ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಮಚ್ಚು, ಲಾಂಗ್‌ನಿಂದ ಹಲ್ಲೆ ನಡೆಸಿ ದಲಿತ ಸಂಘರ್ಷ ಸಮಿತಿ ಮುಖಂಡ ಜಿ.ಸಿ.ನರಸಿಂಹಮೂರ್ತಿ (ಕುರಿಮೂರ್ತಿ) (50) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಹೆದ್ದಾರಿ ಪಕ್ಕದಲ್ಲಿ ಕೊಲೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಸ್ನೇಹಿತರ ಜತೆ ಟೀ ಕುಡಿಯುತ್ತ ಕುಳಿತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ, ಕೊಲೆ ಮಾಡಿದ್ದಾರೆ.
ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಹಿಂದೆ ಪಟ್ಟಣ ಪಂಚಾಯಿತಿ ಸದಸ್ಯರಾಗಿ ನರಸಿಂಹಮೂರ್ತಿ ಅವರು ಸೇವೆ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಅದರಲ್ಲೂ ಗುಬ್ಬಿ ತಾಲ್ಲೂಕಿನಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇವೆ. ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಕೆಲವು ವಾರಗಳ ಹಿಂದೆ ಇಬ್ಬರು ದಲಿತ ಯುವಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕರಿಶೆಟ್ಟಿ ಹಟ್ಟಿ ಬಳಿ ಎರಡು ವಾರಗಳ ಹಿಂದೆ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ಈ ಘಟನೆಗಳ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಆರೋಪಿಗಳು ಯಾರೆಂದು ತನಿಖೆಯಾಗಬೇಕಿದೆ
ಪೆದ್ದನಹಳ್ಳಿ ಪ್ರಕರಣ
ಪೆದ್ದನಹಳ್ಳಿಯಲ್ಲಿ ಗ್ರಾಮದಲ್ಲಿ ಏಪ್ರಿಲ್ 21ರ ರಾತ್ರಿ ಪೆದ್ದನಹಳ್ಳಿ ಗ್ರಾಮದ ಗಿರೀಶ್ (ಮಾದಿಗ ಸಮುದಾಯ), ಮಂಚಲದೊರೆ ಗ್ರಾಮದ ಗಿರೀಶ್ (ನಾಯಕ ಸಮುದಾಯ) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸವರ್ಣೀಯರನ್ನು ಬಂಧಿಸಲಾಗಿದೆ. (ಪೆದ್ದನಹಳ್ಳಿ ಪ್ರಕರಣ ಕುರಿತು ಓದಿರಿ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!)
ತುಮಕೂರು: ಮತ್ತೊಂದು ಕೊಲೆ ಪ್ರಕರಣ
ತುಮಕೂರು ತಾಲ್ಲೂಕು ಕೋರಾ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 29ನೇ ತಾರೀಕು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಊರಿನ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ಚಾನೆಲ್‌ನಲ್ಲಿ ಮಾದಿಗ ಸಮುದಾಯದ ಮುತ್ತುರಾಜ (26) ಎಂಬ ಯುವಕನ ಶವ ಪತ್ತೆಯಾಗಿದ್ದರು. ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆಂದೇ ಬಿಂಬಿಸಲಾಗಿತ್ತು. ಆದರೆ ಮೇ 17ರಂದು ಎಸ್.ಸಿ. ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸವರ್ಣೀಯ ವ್ಯಕ್ತಿಯನ್ನು ಆರೋಪಿ ಎಂದು ಗುರುತಿಸಲಾಗಿದೆ. (ಸಂಪೂರ್ಣ ಸುದ್ದಿ ಇಲ್ಲಿ ಓದಿರಿ: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?)


