ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಹಲ್ಲೆಯ ಕ್ರಮವನ್ನು “ಪ್ರತಿಭಟನಾಕಾರರನ್ನು ಹಿಂಸಾತ್ಮಕವಾಗಿ ನಿಗ್ರಹಿಸುವುದು” ಎಂದು ಕಳವಳ ವ್ಯಕ್ತಪಡಿಸಿರುವ ಹಾರ್ವರ್ಡ್ ವಿಶ್ವವಿದ್ಯಾಲಯದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.
ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಕ್ರೂರ ದಾಳಿಯನ್ನು ಖಂಡಿಸಿರುವ
ಹಾರ್ವರ್ಡ್ ವಿದ್ಯಾರ್ಥಿಗಳು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿಗಳೊಂದಿಗೆ ನಾವಿದ್ದೇವೆ ಎಂದು ಸಾರಿದ್ದಾರೆ. ಅವರು “ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿದೆ” ಎಂದು ಒತ್ತಿ ಹೇಳಿದ್ದಾರೆ.
“ಪ್ರತಿಭಟನೆಗಳು ಅನಾನುಕೂಲ ಮತ್ತು ಹಾನಿಯನ್ನುಂಟುಮಾಡುತ್ತವೆ. ಆದರೆ ಅವು ನಮ್ಮ ರಾಷ್ಟ್ರದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುತ್ತವೆ” ಎಂದು ಪತ್ರದಲ್ಲಿ ಹೇಳಲಾಗಿದೆ.
“ಪ್ರತಿಭಟನಾಕಾರರನ್ನು ಪೊಲೀಸರು ಹಿಂಸಾತ್ಮಕವಾಗಿ ನಿಗ್ರಹಿಸುವುದು, ಶಾಂತಿಯುತ ಭಿನ್ನಾಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸ್ ಪಡೆಗಳು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳಿಗೆ ನುಗ್ಗಿ ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಮತ್ತು ದೈಹಿಕ ಹಲ್ಲೆ ಮಾಡುವುದು, ಅಲ್ಲಿನ ಇಂಟರ್ನೆಟ್ ದಿಗ್ಬಂಧನಗಳು ಇವೆಲ್ಲವೂ ತೀವ್ರ ಖಂಡನೀಯ” ಎಂದು ಹಾರ್ವರ್ಡ್ ವಿದ್ಯಾರ್ಥಿಗಳು ಹೇಳಿದ್ದಾರೆ.
“ಮಹಿಳಾ ಪ್ರತಿಭಟನಾಕಾರರ ಮೇಲೆ ಪೊಲೀಸ್ ದಾಳಿ ಸೇರಿದಂತೆ ಪ್ರತಿಭಟನಾಕಾರರ ಮನೋಭಾವವನ್ನು ಮುರಿಯುವ ಉದ್ದೇಶದಿಂದ ಪೊಲೀಸ್ ಕ್ರೌರ್ಯ ನಡೆದಿದೆ. ಇದರಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ವಿದ್ಯಾರ್ಥಿಗಳ ಪರವಾಗಿ ಕಾಳಜಿ ವಹಿಸುತ್ತೇವೆ” ಎಂದು ಹಾರ್ವರ್ಡ್ ವಿದ್ಯಾರ್ಥಿಗಳು ಹೇಳಿದ್ದಾರೆ.


