Homeಕರ್ನಾಟಕಸ್ಟನ್‌ಗನ್‌ ಬಳಸಿ ಚಿತ್ರಹಿಂಸೆ; ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಸ್ಟನ್‌ಗನ್‌ ಬಳಸಿ ಚಿತ್ರಹಿಂಸೆ; ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಅಲೀಮುಲ್ಲಾ ಬೇಗ್ ಎಂಬವರಿಗೆ ಚಿತ್ರಹಿಂಸೆ ನೀಡಿರುವ ವಿಡಿಯೊ ವೈರಲ್ ಆಗಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

- Advertisement -
- Advertisement -

ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡು ಈಗ ಪೊಲೀಸ್‌ ಬಂಧನದಲ್ಲಿರುವ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ವ್ಯಕ್ತಿಯೊಬ್ಬರ ಮೇಲೆ ಸ್ಟನ್‌ಗನ್‌ನಿಂದ ಹಲ್ಲೆ ನಡೆಸಿರುವ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಗೋರಕ್ಷಣೆಯ ಹೆಸರಿನಲ್ಲಿ ಇತ್ತೀಚೆಗೆ ಸ್ಟನ್‌ಗನ್‌ನಿಂದ ಹಲ್ಲೆ ಮಾಡಿದ್ದು, ಫೇಸ್‌ಬುಕ್‌ ಲೈವ್‌ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಅದರ ಅನ್ವಯ ಬೆಂಗಳೂರು ಪೊಲೀಸರು ಕ್ರಮ ಜರುಗಿಸಿದ್ದಾರೆ.

ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ಜಾನುವಾರು ಸಾಗಾಟಗಾರ ಇದ್ರೀಸ್ ಪಾಷಾ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ, ಇಂತಹದ್ದೇ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇತ್ತೀಚೆಗೆ ಮಾರಣಾಂತಿಕವಾಗಿ ಸ್ಟನ್‌ಗನ್‌ನಿಂದ ಪುನೀತ್‌ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಮಾರ್ಚ್ 20 ರಂದು ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬ 30 ವರ್ಷದ ಯುವಕನ ಮೇಲೆ ಪುನೀತ್ ಕೆರೆಹಳ್ಳಿ ಮತ್ತು ಇತರ ಮೂವರು ಸಹಚರರು ಸ್ಟನ್ ಗನ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು.

ಅಲೀಮುಲ್ಲಾ ಅವರ ದೂರಿನ ಆಧಾರದ ಮೇಲೆ, ಏಪ್ರಿಲ್ 6 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಘಟನೆ?

ತಮಿಳುನಾಡಿನ ಕೃಷ್ಣಗಿರಿಗೆ ದನಗಳನ್ನು ಸಾಗಿಸುವ ಕೆಲಸಕ್ಕೆ ಅಲೀಮುಲ್ಲಾ ಅವರನ್ನು ನಿಯೋಜಿಸಲಾಗಿತ್ತು. ಅವರನ್ನು ಪುನೀತ್ ಕೆರೆಹಳ್ಳಿ ಮತ್ತು ಆತನ ಮೂವರು ಸಹಚರರಾದ ಸಂತೋಷ್, ಚೇತನ್ ಮತ್ತು ದೀಪಕ್ ಅವರು ನೈಸ್ ರಸ್ತೆಯಲ್ಲಿ ಅಡ್ಡ ಹಾಕಿದ್ದರು.

ಪುನೀತ್ ಮತ್ತು ಆತನ ಸಹಚರರು ವಾಹನದ ಚಾಲಕ ರಫೀಕ್ ಅವರ ಮೇಲೆ ಮೊದಲು ಹಲ್ಲೆ ನಡೆಸಿದ್ದರು. ದನಗಳನ್ನು ಸಾಗಿಸುತ್ತಿದ್ದ ಕಾರಣ ಅವರನ್ನು ನಿಂದಿಸಿ ಥಳಿಸಿದ್ದರು. ಬಳಿಕ ವಿದ್ಯುತ್ ಶಾಕ್ ನೀಡಲು ಸ್ಟನ್ ಗನ್ ಅನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಹಾಯಕ್ಕಾಗಿ ಅಲೀಮುಲ್ಲಾ ಬೇಗ್ ಕೂಗಿ ಕೊಂಡರೂ, ಸುಮಾರು ಒಂದು ಗಂಟೆಗಳ ಕಾಲ ಅವರಿಗೆ ಚಿತ್ರಹಿಂಸೆ ನೀಡಲಾಯಿತು ಎಂಬುದು ತಿಳಿದುಬಂದಿದೆ. ಬಳಿಕ ಪುನೀತ್ ಕೆರೆಹಳ್ಳಿ ಈ ಘಟನೆಯ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಲೈವ್ ವೀಡಿಯೊ ಮಾಡಿದ್ದನು. ಟ್ರಕ್‌ನೊಳಗೆ ಉಯ್ಯಾಲೆಯಲ್ಲಿ ಮಲಗಿದ್ದ ಅಲೀಮುಲ್ಲಾಗೆ ನೋವನ್ನುಂಟು ಮಾಡಲು ಪುನೀತ್ ಕೆರೆಹಳ್ಳಿ, ಸ್ಟನ್ ಗನ್ ಅನ್ನು ಬಳಸುತ್ತಿರುವ ವೀಡಿಯೊ ವೈರಲ್ ಆಗಿದೆ.

“ನಾನು ನಿರಪರಾಧಿ ಎಂದು ಮನವಿ ಮಾಡಿದರೂ ಹಣಕಾಸಿನ ತೊಂದರೆಯಿಂದಾಗಿ ಜಾನುವಾರು ಸಾಗಾಟದ ಕೆಲಸವನ್ನು ಮಾಡಿಕೊಂಡಿದ್ದೇನೆ ಎಂದು ತಿಳಿಸಿದರೂ ಬಿಡದೆ ಪುನೀತ್‌ ಕೆರೆಹಳ್ಳಿ ಟೀಮ್ ಅಮಾನುಷವಾಗಿ ಹಲ್ಲೆ ನಡೆಸಿದನು. ಬಾಯಿಗೆ ಬಂದಂತೆ ಬೈದನು” ಎಂದು ಸಂತ್ರಸ್ತ ಅಲೀಮುಲ್ಲಾ ತಿಳಿಸಿದ್ದಾರೆ. ಘಟನೆಯ ನಂತರ ಪುನೀತ್ ಕೆರೆಹಳ್ಳಿ, ಕರ್ನಾಟಕ ಗೋಹತ್ಯೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ರ ಅಡಿಯಲ್ಲಿ ದೂರು ನೀಡಿದ್ದನು.

ಪುನೀತ್ ಕೆರೆಹಳ್ಳಿ ಸದ್ಯ ಸಾತನೂರು ಪೊಲೀಸರ ವಶದಲ್ಲಿದ್ದಾರೆ. ಜಾನುವಾರು ಸಾಗಣೆ ಮಾಡುತ್ತಿದ್ದ ಇದ್ರೀಸ್ ಪಾಷಾ ಎಂಬವರನ್ನು ಪುನೀತ್ ಮತ್ತು ಆತನ ಸಹಚರರು ಕೊಂದಿರುವುದಾಗಿ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದ್ರೀಸ್ ಪಾಷಾ ಅವರ ದೇಹದ ಮೇಲೂ ಸುಟ್ಟ ಗಾಯದ ಗುರುತುಗಳಿದ್ದು, ಸ್ಟನ್ ಗನ್ ಬಳಸಿರುವ ಶಂಕೆ ವ್ಯಕ್ತವಾಗಿದೆ.

ಮಾರ್ಚ್ 31ರ ರಾತ್ರಿ ರಾಮನಗರ ಜಿಲ್ಲೆಯ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಗ್ಯಾಂಗ್ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ವಾಹನ ಚಾಲಕ ಇದ್ರೀಸ್ ಪಾಶ ಹತ್ಯೆಯಾಗಿದ್ದರು. ಈ ಕುರಿತು ಪುನೀತ್ ಕೆರೆಹಳ್ಳಿ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 304 ಅಡಿ ಪ್ರಕರಣ ದಾಖಲಿಸಿದ್ದರು. ಆದರೆ ಅಂದಿನಿಂದ ತಲೆ ಮರೆಸಿಕೊಂಡಿದ್ದ ಅವರು ಸೋಮವಾರ ರಾತ್ರಿ ಫೇಸ್‌ಬುಕ್‌ ಲೈವ್‌ ಬಂದು ನಾನು ಕೊಲೆ ಮಾಡಿಲ್ಲ ಎಂದಿದ್ದರು.

ಪ್ರಕರಣದ ಕುರಿತು ಪತ್ರಿಕಾಗೋಷ್ಟಿ ನಡೆಸಿದ್ದ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕಾರ್ತಿಕ್‌ ರೆಡ್ಡಿಯವರು, “ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದು, ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ” ಎಂದು ಹೇಳಿದ್ದರು.

ಇದನ್ನೂ ಓದಿರಿ: ಮುಸ್ಲಿಮರ ಮೇಲೆ ದೂರು ನೀಡಲು ಹಸು ಕೊಂದು ಸಿಕ್ಕಿಬಿದ್ದ ಹಿಂದೂ ಮಹಾಸಭಾ ಸದಸ್ಯರು

ಮಾರ್ಚ್ 27 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ತೆಂಡೇಕೆರೆ ದನದ ಸಂತೆಯಲ್ಲಿ ಖರೀದಿಸಿದ ರಾಸುಗಳನ್ನು ಮಾರ್ಚ್ 31 ರ ರಾತ್ರಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಂತೆಗಳಿಗೆ ಕೊಂಡೊಯ್ಯುತ್ತಿರುವಾಗ ಅವರನ್ನು ರಾಮನಗರ ಜಿಲ್ಲೆಯ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಗ್ಯಾಂಗ್ ತಡೆದಿತ್ತು.  2 ಲಕ್ಷ ಹಣ ಕೊಟ್ಟರೆ ಗಾಡಿ ಬಿಡುತ್ತೇನೆ, ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಇದ್ರಿಶ್ ಪಾಶ ಸೇರಿ ಅವರ ಜೊತೆಗಿದ್ದ ಇರ್ಫಾನ್ ಮತ್ತು ಸೈಯ್ಯದ್ ಜಹೀರ್ ಎಂಬುವವರಿಗೆ ಬೆದರಿಕೆಯೊಡ್ಡಿದ್ದಾರೆ. ಆದರೆ ಇದ್ರಿಶ್ ಪಾಶ ರಾಸುಗಳನ್ನು ಖರೀದಿಸಿದ ರಶೀದಿಗಳನ್ನು ತೋರಿಸಿ ನಾವು ಕಾನೂನು ಬದ್ಧವಾಗಿ ಖರೀದಿಸಿದ ಗೋವುಗಳನ್ನು ಸಾಗಾಟ ಮಾಡುತ್ತಿದ್ದೇವೆ, ನಿಮಗೆ ಏಕೆ  ಹಣ ಕೊಡಬೇಕೆಂದು ವಾದಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಪುನೀತ್ ಕೆರೆಹಳ್ಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಇದ್ರಿಶ್ ಪಾಶ, ಇರ್ಫಾನ್ ಮತ್ತು ಸಯ್ಯದ್ ಜಹೀರ್ ಮೇಲೆ ತೀವ್ರ ಹಲ್ಲೆ ನಡೆಸಿದೆ.

ಈ ಗಲಾಟೆಯಲ್ಲಿ ಇರ್ಫಾನ್ ತಪ್ಪಿಸಿಕೊಂಡು ಓಡಿದರೆ, ಸಯ್ಯದ್ ಅಂಗಡಿಯ ಬಳಿ ಅವಿತುಕೊಂಡಾಗ ಸಿಕ್ಕಿಬಿದ್ದಿದ್ದಾರೆ. ಆದರೆ ಇದ್ರೀಸ್ ತಪ್ಪಿಸಿಕೊಳ್ಳಲು ಯತ್ನಿಸುವಾಗ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ಎಲೆಕ್ಟ್ರಿಕ್ ಗನ್ ರೀತಿಯ ಸಾಧನದಿಂದ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಅದು ಮಿತಿ ಮೀರಿದ್ದರಿಂದ ಇದ್ರಿಶ್ ಪಾಶ ಜೀವ ಬಿಟ್ಟಿದ್ದಾರೆ. ಅವರಿಗೆ ನೀಡಿದ ಕಿರುಕುಳದ ಮಾರ್ಕ್‌ಗಳು ಇದ್ರೀಶ್ ದೇಹದ ಮೇಲಿರುವುದನ್ನು ಫೋಟೊಗಳು ದೃಢೀಕರಿಸುತ್ತವೆ ಎಂದು ಇದ್ರೀಸ್ ಪಾಶ ಕುಟುಂಬಸ್ಥರು ಆರೋಪಿಸಿದ್ದಾರೆ.

ಏಳು ದಿನ ನ್ಯಾಯಾಂಗ ಬಂಧನ

ಇದ್ರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಆರೋಪಿಗಳನ್ನು ಇಂದು ಸಾತನೂರು ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದೆ. ಪ್ರಧಾನ ಸಿವಿಲ್ ನ್ಯಾ.ಅಪ್ಪಣ್ಣ ಸವದಿ ಅವರು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...