ಹಾವೇರಿ : ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಬಳಿ ತುಂಗಾಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದ ನರ್ಸ್ (ಶುಶ್ರೂಷಕಿ) ಸ್ವಾತಿ ಬ್ಯಾಡಗಿ (22) ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ನಯಾಝ್ ಇಮಾಮ್‌ಸಾಬ್ ಬೆಣ್ಣಿಗೇರಿ (28) ಎಂಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೃತ್ಯಕ್ಕೆ ಸಹಕರಿಸಿದ್ದಾರೆ ಎನ್ನಲಾದ ನಯಾಝ್‌ನ ಸ್ನೇಹಿತರಾದ ಮಾಸೂರಿನ ದುರ್ಗಾಚಾರಿ ಬಡಿಗೇರ ಮತ್ತು ವಿನಾಯಕ ಪೂಜಾರ ತಲೆಮರೆಸಿಕೊಂಡಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಇನ್ನೂ ಕೆಲ ವರದಿಗಳು ಇವರನ್ನೂ ಶುಕ್ರವಾರ (ಮಾ.14) ಬಂಧಿಸಲಾಗಿದೆ ಎಂದಿವೆ. ಪೊಲೀಸರು ಬಂಧನದ ಬಗ್ಗೆ ಇನ್ನೂ ಖಚಿತಪಡಿಸಿಲ್ಲ.
ಪ್ರಕರಣದ ಹಿನ್ನೆಲೆ : ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ, ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದರು. ಮಾರ್ಚ್ 6ರಂದು ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಸ್ವಾತಿ ಅವರನ್ನು ಕೊಲೆ ಮಾಡಿ ನದಿಗೆಸೆದಿರುವ ವಿಚಾರ ಬಯಲಾಗಿತ್ತು.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ, ಹಿರೇಕೆರೂರು ತಾಲೂಕು ಹಳೇ ವೀರಾಪುರದ ನಯಾಝ್, ತನ್ನ ಇಬ್ಬರು ಸ್ನೇಹಿತರಾದ ದುರ್ಗಾಚಾರಿ ಮತ್ತು ವಿನಾಯಕನ ಜೊತೆಗೂಡಿ ಸ್ವಾತಿ ಅವರನ್ನು ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಲೆ
ಹೋರಿ ಹಬ್ಬದ ಸಂದರ್ಭದಲ್ಲಿ ಸ್ವಾತಿ ಅವರಿಗೆ ನಯಾಝ್, ದುರ್ಗಾಚಾರಿ ಮತ್ತು ವಿನಾಯಕ ಅವರ ಪರಿಚಯ ಆಗಿತ್ತು. ಸ್ವಾತಿ ಮತ್ತು ನಯಾಝ್ ನಡುವಿನ ಸ್ನೇಹ ಸಲುಗೆಗೆ ತಿರುಗಿತ್ತು. ಸ್ವಾತಿ ತನ್ನನ್ನು ಮದುವೆಯಾಗುವಂತೆ ನಯಾಝ್‌ಗೆ ಒತ್ತಾಯಿಸುತ್ತಿದ್ದರು. ಆದರೆ, ನಯಾಝ್ ಒಪ್ಪಿರಲಿಲ್ಲ ಎನ್ನಲಾಗಿದೆ.
ನಯಾಝ್‌ಗೆ ಬೇರೊಂದು ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು. ಈ ವಿಷಯ ತಿಳಿದು ಸ್ವಾತಿ ನಯಾಝ್ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ನಯಾಝ್ ಸ್ವಾತಿಯ ಕೊಲೆಗೆ ಸಂಚು ರೂಪಿಸಿದ್ದ ಎಂದು ವರದಿಯಾಗಿದೆ.
ಪಾಳುಬಿದ್ದ ಶಾಲೆಯಲ್ಲಿ ಕೊಲೆ
ಮಾರ್ಚ್ 3ರಂದು ಮಾತುಕತೆ ನೆಪದಲ್ಲಿ ಸ್ವಾತಿ ಅವರನ್ನು ರಟ್ಟೀಹಳ್ಳಿಗೆ ಕರೆಸಿಕೊಂಡಿದ್ದ ನಯಾಝ್, ಬಾಡಿಗೆ ಕಾರಿನಲ್ಲಿ ರಾಣೆಬೆನ್ನೂರಿನಲ್ಲಿರುವ ಸುವರ್ಣ ಉದ್ಯಾನವನಕ್ಕೆ ಕರೆದೊಯ್ದಿದ್ದ. ಅದೇ ಉದ್ಯಾನವನಕ್ಕೆ ದುರ್ಗಾಚಾರಿ ಹಾಗೂ ವಿನಾಯಕ ಬಂದಿದ್ದರು. ನಂತರ ನಾಲ್ವರು ರಟ್ಟೀಹಳ್ಳಿಯ ಕಬ್ಬಿಣಕಂತಿ ಮಠ ಬಳಿಯ ಪಾಲು ಬಿದ್ದ ತರಳುಬಾಳು ಶಾಲೆಗೆ ಹೋಗಿದ್ದರು. ಅಲ್ಲಿ ನಯಾಝ್ ಸ್ವಾತಿ ನಡುವೆ ಜಗಳ ತಾರಕಕ್ಕೇರಿದೆ. ಈ ವೇಳೆ ಮೂವರು ಆರೋಪಿಗಳು ಸೇರಿ ಸ್ವಾತಿ ಮೇಲೆ ಹಲ್ಲೆ ಮಾಡಿ, ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೂಸಗಟ್ಟಿ ನಂದಿಗುಡಿ ಗ್ರಾಮದ ಬಳಿ ತುಂಗಾಭದ್ರಾ ನದಿಗೆ ಎಸೆದಿದ್ದರು. ಆ ಶವ ತೇಲಿಕೊಂಡು ಹೋಗಿ ಮಾರ್ಚ್ 6ರಂದು ಪತ್ತೇಪುರ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಕೋಮು ಬಣ್ಣ
ಸ್ವಾತಿ ಕೊಲೆ ಪ್ರಕರಣದಲ್ಲಿ ನಯಾಝ್ ಬಂಧನವಾಗುತ್ತಿದ್ದಂತೆ ಪ್ರಕರಣಕ್ಕೆ ಕೆಲವರು ಕೋಮು ಬಣ್ಣ ಬಳಿಯಲು ಯತ್ನಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಂತೆ ಇದೂ ‘ಲವ್ ಜಿಹಾದ್’ ಕೊಲೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ #justiceforswati ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಆದರೆ, ಈ ಪ್ರಕರಣದ ಇಬ್ಬರು ಆರೋಪಿಗಳು ಹಿಂದೂಗಳೇ ಆಗಿದ್ದಾರೆ.
‘ಲವ್ ಜಿಹಾದ್’ ಕಥೆ ಕಟ್ಟಿದ ಬೊಮ್ಮಾಯಿ
ಸ್ವಾತಿ ಕೊಲೆ ಪ್ರಕರಣದಲ್ಲಿ ನಯಾಝ್ ಬಂಧನವಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ, ಹಾಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪ್ರಕರಣಕ್ಕೆ ಸಂಘಪರಿವಾರ ಕಲ್ಪಿತ ‘ಲವ್ ಜಿಹಾದ್’ ಕಥೆ ಕಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ. ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಅವಳ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎನ್ನುವ ಯುವತಿಯ ಕೊಲೆಯಾಗಿದ್ದು, ಇದೂ ಕೂಡ ಲವ್ ಜಿಹಾದ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.”
“ಈ ಘಟನೆ ನಡೆದು ಒಂದು ವಾರ ಕಳೆದರೂ ಈ ಪ್ರಕರಣದಲ್ಲಿ ಬಂಧಿತನಾಗಿರುವ ನಯಾಜ್ ಎನ್ನುವ ಪ್ರಮುಖ ಆರೋಪಿಯ ರಕ್ಷಣೆಗೆ ದೊಡ್ಡ ಮಟ್ಟದ ಕಸರತ್ತು ನಡೆದಂತೆ ಕಾಣಿಸುತ್ತದೆ. ಸ್ವಾತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯ ಧರ್ಮದವಳೆಂದು ತಿರಸ್ಕರಿಸಿ ತನ್ನ ಧರ್ಮದ ಬೇರೆ ಯುವತಿಯ ಜೊತೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದನ್ನು ಪ್ರಶ್ನಿಸಿರುವುದಕ್ಕೆ ಸ್ವಾತಿಯ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಇದೆ.”
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ.
ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಅವಳ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ…
— Basavaraj S Bommai (@BSBommai) March 14, 2025
“ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ರಾಜ್ಯದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕೃತ್ಯ ನಡೆಸುವವರಿಗೆ ಪೊಲೀಸರ ಭಯ ಇಲ್ಲದಿರುವುದು ಇಂತಹ ಪ್ರಕರಣ ಹೆಚ್ಚಾಗಲು ಕಾರಣ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದರಿಂದ ಮಾತ್ರ ಇಂತಹ ಪ್ರಕರಣಗಳಿಗೆ ತಡೆ ಒಡ್ಡಬಹುದಾಗಿದೆ. ಇದರ ಬಗ್ಗೆ ಪೊಲೀಸರು ನಿಷ್ಠುರವಾಗಿ ಅಪರಾಧಿಗಳನ್ನು ಹಿಡಿದು ಅದರ ಹಿಂದೆ ಇರುವ ಶಕ್ತಿಗಳನ್ನು ಕಡಿವಾಣ ಹಾಕುವುದು ಅತ್ಯಂತ ಅವಶ್ಯ. ಆದರೆ, ಇಂತಹ ಪ್ರಕರಣಗಳು ಕೆಲವೇ ದಿನಗಳಲ್ಲಿ ಅಧಿಕಾರಿಗಳು ಗಾಂಭಿರ್ಯತೆಯಿಂದ ತೆಗೆದುಕೊಳ್ಳದೇ ಮರೆತು ಹೋಗುವುದು ಅತ್ಯಂತ ಖಂಡನೀಯ ಹೆಣ್ಣು ಮಕ್ಕಳ ಕುಟುಂಬ, ಬಂಧುಗಳು ಮತ್ತು ಸಮಾಜ ಅತ್ಯಂತ ನೋವು ಪಡುವ ಈ ಘಟನೆಯಲ್ಲಿ ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮತ್ತು ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಬೊಮ್ಮಾಯಿ ಪೋಸ್ಟ್‌ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಪೋಸ್ಟ್ ಕೆಳಗೆ ಕಾಮೆಂಟ್ ಮಾಡಿ ಛೀಮಾರಿ ಹಾಕಿದ್ದಾರೆ.
ಬಾಗಲಕೋಟೆ | ಸಮವಸ್ತ್ರದಲ್ಲೇ ಸ್ವಾಮಿ ಕಾಲಿಗೆ ಬಿದ್ದ 6 ಪೊಲೀಸರ ವರ್ಗಾವಣೆ



Yake saujanya case nallu dhvani yattabaradu ottinalli BJP yavarige komu banna beku