ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್) ಸ್ವಾಯತ್ತ ಪ್ರದೇಶವಾದ ಗ್ರೀನ್ ಲ್ಯಾಂಡ್ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು “ನಾವು ಯಾರ ಅಡಿಯಾಳಾಗಿರಲು ಬಯಸುವುದಿಲ್ಲ” ಎಂದಿವೆ.
“ಅವರಿಗೆ ಇಷ್ಟ ಇರಲಿ, ಇಲ್ಲದಿರಲಿ, ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ಏನನ್ನಾದರು ಮಾಡಲಿದೆ” ಎಂದು ಟ್ರಂಪ್ ಹೇಳಿದ ಬಳಿಕ, ಶುಕ್ರವಾರ (ಜ.9) ತಡರಾತ್ರಿ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು ಹೇಳಿಕೆ ನೀಡಿವೆ.
ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಖರೀದಿಸಲಿದೆ, ಅಗತ್ಯ ಬಿದ್ದರೆ ಮಿಲಿಟರಿ ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದರ ವಿರುದ್ದ ಜಂಟಿಯಾಗಿ ಪ್ರತಿಕ್ರಿಯೆ ಕೊಡಲು ಯುರೋಪ್ ದೇಶಗಳ ಸರ್ಕಾರಗಳು, ಪಕ್ಷಗಳು ಮತ್ತು ನಾಯಕರು ಪರದಾಡುತ್ತಿದ್ದಾರೆ. ಈ ನಡುವೆ ಗ್ರೀನ್‌ಲ್ಯಾಂಡ್‌ನ ರಾಜಕೀಯ ನಾಯಕರಿಂದ ಗಟ್ಟಿ ಪ್ರತಿಕ್ರಿಯೆ ಬಂದಿದೆ.
“ನಾವು ಅಮೆರಿಕನ್ನರಾಗಲು ಬಯಸುವುದಿಲ್ಲ, ನಾವು ಡ್ಯಾನಿಶ್ ಆಗಲೂ ಬಯಸುವುದಿಲ್ಲ, ನಾವು ಗ್ರೀನ್‌ಲ್ಯಾಂಡ್‌ನವರಾಗಲು ಬಯಸುತ್ತೇವೆ. ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನು ಗ್ರೀನ್‌ಲ್ಯಾಂಡ್‌ನವರೇ ನಿರ್ಧರಿಸಬೇಕು” ಎಂದು ಗ್ರೀನ್‌ಲ್ಯಾಂಡ್‌ನ ಸಂಸತ್ತಿನ ಐದು ಪಕ್ಷಗಳ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಇದರಲ್ಲಿ ಬೇರೆ ಯಾವುದೇ ದೇಶ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಆತುರದ ನಿರ್ಧಾರ ತೆಗೆದುಕೊಳ್ಳುವ ಒತ್ತಡವಿಲ್ಲದೆ, ವಿಳಂಬ ಮಾಡದೆ ಮತ್ತು ಇತರ ದೇಶಗಳ ಹಸ್ತಕ್ಷೇಪವಿಲ್ಲದೆ ನಮ್ಮ ದೇಶದ ಭವಿಷ್ಯವನ್ನು ನಾವೇ ನಿರ್ಧರಿಸಬೇಕು” ಅವರು ಒತ್ತಿ ಹೇಳಿದ್ದಾರೆ.
“ಅಮೆರಿಕ? ಇಲ್ಲ ಇಲ್ಲ..ನಾವು ಹಲವು ವರ್ಷಗಳ ಕಾಲ ವಸಾಹತುಶಾಹಿಯಾಗಿದ್ದೆವು. ನಾವು ಮತ್ತೆ ವಸಾಹತುಶಾಹಿಯಾಗಲು ಸಿದ್ಧರಿಲ್ಲ” ಎಂದು ಗ್ರೀನ್‌ಲ್ಯಾಂಡ್ ರಾಜಧಾನಿ ನೂಕ್‌ನಲ್ಲಿರುವ 48 ವರ್ಷದ ಮೀನುಗಾರ ಜೂಲಿಯಸ್ ನೀಲ್ಸನ್ ಹೆಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
1953ರವರೆಗೆ ಡ್ಯಾನಿಶ್ ವಸಾಹತು ಪ್ರದೇಶವಾಗಿದ್ದ ಗ್ರೀನ್‌ಲ್ಯಾಂಡ್, 26 ವರ್ಷಗಳ ನಂತರ ಸ್ವರಾಜ್ಯವನ್ನು ಪಡೆದುಕೊಂಡಿತು ಮತ್ತು ಅಂತಿಮವಾಗಿ ಡೆನ್ಮಾರ್ಕ್‌ನೊಂದಿಗಿನ ತನ್ನ ಸಂಬಂಧವನ್ನು ಸಡಿಲಗೊಳಿಸುವ ಬಗ್ಗೆ ಯೋಚಿಸುತ್ತಿದೆ. ಇದನ್ನು ವಾಸ್ತವಿಕಗೊಳಿಸುವ ಕುರಿತು ಅನೇಕ ಗ್ರೀನ್‌ಲ್ಯಾಂಡ್‌ನವರು ಪ್ರಯತ್ನಿಸುತ್ತಿದ್ದಾರೆ.
ಪ್ರಸ್ತುತ ಅಧಿಕಾರದಲ್ಲಿರುವ ಒಕ್ಕೂಟವು ಆತುರದ ಸ್ವಾತಂತ್ರ್ಯದ ಪರವಾಗಿಲ್ಲ. 2025ರ ಶಾಸಕಾಂಗ ಚುನಾವಣೆಯಲ್ಲಿ ಶೇಕಡಾ 24.5ರಷ್ಟು ಮತಗಳನ್ನು ಗಳಿಸಿದ ಏಕೈಕ ವಿರೋಧ ಪಕ್ಷವಾದ ನಲೆರಾಕ್, ಸಾಧ್ಯವಾದಷ್ಟು ಬೇಗ ಸಂಬಂಧಗಳನ್ನು ಕಡಿತಗೊಳಿಸಲು ಬಯಸುತ್ತದೆ. ಆದರೆ, ಅದು ಜಂಟಿ ಘೋಷಣೆಗೆ ಸಹಿ ಹಾಕಿದೆ.
“ನಾವು ಹಲವು ವರ್ಷಗಳಿಂದ ಹೋರಾಡುತ್ತಿರುವ ಸ್ವಾತಂತ್ರ್ಯಕ್ಕಾಗಿ ತಯಾರಿ ಆರಂಭಿಸುವ ಸಮಯ ಬಂದಿದೆ” ಎಂದು ಸಂಸದ ಜುನೋ ಬರ್ತೆಲ್ಸನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


