Homeಕರ್ನಾಟಕಫ್ಯಾಕ್ಟ್‌‌ಚೆಕ್‌: ಚಂದ್ರು ಹತ್ಯೆ ಕುರಿತು ಸುಳ್ಳು ಹೇಳಿದ ಗೃಹ ಸಚಿವ; ಪ್ರಚಾರ ಮಾಡಿದ ಬಲಪಂಥೀಯ ಟ್ರೋಲ್...

ಫ್ಯಾಕ್ಟ್‌‌ಚೆಕ್‌: ಚಂದ್ರು ಹತ್ಯೆ ಕುರಿತು ಸುಳ್ಳು ಹೇಳಿದ ಗೃಹ ಸಚಿವ; ಪ್ರಚಾರ ಮಾಡಿದ ಬಲಪಂಥೀಯ ಟ್ರೋಲ್ ಪೇಜ್‌!

- Advertisement -
- Advertisement -

“ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕನ್ನಡಿಗ ಹಿಂದೂ ಯುವಕನನ್ನು ಬರ್ಬರವಾಗಿ ಕೊಂದು ಹಾಕಿದ ಮತಾಂಧರು” ಎಂದು ಬರೆದಿರುವ ಪೋಸ್ಟರ್‌ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ಕೊಲೆಯಾದ ಚಂದ್ರು ಎಂಬ ಯುವಕನ ಚಿತ್ರವಿರುವ ಪೋಸ್ಟರ್‌ ಆಗಿದ್ದು, ‘ಕಸ್ತೂರಿಟಿವಿ-24’ನ ಟಿವಿ ಸ್ಕ್ರೀನ್‌ಶಾರ್ಟ್‌ಗಳನ್ನು ಇಟ್ಟುಕೊಂಡು ಈ ಪೋಸ್ಟರ್‌ ಅನ್ನು ತಯಾರಿಸಲಾಗಿದೆ.

ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ “ನಮ್ಮ ತುಳುನಾಡು ಟ್ರೋಲ್ಸ್‌”ನ ಫೇಸ್‌ಬುಕ್ ಪೇಜ್‌ ಈ ಪೋಸ್ಟ್‌ರ್‌ ಅನ್ನು ತನ್ನ ಪೇಜ್‌ನಲ್ಲಿ ಪೋಸ್ಟ್‌ ಮಾಡಿತ್ತು. ಆದರೆ ಈಗ ಅದನ್ನು ಡಿಲೀಟ್‌ ಮಾಡಲಾಗಿದೆ. ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತನಾಡಲು ಬರುವುದಿಲ್ಲವಾ? ಎಂದು ಹಿಂದೂ ಯುವಕನನ್ನು ಮುಸ್ಲಿಂ ಹಂತಕರು ಕೊಂದಿದ್ದಾರೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಮತ್ತೊಂದು ವಿಡಿಯೊವನ್ನು ಇಲ್ಲಿ ನೋಡಬಹುದು.

ಪೋಸ್ಟ್‌ರ್‌ನಲ್ಲಿ ಮಾಡಲಾಗಿರುವ ಆರೋಪವು ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ವಿಚಾರವಾಗಿದ್ದು ಈ ಹತ್ಯೆಯ ಹಿಂದೆ ನಡೆದಿರುವ ವಾಸ್ತವ ಸಂಗತಿಗಳೇನು? ನಿಜವಾಗಿಯೂ ಉರ್ದು ಭಾಷೆಯ ವಿಚಾರಕ್ಕೆ ಈ ಹತ್ಯೆ ನಡೆದಿದೆಯಾ? ಅಥವಾ ಬೇರೆ ಕಾರಣಗಳೇನು? ಎಂದು ಪರಿಶೀಲಿಸೋಣ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಪ್ಯಾಲೆಸ್ತೀನ್‌‌ನ ದಿಟ್ಟ ಬಾಲಕಿಯನ್ನು ಉಕ್ರೇನ್‌‌‌ನವರು ಎಂದು ವರದಿ ಮಾಡಿದ ಪಬ್ಲಿಕ್ ಟಿವಿ ಮತ್ತು ಸುವರ್ಣ ಟಿವಿ

ಏನಿದು ಚಂದ್ರು ಹತ್ಯೆ ಘಟನೆ?

ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋರಿಪಾಳ್ಯದಲ್ಲಿ ಬುಧವಾರ ಮಧ್ಯರಾತ್ರಿ ಚಂದ್ರು ಹತ್ಯೆ ಘಟನೆ ನಡೆದಿದೆ. ಕೊಲೆಗೀಡಾದ ಚಂದ್ರು ತನ್ನ ಸ್ನೇಹಿತ ಸೈಮನ್ ರಾಜ್ ಜೊತೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಬೈಕ್‌ಗೆ ಪರಸ್ಪರ ತಗುಲಿತ್ತು. ಈ ವೇಳೆ ಮಾತಿಗೆ ಮಾತು ಮತ್ತೊಂದು ಬೈಕ್‌ನಲ್ಲಿದ್ದ ಆರೋಪಿ ಶಾಹಿದ್‌ ಎಂಬಾತ ಚಂದ್ರುವಿನ ತೊಡೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದನು.

ಈ ವೇಳೆ ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದರೂ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಚಂದ್ರು ಹತ್ಯೆ ಕುರಿತು ಮಾಧ್ಯಮಗಳಿಗೆ ಗೃಹ ಸಚಿವರ ಹೇಳಿಕೆ: (ಮೊದಲ ಹೇಳಿಕೆ)

ಚಂದ್ರು ಹತ್ಯೆ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮದವರ ಮುಂದೆ ಮಾತನಾಡುತ್ತಾ, “ಚಂದ್ರು ಎಂಬ ಹುಡುಗನ ಹತ್ಯೆ ಆಗಿದೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಆತನಿಗೆ ಉರ್ದು ಮಾತನಾಡೋಕೆ ಹೇಳಿದ್ರು. ಆದ್ರೆ ಅವನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದಿಲ್ಲ ಎಂದು ಹೇಳಿದ್ದಾನೆ. ಆಗ ಅವನನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಂದಿದ್ದಾರೆ. ಆತ ಒಬ್ಬ ದಲಿತ ಯುವಕನಾಗಿದ್ದು ಹತ್ಯೆ ಮಾಡಿದಂತಹ ಆರೋಪಿಗಳನ್ನು ನಮ್ಮ ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಮಾಧ್ಯಮಗಳು ಕೂಡಾ ಹಾಗೆಯೆ ವರದಿ ಮಾಡಿದ್ದವು. ಇದು ರಾಜ್ಯದ ಪರಿಸ್ಥಿತಿಯನ್ನು ಮತ್ತಷ್ಟು ಕೋಮು ಉದ್ವಿಗ್ನಗೊಳಿಸಿತ್ತು. ಕಸ್ತೂರಿನ್ಯೂಸ್‌24 ಕೂಡಾ ಹಾಗೆಯೆ ಈ ಸುದ್ದಿಯನ್ನು ವರದಿ ಮಾಡಿತ್ತು.(ಆರ್ಕೈವ್‌‌ಗೆ ಇಲ್ಲಿ ಕ್ಲಿಕ್ ಮಾಡಿ)

 ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇಸ್ಕಾನ್‌‌ನ ಈ ಚಿತ್ರ ಉಕ್ರೇನಿದ್ದಲ್ಲ; ದಾರಿ ತಪ್ಪಿಸಿದ ಬಿಟಿವಿ ವರದಿ!
ಫ್ಯಾಕ್ಟ್‌ಚೆಕ್‌: ಹತ್ಯೆಗೆ ನಿಜವಾದ ಕಾರಣ ಏನು? ಪೊಲೀಸರು ಹೇಳಿದ್ದೇನು?

ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, “ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ (05.04.2022)ನಡೆದ ಕೊಲೆ ಪ್ರಕರಣ. ಸೈಮನ್ ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಮತ್ತು ಶಾಹಿದ್ ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕುಗಳ ಪರಸ್ಪರ ತಗುಲಿದ ವಿಷಯವು ಗಲಾಟೆಗೆ ಕಾರಣವಾಗಿದ್ದು.

ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ” ಎಂದು ಟ್ವೀಟ್ ಮಾಡಿದ್ದರು.

ಚಂದ್ರು ಕೊಲೆಗೆ ಸಂಬಂಧಪಟ್ಟ ಗೃಹ ಸಚಿವರ ಆರಗ ಜ್ಞಾನೇಂದ್ರರವರು ನೀಡಿದ್ದ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಲಪಂಥೀಯ ಪ್ರತಿಪಾದಕ ಸೋಶಿಯಲ್ ಮೀಡಿಯಾಗಳು ಕೋಮು ದ್ವೇ‍ಷಭರಿತ ಪೋಸ್ಟ್‌ರ್‌ಗಳನ್ನು ತಮ್ಮ ತಮ್ಮ ಪೇಜ್‌ಗಳಲ್ಲಿವೈರಲ್ ಮಾಡಲು ಪ್ರಾರಂಭಿಸಿದ್ದವು.

ಇದರ ಅಪಾಯಗಳನ್ನರಿತ ಪೊಲೀಸ್ ಇಲಾಖೆ ಚಂದ್ರು ಕೊಲೆಗೆ ಕಾರಣಗಳೇನು ಎಂದು ಘಟನೆಯ ಮಾಹಿತಿಯನ್ನು, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರು ಸುಳ್ಳು ಮಾಹಿತಿಗಳ ಬಗ್ಗೆ ಫ್ಯಾಕ್ಟ್‌ ಚೆಕ್ ನಡೆಸಿದ್ದಾರೆ.

ಪೋಸ್ಟ್‌ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಗೃಹ ಸಚಿವರು, ಮತ್ತೆ ಹೇಳಿಕೆ ವಾಪಾಸ್!(2ನೇ ಹೇಳಿಕೆ)

ಪೊಲೀಸರ ಸ್ಪಷ್ಟೀಕರಣದ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರರವರು ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಇದರಿಂದ ವಿಚಲಿತರಾದ ಗೃಹಸಚಿವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, “ನನ್ನ ಹೇಳಿಕೆಯಲ್ಲಿ ತಪ್ಪಾಗಿದೆ. ತಕ್ಷಣದ ಮಾಹಿತಿಯನ್ನು ಆಧರಿಸಿ ಮಾಹಿತಿಯನ್ನು ಕೊಟ್ಟಿದ್ದೆ. ಅದು ಭಾಷೆ ವಿಚಾರಕ್ಕೆ ಆಗಿರುವ ಹತ್ಯೆ ಅಲ್ಲ. ಮಾಹಿತಿ ಇಲ್ಲದೇ ಮಾತನಾಡಿದೆ. ಅದು ತಪ್ಪಾಗಿದೆ. ಬೈಕ್ ಡಿಕ್ಕಿಯಾಗಿದ್ದು ಬಿಟ್ಟರೆ ಯಾವುದೇ ಹಿನ್ನೆಲೆ ಇಲ್ಲ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಗೃಹ ಮಂತ್ರಿ ಸುಳ್ಳು ಬಯಲಾಗುತ್ತಿದ್ದಂತೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, “ರಾಜ್ಯದ ಗೃಹ ಮಂತ್ರಿಯೊಬ್ಬರು ಈ ರೀತಿ ಸುಳ್ಳು ಹೇಳಿಕೆಯನ್ನು ನೀಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬ ಸಣ್ಣ ಸೂಕ್ಷ್ಮತೆ ಇದೆಯೇ” ಎಂದು ಕಿಡಿ ಕಾರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಯುವಕ ಚಂದ್ರು ಮತ್ತು ಆತನ ಸ್ನೇಹಿತ ಸೈಮನ್ ರಾಜ್ ಊಟಕ್ಕೆಂದು ಹೋಗಿದ್ದಾರೆ. ಬೈಕ್ ನಿಲ್ಲಿಸುವ ವೇಳೆ ಸೈಯದ್ ಎಂಬುವವನಿಗೆ ಬೈಕ್‌ ತಗುಲಿದೆ. ಇದರಿಂದ ಕೋಪಗೊಂಡ ಶಾಹಿದ್ ಮತ್ತು ಆತನ ಸ್ನೇಹಿತರು ಚಂದ್ರು ಮತ್ತು ಸೈಮನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಂದ್ರುವಿಗೆ ಚಾಕುವಿನಿಂದ ಇರಿಯಲಾಗಿದೆ. ಯುವಕ ಚಂದ್ರು ಅಧಿಕ ರಕ್ತ ಸ್ರಾವದಿಂದ ಸಾವನಪ್ಪಿದ್ದಾರೆ.

ಪ್ರಕರಣದಲ್ಲಿ ಉರ್ದು ಭಾಷೆ ಮಾತನಾಡಲಿಲ್ಲ ಎಂಬ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಗೃಹ ಸಚಿವರ ಹೇಳಿಕೆ ಸುಳ್ಳಾಗಿದ್ದು, ಈ ಕೊಲೆಗೆ ಕೋಮು ಸಂಘರ್ಷವಾಗಲಿ, ಕೋಮು ಪ್ರಚೋದನೆಯ ಹಿನ್ನೆಯಾಗಲಿ ಇಲ್ಲ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಉಕ್ರೇನ್‌‌‌ ಮೇಲಿನ ದಾಳಿಯ ನಂತರ ಪುಟಿನ್‌ ಅವರು ಮೋದಿ ಜೊತೆಗೆ ಮಾತುಕತೆಗೆ ಮನವಿ ಮಾಡಿಲ್ಲ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...