ಆಸ್ಪತ್ರೆಯ ತುರ್ತು ವಾರ್ಡ್‌ಗೆ ಶಾಸಕ ಬಂದಾಗ ಎದ್ದು ನಿಂತಿಲ್ಲ ಎಂಬ ಕಾರಣಕ್ಕೆ ಕೋವಿಡ್ ಕರ್ತವ್ಯದಲ್ಲಿದ್ದ ವೈದ್ಯನ ವಿರುದ್ದ ಕ್ರಮ ಕೈಗೊಂಡಿರುವ ಹರಿಯಾಣ ಸರ್ಕಾರವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ (ನವೆಂಬರ್ 21) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ವರ್ತನೆ ಸಂವೇದನಾರಹಿತ ಮತ್ತು ಅತ್ಯಂತ ಕಳವಳಕಾರಿ ಎಂದು ಟೀಕಿಸಿದೆ.
ವೈದ್ಯಕೀಯ ವೃತ್ತಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ವೈದ್ಯರನ್ನು ದುರ್ಬಳಕೆ ಮಾಡುವಂತಹ ಅನಗತ್ಯ ಮತ್ತು ಅಹಿತಕರ ಕೃತ್ಯಗಳು ನಡೆಯಬಾರದು, ಅವುಗಳನ್ನು ತಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ರೋಹಿತ್ ಕಪೂರ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.
ಅರ್ಜಿದಾರ ವೈದ್ಯನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗೆ ಅಗತ್ಯವಿರುವ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರಕ್ಕೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಅರ್ಜಿದಾರರಾದ ಡಾ. ಮನೋಜ್ ಅವರು ಹರಿಯಾಣ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಅಪಘಾತ ವೈದ್ಯಕೀಯ ಅಧಿಕಾರಿಯಾಗಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಅವರು ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದರು. ಆಸ್ಪತ್ರೆಗೆ ಶಾಸಕರೊಬ್ಬರು ಭೇಟಿ ನೀಡಿದಾಗ ಡಾ. ಮನೋಜ್ ಅವರು ಎದ್ದು ನಿಂತಿಲ್ಲ ಎಂಬ ಕಾರಣಕ್ಕೆ ಶಾಸಕ ಸಿಟ್ಟಾಗಿದ್ದರು.
ಇದಾದ ಬಳಿಕ, ಹರಿಯಾಣ ನಾಗರಿಕ ಸೇವೆಗಳ (ಶಿಕ್ಷೆ ಮತ್ತು ಮೇಲ್ಮನವಿ) ನಿಯಮಗಳು, 2016ರ ನಿಯಮ 8ರ ಅಡಿಯಲ್ಲಿ ಡಾ. ಮನೋಜ್ ಅವರಿಗೆ ಸರ್ಕಾರ ಕಾರಣ ಕೇಳಿ (ಶೋ-ಕಾಸ್) ನೋಟಿಸ್ ಜಾರಿ ಮಾಡಿತ್ತು.
ಅದಕ್ಕೆ ಮನೋಜ್ ಅವರು ಜೂನ್ 2024ರಲ್ಲಿ ಉತ್ತರಿಸಿದ್ದರು. “ನನಗೆ ಬಂದಿದ್ದು ಶಾಸಕ ಎಂದು ಗೊತ್ತಿರಲಿಲ್ಲ. ಹಾಗಾಗಿ ಎದ್ದು ನಿಂತಿರಲಿಲ್ಲ, ಉದ್ದೇಶಪೂರ್ವಕವಾಗಿ ಅಗೌರವ ತೋರಿಲ್ಲ. ಹಾಗಾಗಿ, ಅದು ಅಗೌರವಕ್ಕೆ ಸಮನಾಗುವುದಿಲ್ಲ” ಎಂದು ಮನೋಜ್ ಹೇಳಿದ್ದರು.
ಆ ಬಳಿಕ ಸರ್ಕಾರ ಯಾವುದೇ ಆದೇಶ ಹೊರಡಿಸಿರಲಿಲ್ಲ. ಆದರೆ, ಶೋಕಾಸ್ ನೋಟಿಸ್ ಪ್ರಕ್ರಿಯೆ ಬಾಕಿ ಉಳಿಸಿಕೊಂಡಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಮನೋಜ್ ಅವರ ಉನ್ನತ ಶಿಕ್ಷಣಕ್ಕೆ ಎನ್‌ಒಸಿ ನೀಡಿರಲಿಲ್ಲ ಎನ್ನಲಾಗಿದೆ.
ಕೋವಿಡ್-19 ಸಮಯದಲ್ಲಿ ತುರ್ತು ಕರ್ತವ್ಯದಲ್ಲಿದ್ದ ಸರ್ಕಾರಿ ವೈದ್ಯರೊಬ್ಬರು, ಶಾಸಕರು ಬಂದಾಗ ಎದ್ದು ನಿಲ್ಲಲಿಲ್ಲ ಎಂಬ ಏಕೈಕ ಕಾರಣಕ್ಕೆ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ನೋಡಿ ನಮಗೆ ತೀವ್ರ ನೋವು ಮತ್ತು ಆಘಾತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಶಾಸಕರೊಬ್ಬರು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಪ್ರವೇಶಿಸಿದಾಗ ವೈದ್ಯರು ಎದ್ದು ನಿಲ್ಲುತ್ತಾರೆಂದು ನಿರೀಕ್ಷಿಸುವುದು ಮತ್ತು ಅವರು ಎದ್ದು ನಿಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಪ್ರಸ್ತಾಪಿಸುವುದು ತುಂಬಾ ಬೇಸರದ ಸಂಗತಿ ಎಂದಿದೆ.
ಅರ್ಜಿದಾರ ವೈದ್ಯರು ನೀಡಿದ ವಿವರಣೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅವರಿಗೆ ಬಂದಿರುವುದು ಶಾಸಕ ಎಂಬುವುದು ಗೊತ್ತಿರಲಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಅಗೌರವ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ನವೆಂಬರ್ 21ರ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ನಮ್ಮ ಅಭಿಪ್ರಾಯದಲ್ಲಿ, ಇಂತಹ ಆರೋಪದಡಿಯಲ್ಲಿ (ಎದ್ದು ನಿಂತಿಲ್ಲ) ಅರ್ಜಿದಾರನ ವಿರುದ್ಧ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದಿಂದ ಸಂವೇದನಾರಹಿತ ಮತ್ತು ಅಮಾನವೀಯ ಕ್ರಮವಾಗಿದೆ. ಅದೇ ರೀತಿ, ಶೋಕಾಸ್ ನೋಟಿಸ್ ಬಾಕಿ ಇದೆ ಎಂಬ ಏಕೈಕ ಕಾರಣಕ್ಕೆ ಎನ್‌ಒಸಿ ನೀಡದೆ ಅವರು ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುವ ಹಕ್ಕನ್ನು ತಡೆಯುವುದು ಕೂಡ ಅತ್ಯಂತ ಅನ್ಯಾಯದ ಕ್ರಮವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ವೈದ್ಯಕೀಯ ಶಿಕ್ಷಣ ಪಡೆಯುವುದು ಕಠಿಣ ಸವಾಲು ಎಂದು ಒತ್ತಿ ಹೇಳಿದ ನ್ಯಾಯಾಲಯ, ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂದಿದೆ.
ವೈದ್ಯಕೀಯ ಕೋರ್ಸ್‌ಗಳಿಗೆ ದೀರ್ಘಾವಧಿಯವರೆಗೆ ಆಳವಾದ ಸಮರ್ಪಣೆ ಮತ್ತು ಬದ್ಧತೆಯ ಅಗತ್ಯವಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಎಂಬಿಬಿಎಸ್ ಮುಗಿಸಿ ಸರ್ಕಾರಿ ಸೇವೆಗೆ ಸೇರಿದ ನಂತರ, ವೈದ್ಯರು ಜನಸಾಮಾನ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಸಾರ್ವಜನಿಕ ಪ್ರತಿನಿಧಿಗಳು ಮತ್ತು ಜವಾಬ್ದಾರಿಯುತ ಇತರರು ಅಂತಹ ಸಮರ್ಪಿತ ವೃತ್ತಿಪರರಿಗೆ ಗೌರವ ಮತ್ತು ಮೂಲಭೂತ ಸೌಜನ್ಯಗಳನ್ನು ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.
ರೋಗಿಗಳ ಸಂಬಂಧಿಕರು ಅಥವಾ ಸಾರ್ವಜನಿಕ ಪ್ರತಿನಿಧಿಗಳು ಸರಿಯಾದ ಕಾರಣವಿಲ್ಲದೆ ಸಮರ್ಪಿತ ವೈದ್ಯಕೀಯ ವೃತ್ತಿಪರರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುವುದನ್ನು ನಾವು ಬೇಸರದಿಂದ ನೋಡಿದ್ದೇವೆ. ಅಂತಹ ಅನಪೇಕ್ಷಿತ ಘಟನೆಗಳನ್ನು ಪರಿಶೀಲಿಸುವ ಮತ್ತು ಪ್ರಾಮಾಣಿಕ ವೈದ್ಯಕೀಯ ವೃತ್ತಿಪರರಿಗೆ ಸೂಕ್ತ ಮನ್ನಣೆ ನೀಡುವ ಸಮಯ ಬಂದಿದೆ ಎಂದು ನ್ಯಾಯಾಲಯ ಹೇಳಿದೆ.
ಶಾಸಕ ಬಂದಾಗ ವೈದ್ಯ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳಲು ಅವಕಾಶ ನೀಡುವುದು ಸಂಪೂರ್ಣ ಅನ್ಯಾಯ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗುತ್ತದೆ ಎಂದು ಪೀಠ ಹೇಳಿದೆ. ಶೋಕಾಸ್ ನೋಟಿಸ್‌ನಂತಹ ಪ್ರಕ್ರಿಯೆಗಳನ್ನು ವರ್ಷಗಳ ಕಾಲ ಬಾಕಿ ಇಡುವುದು ಮತ್ತು ಅದನ್ನೇ ನೆಪವಾಗಿಸಿ ಎನ್‌ಒಸಿ ನಿರಾಕರಿಸುವುದು ಸಮರ್ಥನೀಯವಲ್ಲ ಎಂದಿದೆ.
ಆದ್ದರಿಂದ, ಅರ್ಜಿದಾರರಿಗೆ (ವೈದ್ಯನಿಗೆ) ತಕ್ಷಣವೇ ಎನ್‌ಒಸಿ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ, ಜೊತೆಗೆ ರಾಜ್ಯ ಸರ್ಕಾರ ರೂ. 50,000 ದಂಡವನ್ನು ಚಂಡೀಗಢದಲ್ಲಿರುವ ಪಿಜಿಐಎಂಇಎರ್ ಸಂಸ್ಥೆಯ ಬಡ ರೋಗಿಗಳ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿದೆ.


