ನ್ಯಾಯಮೂರ್ತಿ ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಶೇಷ ತನಿಖಾ ತಂಡಕ್ಕೆ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ನ.27) ಸೂಚಿಸಿದೆ.
ಆರೋಪಿಗಳು ಅಥವಾ ಇತರ ಯಾವುದೇ ವ್ಯಕ್ತಿಗಳಿಂದ ಕಿರುಕುಳದ ಪ್ರಕರಣಗಳಲ್ಲಿ ಸಂತ್ರಸ್ತರು ಮತ್ತು ಸಾಕ್ಷಿಗಳು ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಸಿ.ಎಸ್.ಸುಧಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ನೋಡಲ್ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳ ಬಗ್ಗೆ ಹೆಚ್ಚಿನ ಪ್ರಚಾರ ನಡೆಸುವಂತೆ ಎಸ್‌ಐಟಿಗೆ ಸೂಚಿಸಿದೆ.
ನೋಡಲ್ ಅಧಿಕಾರಿಯನ್ನು ನೇಮಿಸಿ ಅವರ ಸಂಪರ್ಕ ಸಾಧ್ಯವಾಗಿಸಿಬಿಟ್ಟರೆ, ಬೆದರಿಕೆಗೆ ಒಳಗಾಗಿರುವ ಮತ್ತು ಇತರ ಸಂತ್ರಸ್ತರು, ಸಾಕ್ಷಿಗಳು ಮುಂದೆ ಬಂದು ದೂರು ದಾಖಲಿಸುತ್ತಾರೆ. ಪ್ರಸ್ತುತ ತನಿಖೆ ನಡೆಯುತ್ತಿರುವ ಪ್ರಕರಣಗಳ ಸಂತ್ರಸ್ತರು ಮತ್ತು ಸಾಕ್ಷಿಗಳು ಬೆದರಿಕೆ ಎದುರಿಸಿದರೆ ತಕ್ಷಣ ವರದಿ ಮಾಡುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೇಮಾ ಸಮಿತಿಯ ವರದಿಗೆ ಸಂಬಂಧಿಸಿದ ಅನೇಕ ಸಂತ್ರಸ್ತರು ಮತ್ತು ಸಾಕ್ಷಿಗಳು ಬೆದರಿಕೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಸಾಕ್ಷಿಗಳು ಮತ್ತು ಸಂತ್ರಸ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನದ ಅವಶ್ಯಕತೆಯಿದೆ ಎಂದು ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಾಲಯ ನೋಡಲ್ ಅಧಿಕಾರಿಯ ನೇಮಕಕ್ಕೆ ಸೂಚಿಸಿದೆ.
ನೋಡಲ್ ಅಧಿಕಾರಿಯ ನೇಮಕದ ಬಗ್ಗೆ ಎಸ್‌ಐಟಿ ವರದಿ ನೀಡಬೇಕು. ನೇಮಕಗೊಂಡ ನೋಡಲ್ ಅಧಿಕಾರಿ ಸಂತ್ರಸ್ತರು ಮತ್ತು ಸಾಕ್ಷಿಗಳ ಸಂಪರ್ಕದ ಮುಖ್ಯ ಬಿಂದುವಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ : ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ


