ಹೌದು. ಇದು ಖಾಸಗಿ ಸಂಭಾಷಣೆಯಲ್ಲಿ ಹೇಳಿದ ಮಾತಲ್ಲ. ಅಥವಾ ಸುಮ್ಮನೇ ತೇಲಿಬಿಟ್ಟಿರುವುದೂ ಅಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ಮಹಾರಾಷ್ಟ್ರದಲ್ಲಿ (ಎಐಎಂಐಎಂ ಜೊತೆ ಸೇರಿ ಕಟ್ಟಿಕೊಂಡಿರುವ) ವಂಚತ್ ಬಹುಜನ್ ಅಗಾಢಿಯ ನೇತಾರ ಪ್ರಕಾಶ್ ಅಂಬೇಡ್ಕರ್ ಅವರು ಲೆಕ್ಕಾಚಾರದೊಂದಿಗೆ ಮುಂದಿಟ್ಟಿರುವ ಮಾತು. ಪಿಟಿಐ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಏಷ್ಯನ್ ಏಜ್, ಮನಿ ಕಂಟ್ರೋಲ್ ಸೇರಿದಂತೆ ಮುಂಬೈನಿಂದ ಪ್ರಕಟವಾಗುವ ಹಲವು ಪತ್ರಿಕೆಗಳಲ್ಲಿ ಇಂದು ಈ ಸುದ್ದಿ ಇದೆ.
ಮಹಾರಾಷ್ಟ್ರದಲ್ಲಿ ಮುಗಿದಿರುವ ಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಪ್ರಕಾಶ್ ಅಂಬೇಡ್ಕರ್ ಮಾತಾಡುತ್ತಾ, ರಾಷ್ಟ್ರ ರಾಜಕಾರಣದ ಸಾಧ್ಯತೆಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಅವರ ಪ್ರಕಾರ ಕಾಂಗ್ರೆಸ್ 100 ಸೀಟುಗಳಿಗೆ ಸೀಮಿತವಾದರೆ, ಬಿಜೆಪಿಯು 150ರಿಂದ 200 ಸೀಟುಗಳಿಗೆ ಇಳಿಯಲಿದೆ. ಉಳಿದೆಲ್ಲಾ ಸೀಟುಗಳು ಮಿಕ್ಕ ಪಕ್ಷಗಳ ಪಾಲಾಗಲಿವೆ. ಅಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲು ಸಾಧ್ಯವೇ ಇಲ್ಲ. ಉಳಿದಂತೆ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ವಿರೋಧಿಸುತ್ತಿರುವ ಪಕ್ಷಗಳು ರಾಹುಲ್‍ಗಾಂಧಿಯನ್ನು ಪ್ರಧಾನಿಯಾಗಿಸಲು ಒಪ್ಪುವುದಿಲ್ಲ. ಆಗ ದೇವೇಗೌಡರಂತಹ ‘ಕಪ್ಪು ಕುದುರೆ’ಗೇ ಹೆಚ್ಚಿನ ಸಾಧ್ಯತೆ ಎಂಬುದು ಅವರ ಅಭಿಪ್ರಾಯ.
ಉಳಿದ ಪ್ರಾದೇಶಿಕ ನಾಯಕರುಗಳಿಗಿಂತ ಒಮ್ಮೆ ಪ್ರಧಾನಿಯಾದ ಅನುಭವವಿರುವ ದೇವೇಗೌಡರೇ ಈ ಹುದ್ದೆಗೆ ಸೂಕ್ತವಾಗುತ್ತಾರೆ ಮತ್ತು ಎಲ್ಲರಿಗೂ ಅವರ ನಾಯಕತ್ವ ಒಪ್ಪಿಗೆಯಾಗುತ್ತದೆ ಎಂದಿದ್ದಾರೆ.
4 ಹಂತಗಳ ಚುನಾವಣೆ ಮುಗಿದ ನಂತರ, ಬಿಜೆಪಿಗೆ ಹೆಚ್ಚಿನ ಸೀಟುಗಳು ಬರುವುದಿಲ್ಲ ಎಂಬ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿರುವಾಗ ಪ್ರಕಾಶ್ ಅಂಬೇಡ್ಕರ್ ಅವರ ಮಾತು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 1996ರಲ್ಲೂ ದೇವೇಗೌಡರು ಪ್ರಧಾನ ಮಂತ್ರಿ ಸ್ಥಾನಕ್ಕೇರಬಹುದು ಎಂದು ಅಥವಾ ಅವರ ನಂತರ ಇಂದ್ರಕುಮಾರ್ ಗುಜ್ರಾಲ್ ಪ್ರಧಾನಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಈ ಸಾರಿ ಎರಡೂ ರಾಜಕೀಯ ಪಕ್ಷಗಳು ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಮಾತ್ರವಲ್ಲಾ ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ ಸ್ಥಿತಿ ನಿರ್ಮಾಣವಾದರೆ ಅಚ್ಚರಿಯೇನಿಲ್ಲ.
ಯಾವುದಕ್ಕೂ ಮೇ 23ರ ಎಣಿಕೆಯವರೆಗೆ ಕಾದು ನೋಡಬೇಕು. ಆಗ ಯಾವ ಬಗೆಯ ಅಚ್ಚರಿಯ ಸಮೀಕರಣಗಳು ತೆರೆದುಕೊಳ್ಳುತ್ತವೆ ಎಂಬುದು ಸ್ಪಷ್ಟವಾಗುತ್ತದೆ.


