ಗುಜರಾತ್‌ನ ಉನಾ ಪಟ್ಟಣದಲ್ಲಿ ಏಪ್ರಿಲ್ 1ರಂದು ನಡೆದ ರಾಮನವಮಿಯಂದು ದ್ವೇಷ ಭಾಷಣ ಮಾಡಿ ಕೋಮು ಘರ್ಷಣೆಗೆ ಕಾರಣವಾಗಿದ್ದ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಅವರನ್ನು ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಉನಾದಲ್ಲಿ ಕಾಜಲ್ ಪೊಲೀಸರ ಮುಂದೆ ಶರಣಾದ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಟ್ವಿಟರ್ ಬಯೋದಲ್ಲಿ ಉದ್ಯಮಿ, ಸಂಶೋಧನಾ ವಿಶ್ಲೇಷಕಿ, ಸಾಮಾಜಿಕ ಕಾರ್ಯಕರ್ತೆ, ರಾಷ್ಟ್ರೀಯತಾವಾದಿ ಮತ್ತು ‘ಹೆಮ್ಮೆಯ ಭಾರತೀಯಳು’ ಎಂದು ಗುರುತಿಸಿಕೊಂಡಿರುವ ಕಾಜಲ್ ಹಿಂದೂಸ್ತಾನಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 92,000ಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿದ್ದು, ವಿಶ್ವ ಹಿಂದೂ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿರಿ: ಸ್ಟನ್‌ಗನ್ ಬಳಸಿ ಚಿತ್ರಹಿಂಸೆ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು
ಎಪ್ರಿಲ್ 2 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಅಡಿಯಲ್ಲಿ ಹಿಂದೂಸ್ತಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಾರ್ಚ್ 30 ರಂದು ರಾಮನವಮಿಯಂದು ವಿಎಚ್‌ಪಿ ಆಯೋಜಿಸಿದ್ದ ಸಮಾವೇಶದಲ್ಲಿ ಕಾಜಲ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಜಲ್ ಹಿಂದೂಸ್ತಾನಿ ಭಾಷಣದ ನಂತರ ಉನಾದಲ್ಲಿ ಎರಡು ದಿನಗಳ ಕಾಲ ಕೋಮು ಉದ್ವಿಗ್ನತೆ ಉಂಟಾಯಿತು. ಏಪ್ರಿಲ್ 1 ರ ರಾತ್ರಿ ಎರಡು ಸಮುದಾಯಗಳ ನಡುವೆ ಘರ್ಷಣೆ ಮತ್ತು ಕಲ್ಲು ತೂರಾಟಕ್ಕೆ ಈ ಭಾಷಣ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಜನಸಮೂಹದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಗಲಭೆ ನಡೆಸಿದ್ದಕ್ಕಾಗಿ 80 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾರೆ.


