ರಕ್ರಿಯೆಯಷ್ಟೆ. ಆದರೆ ಈ ಮಾಧ್ಯಮಗಳು ಚುನಾವಣಾ ರಣರಂಗ ಎಂದು ಬಿಂಬಿಸುತ್ತವೆ. ಜೊತೆಗೆ ತಮ್ಮ ಟಿಆರ್‌ಪಿಗಾಗಿ, ಹೀನಾಯ ಸೋಲು, ಪ್ರಚಂಡ ಗೆಲುವು, ಗದ್ದುಗೆ, ಸಿಂಹಾಸನ, ಪಟ್ಟಾಭಿಷೇಕ, ದರ್ಬಾರ್, ರಣಾಂಗಣ, ಶಕ್ತಿ ಪ್ರದರ್ಶನ, ಯುದ್ಧಭೂಮಿ ಎಂದೆಲ್ಲಾ ಅಬ್ಬರಿಸುತ್ತವೆ. ಇದನ್ನು ನೋಡುತ್ತಿರುವ ಜನ ಇಂದು ಚುನಾವಣೆಯನ್ನು ಅದರ ವಾಸ್ತವದ ಹಿನ್ನೆಲೆಯಲ್ಲಿ ನೋಡುತ್ತಿಲ್ಲ. ಇವು ಸೋಲು-ಗೆಲುವು ಲೆಕ್ಕಾಚಾರದೊಟ್ಟಿಗೆ ಮಾನ-ಅವಮಾನದ ಪ್ರಶ್ನೆಯನ್ನು ಮುಂದಿಡುತ್ತವೆ. ಈ ಕಾರಣದಿಂದಲೇ ಗುಂಡ್ಲುಪೇಟೆಯಂತಹ ಘಟನೆಗಳು ನಡೆಯುತ್ತವೆ. ಇನ್ನೂ ಮುಂದುವರಿದು ಆತ್ಮಹತ್ಯೆ, ಕೊಲೆಯಂತಹ ಘಟನೆಗಳಲ್ಲೂ ಮುಕ್ತಾಯವಾಗುತ್ತದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಜಿಯೋ ಟವರ್‌ಗಳ ಮೇಲಿನ ರೈತರ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ
“ಈ ಗ್ರಾಮ ನನಗೆ ಬಹಳ ಹತ್ತಿರದ್ದು. ಇಲ್ಲಿ ವೀರಶೈವರು ಪ್ರಬಲವಾಗಿದ್ದು, ಅವರ ನಂತರ ಸ್ಥಾನದಲ್ಲಿ ದಲಿತರು, ಕುರುಬರು ಉಪ್ಪಾರರು ಬರುತ್ತಾರೆ. ಇಲ್ಲಿರುವ ಬಹುಸಂಖ್ಯಾತ ವೀರಶೈವರು ಬಿಜೆಪಿಯ ಪರ. ಈಗ ನಡೆದಿರುವ ವಿಕೃತ ಘಟನೆಗೂ ಇವರೇ ಕಾರಣ. ಆಯ್ಕೆಯಾದವರು ತಮ್ಮ ಸಂಭ್ರಮವನ್ನು ತಮ್ಮ ಬೆಂಬಲಿಗರೊಂದಿಗೆ ತಾವಿರುವ ಸ್ಥಳದಲ್ಲಿ ಮಾಡಿಕೊಳ್ಳಬೇಕು. ಅದುಬಿಟ್ಟು ಸೋತವನ ಮನೆಗೆ ನುಗ್ಗುವುದು ಎಷ್ಟು ಸರಿ?. ಅಷ್ಟೇ ಅಲ್ಲದೇ, ಈ ದಲಿತರೆಲ್ಲಾ ಇಂದು ಎದ್ದು ನಿಲ್ಲಲು ಈ ಅಂಬೇಡ್ಕರ್ ಕಾರಣ ಎಂದು ಅವರ ಬ್ಯಾನರ್ ಮೇಲೆ ಚಪ್ಪಲಿ ಎಸೆಯುವುದು ಎಷ್ಟು ಸರಿ. ಹಾಗಾಗಿಯೇ ಈ ಸೋಲು-ಗೆಲುವು ಎನ್ನುವುದು ಪ್ರಾಥಮಿಕವಾಗಿಯೇ ಸರಿಯಿಲ್ಲ” ಎಂದು ಹೇಳಿದರು.
“ಭಕ್ತರ ಅಟ್ಟಹಾಸ ಈಗ ಪ್ರತೀ ಗ್ರಾಮಕ್ಕೂ ಇಳಿದಿದೆ. ಇದು ಕೇಸರಿ ಪಡೆಯ ದಾಂಧಲೆ. ಇನ್ನಾದರೂ ಬಿಜೆಪಿ ಒಳಗಿರುವ ಘಟಾನುಘಟಿ ನಾಯಕರು(!) ತಮ್ಮ ಸಮುದಾಯದ ಪರ ಬಾಯಿ ಬಿಚ್ಚುವರೇ? ಅಥವಾ ಒದೆಸಿಕೊಂಡು ನಾಶವಾಗಿ, ನಾವು ಮಾತ್ರ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿಕೊಂಡು ಹಾಯಾಗಿರುತ್ತೇವೆ ಎಂದುಕೊಳ್ಳುವರೋ? ಈ ಕಾರಣಕ್ಕೆ ದಲಿತರು ಬಿಜೆಪಿ ಬೆಂಬಲಿಸಬೇಕಾ?? ಯೋಚನೆ ಮಾಡಿ” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ


