ದೇಶಾದಾದ್ಯಂತ ಅತ್ಯಾಚಾರಗಳ ವಿರುದ್ಧ ಪ್ರಬಲ ಹೋರಾಟ ನಡೆಯುತ್ತಿರುವ ಸಮಯದಲ್ಲೇ ಹರಿಯಾಣದ ಗುರುಗ್ರಾಮದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರದ ದುರ್ಘಟನೆ ವರದಿಯಾಗಿದೆ. 25 ವರ್ಷದ ಹುಡುಗಿಯೊಬ್ಬಳು ತನ್ನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿ, ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಗುರುಗ್ರಾಮದ ಡಿಎಲ್‌ಎಫ್ 2ನೇ ಹಂತ ಪ್ರದೇಶದ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ಈ ದುರ್ಘಟನೆ ಜರುಗಿದ್ದು, ತೀವ್ರ ಗಾಯಗಳಾಗಿದ್ದ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳಲ್ಲಿ ಮೂವರು ಆಹಾರ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುವವರೆಂದು ಗುರುತಿಸಿದ್ದು ಎಲ್ಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂತ್ರಸ್ತ ಕುಟುಂಬದ ಮೇಲೆ FIR ದಾಖಲಿಸಿ: ಮೇಲ್ಜಾತಿಗಳ ಬೃಹತ್ ಸಭೆಯಲ್ಲಿ ಒತ್ತಾಯ!
ಆರೋಪಿತರಲ್ಲಿ ಒಬ್ಬಾತ ಸಂತ್ರಸ್ತೆಗೆ ಪರಿಚಯವಿದ್ದು ಆತನು ಭಾನುವಾರ ಮುಂಜಾನೆ 1:30ರ ಸಮಯದಲ್ಲಿ ಸಿಕಂದರ್‌ಪುರ ಮೆಟ್ರೊ ನಿಲ್ದಾಣದಿಂದ ಆಕೆಯನ್ನು ಬೈಕಿನಲ್ಲಿ ತಾನು ಕೆಲಸ ಮಾಡುವ ಡಿಎಲ್‌ಎಫ್ 2ನೇ ಹಂತ ಪ್ರದೇಶದ ರಿಯಲ್ ಎಸ್ಟೇಟ್ ಕಚೇರಿ ಬಳಿಗೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿ ಆತನ ಮೂವರು ಸ್ನೇಹಿತರಿದ್ದುದ್ದನ್ನು ಗಮನಿಸಿದ ಆಕೆ ಅಲ್ಲಿಂದ ಹೊರಡಲು ಮುಂದಾಗಿದ್ದಾಳೆ. ಆ ವೇಳೆ ಆ ನಾಲ್ವರು ಸೇರಿ ಬಲವಂತವಾಗಿ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ತಲೆಗೆ ಕ್ರೂರವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ತೆಯ ಹೇಳಿಕೆ ಆಧರಿಸಿ ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆಯನ್ನು ಕಚೇರಿಯ ಕೊಠಡಿಯೊಂದರಲ್ಲಿ ಕೂಡಿಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ತಲೆಗೆ ತೀವ್ರ ಪೆಟ್ಟುನಿಂದ ರಕ್ತಸ್ರಾವವಾಗುತ್ತಿದ್ದ ಸಂತ್ರಸ್ತೆಯನ್ನು ಪಕ್ಕದ ಸೆಕ್ಯುರಿಟಿ ಗಾರ್ಡ್ ಒಬ್ಬ ನೋಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ನಂತರ ಪೊಲೀಸರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಪ್ರಜ್ಞೆ ಬಂದ ನಂತರ ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ಆರೋಪಿಗಳಾದ ರಂಜನ್ ಯಾದವ್(23), ಪವನ್ (24), ಪಂಕಜ್ ಕುಮಾರ್ (26) ಮತ್ತು ಗೋವಿಂದ ಯಾದವ್ (20) ರನ್ನು ಬಂಧಿಸಿದ್ದಾರೆ.
ಆರೋಪಿಗಳ ಮೇಲೆ ಐಪಿಸಿಯ ಹಲವು ಕಲಂಗಳಡಿ ಪ್ರಕರಣ ದಾಖಲಾಗಿದೆ. ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧಗಳು’ ವರದಿಯ ಪ್ರಕಾರ 2019ರಲ್ಲಿ ಹರಿಯಾಣ ರಾಜ್ಯವೊಂದರಲ್ಲೇ 159 ಸಾಮೂಹಿಕ ಅತ್ಯಾಚಾರಗಳು ವರದಿಯಾಗಿವೆ.
ಇದನ್ನೂ ಓದಿ: ಅಡೆತಡೆ ದಾಟಿ ಹತ್ರಾಸ್ ತಲುಪಿದ ಭೀಮ್ ಆರ್ಮಿ ಆಜಾದ್‌ಗೆ ಠಾಕೂರ್ ಯುವಕರಿಂದ ಬಹಿರಂಗ ಬೆದರಿಕೆ


