Homeಅಂಕಣಗಳುಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ...

ಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ…

- Advertisement -
- Advertisement -

ಕೆಡುಕುಗಳು ಧಾರಾಕಾರ ಸುರಿಯುವ ಮಳೆಯಂತೆ ಅಪ್ಪಳಿಸಿದಾಗ

ಕಚೇರಿ ಸಮಯದ ನಂತರ ಬಹುಮುಖ್ಯ ಪತ್ರವನ್ನು ಕೌಂಟರ್‌ಗೆ ತರುವವನಂತೆ: ಕೌಂಟರ್ ಈಗಾಗಲೇ ಮುಚ್ಚಿದೆ.

ನಗರಕ್ಕೆ ಅಪ್ಪಳಿಸಲಿರುವ ಪ್ರವಾಹದ ಬಗ್ಗೆ ಎಚ್ಚರಿಸುವವನಂತೆ, ಆದರೆ ಅವನಾಡುವ ಭಾಷೆ ಬೇರೆ: ಅವರಿಗೆ ಅವನ ಮಾತು ಅರ್ಥವಾಗುತ್ತಿಲ್ಲ.

ಐದನೇ ಬಾರಿ ಮನೆ ಬಾಗಿಲು ತಟ್ಟುವ ಭಿಕ್ಷುಕನಂತೆ, ಅವನಿಗೆ ನಾಲ್ಕು ಬಾರಿ ಏನನ್ನಾದರೂ ನೀಡಲಾಗಿದೆ: ಐದನೇ ಸಾರ್ತಿ ಅವನು ಹಸಿವಿನಲ್ಲಿದ್ದಾನೆ.

ಗಾಯಗೊಂಡು ರಕ್ತಸ್ರಾವದಿಂದ ನರಳುತ್ತಿರುವವನು ವೈದ್ಯನಿಗೆ ಕಾಯುತ್ತಿರುವಂತೆ: ರಕ್ತ ಹೋಗುತ್ತಲೇ ಇದೆ.

ನಮಗೆ ಬಂದಪ್ಪಳಿಸಿದ ಕೆಡುಕಿನ ಬಗ್ಗೆ ನಾವು ಮುಂದೆ ಬಂದು ವರದಿ ಮಾಡುವುದು ಹೀಗೆ.

ಬರ್‍ಟೋಲ್ಟ್ ಬ್ರೆಕ್ಟ್

ಮೊದಲ ಬಾರಿಗೆ ನಮ್ಮ ಗೆಳೆಯರನ್ನು ಕೊಚ್ಚಿಕೊಲೆಗೈಯ್ಯುತ್ತಿರುವ ವರದಿಯಾದಾಗ, ನಡುಕದಿಂದ ಹಾಹಾಕಾರವೆದ್ದಿತ್ತು. ನಂತರ ನೂರು ಜನರನ್ನು ಹತ್ಯೆಗೈಯ್ಯಲಾಯಿತು. ಆದರೆ ಯಾವಾಗ ಸಾವಿರ ಜನರನ್ನು ಹತ್ಯೆಗೈಯ್ಯಲಾಯಿತೋ, ಆ ಹತ್ಯೆಗಳಿಗೆ ಕೊನೆಯೇ ಇಲ್ಲದಾಯಿತು, ಮೌನದ ಹೊದಿಕೆ ಹರಡಿತ್ತು.

ಧಾರಾಕಾರ ಸುರಿಯುವ ಮಳೆಯಂತೆ ಕೆಡುಕುಗಳು ಬಂದಪ್ಪಳಿಸಿದಾಗ, ಯಾರೂ ’ನಿಲ್ಲು!’ ಎಂದು ಆದೇಶಿಸುವುದಿಲ್ಲ.

ಅಪರಾಧಗಳು ರಾಶಿರಾಶಿಯಾಗಿ ಬೆಳೆದಾಗ ಅವು ಅದೃಶ್ಯವಾಗುತ್ತವೆ. ನೋವುಗಳನ್ನು ಸಹಿಸಿಕೊಳ್ಳುವುದು ಅಸಾಧ್ಯವಾದಾಗ ಆಕ್ರಂದನ ಕೇಳುವುದೇ ಇಲ್ಲ. ಆಕ್ರಂದನ ಕೂಡ ಮಳೆಯ ರೀತಿಯಲ್ಲೇ ಬರುತ್ತದೆ, ಬೇಸಿಗೆಯ ಮಳೆಯಂತೆ.

ಬರ್‍ಟೋಲ್ಟ್ ಬ್ರೆಕ್ಟ್

ಜರ್ಮನಿಯ ಫ್ಯಾಸಿಸ್ಟ್ ದುರಾಡಳಿತವನ್ನು ಮತ್ತು ಅದನ್ನು ಸಾಧ್ಯವಾಗಿಸಿದ ಸಮಾಜದ ಅಂದಿನ ದುಸ್ಥಿತಿಯ ಬಗ್ಗೆ ಸೃಜನಶೀಲ ಬರಹಗಳ ಮೂಲಕ ದಾಖಲೆ ಮಾಡಿದ ಪ್ರಮುಖರಲ್ಲಿ ಬ್ರೆಕ್ಟ್ ಕೂಡ ಒಬ್ಬರು. 40ರ ದಶಕದಲ್ಲಿ ಬರೆದ ಈ ಪದ್ಯ ಕರ್ನಾಟಕದ ಇಂದಿನ ಪರಿಸ್ಥಿತಿಯನ್ನೂ ಚಿತ್ರಿಸುತ್ತಿದೆಯೆಂದರೆ ಸೋಜಿಗವೆನ್ನಬೇಕೋ, ದುರಂತವೆನ್ನಬೇಕೋ! ಒಟ್ಟಿನಲ್ಲಿ ಧಾರಾಕಾರವಾಗಿ ಅಪ್ಪಳಿಸುವ ಮಳೆಯಂತೆಯೇ ಇಂದು ಕರ್ನಾಟಕದಲ್ಲಿ ಕೆಡುಕುಗಳು ಭೋಗರೆಯುತ್ತಿವೆ. ಆದರೆ ಅವುಗಳಿಗೆ ಪ್ರತಿರೋಧವಾಗಿ ಬರುತ್ತಿರವ ಪ್ರತಿಕ್ರಿಯೆಗಳು, ಮುಚ್ಚಿದ ಕೌಂಟರ್‌ಗೆ ತರುವ ಮುಖ್ಯ ಪತ್ರದಂತಾಗಬಾರದಲ್ಲವೇ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಳೆದ ಕೆಲವು ತಿಂಗಳುಗಳಿಂದ ಸಂಘಪರಿವಾರ ಕರ್ನಾಟಕದಲ್ಲಿ ಅಶಾಂತಿ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನದ ಭಾಗವಾಗಿ, ಟೂಲ್‌ಕಿಟ್ ಸಿದ್ಧಪಡಿಸಿಕೊಂಡು ಎಲ್ಲ ರೀತಿಯ ಪ್ರಯೋಗಗಳಿಗೆ ಮುಂದಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲಂತೂ ಸಣ್ಣ ಅಡೆತಡೆಯೂ ಇಲ್ಲದಂತಾಗಿದೆ; ಅತ್ತ ಕಿವಿಮಾತು ಹೇಳುವವರೂ ಇಲ್ಲದೆ, ಅನ್‌ರೆಸ್ಟ್ ಸೃಷ್ಟಿಸುವ ಕೆಲಸಗಳಿಗೆ ಬಿಡುವೇ ನೀಡದಂತೆ, ಒಂದರ ಹಿಂದೆ ಒಂದರಂತೆ ಪೋಣಿಸಲಾಗುತ್ತಿದೆ. ಹಿಜಾಬ್ ವಿಷಯವನ್ನು ವಿವಾದವಾಗಿಸಿ, ಕೋರ್ಟ್ ಆದೇಶ ಬರುವುದೇ ತಡ, ಜಾತ್ರೆ-ದೇವಸ್ಥಾನಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧ ಹೇರುವ ಕೆಲಸಗಳನ್ನು ಶುರುಹಚ್ಚಿಕೊಂಡಿತು. ಅದಕ್ಕೆ ಒಂದಷ್ಟು ಪ್ರತಿರೋಧ ಬಂದು, ಜಾತ್ರೆಗಳಲ್ಲಿ ಸಾಮರಸ್ಯದಿಂದ ವ್ಯಾಪಾರ ಮಾಡಿದ ಕೆಲವು ಘಟನೆಗಳು ವರದಿಯಾದದ್ದೇ ತಡ, ಯುಗಾದಿ-ವರ್ಷತೊಡಕನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್ ಕಟ್ ಮಾಂಸದ ಬಗ್ಗೆ ಅಪಪ್ರಚಾರ ಆರಂಭಿಸಿತು. ಹಿಂದೂಗಳು ಯಾವುದೇ ಕಾರಣಕ್ಕೂ ಹಲಾಲ್ ಕಟ್ ಮಾಂಸವನ್ನು ಕೊಳ್ಳಬಾರದು, ಜಟ್ಕಾ ಅಥವಾ ಹಿಂದವೀ ಕಟ್ ಮಾಂಸವನ್ನೇ ಬಳಸಬೇಕು ಎನ್ನುವ ದುರುದ್ದೇಶಪೂರಿತ ಪ್ರಚಾರಕ್ಕೆ ಕೈಹಾಕಿತು. ’ಮುಖ್ಯವಾಹಿನಿ’ ಮಾಧ್ಯಮಗಳು ತಮ್ಮ ಗಿಳಿಪಾಠವನ್ನು ಉಲಿದು, ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಎಂದಿನಂತೆ ಮುನ್ನುಗ್ಗಿದವು. ಆದರೆ ಒಂದು ಮಟ್ಟಕ್ಕೆ ಉಳಿದುಕೊಂಡಿರುವ ಸಣ್ಣ ವಿವೇಕವೋ, ಆರ್ಥಿಕವಾಗಿ ಸಾಧುವಲ್ಲ ಎಂಬ ಕಾರಣಕ್ಕೋ ಅಥವಾ ತಮ್ಮ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲು ಬಂದಿರುವ ಕೆಡುಕಿಗೆ ಪ್ರತಿರೋಧವಾಗಿಯೋ ಈ ಹಲಾಲ್ ವಿವಾದ ನಿರೀಕ್ಷಿತ ಫಲ ನೀಡದೇ ಇದ್ದಾಗ, ಈಗ ’ಮುಸ್ಲಿಮರ ಅಜಾನ್ ಪ್ರಾರ್ಥನೆ ವರ್ಸಸ್ ಹಿಂದೂಗಳ ಭಜನೆ’ಗೆ ತಾಳ ಹಾಕುತ್ತಿದ್ದಾರೆ. ಮಾರಿಕೊಂಡ ಮಾಧ್ಯಮಗಳು ಎಂದಿನಂತೆ ತಮ್ಮ ಧ್ವನಿಪೆಟ್ಟಿಗೆಯನ್ನು ಹರಿದುಕೊಳ್ಳುತ್ತಿವೆ ಮತ್ತು ದ್ವೇಷ ಕಾರಿಕೊಳ್ಳುತ್ತಿವೆ.

ಹಲಾಲ್ ಕಟ್ ಮಾಂಸದ ವಿಷಯದಲ್ಲಿ ಹೂವು ’ಬಲ’ಮೊಗ್ಗಲಿಗೆ ಬೀಳಲಿಲ್ಲವೇಕೇ?

ಹಲಾಲ್ ಕಟ್ ಎಂಬ ಪದ್ಧತಿಯ ಬಗ್ಗೆ ಎಷ್ಟೆಲ್ಲಾ ಸುಳ್ಳುಸುದ್ದಿಗಳನ್ನು ಸಂಘಪರಿವಾರದ ಐಟಿ ಸೆಲ್‌ಗಳು ಹರಡಲು ಪ್ರಯತ್ನಿಸಿದರೂ, ಅದು ನಿರೀಕ್ಷಿತ ಮಟ್ಟಕ್ಕೆ ಅವರ ಪರವಾಗಿ ಕೆಲಸ ಮಾಡದಿರದ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಹಲವು ನೆಲೆಗಳಲ್ಲಿ ಕಾರಣಗಳನ್ನು ಹುಡುಕಬಹುದು. ಮೊದಲನೆಯದಾಗಿ, ಸಂಘ ಪರಿವಾರ ಚಿತಾವಣೆ ಮಾಡಿದ ಈ ಕೆಡುಕು ಬಹುಸಂಖ್ಯಾತರ ಬಾಗಿಲಿಗೇ ಬಂದುನಿಂತದ್ದು; ಯುಗಾದಿ ಮರುದಿನ ವರ್ಷತೊಡಕು ಹಬ್ಬದಲ್ಲಿ ಮಾಂಸಾಹಾರ ಅಡುಗೆಯ ವೈಶಿಷ್ಟ್ಯ ಕರ್ನಾಟಕದಾದ್ಯಂತ ಮನೆಮಾತು. ಅಲ್ಲದೆ ಮಾಂಸಾಹಾರ ಸುಮಾರು 79% ಕರ್ನಾಟಕದ ಜನತೆಯ ಆಹಾರ ಪದ್ಧತಿ. ಹಲವು ವರ್ಷಗಳಿಂದ ಮಾಂಸವನ್ನು ಕತ್ತರಿಸುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಒಳ್ಳೆಯ ಮಾಂಸ ಸಿಗುವ ಕಡೆಯಿಂದ ತಂದು ಆಸ್ವಾದಿಸುತ್ತಿದ್ದ ಪದ್ಧತಿಯನ್ನು ದ್ವೇಷದ ಕಾರಣಕ್ಕೆ ಬದಲಾಯಿಸಿಕೊಳ್ಳಿ ಎಂದು ಕೊಟ್ಟ ಕರೆ ಕರ್ನಾಟಕದ ಜನತೆಯನ್ನು ಕನ್ವಿನ್ಸ್ ಮಾಡುವುದಕ್ಕೆ ಆಗಿಲ್ಲ. ಅದೂಅಲ್ಲದೆ, ಇಂದು ಹಲಾಲ್ ಕಟ್ ಮಾಂಸದ ವಿರುದ್ಧದ ದ್ವೇಷ ಮುಂದೊಂದು ದಿನ ಮಾಂಸಾಹಾರವನ್ನೇ ವಿರೋಧಿಸುವ ಅಭಿಯಾನವಾಗಿ ಬೆಳೆಯುವ ಅಪಾಯವನ್ನು ಊಹಿಸಿರಲಿಕ್ಕೂ ಸಾಧ್ಯತೆಯಿದೆ. ಈಗ ಅಂತಹುದೇ ಒಂದು ಆದೇಶ ದೆಹಲಿಯಲ್ಲಿ ಹೊರಬಿದ್ದಿದೆ. ದಕ್ಷಿಣ ದೆಹಲಿಯ ನಗರಸಭಾ ಮೇಯರ್ ಹೊರಡಿಸಿರುವ ಆದೇಶದ ಪ್ರಕಾರ ಏಪ್ರಿಲ್ 2ರಿಂದ 11ರವರೆಗೆ ಚೈತ್ರ ನವರಾತ್ರಿ ಹಬ್ಬದ ಪ್ರಯುಕ್ತ ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. ದ್ವೇಷದ ಅಭಿಯಾನಗಳ ಕೊಡುಕೊಳ್ಳುವಿಕೆಯಲ್ಲಿ ಚುರುಕಾಗಿರುವ ಸಂಘಪರಿವಾರ ಈ ಅಭಿಯಾನವನ್ನು ಕರ್ನಾಟಕದಲ್ಲೂ ವಿಸ್ತರಿಸುವ ಅಪಾಯವನ್ನು ಮಾಂಸಾಹಾರ ಪದ್ಧತಿಯನ್ನು ಅನುಸರಿಸುವ ಸಮುದಾಯಗಳು ಊಹಿಸಿದವೇ?

ಅಪಾಯಗಳು ತಮ್ಮ ಪಾದಕ್ಕೆ ಎರಗಿದಾಗ ಸ್ವಾತಂತ್ರ್ಯದ ಅರಿವು ಎಂಥವರಿಗೂ ಆಗುತ್ತದೆ ಎಂಬುದನ್ನೂ ಇದು ತೋರಿಸಿಕೊಡುತ್ತದೆ. ಒಳ್ಳೆಯ ಆಹಾರವನ್ನು ತಮಗೆ ಬೇಕಾದವರಿಂದ ಕೊಳ್ಳುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಸಂಘಪರಿವಾರದ ಹಲಾಲ್ ವಿರೋಧಿ ಅಭಿಯಾನ ಸುಪ್ತವಾಗಿಯಾದರೂ ಬಹುಸಂಖ್ಯಾತ ನಾಗರಿಕರಲ್ಲಿ ತಮ್ಮ ಆಯ್ಕೆಯ ಸ್ವಾತಂತ್ರ್ಯದ ಹಕ್ಕನ್ನು ಬಡಿದೆಚ್ಚರಿಸಿರುವ ಸಾಧ್ಯತೆಯಿದೆ. ಆದರೆ, ಇದು ಅಲ್ಪಸಂಖ್ಯಾತರ ಆಯ್ಕೆಗಳಿಗೂ ಅನ್ವಯಿಸುತ್ತದೆ ಎಂಬುದನ್ನು, ಅನ್ಯ ಸಂಗತಿಗಳಲ್ಲಿ ಕೋಮು ಧ್ರುವೀಕರಣದ ಪರವಾಗಿ ನಿಲ್ಲುವ ಬಹುಸಂಖ್ಯಾತರಿಗೆ ಅರ್ಥಪಡಿಸುವುದು ಇಂದಿನ ದೊಡ್ಡ ಸವಾಲು! ಸಂವಿಧಾನ ಭಾರತದ ನಾಗರಿಕರಿಗೆ ಕೊಟ್ಟಿರುವ ಹಕ್ಕುಗಳನ್ನು ಇನ್ನೂ ಜನಪ್ರಿಯವಾಗಿಸುವ, ಜನಪದವಾಗಿಸುವ ನಿಟ್ಟಿನಲ್ಲಿ ದೊಡ್ಡ ಕೆಲಸವಾಗಬೇಕಿದೆ.

ಎರಡನೆಯದಾಗಿ, ಕರ್ನಾಟಕವನ್ನು ಉತ್ತರಪ್ರದೇಶವನ್ನಾಗಿಸಲೋ ಅಥವಾ ಗುಜರಾತ್ ಆಗಿ ಬದಲಾಯಿಸಲೋ ಪ್ರಯತ್ನ ಪಟ್ಟಷ್ಟೂ, ಈ ನಾಡಿನ ಇತಿಹಾಸ, ಪರಂಪರೆ ಮತ್ತು ವೈಶಿಷ್ಟ್ಯಗಳಿಂದ ಬೆಳೆದಿರುವ, ಕಟ್ಟಿಕೊಂಡಿರುವ ಸಾಮಾಜಿಕ ಸಚ್ಚಾರಿತ್ರ್ಯವನ್ನು ತಿದ್ದುವ, ವಿರೂಪಗೊಳಿಸುವ ಕೆಲಸಗಳನ್ನು ತೀವ್ರತರದಲ್ಲಿ ಮಾಡಬೇಕಾಗುತ್ತದೆ. ಹತ್ತುಹಲವು ಸಂಗತಿಗಳಲ್ಲಿ ಇಂತಹ ವಿರೂಪಗೊಳಿಸುವ ಕೆಲಸದಲ್ಲಿ ಸಂಘಪರಿವಾರಕ್ಕೆ ಯಶಸ್ಸು ಸಿಕ್ಕಿದ್ದರೂ, ಅವು ಮುಖ್ಯವಾಗಿ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯವನ್ನು ಅನ್ಯಗೊಳಿಸುವುದರ ಸುತ್ತ ನಡೆದಂತವು. ಹಿಂದುತ್ವದ ಹೆಸರಿನಲ್ಲಿ ಹಲವು ಜಾತಿ ಸಮುದಾಯಗಳಿಗೆ ’ನಾವೆಲ್ಲಾ ಒಂದು-ಹಿಂದೂ’ ಎಂದು ಬಾಯಿಮಾತಿನಲ್ಲಿ ಹೇಳಿ ನಂಬಿಸಿ, ವೈದಿಕ ವರ್ಣಾಶ್ರಮವನ್ನು ಪ್ರತಿಷ್ಠಾಪಿಸಲು ನಡೆಸುತ್ತಿರುವ ಪ್ರಯತ್ನ ನಿಧಾನಕ್ಕಾದರೂ ಜನರಿಗೆ ತಿಳಿಯುತ್ತಿದೆ ಎಂದು ಭಾವಿಸಬಹುದು. ಆ ಹಿನ್ನೆಲೆಯಲ್ಲಿ ಹಲಾಲ್ ವಿವಾದ ಸಂಬಂಧವಾಗಿ ಅವಲೋಕಿಸುವುದಾದರೆ, ಕರ್ನಾಟಕದ ಸಾವಿರಾರು ವರ್ಷಗಳ ಪರಂಪರೆಯಿಂದ ಕಟ್ಟಿಕೊಂಡು ಬಂದಿರುವ ಮತ್ತು ಇನ್ನಷ್ಟು ಸುಧಾರಿಸುವ ಹಾದಿಯಲ್ಲಿ ಮುಂದಡಿಯಿಡುತ್ತಿರುವ ಸಾಮಾಜಿಕ ಸಚ್ಚಾರಿತ್ರ್ಯವನ್ನು ವಿರೂಪಗೊಳಿಸಲು ಮಾಡಿದ ಪ್ರಯತ್ನ ನಿರೀಕ್ಷಿತ ಯಶಸ್ಸು ನೀಡಿಲ್ಲ.

ಮೂರನೆಯದಾಗಿ ಇದೇ ಹಿಂದುತ್ವದ ಬೆಂಬಲಿಗರು ಹಲಾಲ್ ಕಟ್ ಉದ್ದಿಮೆಗಳನ್ನು ನಡೆಸಿ ಮಾಂಸ ರಫ್ತು ಮಾಡುವ ಸಂಸ್ಥೆಗಳನ್ನು ಯಥೇಚ್ಛವಾಗಿ ಹೊಂದಿರುವುದು ತಿಳಿದೇ ಇದೆ. ಆರ್ಥಿಕವಾಗಿ ನಷ್ಟ ತಂದೊಡ್ಡುವ ದ್ವೇಷದ ಅಭಿಯಾನಗಳು ದೀರ್ಘ ಕಾಲದವರೆಗೆ ಬೆಲೆಬಾಳುವುದಿಲ್ಲ ಎಂಬುದೂ ಒಂದು ಮಟ್ಟಿಗೆ ನಿಜ.

ಮುಂದಿನ ಆಜಾನ್ ನಿಷೇಧ- ಮುಸಲ್ಮಾನರಿಂದ ಮಾವು ಕೊಳ್ಳಬೇಡಿ ಅಭಿಯಾನಗಳ ಪಾಡೇನು?

ವರ್ಷತೊಡಕಿಗೆ ಹುಟ್ಟುಹಾಕಬೇಕೆಂದುಕೊಂಡಿದ್ದ ಮತದ್ವೇಷ ಅಭಿಯಾನದಲ್ಲಿ ಮಾನಕಳೆದುಕೊಂಡ ಸಂಘಪರಿವಾರ ಮತ್ತು ಮಾಧ್ಯಮಗಳು, ಮುಂದಿನ ದಿನ ಹಲ್ಲುಜ್ಜುವುದಕ್ಕೂ ಮುಂಚೆಯೇ ’ಆಜಾನ್ ವಿರೋಧಿ’ ಮಾತುಕತೆಯಲ್ಲಿ ಕುಳಿತ ವಾಸನೆ ಕನ್ನಡ ನಾಡನ್ನು ಎಚ್ಚರಿಸಿತು. ಇದಕ್ಕೆ ಒಂದೆರಡು ದಿನಗಳ ಮೊದಲೇ, ಮಹಾರಾಷ್ಟ್ರದಲ್ಲಿ ಜೋರುಮಾತಿಗೆ ಮಾತ್ರ ಹೆಸರಾದ ರಾಜ್ ಠಾಕ್ರೆ ಈ ಅಭಿಯಾನಕ್ಕೆ ನಾಂದಿ ಹಾಡಿದ್ದರು. ಕಳೆದ ಚುನಾವಣೆಗಳಲ್ಲಿ ತಮ್ಮ ದಾಯಾದಿಯ ಪಕ್ಷ ಶಿವಸೇನೆ ಬಿಜೆಪಿ ಜೊತೆಗೆ ಹೊಂದಾಣಿಕೆಯಲ್ಲಿದ್ದಾಗ, ಹಿಂದುತ್ವವನ್ನು ಒಂದು ಮಟ್ಟಿಗೆ ವಿರೋಧಿಸಿಕೊಂಡು ಮರಾಠಿ ಗರ್ವದ ಮಾತನಾಡುತ್ತಿದ್ದ ರಾಜ್ ಠಾಕ್ರೆ ಈಗ ಅದನ್ನು ಬದಿಗಿಟ್ಟು ಮತ್ತೆ ಹಿಂದುತ್ವಕ್ಕೆ ಶರಣಾಗಿದ್ದಾರೆ. ಒಟ್ಟಿನಲ್ಲಿ ರಾಜಕೀಯಕ್ಕಾಗಿ ಯಾವ ಬಟ್ಟೆಯನ್ನಾದರೂ ತೊಡುವ ಈ ಠಾಕ್ರೆ ಕರ್ನಾಟಕಕ್ಕೆ ದ್ವೇಷವನ್ನು ರಫ್ತು ಮಾಡಲು ಸಹಕರಿಸಿದರು. ಇಲ್ಲಿಂದ ಸಂಘಪರಿವಾರ ’ಹಿಜಾಬ್’ ವಿವಾದವನ್ನು ಉತ್ತರಕ್ಕೆ ರಫ್ತು ಮಾಡಿದಂತೆಯೇ!

ಯಾವುದೇ ರಚನಾತ್ಮಕವಾದ ಅಜೆಂಡಾವಿಲ್ಲದೆ ಸೊರಗುತ್ತಿರುವ ಹಿಂದುತ್ವದ ಫ್ರಿಂಜ್ ಎಲಿಮೆಂಟ್‌ಗಳು ಈಗ ಮಸೀದಿ ಮುಂದೆ ಹನುಮಾನ ಚಾಲೀಸದ ಮೈಕ್ ಹಾಕುತ್ತೀವಿ ಎಂಬಿತ್ಯಾದಿಯಾಗಿ ಅಬ್ಬರಿಸುತ್ತಿವೆ. ಪರೀಕ್ಷೆಗಳು ನಡೆಯುವಾಗ ಇಂತಹ ಕಿರಿಕಿರಿ ಮಧ್ಯಮವರ್ಗದ ತಾಳ್ಮೆಯನ್ನೂ ಪರೀಕ್ಷಿಸೀತು. ಹೀಗಾಗಿ ಹಲಾಲ್ ವಿವಾದದಲ್ಲಿ ಹುಟ್ಟಿದ ತಿಳಿವು ಬಹುಸಂಖ್ಯಾತರಲ್ಲಿ ಮತ್ತೆ ತಳೆದೀತೇ? ಅದು ಒಂದು ಹಂತ ಮುಂದೆ ಹೋಗಿ, ಮುಸಲ್ಮಾನ ಸಮುದಾಯವನ್ನು, ಅವರ ಆಚರಣೆಗಳನ್ನು ಅನ್ಯೀಕರಿಸುವ, ರಾಕ್ಷಸೀಕರಣಗೊಳಿಸುವ ಹಿಂದುತ್ವದ ಯೋಜನೆಗಳು ಒಟ್ಟಾರೆ ಸಾಮಾಜಿಕ ವಿವೇವಕ್ಕೆ ಕೊಡಲಿ ಪೆಟ್ಟು ಎಂಬುದು ಅರ್ಥವಾಗುವುದೇ? ಮುಂದೆ ಇದೇ ಕೆಡುಕು ಮತ್ತೊಂದು ರೂಪ ಪಡೆದು, ತಮ್ಮ ಆಚರಣೆಗಳನ್ನೇ ರಾಕ್ಷಸೀಕರಿಸುವತ್ತ ವೈದಿಕ ಶಕ್ತಿಗಳು ಹೆಜ್ಜೆಯಿಡುತ್ತವೆ ಎಂಬುದನ್ನು ಶೂದ್ರ ಮತ್ತು ಹಿಂದುಳಿದ ಮಧ್ಯಮ ವರ್ಗ ಊಹಿಸಿಕೊಳ್ಳುವರೆ? ಆಜಾನ್ ಪ್ರಾರ್ಥನೆ ವಿರೋಧಿ ಅಭಿಯಾನ ಕೂಡ ಠುಸ್ ಆದರೆ ಮುಸಲ್ಮಾನರಿಂದ ಮಾವು ಕೊಳ್ಳಬೇಡಿ ಅಭಿಯಾನ ಚುರುಕು ಪಡೆದುಕೊಳ್ಳುವುದೇ?

ಈಗಾಗಲೇ ಉದ್ದಿಮೆದಾರರಾದ ಕಿರಣ್ ಮಜುಂದಾರ ಶಾ ಅಂತಹವರು ಇಂತಹ ದ್ವೇಷ ಅಭಿಯಾನದ ವಿರುದ್ಧ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವುದು, ಸಣ್ಣದಾಗಿ ಪ್ರಾರಂಭವಾಗುವ ಇಂತಹ ವ್ಯಾಪಾರ-ವಹಿವಾಟಿನ ನಿರ್ಬಂಧದ ಕರೆಗಳು ಕೊನೆಗೆ ಕಾರ್ಪೊರೆಟ್ ಮಟ್ಟಕ್ಕೆ ಬಂದು ನಿಂತರೆ ಏನಾಗಬಹುದೆಂಬ ಊಹೆಯೊಂದಿಗೇ! ಆದರೆ ಬಹುತೇಕ ಕಾರ್ಪೊರೆಟ್ ವಲಯದ ಉದ್ದಿಮೆದಾರರು ಕೆಡುಕು ತಮ್ಮ ಹತ್ತಿರ ಇನ್ನೂ ಸುಳಿದಿಲ್ಲವೆಂದು ನಿದ್ರಿಸುತ್ತಿದ್ದಾರೆ. ಅದು ಅಪ್ಪಳಿಸುವ ಹೊತ್ತಿಗೆ ಯೋಚಿಸಲು ಪ್ರಾರಂಭಿಸಿದರೆ ಬಹಳ ತಡವಾಗುತ್ತದೆ.

ಗೊಂದಲಮಯ ಕಾಂಗ್ರೆಸ್ ಮತ್ತು ಬೀದಿಗಿಳಿದ ಎಚ್ ಡಿ ಕುಮಾರಸ್ವಾಮಿ

ಈ ಕೇಡಿನ ಸಂಗತಿಗಳಿಂದ ಅತಿ ಹೆಚ್ಚು ಭಾದಿತವಾಗಿರುವ ಕಾಂಗ್ರೆಸ್ ದಾರಿ ಕಾಣದಂತಾಗಿ ದಿನೇದಿನೇ ಕೃಶವಾಗುತ್ತಿದೆ. ನುಂಗಲೂ ಆಗದೆ ಉಗುಳಲೂ ಆಗದೆ ಮೃದು ಹಿಂದುತ್ವವನ್ನು ಪಾಲಿಸುತ್ತಿದ್ದಾರೇನೋ ಎಂಬ ಸಂಶಯ ಮೂಡುವಂತೆ ಕೆಲವೊಮ್ಮೆ ಗೊಂದಲಮಯವಾಗಿ ವರ್ತಿಸುತ್ತಿರುವುದು ಅಚ್ಚರಿಯೂ ಆತಂಕಕಾರಿಯೂ ಆಗಿದೆ. ಕಠಿಣ ಮತ್ತು ತೀವ್ರವಾದ ಹಿಂದುತ್ವವೇ ಆ ಸಿದ್ಧಾಂತವನ್ನು ಬೆಂಬಲಿಸುವರ ಕಣ್ಮನ ತಣಿಸುತ್ತಿರುವಾಗ ಮೃದು ಹಿಂದುತ್ವ ಆಕರ್ಷಣೀಯವಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಹಲವು ಮುಖಂಡರಿಗೆ ತಿಳಿಯುತ್ತಿಲ್ಲ. ಕೊನೆಗೆ ಹಿಂದುತ್ವವನ್ನು ಕೆಡವಿ ಬೀಳಿಸುವುದೇ ತಮ್ಮ ಪಾಲಿಗೆ ರಾಜಕೀಯ ಪುನರುಜ್ಜೀವನ ಎಂಬ ತಿಳಿವಳಿಕೆ ಮೂಡುವ ಹೊತ್ತಿಗೆ ಇರುವುದೂ ಕಳೆದುಹೋಗುವ ಸಂಭವವಿದೆ. ಈ ನಿಟ್ಟಿನಲ್ಲಿ ಹಿಜಾಬ್ ಮುಂತಾದ ವಿಷಯಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ನಿಲುವು ತಳೆದು, ಹಿಂದುತ್ವ ಅಜೆಂಡಾಗಳನ್ನು ಬುಡಮೇಲು ಮಾಡಲು ಹೊರಟಾಗ ಅವರದ್ದೇ ಪಕ್ಷದ ಸಂಪೂರ್ಣ ಬೆಂಬಲ ಸಿಗದೆ ಹೋದದ್ದು, ’ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹೊದೆಯುವುದಿಲ್ಲವೇ’ ಎಂದು ಪ್ರಶ್ನಿಸಿದ ಘಟನೆಯಲ್ಲಿ ಸಾಬೀತಾಯಿತು. ಇತ್ತೀಚಿಗೆ ಕರ್ನಾಟಕಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಸಿದ್ದರಾಮಯ್ಯನವರ ನಿಲುವಿಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಗುಲ್ಲು ಇದ್ದರೂ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಕಾದುನೋಡಬೇಕು!

ಈ ಸಮಯದಲ್ಲಿ ಅಚ್ಚರಿಯಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜಾನಪದ ವಿವೇಕವನ್ನು ಹಿಂದುತ್ವದ ವಿರುದ್ಧವಾಗಿ ಬಳಸುತ್ತಿರುವುದು ಆಶಾದಾಯಕ ಬೆಳವಣಿಗೆ. ಅದು ದೀರ್ಘಕಾಲದ ತಂತ್ರ, ಕಾಂಗ್ರೆಸ್ ವೋಟುಗಳಿಗೆ ಕನ್ನಹಾಕಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಹುನ್ನಾರ. ಮುಂದೆ ಬಿಜೆಪಿ ಜೊತೆ ಹೋಗುವುದು ಶತಸಿದ್ಧ ಎಂಬ ಮಾತುಗಳೂ ಕೇಳಿಬರುತ್ತಿವೆ. ಇತ್ತೀಚಿಗೆ ಹಿಜಾಬ್ ವಿಷಯದಲ್ಲಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳುವಂತೆ ಮತ್ತು ಕಾಂಗ್ರೆಸ್‌ಅನ್ನು ದೂಷಿಸುವಂತೆ ಮಾತನಾಡಿದ್ದ ಹಾಗೂ ಆಗಾಗ ಬಿಜೆಪಿ ಮೈತ್ರಿ ವಿಷಯದ ಬಗ್ಗೆ ವದಂತಿಗಳು ಏಳುವ ಹಿನ್ನೆಲೆಯಲ್ಲಿ ಈ ಆತಂಕಕ್ಕೆ ಒಂದು ಮಟ್ಟದ ತೂಕವಿದ್ದರೂ, ಹಿಂದೆಂದೂ ಕಂಡಿರದಂತಹ ಅಶಾಂತಿಯ ವಾತಾವರಣ ಕರ್ನಾಟಕದಲ್ಲಿ ತಲೆದೋರಿರುವಾಗ, ತಂತ್ರಗಾರಿಕೆಯ ಸಲುವಾಗಿಯಾದರೂ ಶಾಂತಿಯನ್ನು ಪಠಿಸುವ ಮತ್ತು ಅದನ್ನು ಕದಡುವವರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವುದು ಶ್ಲಾಘನೀಯ ಸಂಗತಿಯೇ. ಕೇವಲ ವಿಎಚ್‌ಪಿ-ಭಜರಂಗದಳದವರನ್ನು ಮಾತ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿಯವರು, ಸಂಘ ಪರಿವಾರದ ಸೈದ್ಧಾಂತಿಕ ಮೂಲಬಿಂದು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ವಿಮರ್ಶೆ ಮಾಡುವತ್ತ ಬೆಳೆಯಬೇಕಿದೆ ಮತ್ತು ಈ ಬದ್ಧತೆ ಎಂದೆಂದಿಗೂ ಉಳಿದು ಕರ್ನಾಟಕದ ನಿಜ ಪ್ರಾದೇಶಿಕ ಪಕ್ಷವಾಗಿ ಕೋಮುವಾದಿಗಳಿಗೆ ಪಾಠ ಕಲಿಸಲಿ ಎಂದು ಆಶಿಸೋಣ. ಏಕೆಂದರೆ ಈಗ ಪ್ರಾರಂಭವಾಗಿರುವ ಕೆಡುಕು ಎಲ್ಲ ಪ್ರಾದೇಶಿಕತೆಯನ್ನೂ, ಪ್ರಾದೇಶಿಕ ಪಕ್ಷಗಳನ್ನೂ ನುಂಗಿ ನೀರುಕುಡಿಯುವ ಕೆಡುಕಿನ ರೂಪದಲ್ಲಿ ಮುಂದೆ ಬರುವುದನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಶೂದ್ರರನ್ನು ಬಳಸಿಕೊಂಡು ಶೂದ್ರರ ವಿರುದ್ದವೆ ಬಾಣ ಪ್ರಯೋಗ: ಬಿಜೆಪಿಯ ಕೋಮುದ್ರುವೀಕರಣದ ವಿರುದ್ದ ‘ಕರ್ನಾಟಕ ಶೂದ್ರಶಕ್ತಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪರಿಷತ್ ಫಲಿತಾಂಶ ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರನ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ

0
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ...