ಮಹತ್ವದ ಬದಲಾವಣೆ ಎಂಬಂತೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಬುಧವಾರ (ಸೆ.3) ಶೇಕಡ 5 ಮತ್ತು ಶೇಕಡ 18 ದರಗಳೊಂದಿಗೆ ಸರಳೀಕೃತ ಎರಡು ಹಂತದ ತೆರಿಗೆ ರಚನೆಯನ್ನು ಅನುಮೋದಿಸಿದೆ. ಬದಲಾದ ತೆರಿಗೆ ವ್ಯವಸ್ಥೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಜಿಎಸ್‌ಟಿ ಮಂಡಳಿಯ 56ನೇ ಮ್ಯಾರಥಾನ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ನಾವು ಸ್ಲ್ಯಾಬ್‌ಗಳನ್ನು ಕಡಿಮೆ ಮಾಡಿದ್ದೇವೆ. ಕೇವಲ ಎರಡು ಸ್ಲ್ಯಾಬ್‌ಗಳು ಮಾತ್ರ ಇರುತ್ತವೆ ಮತ್ತು ಪರಿಹಾರ ಸೆಸ್‌ನ ಸಮಸ್ಯೆಗಳನ್ನು ಕೂಡ ನಾವು ಬಗೆಹರಿಸುತ್ತಿದ್ದೇವೆ” ಎಂದು 56ನೇ ಜಿಎಸ್‌ಟಿ ಮಂಡಳಿ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
“ಈ ಸುಧಾರಣೆಗಳನ್ನು ಸಾಮಾನ್ಯ ಜನರ ಮೇಲೆ ಕೇಂದ್ರೀಕರಿಸಿ ಕೈಗೊಳ್ಳಲಾಗಿದೆ. ಸಾಮಾನ್ಯ ಜನರ ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ಪ್ರತಿಯೊಂದು ತೆರಿಗೆಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ದರಗಳು ತೀವ್ರವಾಗಿ ಇಳಿದಿವೆ. ಕಾರ್ಮಿಕ-ತೀವ್ರ ಕೈಗಾರಿಕೆಗಳಿಗೆ ಉತ್ತಮ ಬೆಂಬಲ ನೀಡಲಾಗಿದೆ. ರೈತರು, ಕೃಷಿ ವಲಯ ಹಾಗೂ ಆರೋಗ್ಯ ವಲಯವು ಪ್ರಯೋಜನ ಪಡೆಯಲಿದೆ. ಆರ್ಥಿಕತೆಯ ಪ್ರಮುಖ ಚಾಲಕರಿಗೆ ಪ್ರಾಮುಖ್ಯತೆ ನೀಡಲಾಗಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.
Hon’ble Prime Minister Shri @narendramodi announced the Next-Generation GST Reforms in his Independence Day address from the ramparts of Red Fort.
Working on the same principle, the GST Council has approved significant reforms today.
These reforms have a multi-sectoral and… pic.twitter.com/NzvvVScKCF
— Nirmala Sitharaman Office (@nsitharamanoffc) September 3, 2025
ಬದಲಾದ ಜಿಎಸ್‌ಟಿ ದರಗಳು
ಹಾಲು ಮತ್ತು ಡೈರಿ ಉತ್ಪನ್ನಗಳು: ಯುಹೆಚ್‌ಟಿ ಹಾಲು- ಶೂನ್ಯ ತೆರಿಗೆ ಅಥವಾ ತೆರಿಗೆ ಮುಕ್ತ ಹಿಂದಿದ ದರ ಶೇ. 5. ಮಂದಗೊಳಿಸಿದ ಹಾಲು, ಬೆಣ್ಣೆ, ತುಪ್ಪ, ಪನೀರ್, ಚೀಸ್ – ಶೇ. 5 ಅಥವಾ ಶೂನ್ಯ ಹಿಂದಿನ ದರ ಶೇ. 12
ಪ್ರಧಾನ ಆಹಾರಗಳು: ಮಾಲ್ಟ್, ಪಿಷ್ಟಗಳು, ಪಾಸ್ತಾ, ಕಾರ್ನ್‌ಫ್ಲೇಕ್, ಬಿಸ್ಕತ್ತು, ಚಾಕೊಲೇಟ್, ಕೋಕೋ ಉತ್ಪನ್ನಗಳು- ಶೇ. 5 ಹಿಂದಿನ ದರ ಶೇ. 12 ರಿಂದ 18
ಡ್ರೈ ಫ್ರೂಟ್ಸ್ ಅಂಡ್ ನಟ್ಸ್ : ಬಾದಾಮಿ, ಪಿಸ್ತಾ, ಹ್ಯಾಝೆಲ್‌ನಟ್ಸ್, ಗೋಡಂಬಿ, ಖರ್ಜೂರ- ಶೇ.5 ಹಿಂದಿನ ದರ ಶೇ. 12
ಸಕ್ಕರೆ ಮತ್ತು ಮಿಠಾಯಿ: ಸಂಸ್ಕರಿಸಿದ ಸಕ್ಕರೆ, ಸಕ್ಕರೆ ಪಾಕಗಳು, ಟಾಫಿಗಳು, ಕ್ಯಾಂಡಿ-ಶೇ. 5 ಹಿಂದಿನ ದರ ಹೆಚ್ಚು ಇತ್ತು.
ಇತರ ಪ್ಯಾಕ್ ಮಾಡಿದ ಆಹಾರಗಳು: ಸಸ್ಯಜನ್ಯ ಎಣ್ಣೆಗಳು, ಪ್ರಾಣಿಗಳ ಕೊಬ್ಬು, ಖಾದ್ಯ ಸ್ಪ್ರೆಡ್‌ಗಳು, ಸಾಸೇಜ್‌ಗಳು, ಸಿದ್ದ ಮಾಂಸ, ಮೀನು ಉತ್ಪನ್ನಗಳು, ಮಾಲ್ಟ್ ಸಾರ ಆಧಾರಿತ ಆಹಾರಗಳು- ಶೇ. 5
ರಸಗೊಬ್ಬರಗಳು: ಶೇ. 5 ಹಿಂದಿನ ದರ ಶೇ. 12 ಅಥವಾ ಶೇ. 18
ಬೀಜಗಳು ಮತ್ತು ಬೆಳೆ ಪೋಷಕಾಂಶಗಳು: ಶೇ. 5 ಹಿಂದಿನ ದರ ಶೇ.12)
ಜೀವರಕ್ಷಕ ಔಷಧಗಳು, ಆರೋಗ್ಯ ಉತ್ಪನ್ನಗಳು, ವೈದ್ಯಕೀಯ ಸಾಧನಗಳು: ಶೇ. 12/18 ರಿಂದ ಶೇ. 5 ಅಥವಾ ಶೂನ್ಯ
ವಿದ್ಯುತ್ ಉಪಕರಣಗಳು (ಪ್ರವೇಶ ಮಟ್ಟದ, ಸಾಮೂಹಿಕ ಬಳಕೆ): ಶೇ. 28 ರಿಂದ ಶೇ. 18ವರೆಗೆ
ಪಾದರಕ್ಷೆಗಳು ಮತ್ತು ಜವಳಿ (ಸಾಮೂಹಿಕ ಮಾರುಕಟ್ಟೆ): ಶೇ. 12 ರಿಂದ ಶೇ. 5ವರೆಗೆ
ಅಧಿಕ ತೆರಿಗೆ ದರದಲ್ಲೇ ಉಳಿದಿರುವ ವಸ್ತುಗಳು : ಪಾನ್ ಮಸಾಲಾ, ಗುಟ್ಕಾ, ಸಿಗರೇಟ್, ಚೂಯಿಂಗ್ ಟೊಬ್ಯಾಕೋ, ಜರ್ದಾ, ಅನ್ ಮ್ಯಾನ್ಯುಫ್ಯಾಕ್ಚರ್ಡ್ ಟೊಬ್ಯಾಕೋ, ಬೀಡಿ
ಸಕ್ಕರೆ ಅಥವಾ ಸಿಹಿಕಾರಕಗಳು/ಸುವಾಸನೆಯೊಂದಿಗೆ ಸೇರಿಸಿದ ಸರಕುಗಳು (ಎರೆಟೆಡ್ ವಾಟರ್): ಶೇ. 28ರಿಂದ ಶೇ. 40ವರೆಗೆ.
ಸಿನ್ ಅಂಡ್ ಲಕ್ಸುರಿ ಗೂಡ್ಸ್ (ಸಿಗರೇಟ್‌ಗಳು, ಪ್ರೀಮಿಯಂ ಮದ್ಯ, ಉನ್ನತ ದರ್ಜೆಯ ಕಾರುಗಳು) ಶೇ. 40
ಆಮದು ಮಾಡಿಕೊಂಡ ಶಸ್ತ್ರಸಜ್ಜಿತ ಐಷಾರಾಮಿ ಸೆಡಾನ್‌ಗಳು
ಗಮನಾರ್ಹ ಬದಲಾವಣೆಗಳು
ಜಿಎಸ್‌ಟಿ ವಿನಾಯಿತಿ: ಅಲ್ಟ್ರಾ-ಹೈ ಟೆಂಪರೇಚರ್ (ಯುಹೆಚ್‌ಟಿ) ಹಾಲು, ಪೂರ್ವ-ಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಿದ ಚೆನ್ನಾ/ಪನೀರ್, ಎಲ್ಲಾ ಭಾರತೀಯ ಬ್ರೆಡ್‌ಗಳು (ಚಪಾತಿ, ರೊಟ್ಟಿ, ಪರಾಠ, ಪರೋಟ್ಟಾ, ಇತ್ಯಾದಿ), ಎಲ್ಲಾ ವೈಯಕ್ತಿಕ ಜೀವ ವಿಮಾ ಪಾಲಿಸಿಗಳಿಗೆ (ಟರ್ಮ್ ಲೈಫ್, ಯುಲಿಪ್, ದತ್ತಿ) ಮತ್ತು ಮರುವಿಮೆ.
ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೌಲ್ಯಮಾಪನ ವಿಧಾನವನ್ನು ವಹಿವಾಟು ಮೌಲ್ಯದಿಂದ ಚಿಲ್ಲರೆ ಮಾರಾಟ ಬೆಲೆಗೆ (ಆರ್‌ಎಸ್‌ಪಿ) ಬದಲಾಯಿಸಲಾಗಿದೆ.
ಪ್ರತಿಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ
ಜಿಎಸ್‌ಟಿ ದರಗಳ ಬದಲಾವಣೆಯ ಮಹತ್ವದ ನಿರ್ಧಾರದ ಕುರಿತು ಪ್ರತಿಪಕ್ಷಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ.
ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ವಕ್ತಾರ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹಳ ಹಿಂದಿನಿಂದಲೂ ಜಿಎಸ್‌ಟಿ 2.0ಗಾಗಿ ಬೇಡಿಕೆ ಮುಂದಿಡುತ್ತಲೇ ಬಂದಿತ್ತು. ಏಕೆಂದರೆ, ಇದು ಜಿಎಸ್‌ಟಿ ದರವನ್ನು ಕಡಿಮೆ ಮಾಡುತ್ತದೆ, ಸಾಮೂಹಿಕ ಬಳಕೆಯ ವಸ್ತುಗಳ ಮೇಲಿನ ದರಗಳನ್ನು ಕಡಿತಗೊಳಿಸುತ್ತದೆ, ತಪ್ಪು ವರ್ಗೀಕರಣ ಮತ್ತು ವಿವಾದಗಳನ್ನು ಕಡಿಮೆ ಮಾಡುತ್ತದೆ, ತಲೆಕೆಳಗಾದ ಸುಂಕ ರಚನೆಯನ್ನು ತೆಗೆದುಹಾಕುತ್ತದೆ (ಇನ್‌ಪುಟ್‌ಗಳಿಗೆ ಹೋಲಿಸಿದರೆ ಉತ್ಪಾದನೆಯ ಮೇಲೆ ಕಡಿಮೆ ತೆರಿಗೆ), ಎಂಎಸ್‌ಎಂಇಳ ಮೇಲಿನ ಅನುಸರಣೆ ಹೊರೆಯನ್ನು ಸರಾಗಗೊಳಿಸುತ್ತದೆ ಮತ್ತು ಜಿಎಸ್‌ಟಿ ವ್ಯಾಪ್ತಿಯನ್ನು ವಿಸ್ತರಿಸುತ್ತದೆ” ಎಂದಿದ್ದಾರೆ.
ಮುಂದುವರಿದು, “ಸಾಂವಿಧಾನಿಕ ಸಂಸ್ಥೆಯಾದ ಜಿಎಸ್‌ಟಿ ಮಂಡಳಿಯ ಸಭೆಯ ನಂತರ ಕೇಂದ್ರ ಹಣಕಾಸು ಸಚಿವರು ನಿನ್ನೆ ಸಂಜೆ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಆದಾಗ್ಯೂ, ಜಿಎಸ್‌ಟಿ ಮಂಡಳಿಯ ಸಭೆಗೂ ಮೊದಲೇ, ಪ್ರಧಾನ ಮಂತ್ರಿಗಳು ಆಗಸ್ಟ್ 15, 2025ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಅದರ ನಿರ್ಧಾರಗಳ ಸಾರವನ್ನು ಘೋಷಿಸಿದ್ದರು. ಹಾಗಾದರೆ, ಜಿಎಸ್‌ಟಿ ಮಂಡಳಿಗೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಉಪಭೋಗದಲ್ಲಿ ಚುರುಕು ಕಾಣಿಸದಿರುವುದು, ಖಾಸಗಿ ಹೂಡಿಕೆಯಲ್ಲಿ ನಿಧಾನಗತಿಯಿರುವುದು ಮತ್ತು ವ್ಯಾಪಕವಾಗಿ ನಡೆಯುತ್ತಿರುವ ವರ್ಗೀಕರಣದ ತರ್ಕಾತ್ಮಕ ವಾದಗಳಿಂದ ನಲುಗಿರುವ ಸ್ಥಿತಿಯಲ್ಲಿ, ಕೇಂದ್ರ ಹಣಕಾಸು ಸಚಿವರು ಕೊನೆಗೂ ಜಿಎಸ್‌ಟಿ 1.0 (ಮೊದಲ ಹಂತದ ಜಿಎಸ್‌ಟಿ)ಮಾರ್ಗದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ, ಜಿಎಸ್‌ಟಿ 1.0 ರ ವಿನ್ಯಾಸವೇ ದೋಷಪೂರಿತವಾಗಿತ್ತು ಮತ್ತು ಜುಲೈ 2017 ರಲ್ಲಿಯೇ ಕಾಂಗ್ರೆಸ್ ಅದನ್ನು ಎತ್ತಿ ತೋರಿಸಿತ್ತು. ಪ್ರಧಾನಿ ತಮ್ಮ ವಿಶಿಷ್ಟವಾದ ಬದಲಾವಣೆಯಾಗಿ ಜಿಎಸ್‌ಟಿ ಪರಿಚಯಿಸಲು ನಿರ್ಧರಿಸಿದಾಗ, ಅದು ಉತ್ತಮ ಮತ್ತು ಸರಳ ತೆರಿಗೆಯಾಗಬೇಕಿತ್ತು. ಆದರೆ, ಅದು ಬೆಳವಣಿಗೆಯನ್ನು ನಿಗ್ರಹಿಸುವ ತೆರಿಗೆಯಾಗಿ ಪರಿಣಮಿಸಿತು” ಎಂದಿದ್ದಾರೆ.
ನಿನ್ನೆ ಸಂಜೆ ಹಣಕಾಸು ಸಚಿವರು ಮಾಡಿದ ಘೋಷಣೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿವೆ. ಏಕೆಂದರೆ ಪ್ರಧಾನಮಂತ್ರಿ ಈಗಾಗಲೇ ದೀಪಾವಳಿಗೆ ಮೊದಲ ಗಡುವನ್ನು ನಿಗದಿಪಡಿಸಿದ್ದರು. ಇನ್ನು ನಿಜವಾದ ‘ಜಿಎಸ್‌ಟಿ 2.0’ ವ್ಯವಸ್ಥೆಯ ನಿರೀಕ್ಷೆ ಇನ್ನೂ ಮುಂದುವರೆದಿದೆ. ಈ ಹೊಸ ಮಾರ್ಪಡಿಸಿದ ವ್ಯವಸ್ಥೆಯನ್ನು ‘ಜಿಎಸ್‌ಟಿ 1.5 ಎಂದು ಕರೆಯಬಹುದು. ಇದೂ ಕೂಡ ಖಾಸಗಿ ಹೂಡಿಕೆಯನ್ನು—ವಿಶೇಷವಾಗಿ ತಯಾರಿಕಾ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ರೀತಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಭಾರವನ್ನು ಕಡಿಮೆ ಮಾಡುತ್ತದೆಯೇ? ಎಂಬುದಕ್ಕೆ ಕಾಲವೇ ಉತ್ತರಿಬೇಕಿದೆ. ಇದಲ್ಲದೆ, ತಮ್ಮ ಆದಾಯವನ್ನು ಸಂಪೂರ್ಣವಾಗಿ ರಕ್ಷಿಸಲು ಇನ್ನೂ ಐದು ವರ್ಷಗಳವರೆಗೆ ಪರಿಹಾರವನ್ನು ವಿಸ್ತರಿಸುವಂತೆ ರಾಜ್ಯಗಳು ಬೇಡಿಕೆ ಇಟ್ಟಿವೆ. ಆ ಬೇಡಿಕೆಯನ್ನು ಈಡೇರಿಸುವುದು ನಿಜವಾದ ಒಕ್ಕೂಟ ವ್ಯವಸ್ಥೆಯಾಗಿದೆ. ಇದೀಗ ಜಿಎಸ್‌ಟಿ ದರ ಬದಲಾವಣೆಯೊಂದಿಗೆ ರಾಜ್ಯಗಳ ಬೇಡಿಕೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು, ಜಿಎಸ್‌ಟಿ ದರ ಬದಲಾವಣೆಯಿಂದ ಒಟ್ಟು 47,700 ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗುವ ನಿರೀಕ್ಷೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ನಿರ್ಧಾರದ ಬಗ್ಗೆ ಮಾತನಾಡಿ, “ಜಿಎಸ್‌ಟಿ ದರ ಬದಲಾವಣೆಯ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ಆಧಾರದ ಮೇಲೆ ಒಪ್ಪಿಗೆ ನೀಡಿವೆ. ಇದು ಸಂಪೂರ್ಣ ಒಮ್ಮತದ ನಿರ್ಧಾರ” ಎಂದಿದ್ದಾರೆ.
ಮಣಿಪುರಕ್ಕೆ ಪ್ರಧಾನಿ ಭೇಟಿ: 29 ತಿಂಗಳ ನಂತರದ ಮೊದಲ ಹೆಜ್ಜೆ, ‘ವಿಳಂಬದ ನಡೆ’ ಎಂದ ಕಾಂಗ್ರೆಸ್


