ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮವಾದದ್ದನ್ನು ಕಂಡುಕೊಂಡೆವು. ಆರಂಭದಲ್ಲಿ ಬೆರಳೆಣಿಕೆಯಷ್ಟು ಇದ್ದ ಅಸ್ಪೃಶ್ಯರ ಸಂಖ್ಯೆ ಕ್ರಿ.ಶ 400ರಿಂದ ಕ್ರಿ.ಶ 1200ರಷ್ಟೊತ್ತಿಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಅಸ್ಪೃಶ್ಯರ ಸಂಖ್ಯೆಯು ಯಾವಾಗಲೂ ಜಾತಿಗಳ ಸಂಖ್ಯೆಗೆ ನೇರ ಅನುಪಾತದಲ್ಲಿರುತ್ತದೆ. ಅಸ್ಪೃಶ್ಯರ ಸಂಖ್ಯೆ ಹೆಚ್ಚಾಗಿದೆ ಎಂದರೆ ಜಾತಿಗಳ ಸಂಖ್ಯೆ ಹೆಚ್ಚಾಗಿದೆ ಎಂದೇ ಅರ್ಥ. ’ಜಾತಿ ಎನ್ನುವುದು ಬೆಳೆಯುತ್ತಿರುವ ಒಂದು ವ್ಯವಸ್ಥೆಯಾಗಿದೆ’ ಎಂದು ಅಂಬೇಡ್ಕರ್ ಹೇಳಿರುವ ಮಾತು ಅಕ್ಷರಶಃ ನಿಜ. ಜಾತಿ ಎಲ್ಲಾ ಕಾಲದಲ್ಲೂ ಒಂದೇ ತೆರನಾಗಿಲ್ಲ. ಮೆಗಾಸ್ಥನೀಸನು ಭಾರತದಲ್ಲಿದ್ದು ನೋಡಿ ಬರೆದಾಗ ಜಾತಿಯ ರಚನೆ ಸ್ವರೂಪ ಒಂದು ರೀತಿಯಲ್ಲಿತ್ತು. ಅದೇ ಅಲ್ಬೆರೂನಿ ಬಂದಾಗ ಬೇರೆಯೇ ಆದ ರೂಪ ಮತ್ತು ಆಕಾರದಲ್ಲಿತ್ತು. ಪೋರ್ಚುಗೀಸನಿಗೆ ದೊರಕಿದ ಚಿತ್ರವಾದರೋ ಆಲ್ಬೆರೂನಿ ಕಂಡ ಚಿತ್ರಕ್ಕಿಂತ ಭಿನ್ನವಾಗಿತ್ತು. ಹಾಗಾಗಿ ಮಧ್ಯಕಾಲೀನ ಊಳಿಗಮಾನ್ಯ ಕಾಲದಲ್ಲಿ ’ಜಾತಿ’ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಖಚಿತವಾಗಿದೆ.

ಅಂಬೇಡ್ಕರರು ಜಾತಿಗಳ ಸಂಖ್ಯೆ ಹೆಚ್ಚಾಗಲು ನಾಲ್ಕು ಮುಖ್ಯ ಕಾರಣಗಳನ್ನು ನೀಡುತ್ತಾರೆ. 1. ಮತಾಂತರ (ಬೌದ್ಧ ಧರ್ಮ, ಜೈನ ಧರ್ಮ, ವೈದಿಕ ಧರ್ಮ ಹಾಗೂ ಇತರೆ 62 ಪಂಥಗಳ ನಡುವಿನ ಮತಾಂತರ) 2. ಅಂತರ್ಜಾತಿ ವಿವಾಹ 3. ಅಂತರ್‌ಭೋಜನ 4. ವೃತ್ತಿ ಭ್ರಷ್ಟತೆ. ಅಂಬೇಡ್ಕರರು ತಮ್ಮ ’ಹಿಂದೂ ಧರ್ಮದ ಒಗಟುಗಳು’ ಕೃತಿಯಲ್ಲಿ ಮಿಶ್ರ ಜಾತಿಗಳ ಉಗಮವನ್ನು ವಿವರಿಸಲೆಂದೇ ’ಮನುವಿನ ಹುಚ್ಚುತನ ಅಥವಾ ಮಿಶ್ರ ಜಾತಿಗಳ ಉಗಮದ ಬಗ್ಗೆ ಬ್ರಾಹ್ಮಣರ ವಿವರಣೆ’ ಅಧ್ಯಾಯವನ್ನು ಮೀಸಲಿಟ್ಟಿದ್ದಾರೆ. ಆದರೆ ಅದಕ್ಕೂ ಮೊದಲು ಅಂಬೇಡ್ಕರರೇ ಮೇಲೆ ಗುರುತಿಸಿರುವಂತೆ ಮೆಗಾಸ್ತನೀಸನಿಂದ ಪರಿಶೀಲಿಸುತ್ತಾ ಬರೋಣ. ಕ್ರಿ.ಪೂ 305ರಷ್ಟೊತ್ತಿಗೆ ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ರಾಯಭಾರಿಯಾಗಿ ಬಂದಿದ್ದ ಗ್ರೀಕ್‌ನ ಮೆಗಾಸ್ತನೀಸ್ ಅಂದು ಭಾರತದಲ್ಲಿ ಜನರನ್ನು ಏಳು ವರ್ಗಗಳಾಗಿ ವಿಂಗಡಿಸಿದ್ದನು. ನಂತರ ಸ್ಮೃತಿಗಳ ಕಾಲದಲ್ಲಿ ಮನುಶಾಸ್ತ್ರವು ಜಾತಿಗಳನ್ನು ಐದು ಗುಂಪುಗಳನ್ನಾಗಿ ಮಾಡುತ್ತದೆ. 1. ಆರ್‍ಯ ಜಾತಿಗಳು 2. ಅನಾರ್‍ಯ ಜಾತಿಗಳು 3. ವ್ರಾತ್ಯ ಜಾತಿಗಳು 4. ಪತಿತ ಜಾತಿಗಳು ಮತ್ತು 5. ಸಂಕರ ಜಾತಿಗಳು. ಆರ್‍ಯ ಜಾತಿಗಳೆಂದರೆ ನಾಲ್ಕು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಅನಾರ್‍ಯ ಜಾತಿಗಳಲ್ಲಿ ದಸ್ಯುಗಳನ್ನು ಹೆಸರಿಸಿದೆ. ವ್ರಾತ್ಯ ಜಾತಿಗಳಲ್ಲಿ ಮೂರು ಉಪಗುಂಪುಗಳನ್ನು ಮಾಡಿ ವ್ರಾತ್ಯ ಬ್ರಾಹ್ಮಣರು, ವ್ರಾತ್ಯ ಕ್ಷತ್ರಿಯರು ಮತ್ತು ವ್ರಾತ್ಯ ವೈಶ್ಯರು ಎಂದು ಹೆಸರಿಸಿದೆ. ಇವುಗಳು ಒಟ್ಟು 18 ಜಾತಿಗಳು. ಪತಿತ ಜಾತಿಗಳಲ್ಲಿ ಶೂದ್ರರಾದ ಕ್ಷತ್ರಿಯರನ್ನು ಗುಂಪು ಮಾಡುತ್ತಾ (ಇವರೆಲ್ಲ ಆರ್‍ಯ ಸಂಸ್ಕಾರ ಬಿಟ್ಟು ಶೂದ್ರರಾದವರು) 11 ಜಾತಿಗಳನ್ನು ಹೆಸರಿಸಿದೆ. ನಂತರದ್ದು ಸಂಕರ ಜಾತಿಯವರು (ಪ್ರತಿಲೋಮ-ಅನುಲೋಮ ವಿವಾಹಗಳಿಂದ ಜನಿಸಿದವರು- ಈ ವಾದವನ್ನು ಒಪ್ಪಲಾಗುವುದಿಲ್ಲ. ಆದರೂ ಜಾತಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಇದು ಸೂಚಿಸುತ್ತದೆ.) ಇವರಲ್ಲಿ 13 ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಈ 13 ಜಾತಿಗಳೇ ಮುಂದಿನ ಅಸ್ಪೃಶ್ಯ ಜಾತಿಗಳು. ಹೀಗೆ ಮನುಶಾಸ್ತ್ರವು ಒಟ್ಟು 47 ಜಾತಿಗಳನ್ನು ಪಟ್ಟಿ ಮಾಡುತ್ತದೆ. ಮನುಸ್ಮೃತಿಯ ನಂತರದ ಔಷಾಸನ ಸ್ಮೃತಿ, ಬೌಧಾಯನ ಸ್ಮೃತಿ, ವಾಸಿಷ್ಠ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ ಮತ್ತು ಸೂತ ಸಂಹಿತೆಗಳು ಸಂಕರ ಜಾತಿಗಳ ಪಟ್ಟಿಯನ್ನು ಮತ್ತಷ್ಟು ಬೆಳೆಸುತ್ತವೆ. ಸೂತ ಸಂಹಿತೆಯಂತು ಬೃಹತ್ ಪಟ್ಟಿಯನ್ನೇ ನೀಡಿದೆ. ಸುಮಾರು 67 ಇತರೆ ಸಂಕರ ಜಾತಿಗಳನ್ನು ಈ ಸ್ಮೃತಿಗಳು ಪಟ್ಟಿ ಮಾಡುತ್ತವೆ. ಅಂದರೆ ನಾಲ್ಕು ವರ್ಣಗಳಿದ್ದ ಸಮಾಜವು ಸುಮಾರು 114 ಜಾತಿಗಳಾದದ್ದನ್ನು ಈ ಸ್ಮೃತಿಕಾರರು ವಿವರಿಸಲೇಬೇಕಾದ ಸಂದಿಗ್ಧತೆಗೆ ಸಿಲುಕುತ್ತಾರೆ. ಈ ಸಂದಿಗ್ಧತೆಯನ್ನು ಪರಿಹರಿಸಿಕೊಳ್ಳಲು ಅವರು ಬಳಸಿಕೊಳ್ಳುವ ಪ್ರಕ್ರಿಯೆ ’ಪ್ರತಿಲೋಮ ಮತ್ತು ಅನುಲೋಮ’ ಸಂಕರ. ಆದರೆ ಅಂಬೇಡ್ಕರರು ಈ ವಾದವನ್ನು ಸುಳ್ಳೆಂದು ಅಂಕಿಸಂಖ್ಯೆಗಳ ಸಮೇತ ಅದೇ ಅಧ್ಯಾಯದಲ್ಲಿ ನಿರೂಪಿಸಿದ್ದಾರೆ. ಅದಾಗಲೇ ಹೇಳಿದಂತೆ ಈ ವಿದ್ಯಮಾನಕ್ಕೆ ಅಂತರ್ಜಾತಿ ವಿವಾಹದ ಜೊತೆಗೆ ಅಂತರ್‌ಭೋಜನ, ಮತಾಂತರ ಮತ್ತು ವೃತ್ತಿ ಭ್ರಷ್ಟತೆ ಕಾರಣವಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತದನಂತರ ಕ್ರಿ.ಶ 1030ರಲ್ಲಿ ಆಲ್ಬೆರೂನಿಯು ಸಹ ಭಾರತದಲ್ಲಿದ್ದ ಜಾತಿಗಳನ್ನು ಪಟ್ಟಿ ಮಾಡುತ್ತಾನೆ. ಈತನು ಭಾರತೀಯರಾದ ಸ್ಮೃತಿಕಾರರಷ್ಟು ಆಳಕ್ಕೆ ಇಳದಿಲ್ಲವಾದರೂ ಜಾತಿಗಳು ವೃತ್ತಿಯಾಧಾರದಲ್ಲಿ ವಿಂಗಡಿಸಿದ್ದನ್ನು ಗುರುತಿಸುತ್ತಾನೆ. ಇವನ ಪ್ರಕಾರ ಚಾತುರ್ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರನ್ನು ಹೊರತುಪಡಿಸಿ ಬೇರೆ ವೃತ್ತಿಯನ್ನು ಮಾಡುವ ಅಂತ್ಯಜರಾದ ಅಗಸ, ಚಮ್ಮಾರ, ಗಾರುಡಿಗ, ಮೇದಾರ, ದೋಣಿಗ, ಬೆಸ್ತ, ಬೇಟೆಗಾರ ಮತ್ತು ನೇಕಾರರನ್ನು ಹೆಸರಿಸುತ್ತಾನೆ. ಗ್ರಾಮ ಸ್ವಚ್ಛಕಾರರಾದ ಹಾಡಿ, ದೊಂಬ, ಚಂಡಾಲ ಮತ್ತು ಬದಂತರನ್ನು ಹೆಸರಿಸುತ್ತಾನೆ. ಇವರನ್ನು ಜಾತಿಭ್ರಷ್ಟರೆಂದು ಹೇಳುತ್ತಾನೆ. ಆದ್ದರಿಂದ ಇವರು ಅಸ್ಪೃಶ್ಯ ಜಾತಿಗಳು. ಭಾರತದ ಜನಗಳ ಬಗ್ಗೆ ಹೇಳುತ್ತಾ ಆಲ್ಬೆರೂನಿಯು ’ವೃತ್ತಿಯಿಂದಷ್ಟೆ ನಿರ್ದಿಷ್ಟವಾಗಿ ಇವರನ್ನು ಗುರುತಿಸಲಾಗುತ್ತದೆ’ ಎನ್ನುತ್ತಾನೆ. ಮುಂದುವರಿದು ಪ್ರತಿಯೊಂದು ಜಾತಿಗಳ ವ್ಯಕ್ತಿಗಳಿಗೂ ಅವರವರ ವೃತ್ತಿ ಹಾಗೂ ಜೀವನ ವಿಧಾನವನ್ನವಲಂಬಿಸಿ ಲಕ್ಷಣ ಸೂಚಕವಾದ ಹೆಸರುಗಳನ್ನು ಕೊಡುತ್ತಿದ್ದರ ಬಗ್ಗೆ ಹೇಳುತ್ತಾನೆ. ಆಶ್ಚರ್ಯವೆಂದರೆ ಆಲ್ಬೆರೂನಿಯು ಬ್ರಾಹ್ಮಣರಲ್ಲಿನ ಜಾತಿವಿಭಜನೆಯ ಬಗ್ಗೆಯೂ ಸುಳಿವು ನೀಡುತ್ತಾನೆ. ಆತನು ’ಒಂದು ಅಗ್ನಿಯ ಸೇವೆ ಮಾಡುವ ಬ್ರಾಹ್ಮಣನನ್ನು ’ವಿಷ್ಟಿ’ಯೆಂದೂ, ಮೂರು ಅಗ್ನಿ ಸೇವೆ ಮಾಡುವ ಬ್ರಾಹ್ಮಣನನ್ನು ’ಅಗ್ನಿಹೋತ್ರಿ’ ಎಂದೂ, ಅಗ್ನಿಗೆ ಹವಿಸ್ಸು ಅರ್ಪಿಸುವ ಬ್ರಾಹ್ಮಣನನ್ನು ’ದೀಕ್ಷಿತ’ ಎಂದೂ ಕರೆಯುತ್ತಿದ್ದರ ಬಗ್ಗೆ ತಿಳಿಸುತ್ತಾನೆ.

ಆದ್ದರಿಂದ ಅಸ್ಪೃಶ್ಯ ಜಾತಿಗಳು, ಅವುಗಳು ಮಾಡುವ ವೃತ್ತಿಗಳ ಆಧಾರದಲ್ಲಿ ಕ್ರಿ.ಶ 12ನೇ ಶತಮಾನದಷ್ಟೊತ್ತಿಗೆ ಹೆಚ್ಚಾಗಿದ್ದಕ್ಕೆ ನಮಗೆ ವಿಫುಲವಾದ ಸಾಕ್ಷಿಗಳು ಸಿಗುತ್ತವೆ. ಆರ್.ಎಸ್.ಶರ್ಮಾರವರು ತಮ್ಮ ಕೃತಿ ‘Early medieval Indian society’ ಯಲ್ಲಿ ‘Changes in Social Structure’ ಎಂಬ ಅಧ್ಯಾಯವನ್ನೇ ಈ ವಿವರಣೆಗೆ ಮೀಸಲಿಟ್ಟಿದ್ದಾರೆ. 12ನೇ ಶತಮಾನದ ಕೃತಿಗಳಾದ ’ಬ್ರಹ್ಮವೈವರ್ತ ಪುರಾಣ’ ಮತ್ತು ’ಬೃಹದ್ಧರ್ಮ ಪುರಾಣಗಳು’ ಶೂದ್ರರಲ್ಲಿಯೇ 36 ಜಾತಿಗಳನ್ನು ಹೆಸರಿಸಿವೆ. ಕೇವಲ ಶೂದ್ರರ ಬಗ್ಗೆಯೇ ಯೋಚಿಸಲು ಕಾರಣ ಅವರ ಸಂಖ್ಯೆ ಹೆಚ್ಚಾದುದು. ಕ್ಷತ್ರಿಯ-ಬ್ರಾಹ್ಮಣ ಜುಗಲ್‌ಬಂಧಿಯ ವಿರುದ್ಧ ದಂಗೆ ಎದ್ದ ಶೂದ್ರ ರೈತಾಪಿಗಳನ್ನು ಸಮಾಧಾನಪಡಿಸಲು ಅವರಿಗೂ ಸಾಮಂತರಾಜರ ಪಟ್ಟ ನೀಡಿದ್ದು ಹಾಗೂ ಶೂದ್ರ ಜಾತಿಗಳನ್ನೂ ಒಡೆದಿದ್ದು ಅಸ್ಪೃಶ್ಯರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಕ್ರಿ.ಶ 400ರ ನಂತರದ ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಮಧ್ಯ ಭಾರತದ ರಾಜಮನೆತನಗಳೆಲ್ಲವೂ ಶೂದ್ರರಿಂದ ಕ್ಷತ್ರಿಯರಾದವರಾಗಿದ್ದಾರೆ. ಬ್ರಾಹ್ಮಣ ಪುರೋಹಿತರು ಹಿರಣ್ಯಗರ್ಭ ಎಂಬ ಆಚರಣೆಯಿಂದ ಈ ವರ್ಣಾಂತರವನ್ನು ಮಾಡುತ್ತಿದ್ದರು. ನಂತರ ಬಹುಮುಖ್ಯವಾಗಿ ಶೂದ್ರರನ್ನು ’ಸತ್ ಶೂದ್ರ ಜಾತಿಗಳು’ ಹಾಗೂ ’ಅಸತ್ ಶೂದ್ರ ಜಾತಿಗಳು’ ಎಂದು ವಿಂಗಡಿಸಿ ದುಡಿಯುವ ಜನರನ್ನು ಒಡೆದು ಆಳಿದರು.
ಸತ್ ಮತ್ತು ಅಸತ್ ಶೂದ್ರರನ್ನು ಬ್ರಹ್ಮವೈವರ್ತ ಪುರಾಣವು ತನ್ನ ಬ್ರಹ್ಮಕಾಂಡ ಅಧ್ಯಾಯದಲ್ಲಿ ಪಟ್ಟಿ ಮಾಡಿರುವುದನ್ನು ಕೂಲಂಕಶವಾಗಿ ಗಮನಿಸಿ. ಅವರು ಗೋಪ (ಗ್ವಾಲರು), ನಾಪಿತ (ಕ್ಷೌರಿಕರು), ಭಿಲ್ಲ (ಮೂಲನಿವಾಸಿ ಬುಡಕಟ್ಟು), ಮೋದಕ (ಮಿಠಾಯಿ ಮಾಡುವವರು), ಕೂಬರ, ತಾಂಬೂಲಿ (ವೀಳ್ಯ ಮಾರುವವರು), ಸ್ವರ್ಣಕಾರ (ಅಕ್ಕಸಾಲಿಗ), ವಣಿಕಜಾತಾಯ (ವ್ಯಾಪಾರಿ ಜಾತಿ), ಮಾಲಾಕಾರ (ಹಾರ ಮಾಡುವವರು), ಕರ್ಮಕಾರ (ಕಮ್ಮಾರ), ಶಂಖಾಕಾರ (ಶಂಖಗಳ ತಯಾರಕರು), ಕುವಿಂದಕ (ನೇಕಾರ), ಕುಂಭಕಾರ (ಮಡಿಕೆ ಮಾಡುವವರು), ಕಂಸಾಕಾರ (ಕಂಚುಗಾರರು), ಸೂತ್ರಧಾರ (ಕೆತ್ತನೆಗಾರ) ಮತ್ತು ಚಿತ್ರಕಾರ (ವರ್ಣಚಿತ್ರಕಾರರು). ಇವು ಒಟ್ಟು 17 ಜಾತಿಗಳು ’ಸತ್ ಶೂದ್ರ’ ಜಾತಿಗಳು. ಹೀಗೆಯೇ ’ಅಸತ್ ಶೂದ್ರ ಜಾತಿ’ಗಳ ಪಟ್ಟಿಯನ್ನೂ ಸಹ ನೀಡಲಾಗಿದ್ದು, ಈ ಜಾತಿಗಳನ್ನು ’ಅಧಮ’ ಎಂದು ಹೀಗಳೆಯಲಾಗಿದೆ. ಅವುಗಳೆಂದರೆ, ಸ್ವರ್ಣಕಾರ, ಸುವರ್ಣವಣಿಕ (ಚಿನ್ನದ ವ್ಯಾಪಾರಿ), ಸೂತ್ರಧಾರ (ಕೆತ್ತನೆಗಾರ), ಚಿತ್ರಕಾರ (ವರ್ಣಚಿತ್ರಕಾರ), ಅಟ್ಟಲಿಕಾಕಾರ (ಕಟ್ಟಡ ಕಟ್ಟುವವರು), ಕೋಟಕ (ಕಲ್ಲುಕುಟಿಗರು), ತೀವರ (ಬೇಟೆಗಾರರು), ತೈಲಕಾರ (ತೈಲತೆಗೆಯುವವರು), ದಸ್ಯು (ದರೋಡೆಗಾರರು), ಲೆಟ (ಸೈನಿಕ), ಮಲ್ಲ (ಕುಸ್ತಿಪಟು), ಚರ್ಮಕಾರ (ಚರ್ಮ ಹದಮಾಡುವವರು), ಮಾಂಸಛೇದ (ಕಟುಕರು), ಭಾರ್ (ಮನರಂಜನೆಗಾರರು), ಕೋಲ, ಕಲಂದರ, ಚಂಡಾಲ, ಕೊಂಚ (ಬುಡಕಟ್ಟು ಜನ), ಕರ್ಥಾರ, ಹಡ್ಡಿ, ಡೋಮ್, ಗಂಗಾಪುತ್ರ (ಹೆಣ ಹೂಳುವವರು), ಯಾವಿಗಿ (ನೇಕಾರರು), ಸುಂಧಿ (ಬಟ್ಟಿ ಇಳಿಸುವವರು), ಪೌಂದ್ರಕ (ಉಪ್ಪು ತಯಾರಕರು), ರಾಜಪುತ್ರ, ಆಗರಿ (ಅಗೆಯುವವರು), ಕೈವರ್ತ (ಅಂಬಿಗ ಮತ್ತು ಕೂಲಿಯವರು), ದೀವರ (ಮೀನುಗಾರರು), ರಜಕ (ಅಗಸ), ಕೊಯಾಲಿ (ಗೊಲ್ಲರು), ವ್ಯಾಧ, ಮಹಾದಸ್ಯು, ಬಗತಿತ (ಪಲ್ಲಕ್ಕಿ ಹೊರುವವರು), ಮ್ಲೇಚ್ಛ, ಜೋಲ, ಶರಾಕ ಮತ್ತು ವ್ಯಾಲಗ್ರಾಹಿ. ಇವರೆಲ್ಲರೂ ಅಸ್ಪೃಶ್ಯರೇ.

ಇನ್ನು ಬೃಹದ್ಧರ್ಮ ಪುರಾಣವು ಶೂದ್ರರನ್ನು ಮೂರು ಭಾಗಗಳನ್ನಾಗಿ ಮಾಡುತ್ತದೆ. ಈ ಗ್ರಂಥವೂ ಸಹ 36 ಮಿಶ್ರ ಜಾತಿಗಳ ಅಥವಾ ಸಂಕರಗಳ ಬಗ್ಗೆ ಮಾತನಾಡುತ್ತದೆ ಹಾಗೂ ಅವರೆಲ್ಲರನ್ನೂ ಮಿಶ್ರ ಶೂದ್ರರು ಎಂದು ಕರೆಯುತ್ತದೆ. ಆ ಮೂರು ಭಾಗಗಳು ಉತ್ತಮ, ಮಧ್ಯಮ ಮತ್ತು ಅಂತ್ಯಜ. 20 ಶೂದ್ರ ಜಾತಿಗಳನ್ನು ಉತ್ತಮದಲ್ಲೂ, 12 ಶೂದ್ರ ಜಾತಿಗಳನ್ನು ಮಧ್ಯಮದಲ್ಲೂ, 8 ಶೂದ್ರ ಜಾತಿಗಳನ್ನು ಅಂತ್ಯಜದಲ್ಲೂ ಪಟ್ಟಿ ಮಾಡುತ್ತದೆ. ಈ 8 ಜಾತಿಗಳೇ ಅಸ್ಪೃಶ್ಯ ಜಾತಿಗಳು.
ಮಧ್ಯಕಾಲೀನ ಊಳಿಗಮಾನ್ಯತೆಯ ಕಾಲದಲ್ಲಿ ಕೆಲವು ಶೂದ್ರ ಜಾತಿಗಳು ಸಹ ಅಸ್ಪೃಶ್ಯರ ಸ್ಥಾನಕ್ಕೆ ತಳ್ಳಲ್ಪಟ್ಟವು. ಇದಕ್ಕೆ ಕಾರಣ ಹೊಸ ರಾಜರು ಮತ್ತು ಪುರೋಹಿತರುಗಳ ಕೃಷಿಗೆ ಸಂಬಂಧಿಸಿದಂತೆ ಮಾಡಿದ ಹೊಸ ನೀತಿಗಳನ್ನು ವಿರೋಧಿಸಿದ್ದೇ ಆಗಿದೆ ಎಂದು ಆರ್.ಎಸ್.ಶರ್ಮಾರವರು ಹೇಳುತ್ತಾರೆ. ಅಪವಿತ್ರ ಅಥವಾ ಕೀಳುಜಾತಿಗಳ ಪಟ್ಟಿ ಬದಲಾಗದೆ ಒಂದೇ ರೀತಿಯಲ್ಲಿರಲಿಲ್ಲ. ಧನುಕ ಮತ್ತು ಗೋರ್ (ಯಾದವರು) ಇವರನ್ನು ಇಂದು ಉತ್ತಮ ಶೂದ್ರರನ್ನಾಗಿ ಕಾಣಲಾಗುತ್ತದೆ. ಆದರೆ 13-14ನೇ ಶತಮಾನದಲ್ಲಿ ಜ್ಯೋತಿರೀಶ್ವರನು ರಚಿಸಿರುವ ವರ್ಣನಾರತ್ನಾಕರ ಕೃತಿಯಲ್ಲಿ ಇವರನ್ನು ಚಮ್ಮಾರರು ಮತ್ತು ಡೋಮರ ಜೊತೆ ಸಮೀಕರಿಸಲಾಗಿದೆ. ವ್ಯಾಪಾರಿಗಳಾದ ಶಾವರನ್ನೂ ಸಹ ಕೀಳುಜಾತಿಯವರೆಂದೇ ಕರೆಯಲಾಗಿದೆ. ದಕ್ಷಿಣ ಭಾರತದಲ್ಲಂತು ಎರಡೇ ವರ್ಣಗಳು. ಬ್ರಾಹ್ಮಣರು ಮತ್ತು ಶೂದ್ರರು. ಆದ್ದರಿಂದ ಮಧ್ಯಕಾಲೀನ ದಕ್ಷಿಣ ಭಾರತ ಮತ್ತು ಬಂಗಾಳದ ಕ್ಷತ್ರಿಯರೆಲ್ಲರೂ ಪ್ರಬಲ ಶೂದ್ರ ಜಾತಿಯವರೇ ಆಗಿದ್ದಾರೆ.
ಒಟ್ಟಾರೆ ವೃತ್ತಿಯಾಧಾರಿತವಾಗಿ ಜಾತಿಗಳನ್ನು ಗುರುತಿಸಿ ಆರಂಭದಲ್ಲಿ ಕೀಳು ವೃತ್ತಿಗಳೆಂದು ಪರಿಗಣಿತ ಜಾತಿಗಳನ್ನು ಅಸ್ಪೃಶ್ಯರ ಜೊತೆಗೆ ಸಮೀಕರಿಸಿ ಅವರ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಬ್ರಹ್ಮವೈವರ್ತ ಪುರಾಣ ಮತ್ತು ಬೃಹದ್ಧರ್ಮ ಪುರಾಣಗಳಲ್ಲಿರುವ ಅಸತ್ ಶೂದ್ರರನ್ನು ಸೇರಿಸಿದರೆ 41 ಆಗುತ್ತದೆ. ಇವೆಲ್ಲವೂ ಅಸ್ಪೃಶ್ಯ ಜಾತಿಗಳಾಗಿವೆ. ಜೊತೆಗೆ ಆಲ್ಬೆರೂನಿ ಪಟ್ಟಿ ಮಾಡಿರುವ 12 ಅಸ್ಪೃಶ್ಯ ಜಾತಿಗಳನ್ನೂ ಸೇರಿಸಿಕೊಂಡು ಪುನರಾವರ್ತನೆಯಾದವನ್ನು ಕಳೆದರೆ ಒಟ್ಟು 50 ಅಸ್ಪೃಶ್ಯ ಜಾತಿಗಳಾಗುತ್ತವೆ.
ಹಾಗಾಗಿ ಈ ಮೇಲಿನ ವಿವರಣೆಗಳಿಂದ ನಿಚ್ಚಳವಾಗಿ ತಿಳಿಯಬಹುದಾದ ಸಂಗತಿಯೆಂದರೆ ’ಜಾತಿಗಳನ್ನು ವೃತ್ತಿಗೆ ಮೀಸಲು ಮಾಡಲಾಗಿದೆ’ ಅಥವಾ ’ವೃತ್ತಿಗಳಿಂದ ಜಾತಿಗಳನ್ನು ಗುರುತಿಸಲಾಗಿದೆ’. ಇದರ ಪರಿಣಾಮವಾಗಿ ಕೆಲವು ವೈಶ್ಯ ಜಾತಿಗಳು ಶೂದ್ರ ಜಾತಿಗಳ ಸ್ಥಾನಕ್ಕೂ, ಕೆಲವು ಶೂದ್ರ ಜಾತಿಗಳು ಅಸ್ಪೃಶ್ಯ ಜಾತಿಗಳ ಸ್ಥಾನಕ್ಕೂ ಇಳಿದಿವೆ. ಇದಕ್ಕೆ ವಿರುದ್ಧವಾಗಿ ಕೆಲವು ಅಸ್ಪೃಶ್ಯ ಜಾತಿಗಳು ಶೂದ್ರ ಜಾತಿಗಳ ಸ್ಥಾನಕ್ಕೂ, ಶೂದ್ರ ಜಾತಿಗಳು ಕ್ಷತ್ರಿಯ ಹಾಗೂ ವೈಶ್ಯ ಜಾತಿಗಳ ಸ್ಥಾನಕ್ಕೂ ಏರಿವೆ. ಚಾತುರ್ವರ್ಣ ಧರ್ಮವನ್ನು ಒಪ್ಪಿಕೊಳ್ಳದ ಬಹುದೊಡ್ಡ ಸಮೂಹವನ್ನೂ ಅಸ್ಪೃಶ್ಯರನ್ನಾಗಿಸಲಾಗಿದೆ.
- ಸಾಕ್ಯ ಸಮಗಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ…


