| ನಾನುಗೌರಿ ಡೆಸ್ಕ್ |
ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದ ವಿಚಾರವಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವ ಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್, ಇಲ್ಲಿರುವ ಸುನಾರಿಯಾ ಜೈಲು ಅಧಿಕಾರಿಗಳಿಗೆ ಪೆರೋಲ್ ನೀಡುವಂತೆ ಮನವಿ ಮಾಡಿದ್ದಾರೆ, ಸಿರ್ಸಾದಲ್ಲಿ ತನ್ನ ಬಂಜರು ಭೂ ಪ್ರದೇಶದಲ್ಲಿ ಕೃಷಿ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಮನವಿಯನ್ನು ಜಿಲ್ಲಾಡಳಿತದ ಅಧಿಕಾರಿಗಳು ಹರಿಯಾಣ ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಮ್ ರಹೀಂ ಮೊದಲ ಬಾರಿಗೆ ಅಪರಾಧಿ, ಸನ್ನಡತೆ ಆಧಾರದಲ್ಲಿ ಅವರಿಗೆ ಪೆರೋಲ್ ನೀಡಬಹುದು ಎಂದು ಬಿಜೆಪಿಯ ನಾಯಕ ವೈಭವ್ ಅಗರ್ವಾಲ್ ಹೇಳಿದ್ದಾರೆ. ಅಲ್ಲಿನ ಬಿಜೆಪಿಯ ಮುಖ್ಯಮಂತ್ರಿ ಖಟ್ಟರ್ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಈ ಅತ್ಯಾಚಾರಿಯ ಬೆಂಬಲ ಪಡೆಯಲು ಆತನಿಗೆ ಪೆರೋಲ್ ಮೇಲೆ ಹೊರಬರಲು ಕುತಂತ್ರ ಮಾಡುತ್ತಿದ್ದಾರೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ಆರೋಪ ಮಾಡಿದ್ದಾರೆ.
ಹರ್ಯಾಣ ಸರ್ಕಾರವು ಮತಗಳಿಸುವ ನೆಪದಿಂದ ಗುರ್ಮೀತ್ ಸಿಂಗ್ ಅವರನ್ನು ಬಿಡುಗಡೆ ಮಾಡಿದರೆ, ನ್ಯಾಯಾಲಯ ಮತ್ತು ಬೀದಿ ಹೋರಾಟದ ಮೂಲಕ ಆ ಅಪರಾಧಿಗೆ ಪೆರೋಲ್ ಸಿಗದಂತೆ ಸ್ವರಾಜ್ ಇಂಡಿಯಾ ಸವಾಲು ಹಾಕುತ್ತದೆ ಎಂದು ಯೋಗೇಂದ್ರ ಯಾದವ್ ರವರು ಟ್ವೀಟ್ ಮಾಡಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುರ್ಮೀತ್ “ರಾಮ್ ರಹೀಮ್” ನನ್ನು ಪೆರೋಲ್ ಮೇಲೆ ಹರಿಯಾಣ ಸರ್ಕಾರ ಬಿಡುಗಡೆ ಮಾಡುವುದು ಸರಿಯೇ ತಪ್ಪೇ ಎಂದು ಪೋಲ್ ಅನ್ನು ಯೋಗೆಂದ್ರ ಯಾದವ್ ರವರು ಕ್ರಿಯೇಟ್ ಮಾಡಿದ್ದಾರೆ. ಇದುವರೆಗೂ 11 ಸಾವಿರಕ್ಕೂ ಹೆಚ್ಚು ಜನರ ವೋಟ್ ಮಾಡಿದ್ದು ಶೇ.92% ಜನರು ಬಿಡುಗಡೆ ಮಾಡಬಾರದೆಂದು ವೋಟ್ ಮಾಡಿದ್ದಾರೆ. ಈ ಕುರಿತು ಯೋಗೇಂದ್ರ ಯಾದವ್ ರವರು ಕೋರ್ಟ್ ನಲ್ಲಿಯೂ ಪ್ರಶ್ನಿಸಿದ್ದಾರೆ.
अब तक 11,000 से अधिक लोग अपनी राय दे चुके हैं। आप भी अपना वोट डालें, परिणाम देखें और रीट्वीट करके बाकी लोगों को शामिल करें।
Over 11k people have voted, pl participate in this poll, retweet and check the results! https://t.co/v7cDzS4l6U— Yogendra Yadav (@_YogendraYadav) June 25, 2019
ಹರಿಯಾಣದ 2012 ರ ಉತ್ತಮ ನಡವಳಿಕೆ ಖೈದಿ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಗುರ್ಮೀತ್ ರಾಮ್ ರಹೀಮ್ “ಹಾರ್ಡ್‌ಕೋರ್” ಖೈದಿಗಳ ವರ್ಗಕ್ಕೆ ಸೇರುತ್ತಾನೆ, ಏಕೆಂದರೆ ಅವನು ಎರಡು ಬಾರಿ ಭೀಕರ ಅಪರಾಧಕ್ಕೆ ಶಿಕ್ಷೆಗೊಳಗಾಗಿದ್ದಾನೆ. ಅವನಿಗೆ ಪೆರೋಲ್ ಪಡೆಯಲು ಅರ್ಹನಲ್ಲ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆಯ ಬೆದರಿಕೆ ಇದ್ದರೆ ಯಾವುದೇ ಖೈದಿಗಳನ್ನು ಬಿಡುಗಡೆ ಮಾಡಬಾರದು ಎಂದು ಅದೇ ಕಾಯಿದೆಯ ಸೆಕ್ಷನ್ 6 (1) ಹೇಳುತ್ತದೆ. ಪಂಚಕುಲದಲ್ಲಿ 2017 ರಲ್ಲಿ ತನಿಖೆ ನಡೆಯುತ್ತಿರುವಾಗಲೇ ಭಾರೀ ಹಿಂಸಾಚಾರ ನಡೆದು 40 ಮಂದಿ ಸಾವಿಗೀಡಾಗಿದ್ದರು. ಈಗಲೂ ಆತ ಹೊರಬಂದರೆ ಹಿಂಸಾಚಾರವಾಗುವುದು ಖಚಿತ ಎಂದಿದ್ದಾರೆ.
ಪ್ರಸ್ತುತ ಆತನನ್ನು ಭಾಯ್ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಹಾಗಾಗಿ ಬಿಡುಗಡೆ ಮಾಡಬಾರದೆಂದು ಸ್ವರಾಜ್ ಇಂಡಿಯಾ ಪಕ್ಷದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇಂದು, ಸ್ವರಾಜ್ ಇಂಡಿಯಾದ ನಿಯೋಗ ಸಿರ್ಸಾ ಡಿಸಿ ಅವರನ್ನು ಭೇಟಿಯಾಗಿ ಪ್ರತಿಭಟನೆ ಜ್ಞಾಪಕ ಪತ್ರವನ್ನು ನೀಡಿದ್ದು ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೇಳಿದೆ.

ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 17 ರಂದು ಪತ್ರಕರ್ತ ರಾಮ್‌ಚಂದರ್ ಛತ್ರಪತಿ ಅವರನ್ನು 2002 ರ ಅಕ್ಟೋಬರ್‌ನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ ರಹಿಮ್ ಮತ್ತು ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಡೇರಾ ಸಾಚಾ ಸೌದಾ ಪ್ರಧಾನ ಕಚೇರಿಯಲ್ಲಿ ರಾಮ್ ರಹೀಮ್ ಅವರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಿಕೆ ಪ್ರಕಟಿಸಿದ ನಂತರ ಪತ್ರಕರ್ತನನ್ನು ಸಿರ್ಸಾದಲ್ಲಿ ಕೊಲ್ಲಲಾಯಿತು. ನಂತರ ಅತ್ಯಾಚಾರ ನಡೆದಿದ್ದು ದೃಢಪಟ್ಟಿದ್ದು ತನ್ನ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಆತನಿಗೆ 2017 ರ ಆಗಸ್ಟ್‌ನಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


