ರಷ್ಯಾ ಪರವಾಗಿ ಹೋರಾಡಿದ ಆರೋಪದ ಮೇಲೆ ಪ್ರಸ್ತುತ ಉಕ್ರೇನಿಯನ್ ಬಂಧನದಲ್ಲಿರುವ ಗುಜರಾತ್‌ನ ಮೊರ್ಬಿ ಜಿಲ್ಲೆಯ 23 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಿಡುಗಡೆ ಮಾಡಿ, ಸಹಾಯ ಮಾಡುವಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ತಮ್ಮ ಕುಟುಂಬಕ್ಕೆ ಕಳುಹಿಸಲಾದ ವೀಡಿಯೊ ಸಂದೇಶಗಳಲ್ಲಿ, ಅಧ್ಯಯನ ಅಥವಾ ಕೆಲಸಕ್ಕಾಗಿ ರಷ್ಯಾಕ್ಕೆ ಹೋಗಲು ಯೋಜಿಸುತ್ತಿರುವ ಭಾರತೀಯ ನಾಗರಿಕರು ವಂಚನೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಗುಜರಾತ್ ಮೊರ್ಬಿ ನಿವಾಸಿ ಸಾಹಿಲ್ ಮೊಹಮ್ಮದ್ ಹುಸೇನ್ ಮಜೋತಿ ಎಂಬ ವ್ಯಕ್ತಿ, ಈ ಅಕ್ಟೋಬರ್ ಆರಂಭದಲ್ಲಿ ಉಕ್ರೇನಿಯನ್ ಪಡೆಗಳಿಗೆ ಶರಣಾಗುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಸುದ್ದಿಯಾದರು.
ಮಜೋತಿ, ಜನವರಿ 10, 2024 ರಂದು ಐಟಿಎಂಒ ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕೋರ್ಸ್ ಅನ್ನು ಮುಂದುವರಿಸಲು ವಿದ್ಯಾರ್ಥಿ ವೀಸಾದಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸಿದ್ದರು.
ನಂತರ ಅವರು ಕಾನೂನು ತೊಂದರೆಯಲ್ಲಿ ಸಿಲುಕಿಕೊಂಡು, ರಷ್ಯಾದಲ್ಲಿ ಜೈಲಿನಲ್ಲಿದ್ದರು. ಉಕ್ರೇನಿಯನ್ ಪಡೆಗಳಿಂದ ಸೆರೆಹಿಡಿಯಲ್ಪಡುವ ಮೊದಲು ರಷ್ಯಾದ ಮಿಲಿಟರಿಗೆ ಸೇರಲು ಒತ್ತಾಯಿಸಲಾಯಿತು ಎಂದು ಆರೋಪಿಸಲಾಗಿದೆ.
ಭಾನುವಾರ ರಾತ್ರಿ ಅವರ ಕುಟುಂಬಕ್ಕೆ ಬಂದಿದೆ ಮತ್ತು ಉಕ್ರೇನಿಯನ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ ಎಂದು ಹೇಳಲಾದ ಎರಡು ವೀಡಿಯೊ ಸಂದೇಶಗಳಲ್ಲಿ, ಒಂದು ಇಂಗ್ಲಿಷ್ ಮತ್ತು ಇನ್ನೊಂದು ಹಿಂದಿಯಲ್ಲಿದೆ. ಮಜೋತಿ, ತಮ್ಮ ಪರಿಸ್ಥಿತಿಯನ್ನು ಹತಾಶ ಎಂದು ವಿವರಿಸಿದ್ದಾರೆ.
“ಸದ್ಯ ನಾನು ಯುದ್ಧ ಅಪರಾಧಿಯಾಗಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದೇನೆ. ನಾನು ಹತಾಶನಾಗಿದ್ದೇನೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿದಿಲ್ಲ” ಎಂದು ಅವರು ವೀಡಿಯೊಗಳಲ್ಲಿ ಒಂದರಲ್ಲಿ ಹೇಳುತ್ತಾರೆ. “ಉನ್ನತ ಅಧ್ಯಯನ ಅಥವಾ ಕೆಲಸಕ್ಕಾಗಿ ರಷ್ಯಾಕ್ಕೆ ಬರುವವರು ಬಹಳ ಜಾಗರೂಕರಾಗಿರಬೇಕು. ಇಲ್ಲಿ ಅನೇಕ ವಂಚಕರಿದ್ದಾರೆ. ನೀವು ಕ್ರಿಮಿನಲ್, ಮಾದಕ ದ್ರವ್ಯ ಅಥವಾ ಅಕ್ರಮ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಸಾಧ್ಯವಾದಷ್ಟು, ಇದೆಲ್ಲದರಿಂದ ದೂರವಿರಿ” ಎಂದು ಹೇಳಿದ್ದಾರೆ.
ಭಾರತೀಯ ಅಧಿಕಾರಿಗಳಲ್ಲಿ ಮನವಿ ಮಾಡಿರುವ ಮಜೋತಿ, “ದಯವಿಟ್ಟು ನನಗೆ ಸಹಾಯ ಮಾಡಬೇಕು ಎಂದು ನಾನು ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ವಿನಂತಿಸುತ್ತೇನೆ” ಎಂದು ಹೆಳಿದ್ದಾರೆ.
ಇಂಗ್ಲಿಷ್ ಭಾಷೆಯ ವೀಡಿಯೊದಲ್ಲಿ ಮಾತನಾಡಿರುವ ಅವರು, ಉಕ್ರೇನಿಯನ್ ಮಿಲಿಟರಿ ಜೈಲಿನಲ್ಲಿ ನಾನು ಬಂಧಿಸಲ್ಪಟ್ಟಿದ್ದೇನೆ. ರಷ್ಯಾದ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾತ್ರ ಯುದ್ಧದಲ್ಲಿ ಹೋರಾಡಲು ಒಪ್ಪಂದಕ್ಕೆ ಸಹಿ ಹಾಕಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
“ನಾನು ರಷ್ಯಾದ ಜೈಲಿನಲ್ಲಿ ಸಿಲುಕಿದ್ದಾಗ ಯುದ್ಧ ಒಪ್ಪಂದಕ್ಕೆ ಸಹಿ ಹಾಕಿದೆ. ಅದು ನನ್ನ ಜೀವನದ ದೊಡ್ಡ ತಪ್ಪು. ಭಾರತೀಯ ಅಧಿಕಾರಿಗಳು ತಮ್ಮ ಮನೆಗೆ ಮರಳಲು ಅನುಕೂಲವಾಗುವಂತೆ ರಷ್ಯಾದೊಂದಿಗೆ ತಮ್ಮ ಪ್ರಕರಣದ ಕುರಿತು ಮಾತನಾಡಬೇಕು” ಎಂದು ಮನವಿ ಮಾಡಿದ್ದಾರೆ.
ರಷ್ಯಾದಲ್ಲಿ ಮಾದಕವಸ್ತು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಯಿತು. ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಯುದ್ಧಕ್ಕೆ ಸೇರುವಂತೆ ದಾರಿ ತಪ್ಪಿಸಲಾಯಿತು ಎಂದು ಮಜೋತಿ ಹೇಳಿಕೊಂಡಿದ್ದಾರೆ.


