“ಕೊರೊನಾ ಸಾಂಕ್ರಾಮಿಕ ರೋಗದ ಆರಂಭದಿಂದಲೂ ಏಷ್ಯನ್ ಅಮೆರಿಕನ್ನರ ವಿರುದ್ಧದ ಅಪರಾಧ ಪ್ರಕರಣಗಳು ದ್ವಿಗುಣಗೊಂಡಿದ್ದು, ಇದು ಅನ್-ಅಮೆರಿಕನ್ (ಅಮೆರಿಕದ ಧೊರಣೆಯಲ್ಲ)” ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ವಿಷಾದ ವ್ಯಕ್ತಪಡಿಸಿದ್ದಾರೆ. “ಆಗಾಗ್ಗೆ, ನಾವು ಪರಸ್ಪರ ವಿರುದ್ಧ ತಿರುಗಿಬಿದ್ದಿದ್ದೇವೆ” ಎಂದು ಹೇಳುತ್ತಾ ಏಷ್ಯನ್ ಅಮೆರಿಕನ್ನರ ವಿರುದ್ಧ ನಡೆದ ದ್ವೇಷದ ಅಪರಾಧಗಳನ್ನು ತಮ್ಮ ಮೊದಲ ಪ್ರೈಮ್‌ಟೈಮ್ ಭಾಷಣದಲ್ಲಿ ಬೈಡನ್ ಖಂಡಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಸಾಧಿಸಿದ ಪ್ರಗತಿಯನ್ನು ವಿವರಿಸುತ್ತಾ ಮಾತನಾಡಿದ ಅವರು, “ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿರುವ ಹಿನ್ನೆಲೆಯಲ್ಲಿ, ಏಷ್ಯನ್ನ ಅಮೆರಿಕನ್ನರ ಮೇಲೆ ಆಕ್ರಮಣ ಮಾಡಿ ಕಿರುಕುಳ ನೀಡಲಾಗಿತ್ತು. ಜೊತೆಗೆ ದ್ವೇಷದ ಅಪರಾಧಗಳ ಬಲಿಪಶುಗಳನ್ನಾಗಿ ಮಾಡಲಾಗಿತ್ತು” ಎಂದು ಬೈಡೆನ್ ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರ:ಕೊರೊನಾ ನಿಯಮ ಉಲ್ಲಂಘಿಸಿ ಮದುವೆಯಲ್ಲಿ700 ಮಂದಿ ಭಾಗಿ, ಪ್ರಕರಣ ದಾಖಲು
“ಈ ಕ್ಷಣದಲ್ಲಿಯೂ ಅವರಲ್ಲಿ ಅನೇಕರು ನಮ್ಮ ಸಹ ಅಮೆರಿಕನ್ನರಾಗಿದ್ದಾರೆ. ಜೊತೆಗೆ ಈ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿ, ಜೀವಗಳನ್ನು ಉಳಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಇನ್ನೂ ಭಯದಿಂದಲೇ ಬದುಕುತ್ತಿದ್ದಾರೆ. ಇದು ತಪ್ಪು. ಇದು ಅನ್-ಅಮೆರಿಕನ್. ಇದನ್ನು ತಡೆಯಬೇಕು” ಎಂದು ಹೇಳಿದರು.
ಚೀನಾ ವೈರಸ್ ಕುರಿತು ಮಾತನಾಡುತ್ತಾ ಮಾಜಿ ಅಧ್ಯಕ್ಷ ಟ್ರಂಪ್ ಸೇರಿದಂತೆ ಇತರರು, ವ್ಯಾಪಕವಾಗಿ ಏಷ್ಯನ್ ವಿರುದ್ಧದ ತಾರತಮ್ಯವನ್ನು ಉತ್ತೇಜಿಸಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.
ಜನಾಂಗೀಯ ಪ್ರೇರಣೆಯನ್ನು ಅನೇಕ ಅಪರಾಧ ಪ್ರಕರಣಗಳಲ್ಲಿ ಗುರುತಿಸುವುದು ಕಷ್ಟ. ಆದರೆ ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಅಮೆರಿಕದ 16 ಪ್ರಮುಖ ನಗರಗಳಲ್ಲಿ ಏಷ್ಯನ್ ವಿರೋಧಿ ದ್ವೇಷದ ಅಪರಾಧಗಳು ಕಳೆದ ವರ್ಷ 49 ರಿಂದ 122 ಕ್ಕೆ ಏರಿವೆ. ಅವುಗಳ ಸಂಖ್ಯೆ ದ್ವಿಗುಣಗೊಂಡಿವೆ ಎಂದು ಕ್ಯಾಲಿಫೋರ್ನಿಯಾದ ರಾಜ್ಯ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ


