ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಚಿವ ಹಾಗೂ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಇತರರ ಪಾತ್ರ ಇರುವ ಬಗ್ಗೆ ಎಫ್‌ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸಲು ದೆಹಲಿ ನ್ಯಾಯಾಲಯ ಮಂಗಳವಾರ (ಏ.1) ನಿರ್ದೇಶಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ, ಪ್ರಕರಣದ ಅರ್ಜಿದಾರ ದೆಹಲಿಯ ಯಮುನಾ ವಿಹಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ ಅವರು ‘ಮಿಶ್ರ ಭಾವನೆ’ ವ್ಯಕ್ತಪಡಿಸಿದ್ದಾರೆ ಎಂದು scroll.in ವರದಿ ಮಾಡಿದೆ.
“ನ್ಯಾಯಾಲಯದ ಆದೇಶ ನನಗೆ ಖುಷಿ ಕೊಟ್ಟಿದೆ, ನಾನು ನಿರಾಳನಾಗಿದ್ದೇನೆ. ನ್ಯಾಯಾಲಯ ನನ್ನ ಅರ್ಜಿಯನ್ನು ತಿರಸ್ಕರಿಸಬಹುದು, ಕಪಿಲ್ ಮಿಶ್ರಾ ವಿರುದ್ದ ಎಫ್‌ಐಆರ್ ದಾಖಲಿಸಲು ಆದೇಶಿಸುವ ಸಾಧ್ಯತೆ ಇಲ್ಲ ಎಂಬ ಆತಂಕ ಕೆಲ ದಿನಗಳ ಹಿಂದೆ ನನಗೆ ಇತ್ತು” ಎಂದು ಸುದೀರ್ಘ ಅವಧಿಯ ಕಾನೂನು ಸಮರದಲ್ಲಿ ಗೆದ್ದ 57 ವರ್ಷದ ಇಲ್ಯಾಸ್ ಹೇಳಿದ್ದಾರೆ.
ನ್ಯಾಯಾಲಯದ ಆದೇಶ ಇದ್ದರೂ, ದೆಹಲಿ ಪೊಲೀಸರು ಕಪಿಲ್ ಮಿಶ್ರಾ ವಿರುದ್ದ ಎಫ್‌ಐಆರ್ ದಾಖಲಿಸುವ ನಿರೀಕ್ಷೆ ನನಗಿಲ್ಲ ಎಂದು ಇಲ್ಯಾಸ್ ನಿರಾಸೆಯ ಮಾತುಗಳನ್ನಾಡಿದ್ದಾರೆ. ಅವರ ವಕೀಲ ಮೆಹಮೂದ್ ಪ್ರಾಚಾ ಕೂಡ, ದೆಹಲಿ ಪೊಲೀಸರು ಮತ್ತು ಕಪಿಲ್ ಮಿಶ್ರಾ ಹೈಕೋರ್ಟ್‌ಗೆ ಹೋಗಿ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರುವ ಸಾಧ್ಯತೆ ಇದೆ ಎಂಬುವುದಾಗಿ ಹೇಳಿದ್ದಾರೆ ಎಂದು scroll.in ವಿವರಿಸಿದೆ.
“ಪೊಲೀಸರು ಖಂಡಿತವಾಗಿಯೂ ಎಫ್‌ಐಆರ್ ದಾಖಲಿಸಲು ತಡ ಮಾಡುತ್ತಾರೆ. ಅವರಿಗೆ ಕಪಿಲ್ ಮಿಶ್ರಾ ಮೇಲೆ ಕ್ರಮ ಕೈಗೊಳ್ಳುವ ಆಸಕ್ತಿ ಇದ್ದಿದ್ದರೆ, 2020ರಲ್ಲಿ ನಾನು ದೂರು ಕೊಟ್ಟಾಗಲೇ ಎಫ್‌ಐಆರ್ ದಾಖಲಿಸಬೇಕಿತ್ತು” ಎಂದು ಇಲ್ಯಾಸ್ ಹೇಳಿದ್ದಾರೆ.
“ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಎಫ್‌ಐಆರ್ ದಾಖಲಿಸುವ ಬಗ್ಗೆ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ. ಇದುವರೆಗೆ ಎಫ್‌ಐಆರ್ ದಾಖಲಿಸಿಯೂ ಇಲ್ಲ” ಎಂದು ಇಲ್ಯಾಸ್ ಹೇಳಿದ್ದಾಗಿ ಏಪ್ರಿಲ್ 2ರಂದು ಪ್ರಕಟಿಸಿದ ವರದಿಯಲ್ಲಿ scroll.in ತಿಳಿಸಿದೆ.
ಐದು ವರ್ಷದ ಕಾನೂನು ಸಮರ
ಫೆಬ್ರವರಿ 23, 2020ರಂದು, ದೆಹಲಿಯ ಯಮುನಾ ವಿಹಾರದ ತನ್ನ ಮನೆ ಬಳಿಯ ಕರ್ದಮ್ ಪುರಿಯಲ್ಲಿ ರಸ್ತೆ ತಡೆ ನಡೆಸಿದ್ದ ಕಪಿಲ್ ಮಿಶ್ರಾ ಮತ್ತು ಆತನ ಸಹಚರರು, ಮುಸ್ಲಿಮರು ಮತ್ತು ದಲಿತರ ತಳ್ಳುಗಾಡಿಗಳನ್ನು ಮುರಿದು ಹಾಕಿದ್ದರು. ಈ ವೇಳೆ ಪೊಲೀಸರು ಅವರ ಜೊತೆಗಿದ್ದರು. ಆದರೂ ದುಷ್ಕೃತ್ಯವನ್ನು ತಡೆಯಲು ಮುಂದಾಗಲಿಲ್ಲ ಎಂಬುವುದು ಮೊಹಮ್ಮದ್ ಇಲ್ಯಾಸ್ ಅವರ ಮೂಲ ಆರೋಪವಾಗಿದೆ.
“ಗಲಭೆ ನಿಂತ ಬಳಿಕ ಕಪಿಲ್ ಮಿಶ್ರಾ ಮತ್ತು ಇತರರ ವಿರುದ್ಧ ದೂರು ನೀಡಿ, ಎಫ್‌ಐಆರ್ ದಾಖಲಿಸಲು ನಾನು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ, ಪೊಲೀಸರು ಮೂರು ಬಾರಿ ನನ್ನನ್ನು ವಾಪಸ್ ಕಳುಹಿಸಿದರು” ಎಂದು ಇಲ್ಯಾಸ್ ಆರೋಪಿಸಿದ್ದಾರೆ.
“ಭಾರತೀಯ ಕಾನೂನಿನ ಪ್ರಕಾರ, ಸಂಜ್ಞೇಯ ಅಪರಾಧದ (cognisable offence) ಆರೋಪದ ಮೇಲೆ ಮೌಖಿಕ ಅಥವಾ ಲಿಖಿತ ದೂರು ನೀಡಿದಾಗ, ಪೊಲೀಸರು ಎಫ್‌ಐಆರ್ ದಾಖಲಿಸಿ, ಆ ವಿಷಯದ ಬಗ್ಗೆ ತನಿಖೆ ನಡೆಸಬೇಕು.”
“ಸಂಜ್ಞೇಯ ಅಪರಾಧಗಳು ಸಾರ್ವಜನಿಕ ಸುರಕ್ಷತೆ ಅಥವಾ ಸುವ್ಯವಸ್ಥೆಗೆ ಧಕ್ಕೆ ತರುವ ಗಂಭೀರ ಅಪರಾಧಗಳಾಗಿವೆ. ಅಂತಹ ಆಪಾದಿತ ಅಪರಾಧಗಳಿಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆಯದೆ ಪ್ರಕರಣ ದಾಖಲಿಸಬಹುದು ಮತ್ತು ತಪ್ಪಿತಸ್ಥರನ್ನು ಬಂಧಿಸಬಹುದು. ಮಿಶ್ರಾ ವಿರುದ್ದ ಇಲ್ಯಾಸ್ ಮಾಡಿದ್ದು ಸಂಜ್ಞೇಯ ಅಪರಾಧದ ಆರೋಪವಾಗಿದೆ”
ನವೆಂಬರ್ 2020ರಲ್ಲಿ, ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಇಲ್ಯಾಸ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಬಹಳ ಮಂದಗತಿಯಲ್ಲಿ ಸಾಗುತ್ತಿತ್ತು.
ಕಾರ್ಕಾರ್ಡೂಮಾದ ಈಶಾನ್ಯ ಜಿಲ್ಲಾ ನ್ಯಾಯಾಲಯದಲ್ಲಿ ಏಳು ವಿಭಿನ್ನ ನ್ಯಾಯಾಧೀಶರ ಮುಂದೆ ಇಲ್ಯಾಸ್ ಅವರ ಅರ್ಜಿಯನ್ನು 24 ಬಾರಿ ಪಟ್ಟಿ ಮಾಡಲಾಗಿತ್ತು. ಕೊನೆಗೆ ಕಳೆದ ವರ್ಷ ಈ ನ್ಯಾಯಾಲಯವು ವಿಶೇಷ ಸಂಸದ/ಶಾಸಕರ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುವಂತೆ ಇಲ್ಯಾಸ್ ಅವರಿಗೆ ನಿರ್ದೇಶಿಸಿತ್ತು.
ವಿಶೇಷ ನ್ಯಾಯಾಲಯದಲ್ಲೂ ಕೂಡ ಇಲ್ಯಾಸ್ ಅವರ ಅರ್ಜಿಯನ್ನು ಇಬ್ಬರು ವಿಭಿನ್ನ ನ್ಯಾಯಾಧೀಶರ ಮುಂದೆ 15 ಬಾರಿ ಪಟ್ಟಿ ಮಾಡಲಾಗಿತ್ತು. ಅಂತಿಮವಾಗಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಏಪ್ರಿಲ್ 1ರ ಮಂಗಳವಾರ ತನ್ನ ಆದೇಶ ಪ್ರಕಟಿಸಿದೆ.
“ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಗಳಿಂದ ಗಲಭೆ ಸಂಭವಿಸಿದಾಗ ಮಿಶ್ರಾ ಅವರು ಅಲ್ಲಿ ಇದ್ದಿದ್ದು ಸ್ಪಷ್ಟವಾಗಿದೆ. ಮೇಲ್ನೋಟಕ್ಕೆ ಗುರುತಿಸಬಹುದಾದ ಅಪರಾಧ ಗೋಚರಿಸುತ್ತಿದೆ. ಆದ್ದರಿಂದ ತನಿಖೆಯ ಅಗತ್ಯವಿದೆ” ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ಆದೇಶ ನೀಡುವಾಗ ಹೇಳಿದ್ದಾರೆ.
“ತೀರ್ಪು ಹೊರ ಬೀಳುವಾಗ ನಾನು ನ್ಯಾಯಾಲಯದಲ್ಲಿ ಇದ್ದೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ನನ್ನನ್ನು ಮುಂದೆ ಕರೆದು ನನ್ನ ದೂರಿನ ವಿಶ್ವಾಸಾರ್ಹತೆ ತುಂಬಾ ಹೆಚ್ಚಿದೆ ಎಂದು ಹೇಳಿದ್ದಾರೆ. ಆ ಮಾತು ನನಗೆ ಬಹಳ ದೊಡ್ಡದು” ಎಂದು scroll.in ಇಲ್ಯಾಸ್ ಹೇಳಿಕೊಂಡಿದ್ದಾರೆ.
“ಕಾನೂನು ಸಮರದ ನಡುವೆ ನನ್ನನ್ನು ಹಲವು ಬಾರಿ ಭೇಟಿ ಮಾಡಿದ್ದ ಪೊಲೀಸರು, ಏಕೆ ಎಫ್‌ಐಆರ್ ದಾಖಲಿಸಲು ಹೋರಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಆದರೆ, ನಾನು ಅಪರಾಧವನ್ನು ಕಣ್ಣಾರೆ ನೋಡಿರುವಾಗ ಸುಮ್ಮನೆ ಕೂರಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪು ನನ್ನ ವಾದವನ್ನು ಎತ್ತಿ ಹಿಡಿದಿದೆ” ಎಂದಿದ್ದಾರೆ.
ಕುಟುಂಬಕ್ಕೆ ಕಿರುಕುಳ
“ಕಪಿಲ್ ಮಿಶ್ರಾ ವಿರುದ್ದ ಕಾನೂನು ಸಮರ ನಡೆಸುವಾಗ ನಾನು ಮತ್ತು ನನ್ನ ಕುಟುಂಬ ಹಲವು ಕಿರುಕುಳ, ಬೆದರಿಕೆಗಳನ್ನು ಎದುರಿಸಿದ್ದೇವೆ. ಅವುಗಳು ಹೆಚ್ಚಾಗಿ ಪೊಲೀಸರಿಂದ ಬರುತ್ತಿತ್ತು. ಗಲಭೆ ನಡೆದಾಗ ಡೆಹ್ರಾಡೂನ್‌ನಲ್ಲಿ ವಾಸಿಸುತ್ತಿದ್ದ ನನ್ನ ಇಬ್ಬರು ಕಿರಿಯ ಸಹೋದರರ ವಿರುದ್ಧ ದೆಹಲಿ ಪೊಲೀಸರು ಗಲಭೆಯ ಸಮಯದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ನ ಕೊಲೆ ಪ್ರಯತ್ನ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಕಪಿಲ್ ಮಿಶ್ರಾ ವಿರುದ್ದದ ನನ್ನ ಅರ್ಜಿಗೆ ಪೊಲೀಸರು ಈ ರೀತಿ ಪ್ರತೀಕಾರ ತೀರಿಸಿದ್ದರು”.
“ಪೊಲೀಸರು ಎಫ್‌ಐಆರ್ ದಾಖಲಿಸಿದ್ದರಿಂದ ವಿಚಾರಣೆಗೆ ಹಾಜರಾಗುವ ಸಲುವಾಗ ನನ್ನ ಸಹೋದರರು ಡೆಹ್ರಾಡೂನ್‌ನಲ್ಲಿದ್ದ ವ್ಯವಹಾರ ಬಿಟ್ಟು ದೆಹಲಿಗೆ ಬರಬೇಕಾಯಿತು. ಪೊಲೀಸರು ಈಗಲೂ ನಮ್ಮ ವಿರುದ್ದ ಏನಾದರು ಸುಳ್ಳು ಮೊಕದ್ದಮೆ ದಾಖಲಿಸಬಹುದು ಎಂದು ನನ್ನ ಸಹೋದರರು ಚಿಂತೆಯಲ್ಲಿದ್ದಾರೆ” ಎಂದು ಇಲ್ಯಾಸ್ ಹೇಳಿಕೊಂಡಿದ್ದಾರೆ.
“ಏನೇ ಅಡೆತಡೆಗಳು ಬಂದರೂ, ನಾನು ಕಾನೂನು ಸಮರ ಮುಂದುವರೆಸುತ್ತೇನೆ. ಏಪ್ರಿಲ್ ಒಂದರ ನ್ಯಾಯಾಲಯದ ಆದೇಶ ನನ್ನ ಜಯದ ಮೊದಲ ಹೆಜ್ಜೆ. ಗಲಭೆಯಲ್ಲಿ ಪಾಲ್ಗೊಂಡವರು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕು. ಅವರಿಗೆ ಶಿಕ್ಷೆಯಾಗಬೇಕು” ಎಂದು scroll.inಗೆ ಇಲ್ಯಾಸ್ ಹೇಳಿದ್ದಾರೆ.


