ನವಾಜುದ್ದೀನ್ ಸಿದ್ದಿಕಿ ಅವರಿಂದ ಬೇರೆಯಾಗಿರುವ ಅವರ ಪತ್ನಿ ಆಲಿಯಾ, ತನ್ನ ಪತಿ ಮತ್ತು ಪತಿಯ ಕುಟುಂಬದ ಸದಸ್ಯರ ವಿರುದ್ಧ ನೀಡಲಾಗಿದ್ದ ಕಿರುಕುಳದ ದೂರಿಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆಲಿಯಾ, ಮುಂಬೈನ ಬುಧಾನಾ ಪೊಲೀಸ್ ಠಾಣೆಗೆ ಬಂದು ತಾವು ನೀಡಿರುವ ದೂರಿನಲ್ಲಿನ ಆರೋಪವನ್ನು ದೃಢೀಕರಿಸಿದ್ದಾರೆ ಎಂದು ಠಾಣಾಧಿಕಾರಿ ಕುಶಾಲ್ಪಾಲ್ ಹೇಳಿದರು.
“ಜುಲೈ 27 ರಂದು ಮುಂಬೈ ಪೊಲೀಸ್ ಠಾಣೆಯಲ್ಲಿ ಆಕೆ ದೂರು ನೀಡಿದ್ದು, ಅಲ್ಲಿಯೇ ಎಫ್‌ಐಆರ್ ದಾಖಲಿಸಿದ್ದರು. ಆದರೆ ಅಪರಾದ ನಡೆದಿದೆ ಎಂದು ಆರೋಪಿಸಲಾದ ಸ್ಥಳ ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದುದರಿಂದ, ಈ ಪ್ರಕರಣವನ್ನು ಬುಧಾನಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ” ಎಂದು ಠಾಣಾಧಿಕಾರಿ ಹೇಳಿದರು.
2012 ರಲ್ಲಿ ನವಾಜುದ್ದೀನ್ ಸಿದ್ದಿಕಿಯವರ ಸಹೋದರ ಮಿನ್ಹಾಜುದ್ದೀನ್ ಸಿದ್ದಿಕಿ ತನಗೆ ಕಿರುಕುಳ ನೀಡಿದ್ದರು ಎಂದು ಮಾಡಿದ್ದ ಆರೋಪವನ್ನು ಪುನರುಚ್ಚರಿಸಿ, ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂದು ಠಾಣಾಧಿಕಾರಿ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಕಿರುಕುಳದ ವಿಷಯವನ್ನು ಕುಟುಂಬಕ್ಕೆ ತಿಳಿಸಿದಾಗ, “ಈ ವಿಷಯವನ್ನು ಕುಟುಂಬದೊಳಗಡೆಯೇ ಬಗೆಹರಿಸಿಕೊಳ್ಳೋಣ, ಸುಮ್ಮನಿರು” ಎಂದು ಹೇಳಿದ್ದರೆಂದೂ ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಕಾರ್ಯದರ್ಶಿಗಳ ಬದಲಾವಣೆ ಪರ್ವ: ರಾಜ್ಯ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲ
ಕೊರೊನಾ ಲಾಕ್‌ಡೌನ್ ಕಾರಣದಿಂದ ನವಾಜುದ್ದೀನ್ ಸಿದ್ದಿಕಿ ಮುಂಬೈಯಿಂದ ಬುಧಾನಾದಲ್ಲಿರುವ ತನ್ನ ಸ್ವಂತ ಸ್ಥಳಕ್ಕೆ ಮರಳಿ, ಅಂದಿನಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ.
ಆದಾಗ್ಯೂ, ಅವರ ಕುಟುಂಬ ಮೂಲಗಳ ಪ್ರಕಾರ, “ನವಾಜುದ್ದೀನ್ ಸಿದ್ದಿಕಿ ತನ್ನ ನಿವಾಸದಲ್ಲಿ ಇರಲಿಲ್ಲ. ಅಲಿಯಾ ತನ್ನ ಹೇಳಿಕೆಯನ್ನು ದಾಖಲಿಸಲು ಪೊಲೀಸ್ ಠಾಣೆಗೆ ಬಂದಾಗ ಆತ ಡೆಹ್ರಾಡೂನ್‌ನಲ್ಲಿದ್ದನು” ಎಂದು ಹೇಳಿದ್ದಾರೆ.
“ಆಕೆ ನಮ್ಮಲ್ಲಿ ಯಾರನ್ನೂ ಭೇಟಿಯಾಗಲು ಮನೆಗೆ ಬಂದಿಲ್ಲ” ಎಂದು ಸಿದ್ದಿಕಿಯ ಕುಟುಂಬ ಸದಸ್ಯರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು.
2009ರಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ ಸಿದ್ದಿಕಿ ವಿವಾಹವಾಗಿದ್ದರು. ಅವರಿಗೆ ಶೋರಾ ಮತ್ತು ಯಾನಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಇತ್ತೀಚೆಗೆ ಸಿದ್ದಿಕಿಯವರೊಂದಿಗಿನ ವೈವಾಹಿಕ ಜೀವನವನ್ನು ಕೊನೆಗೊಳಿಸಿಕೊಳ್ಳುವ ಸಲುವಾಗಿ ವಿಚ್ಚೇದನ ನೋಟೀಸ್ ಅನ್ನೂ ಸಹ ನೀಡಿದ್ದರು.
ಕಳೆದ ಜೂನ್ ತಿಂಗಳಿನಲ್ಲಿ, “ಸಿದ್ದಿಕಿಯವರ ಸಂಬಂಧಿಯೊಬ್ಬರು ತಮ್ಮ ಮೇಲೆ ಕುಟುಂಬದೊಳಗಿನವರಿಂದ ಲೈಂಗಿಕ ಕಿರುಕುಳ ನಡೆದಿತ್ತೆಂದು” ದೆಹಲಿಯಲ್ಲಿ ದೂರು ನೀಡಿದ್ದಾಗ, ಆಲಿಯಾ ಟ್ವೀಟ್ ಮಾಡಿ, “ಇದು ಕೇವಲ ಆರಂಭ ಮಾತ್ರ. ಈಗಾಗಲೇ ನನಗೆ ತುಂಬಾ ಸಹಾಯ ಮಾಡಿರುವುದಕ್ಕೆ ದೇವರಿಗೆ ಧನ್ಯವಾದಗಳು. ಬಹಿರಂಗಗೊಳ್ಳಬೇಕಿರುವುದು ಇನ್ನೂ ಸಾಕಷ್ಟಿದೆ. ನನ್ನಂತೆಯೇ ಮೌನದಲ್ಲಿಯೇ ಸಂಕಟ ಅನುಭವಿಸುತ್ತಿರುವವಳು ಜಗತ್ತಿನಲ್ಲಿ ನಾನು ಮಾತ್ರವಲ್ಲ. ನೋಡೋಣ ಇನ್ನೂ ಎಷ್ಟುದಿನ ಸತ್ಯವನ್ನು ಹಣದಿಂದ ಕೊಂಡುಕೊಳ್ಳುತ್ತಾರೆ ಎಂಬುದನ್ನು” ಎಂದು ಹೇಳಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರಸ್ ವರದಿ ಮಾಡಿತ್ತು.
ಇದನ್ನೂ ಓದಿ: ಇಂದು ರಿಯಾ ಇರುವ ಜಾಗದಲ್ಲಿ ನಾಳೆ ನಾವು-ನೀವೂ ಇರಬಹುದು.. ಮರೆಯಬೇಡಿ


