Homeಕರ್ನಾಟಕ'ಕೈ' ಟಿಕೆಟ್ ತಪ್ಪಿದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ವೈ.ಎಸ್.ವಿ. ದತ್ತ ತೀರ್ಮಾನ

‘ಕೈ’ ಟಿಕೆಟ್ ತಪ್ಪಿದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ವೈ.ಎಸ್.ವಿ. ದತ್ತ ತೀರ್ಮಾನ

- Advertisement -
- Advertisement -

ಜೆಡಿಎಸ್ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಇದೀಗ ಕಾಂಗ್ರೆಸ್‌ನೊಂದಿಗೂ ಮುನಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಾಗ ಕಡೂರು ಕ್ಷೇತ್ರದಿಂದ ದತ್ತ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ವಿ ದತ್ತ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿ ಕಾಂಗ್ರೆಸ್‌ ಸೇರಿ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎನ್ನುವ ಆಸೆಯಲ್ಲಿದ್ದರು. ಹಾಗಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಬಿ ಫಾರ್ಮ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಆನಂದ್‌ ಕೆ.ಎಸ್. ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ತೀವ್ರ ನಿರಾಸೆಗೊಂಡು ಅವರು ರವಿವಾರ ತಮ್ಮ ಅಭಿಮಾನಿಗಳ ಸಭೆಯನ್ನು ಕರೆಯಲಾಗಿದ್ದರು. ಅವರು ಹೇಳಿದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಅಭಿಮಾನಿಗಳ ಒತ್ತಡ ಬಂದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದರು. ಅದರಂತೆ ರವಿವಾರ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದ ದತ್ತ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ರವಿವಾರ ಏರ್ಪಡಿಸಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ”ಈಬಾರಿ ಕ್ಷೇತ್ರದಲ್ಲಿ ವಿಶೇಷ ಪರಿಸ್ಥಿತಿ ತಲೆದೋರಿದೆ. ಐತಿಹಾಸಿಕ ಬದಲಾವಣೆಗೆ ಕ್ಷೇತ್ರ ಸನ್ನದ್ಧವಾಗಿದೆ. ಅದಕ್ಕೆ ಪೂರಕವಾಗಿ ನಾನು 50 ವರ್ಷಗಳ ಜೆಡಿಎಸ್‌ ನಂಟು ಬಿಟ್ಟು ಕಾಂಗ್ರೆಸ್‌ ಸೇರಿದೆ. ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸವನ್ನು ಪಕ್ಷ ಹುಸಿ ಮಾಡಿದೆ. ಅಭಿಮಾನಿಗಳು ಅದನ್ನು ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಎಂದೇ ಭಾವಿಸಿದ್ದಾರೆ. ಹೀಗಾಗಿ, ಪಕ್ಷೇತರವಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ” ಎಂದರು.

ಇದನ್ನೂ ಓದಿ: ವೈಎಸ್‌ವಿ ದತ್ತಾ, ನಾಗೇಶ್ ‘ಕೈ’ ಸೇರ್ಪಡೆ; ಇದು ಕಾಂಗ್ರೆಸ್ ಪರ್ವ ಎಂದ ಡಿಕೆಶಿ

”ಜನರ ಬಳಿ ತೆರಳಿ ಧನಸಹಾಯ ಜೊತೆಗೆ ಮತ ಭಿಕ್ಷೆ ಬೇಡುತ್ತೇನೆ‌. ಸ್ವಾಭಿಮಾನ ಎಂದರೆ ಏನು ಎಂಬುದನ್ನು ಅಭಿಮಾನಿಗಳು ತೋರಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಇತ್ಯಾದಿ ಕುರಿತು ಅಭಿಮಾನಿಗಳೊಂದಿಗೆ ಇದೇ 13ರಂದು ಚರ್ಚಿಸಿ ನಿರ್ಧರಿಸುತ್ತೇನೆ” ಎಂದರು.

”ಈಗ ಅಭ್ಯರ್ಥಿ ಆಯ್ಕೆಗೆ ಮಾನದಂಡ ಶುರುವಾಗುವುದೇ ಮೊದಲು ಜಾತಿ, ನಂತರ ಹಣಬಲದಿಂದ. ಆದರೆ, ನನಗೆ ಜಾತಿ, ಹಣ ಬಲ ಎರಡೂ ಇಲ್ಲ. ಇರುವುದು ಜನರ ಪ್ರೀತಿ ಮಾತ್ರ. ನನಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ತಿಳಿದು ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದು ಪ್ರಸ್ತುತ ರಾಜಕಾರಣದ ರೀತಿ” ಎಂದು ಬೇಸರ ವ್ಯಕ್ತಪಡಿಸಿದರು.

”ನನ್ನ ಬಳಿ ಹಣ ಇಲ್ಲ, ಜಾತಿ ಇಲ್ಲ ನಾನೊಬ್ಬ ಸಾಲಗಾರ. ಆದರೆ ನನ್ನ ಬಳಿ ಜನ ಬೆಂಬಲ ಇದೆ, ನಾನು ಹೇಳಿದರೆ 10 ಸಾವಿರ ಜನ ಬರುತ್ತಾರೆ. ನನ್ನ ಬಳಿ ಆಸ್ತಿ, ಇಲ್ಲದಿದ್ದರೆ ಪ್ರೀತಿ ಇಲ್ಲವೇ. ಜಾತಿ ರಾಜಕಾರಣಿ ಬೇಡ, ಪ್ರೀತಿ ರಾಜಕಾರಣ ಮಾಡೋಣ” ಎಂದು ಕರೆ ಕೊಟ್ಟರು.

”ಕಳೆದ ಬಾರಿ ಚುನಾವಣೆಯಲ್ಲಿ‌ ನಾನು ಮತ ಚಲಾಯಿಸಿ ಹೊರಬಂದಾಗ, ನನ್ನ ಪತ್ನಿ ನಿಧನರಾಗಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ನನ್ನನ್ನು ಸಾಕಿ ಬೆಳೆಸಿದ್ದ ಸಹೋದರಿ ನಾನು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುವ ಸಮಯದಲ್ಲಿ ನಿಧನರಾದರು. ಕುಟುಂಬದವರ ಯೋಗಕ್ಷೇಮ ವಿಚಾರಿಸಲೂ ಸಮಯವಾಗುತ್ತಿರಲ್ಲಿಲ್ಲ. ಅಷ್ಟರಮಟ್ಟಿಗೆ ಕೇತ್ರದಲ್ಲಿ ತೊಡಗಿಸಿಕೊಂಡಿದ್ದೆ. ಅಭಿಮಾನಿಗಳೇ ನನ್ನ ಕುಟುಂಬ” ಎಂದು ದತ್ತ ಭಾವುಕರಾದರು.

ಈ ವೇಳೆ ಅವರು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಧನಸಹಾಯ ಜೊತೆಗೆ ಮತ ಭಿಕ್ಷೆ ಬೇಡಿದರು. ಚುನಾವಣಾ ಖರ್ಚಿಗಾಗಿ ಅಭಿಮಾನಿಗಳು ಸಭೆಯಲ್ಲಿ 50 ಸಾವಿರ ರೂಪಾಯಿ, 2 ಲಕ್ಷದ ಚೆಕ್ ಗಳನ್ನು ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...