ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ರಾಜ್ಯ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶಿಸಿದೆ ಎಂದು ವರದಿಯಾಗಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿದೆ.
ಅಗತ್ಯ ವಿವರಗಳನ್ನು ಒದಗಿಸುವುದಾಗಿ ಅವರು ಪೀಠಕ್ಕೆ ತಿಳಿಸಿದ ನಂತರ ನ್ಯಾಯಾಲಯವು ವಿಚಾರಣೆಯನ್ನು ಮಧ್ಯಾಹ್ನ 2:30 ಕ್ಕೆ ನಿಗದಿಪಡಿಸಿದೆ.
ಈ ನಡುವೆ, ವಿಧಾನಸೌಧದ ಮುಂದೆ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಹೈಕೋರ್ಟ್ ಕಟ್ಟಡದಲ್ಲಿ ಭದ್ರತಾ ಲೋಪ ಸಂಭವಿಸಿದೆ ಎಂದು ನ್ಯಾಯಾಲಯದ ರಿಜಿಸ್ಟ್ರಿಗೆ ಇಮೇಲ್ ಕಳುಹಿಸಿದ್ದೆ ಎಂದು ವಕೀಲ ಜಿ.ಆರ್. ಮೋಹನ್ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ವಿಧಾನಸೌಧದ ಮೆಟ್ಟಿಲುಗಳ ಮೇಲಿದ್ದ ಆರ್‌ಸಿಬಿ ಆಟಗಾರರನ್ನು ನೋಡುವ ಸಲುವಾಗಿ ಅನೇಕ ಜನರಿಗೆ ಹೈಕೋರ್ಟ್ ಕಟ್ಟಡದ ಟೆರೇಸ್‌ಗೆ ಏರುವ ಅವಕಾಶ ನೀಡಲಾಗಿದೆ. ಹೈಕೋರ್ಟ್ ಕಟ್ಟಡದಲ್ಲಿ ಸರಿಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಆದೇಶಗಳು ಜಾರಿಯಲ್ಲಿವೆ. ಅದನ್ನು ಉಲ್ಲಂಘಿಸಲಾಗಿದೆ ಎಂದು ಜಿ.ಆರ್. ಮೋಹನ್ ನ್ಯಾಯಾಲಯದ ಗಮನಸೆಳೆದಿದ್ದಾರೆ.
ಕಾಲ್ತುಳಿತದ ಸಾವಿನ ವಿಷಯವನ್ನು ಕೈಗೆತ್ತಿಕೊಳ್ಳುವಾಗ ಮಧ್ಯಾಹ್ನ 2:30 ಕ್ಕೆ ಹಾಜರಾಗಲು ಪೀಠವು ಅವರಿಗೆ ಸೂಚಿಸಿದೆ.
ನಿರೀಕ್ಷೆಗಿಂತ ಹೆಚ್ಚು ಜನರು ಬಂದಿರುವುದೇ ಕಾಲ್ತುಳಿತ ದುರಂತಕ್ಕೆ ಕಾರಣ: ಸಿಎಂ ಸಿದ್ದರಾಮಯ್ಯ


