ಎಬ್ರೊ* ನದಿ ಕಣಿವೆಯ ಆಚೆ ಬದಿಯಿದ್ದ ಬೆಟ್ಟಗಳ ಸಾಲು ಬೆಳ್ಳಗೆ ಉದ್ದಕ್ಕೆ ಹಬ್ಬಿದ್ದವು. ಕಣಿವೆಯ ಈಕಡೆಗೆ ಯಾವ ಮರವಾಗಲೀ ನೆರಳಾಗಲೀ ಇರಲಿಲ್ಲ ಮತ್ತು ಬಿರು ಬಿಸಿಲಿನಲ್ಲಿ ಎರಡು ರೈಲ್ವೆಹಳಿಗಳ ನಡುವೆ ಆ ರೈಲ್ವೆ ನಿಲ್ದಾಣ ಬಸವಳಿದ ಹಾಗೆ ಹರಡಿ ಬಿದ್ದುಕೊಂಡಿತ್ತು. ನಿಲ್ದಾಣಕ್ಕೆ ಕೂಡಿಕೊಂಡಂತಿದ್ದ ಬಾರ್ ಒಂದರ ಬಾಗಿಲಿಗೆ ನೊಣಗಳು ಒಳ ಬಾರದ ಹಾಗೆ ಬಿದಿರಿನ ಮಣಿಗಳಿಂದ ಮಾಡಿದ್ದ ಪರದೆ ಇಳಿ ಬಿಟ್ಟಿದ್ದರು. ಪರದೆಯಿಂದ ವರಾಂಡಾದಲ್ಲಿ ಹರಡಿಕೊಂಡಿದ್ದ ಬೆಚ್ಚನೆಯ ನೆರಳಿನಲ್ಲಿ ಒಬ್ಬ ಅಮೆರಿಕನ್ ಮತ್ತು ಅವನೊಡನೆ ಹುಡುಗಿಯೊಬ್ಬಳು ಕುಳಿತಿದ್ದರು. ಆ ದಿನ ಬಿಸಿಲಿನ ಝಳ ಹೆಚ್ಚೇ ಇತ್ತು, ಬಾರ್ಸಿಲೋನಾದಿಂದ ಇನ್ನು ನಲ್ವತ್ತು ನಿಮಿಷಗಳ ಸಮಯದಲ್ಲಿ ಬರಲಿದ್ದ ಎಕ್ಸ್ಪ್ರೆಸ್ ರೈಲು ಆ ಸ್ಟೇಷನ್ನಲ್ಲಿ ಎರಡು ನಿಮಿಷಗಳ ಕಾಲ ನಿಂತು ಮ್ಯಾಡ್ರಿಡ್ ಕಡೆಗೆ ಹೊರಡಲಿತ್ತು.
“ಏನು ಕುಡಿಯೋಣ?” ಎಂದು ಆ ಹುಡುಗಿ ಎದುರಿಗಿದ್ದವನನ್ನು ಕೇಳುತ್ತ ತನ್ನ ಟೋಪಿಯನ್ನು ಮೇಜಿನ ಮೇಲಿರಿಸಿದಳು.
“ಸಿಕ್ಕಾಪಟ್ಟೆ ಬಿಸಿಲಿದೆ” ಎಂದ ಆ ಅಮೆರಿಕನ್.
“ಹಾಗಾದ್ರೆ ಬಿಯರ್ ಕುಡಿಯೋಣ ”
“Dos cervezas,” ಎಂದ ಆ ಬಿದಿರಿನ ಮಣಿಗಳ ಪರದೆಯ ಆಚೆ ಬದಿ ನೋಡುತ್ತಾ.
“ದೊಡ್ಡ ಬಾಟಲಿ?” ಎಂದು ಆ ಪರದೆಯ ಆಚೆ ಬದಿಯಿದ್ದ ಹೆಂಗಸು ಕೇಳಿದಳು.
“ಎರಡು ದೊಡ್ಡ ಬಾಟಲ್ ಕೊಡು”.
ಆ ಹೆಂಗಸು ಎರಡು ದೊಡ್ಡ ಗ್ಲಾಸ್ಸುಗಳಲ್ಲಿ ಬಿಯರ್ ಮತ್ತು ವೃತ್ತಾಕಾರದ ಎರಡು ಸಣ್ಣ ರಟ್ಟುಗಳನ್ನು ತಂದಳು. ಆ ರಟ್ಟಿನ ಮೇಲೆ ಬಿಯರ್ ಗ್ಲಾಸ್ ಇಟ್ಟು ಅವರಿಬ್ಬರನ್ನು ಒಮ್ಮೆ ನೋಡಿದಳು. ಬಿರು ಬಿಸಿಲಿಗೆ ಬೆಳ್ಳಗೆ ಹೊಳೆಯುತ್ತಿದ್ದ ಬೆಟ್ಟಗಳ ಸಾಲನ್ನು , ಕಂದು ಬಣ್ಣದ ಬರಡು ಬಯಲನ್ನು ಆ ಹುಡುಗಿ ಸುಮ್ಮನೆ ನೋಡುತ್ತಾ ಕುಳಿತಿದ್ದಳು.
“ಆ ಬೆಟ್ಟಗಳು ನೋಡೋಕೆ ಒಳ್ಳೆ ಬಿಳಿ ಆನೆಗಳ ಹಾಗೆ ಕಾಣಿಸ್ತಾ ಇವೆ” ಎಂದಳು.
“ನಾನು ಯಾವತ್ತೂ ಬಿಳಿ ಆನೆ ನೋಡಿಲ್ಲ” ಎಂದು ಒಂದು ಗುಟುಕು ಬಿಯರ್ ಕುಡಿದ.
“ಅದೂ ಸರಿ, ನೀನು ನೋಡಿರಲ್ಲ ಬಿಡು.”
“ನಾನು ನೋಡಿರಬಹುದು, ನಾನು ನೋಡಿಲ್ಲ ಅಂತ ನೀನು ಹೇಳ್ಬಿಟ್ರೆ, ನಾನು ನೋಡಿಲ್ಲ ಅಂತೇನು ಆಗಲ್ಲ” ಎಂದ.
ಆ ಹುಡುಗಿ ಮಣಿಗಳ ಪರದೆಯತ್ತ ನೋಡುತ್ತಾ “ಇದರ ಮೇಲೆ ಏನೋ ಬರೆದಿದ್ದಾರೆ, ಅದರ ಅರ್ಥ ಏನು ?”
“Anis del Toro. ಅದೊಂದು ಡ್ರಿಂಕ್ ಹೆಸರು”
`
`ಕುಡಿಯೋಣ್ವಾ?”
ಆತ ಪರದೆಯ ಮೂಲಕ “ಇಲ್ಲಿ ಬನ್ನಿ” ಎಂದು ಕರೆದ. ಆ ಹೆಂಗಸು ಬಾರ್ ನಿಂದ ಹೊರಗೆ ಬಂದಳು.
“ನಾಲ್ಕು ರಿಯಾಲ್**.”
“ಎರಡು Anis del Toro ಬೇಕು.”
“ನೀರು ಬೆರೆಸೋದಾ?”
“ನಿನಗೆ ನೀರು ಬೆರೆಸಬೇಕಾ?”
“ನನಗೆ ಗೊತ್ತಿಲ್ಲ” ಎಂದಳು ಆ ಹುಡುಗಿ, “ನೀರು ಬೆರೆಸಿದರೆ ಚೆನ್ನಾಗಿರುತ್ತಾ?”
“ಪರವಾಗಿಲ್ಲ.”
“ನೀರು ಜೊತೆಗೆ ಕೊಡೋದಾ?” ಎಂದು ಆ ಹೆಂಗಸು ಮತ್ತೊಮ್ಮೆ ಕೇಳಿದಳು.
“ಹ್ಞೂ, ನೀರಿನ ಜೊತೆಗೆ.”
“ಒಳ್ಳೆ ಸಿಹಿ ಔಷದಿಯ (licorice***) ಹಾಗಿದೆ ಇದರ ರುಚಿ” ಎಂದಳು ಆ ಹುಡುಗಿ ಗ್ಲಾಸ್ ಕೆಳಗಿಡುತ್ತಾ.
“ಎಲ್ಲ ಹಾಗೆಯೇ ರುಚಿಸೋದು.”
“ಹ್ಞೂ, ಅದೂಸರಿ. ಎಲ್ಲ ಔಷದಿಯ ಹಾಗೇ ರುಚಿಸೋದು. ಅದ್ರಲ್ಲೂ ನೀನು ಇಷ್ಟೂ ದಿವಸ ಕುಡಿದು ವ್ಯರ್ಥ ಮಾಡಿದ್ದೀಯಲ್ಲ, absinthe, ಅದೂ ಹಾಗೇ ಅಲ್ವಾ.”
“ಓಹ್, ಸಾಕು ಸುಮ್ನಿರು ಮತ್ತೆ ಶುರು ಮಾಡಬೇಡ.”
“ನೀನೆ ಶುರು ಮಾಡಿದ್ದು,” ಎಂದಳು “ ನಾನು ನನ್ನ ಪಾಡಿಗೆ ಖುಷಿ ಖುಷಿಯಾಗಿದ್ದೆ.”
“ಸರಿ ಬಿಡು. ಈಗ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡೋಣ.”
“ಸರಿ ಬಿಡು. ನಾನು ಅದೇ ಮಾಡ್ತಿದ್ದಿದ್ದು. ನಾನು ಈ ಎದುರಿಗಿರುವ ಬೆಟ್ಟಗಳು ಬಿಳಿಯ ಆನೆಗಳ ಹಾಗಿವೆ ಎಂದೆ, ಅದು ಖುಷಿಯಾಗಿರೋದೇ ಅಲ್ವಾ?”
“ಅದು ಸರಿ.”
“ಈ ಹೊಸ ಡ್ರಿಂಕ್ ಕುಡಿಯೋಣ ಎಂದೆ. ಇಷ್ಟಕ್ಕೂ ನಾವು ದಿನಾ, ಸುಮ್ನೆ ಸುತ್ತಲೂ ನೋಡುತ್ತಾ, ಹೊಸ ಹೊಸ ಡ್ರಿಂಕ್ಸ್ ಕುಡಿಯುತ್ತಾ ನಮ್ಮ ಪಾಡಿಗೆ ಆರಾಮವಾಗಿರೋದು ತಾನೇ ಮಾಡ್ತಿರೋದು.”
“ಸರಿ ಬಿಡು ಅಂದೇ ಅಲ್ವಾ”
ಆ ಹುಡುಗಿ ಎದುರಿಗಿದ್ದ ಬೆಟ್ಟಗಳನ್ನು ನೋಡುತ್ತಾ ಕೂತಳು.
“ಎಷ್ಟು ಸುಂದರವಾಗಿವೆ ಅಲ್ವಾ ಆ ಬೆಟ್ಟಗಳ ಸಾಲು,” ಎಂದಳು “ನೋಡಕ್ಕೇನೋ ಬಿಳಿ ಆನೆಗಳ ಹಾಗೆ ಕಾಣಿಸ್ತಿಲ್ಲ. ಆದರೆ ಬೆಟ್ಟಗಳ ಮೈಬಣ್ಣ ಮಾತ್ರ ಆ ಮರಗಳ ನಡುವಿನಿಂದ ಹಾಗೇ ಕಾಣಿಸ್ತಿದೆ.”
“ಇನ್ನೊಂದು ರೌಂಡ್?”
“ಸರಿ”
ಆ ಬಿದಿರ ಮಣಿಗಳು ಬಿಸಿ ಗಾಳಿಗೆ ಹಾರಾಡುತ್ತಾ ಇವರಿಬ್ಬರೂ ಕುಳಿತಿದ್ದ ಮೇಜಿಗೆ ತಾಕಿ ಸದ್ದು ಮಾಡಿತು.
“ಬಿಯರ್ ತಣ್ಣಗೆ ಒಂತರಾ ಚನ್ನಾಗಿದೆ” ಎಂದ ಆತ.
“ಸಕತ್ತಾಗಿದೆ” ಎಂದಳು.
“ಇದೊಂದು ಬಹಳ ಚಿಕ್ಕ ಆಪರೇಷನ್ , ಜಿಗ್” ಎಂದ “ಹಾಗೆ ನೋಡಿದರೆ ಇದು ಆಪರೇಷನ್ ಅನ್ನುವುದಕ್ಕೂ ಆಗೋಲ್ಲ. ”
ಆಕೆ ಮೇಜಿನ ಕಾಲು ಮತ್ತು ಅದರಡಿಯ ನೆಲವನ್ನೇ ನೋಡುತ್ತಾ ಮಾತನಾಡದೆ ಕೂತಳು.
“ನಿನಗೆ ಖಂಡಿತ ಏನೂ ಅನ್ಸೋದಿಲ್ಲ, ಜಿಗ್. ಇದು ಅಂತ ದೊಡ್ಡ ವಿಷ್ಯ ಅಲ್ವೇ ಅಲ್ಲ. ಸುಮ್ಮನೆ ಒಂದಷ್ಟು ಗಾಳಿ ಒಳಗೆ ಬಿಡುವುದಷ್ಟೇ. ”
ಆಕೆ ಏನು ಮಾತನಾಡದೆ ಸುಮ್ಮನೆ ಕೂತಿದ್ದಳು.
“ನಾನು ನಿನ್ನ ಜತೆಯೇ ಇರುತ್ತೇನೆ. ಅವರು ಒಂದಷ್ಟುಗಾಳಿ ಒಳ ಬಿಡಬಹುದಷ್ಟೆ, ಆಮೇಲೆ ಎಲ್ಲ ಮೊದಲಿನ ಹಾಗೆ ಇರುತ್ತೆ.”
“ಆನಂತರ ಏನ್ ಮಾಡೋಣ?”
“ಆಮೇಲೆ ಎಲ್ಲ ಸರಿಹೋಗುತ್ತೆ, ಮೊದಲಿನ ಹಾಗೆಯೇ ಇರಬಹುದು.”
“ನಿಂಗೆ ಯಾಕೆ ಹಾಗನ್ನಿಸುತ್ತೆ?”
“ನಮ್ಮಿಬ್ಬರನ್ನೂ ಕಾಡ್ತಾ ಇರೋದು ಅದೊಂದೇ ವಿಷಯ. ನಾವಿಬ್ಬರೂ ಪದೇ ಪದೇ ಜಗಳ ಆಡೋಕೆ ಕಾರಣಾನೇ ಅದು.”
ಆಕೆ ಆ ಪರದೆಯನ್ನೇ ನೋಡುತ್ತಾ, ಒಂದೆರಡು ಮಣಿಯ ದಾರಗಳನ್ನು ತನ್ನ ಕೈಯಲ್ಲಿ ಹಿಡಿದು ಕೊಂಡಳು.
“ಇದೊಂದು ಆಗೋದ್ರೆ ನಾವಿಬ್ರು ಮೊದಲಿನ ಹಾಗೆ ಖುಷಿಯಾಗಿರಬಹುದು ಅನ್ನಿಸುತ್ತಾ ನಿನಗೆ?”
“ಖಂಡಿತಾ ಖುಷಿಯಾಗಿರ್ತೇವೆ, ಹೆದರಬೇಡ. ಈ ಆಪರೇಷನ್ ಆಗಿರೋ ಬಹಳಷ್ಟು ಜನರನ್ನ ನೋಡಿದೀನಿ ನಾನು.”
“ಹೌದೌದು, ಅದಾದ ನಂತರ ಬಹಳ ಖುಷಿಯಾಗೇ ಇದಾರೆ” ಎಂದಳು.
“ನಿನಗೆ ಬೇಡ ಅನ್ನಿಸಿದರೆ ಬೇಡ. ನಾನು ನಿನ್ನನ್ನು ಖಂಡಿತಾ ಬಲವಂತ ಮಾಡಲ್ಲ. ಆದರೆ ಇದು ಬಹಳ ಚಿಕ್ಕ ವಿಷಯ, ಹೆಚ್ಚು ತಲೆಕೆಡಿಸ್ಕೊಳ್ಳೋ ಅಗತ್ಯ ಇಲ್ಲ.”
“ಈ ಆಪರೇಷನ್ ಆಗಲೇಬೇಕಾ?”
“ನಂಗೇನೋ ನಮ್ಮ ಮುಂದಿರುವುದರಲ್ಲೇ ಇದು ಒಳ್ಳೆಯ ಆಯ್ಕೆ ಅನ್ನಿಸುತ್ತೆ. ಆದ್ರೆ ನಿನಗೆ ಬೇಡ ಅನ್ನಿಸಿದರೆ ಖಂಡಿತ ಬಲವಂತ ಮಾಡಲ್ಲ.”
“ಆದ್ರೆ ನೀನು ಹೇಳಿದ ಹಾಗೆ ಮಾಡಿದ್ರೆ ಖುಷಿಯಾಗಿರ್ತೀಯಾ, ಮತ್ತು ನಾವಿಬ್ರೂ ಮೊದಲಿನ ಹಾಗೆಯೇ ಇರಬಹುದು, ನೀನು ಮೊದಲಿನ ಹಾಗೆಯೇ ನನ್ನನ್ನು ಪ್ರೀತಿಸುತ್ತೀಯಾ ಅಲ್ವಾ?”
“ನಾನು ಈಗಲೂ ನಿನ್ನನ್ನು ಪ್ರೀತಿಸ್ತೀನಿ. ನಾನು ಎಷ್ಟು ಪ್ರೀತಿಸ್ತೀನಿ ಅಂತ ನಿನಗೂ ಗೊತ್ತು.”
“ಗೊತ್ತು. ಆದ್ರೆ ನಾನು ನೀನೇಳಿದ ಹಾಗೆ ಮಾಡಿದ್ರೆ ಮೊದಲಿನ ಹಾಗೆ ಎಲ್ಲ ಚೆನ್ನಾಗಿರುತ್ತೆ, ಆನಂತರ ನಾನು ಈ ಬೆಟ್ಟಗಳು ಬಿಳಿ ಆನೆಗಳ ಹಾಗೆ ಕಾಣಿಸ್ತಾ ಇವೆ ಅಂದರೆ ನಿನಗೆ ಇಷ್ಟ ಆಗುತ್ತೆ ಅಲ್ವಾ?”
“ಖಂಡಿತ ಇಷ್ಟ ಆಗುತ್ತೆ. ಈಗಲೂ ಇಷ್ಟಾನೇ ಆದರೆ ಅದರ ಬಗ್ಗೆ ಯೋಚಿಸೋಕ್ಕೆ ಆಗ್ತಿಲ್ಲ ನನಗೆ. ನನ್ನ ತಲೆಯೊಳಗೆ ಏನಾದರೂ ಹೊಕ್ಕರೆ ಹೇಗೆ ಅಂತ ಗೊತ್ತಲ್ವಾ ನಿನಗೆ.”
“ನೀ ಹೇಳಿದ ಹಾಗೆ ನಾನು ಮಾಡಿದ್ರೆ, ಯೋಚನೆ ಹೊರಟೋಗುತ್ತಾ?”
“ಅದರ ಬಗ್ಗೆ ಯೋಚಿಸೋಲ್ಲಾ ಯಾಕೆಂದರೆ ನಿಜ್ವಾಗಲೂ ಚಿಕ್ಕ ವಿಷಯ-”
“ಹಾಗಿದ್ದರೆ ಮಾಡಿಸ್ಕೊತೀನಿ ಬಿಡು. ಯಾಕೆಂದರೆ ನನ್ನ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ.”
“ಹಾಗಂದ್ರೇನು?”
“ನನ್ನ ಬಗ್ಗೆ ನಾನು ಹೆಚ್ಚು ಚಿಂತಿಸೋದಿಲ್ಲ.”
“ಒಳ್ಳೆ ಸರಿ ಹೋಯಿತು, ನನಗೆ ನಿನ್ನ ಬಗ್ಗೆ ಕಾಳಜಿ ಇದೆ.”
“ಖಂಡಿತಾ ಅದರ ಬಗ್ಗೆ ಸಂಶಯ ಇಲ್ಲ, ಆದರೆ ನನಗೆ ನನ್ನ ಬಗ್ಗೆ ಚಿಂತೆಯಿಲ್ಲ, ಅಷ್ಟೇ. ನೀನ್ಹೇಳಿದಹಾಗೆ ಮಾಡ್ತೀನಿ, ಆನಂತರ ಎಲ್ಲ ಮೊದಲಿನ ಹಾಗೆಯೇ ಇರ್ತೀವಿ ಬಿಡು .”
“ನಿನಗೆ ಹಾಗನ್ನಿಸಿದರೆ, ಬೇಡ ಅಂದೇ ಅಲ್ವಾ.”
ಆಕೆ ಎದ್ದು ಆ ಸ್ಟೇಷನ್ ನ ಒಂದು ಕೊನೆಗೆ ಹೋದಳು. ಆಚೆ ಬದಿ ಇದ್ದ ಹೊಲಗಳಲ್ಲಿ ಯಾವುದೋ ಕಾಳುಗಳು ಬೆಳದಿದ್ದರು ಮತ್ತು ಎಬ್ರೊ ನದಿಯ ದಡದ ಉದ್ದಕ್ಕೂ ಮರಗಳು ಬೆಳೆದಿದ್ದವು. ಆ ನದಿಯಿಂದ ಒಂದಷ್ಟು ದೂರದಲ್ಲಿ ಬೆಟ್ಟಗಳ ಸಾಲುಗಳಿದ್ದವು. ಆಗಸದಲ್ಲಿ ತೇಲುತ್ತಿದ್ದ ಮೋಡಗಳ ನೆರಳು ಆ ಕಾಳುಗಳ ಹೊಲಗಳ ಮೇಲೆ ಸಾಗುತ್ತಿತ್ತು ಮತ್ತು ಆಕೆಗೆ ಮರಗಳ ಸಾಲಿನ ನಡುವಿನಿಂದ ಆ ನದಿ ಕಾಣಿಸುತ್ತಿತ್ತು.
“ನೀನು ಹೇಳಿದ್ದೊಂದಾದರೆ ಈ ಜಗತ್ತಿನಲ್ಲಿ ಎಲ್ಲವನ್ನೂ ನಮ್ಮದಾಗಿಸಿಕೊಳ್ಳಬಹುದು, ಮತ್ತೆ ನಮ್ಮ ಬಳಿ ಈಗ ಇರುವುದೆಲ್ಲ ಆಗಲೂ ಇರುತ್ತೆ ಹಾಗೆಯೇ ನಾವು ಪ್ರತೀ ದಿನ ಎಷ್ಟು ಸಾಧ್ಯವೋ ಅಷ್ಟು ಬದುಕನ್ನು ಅಸಹನೀಯಗೊಳಿಸಿಕೊಳ್ಳುತ್ತೇವೆ.”
“ಏನಂದೆ?”
“ಎಲ್ಲವನ್ನೂ ನಮ್ಮದಾಗಿಸಿಕೊಳ್ಳಬಹುದು, ಎಂದೆ.”
“ಹೌದು, ಎಲ್ಲವನ್ನೂ ನಮ್ಮದಾಗಿಸಿಕೊಳ್ಳಬಹುದು.”
“ಇಲ್ಲ ಹಾಗಾಗಲ್ಲ.”
“ಇಡೀ ಪ್ರಪಂಚವನ್ನೇ ನಮ್ಮದಾಗಿಸಿಕೊಳ್ಳಬಹುದು.”
“ಇಲ್ಲ, ಹಾಗಾಗಲ್ಲ.”
“ನಾವು ಎಲ್ಲಿ ಬೇಕಾದರೂ ಹೋಗಬಹುದು.”
“ಇಲ್ಲ, ಆಗಲ್ಲ. ಇದ್ಯಾವುದೂ ಇನ್ಮುಂದೆ ನಮ್ಮದಾಗಿರೋಲ್ಲ.”
“ಇದೆಲ್ಲ ನಮ್ಮದೇ.”
“ಇಲ್ಲ, ನಮ್ಮದಲ್ಲ. ಒಮ್ಮೆ ಅವರು ನಮ್ಮಿಂದ ಅದನ್ನು ತೆಗೆದು ಕೊಂಡಮೇಲೆ, ಇನ್ನ್ಯಾವತ್ತು ಮರಳಿ ಪಡೆದುಕೊಳ್ಳೋಕ್ಕಾಗಲ್ಲ.”
“ಆದರೆ ಅದನ್ನ ಅವ್ರು ತೆಗೆದುಕೊಂಡು ಹೋಗಿಲ್ಲ.”
“ಸರಿ ಕಾದು ನೋಡೋಣ ಬಿಡು.”
“ನೀನು ಮೊದಲು ಇಲ್ಲಿ ನೆರಳಿಗೆ ಬಾ, ನೀನ್ಯಾಕೆ ಹಾಗೆ ಯೋಚಿಸ್ತಾ ಇದ್ದೀಯ” ಎಂದ.
“ನನಗೆ ಬರೀ ಅನ್ನಿಸ್ತಾ ಇರೋದಲ್ಲ, ಅದು ಆಗೋದೇ ಹಾಗೆ ಅಂತ ನನಗೆ ಚೆನ್ನಾಗಿ ಗೊತ್ತು” ಎಂದಳು
“ನಿನಗೆ ಬೇಡ ಅನ್ನಿಸಿದರೆ ನಿನ್ನ ಮೇಲೆ ನಾನು ಯಾವ ಒತ್ತಾಯ–”
“ಆದರೆ, ನನಗೆ ಅದರಿಂದ ಒಳ್ಳೆಯದಾಗುತ್ತೆ ಅಂತೇನು ಅಲ್ಲ, ಅಲ್ವಾ” ಎಂದಳು “ನಂಗೊತ್ತು. ಇನ್ನೊಂದು ಬಿಯರ್ ಕುಡಿಯೋಣ್ವಾ?”
“ಸರಿ ಹಾಗಿದ್ರೆ. ಆದ್ರೆ ನೀನು ಒಂದು ವಿಷಯ ಅರ್ಥ ಮಾಡ್ಕೋ–”
“ಅರ್ಥ ಆಯ್ತು” ಎಂದಳು “ಒಂದು ಸ್ವಲ್ಪ ಹೊತ್ತು ಮಾತನಾಡದೆ ಕೂರೋಣ್ವಾ?”
ಇಬ್ಬರೂ ಮೇಜಿನ ಎದುರು ಬದುರು ಕುಳಿತುಕೊಂಡರು, ಆಕೆ ಕಣಿವೆಯ ಆಚೆ ಬದಿಯ ಬರಡು ಬೆಟ್ಟಗಳನ್ನೇ ನೋಡುತ್ತಾ ಕೂತಳು, ಆತ ಎದುರಿಗಿದ್ದ ಆಕೆಯನ್ನೊಮ್ಮೆ ನೋಡಿ, ನಂತರ ಮೇಜನ್ನ ನೋಡುತ್ತಾ ಕೂತ.
“ನೀನು ಒಂದು ವಿಷಯ ಅರ್ಥ ಮಾಡಿಕೊ, ನಿನಗೆ ಬೇಡ ಅನ್ನಿಸಿದರೆ, ಬೇಡ. ನಿನಗೆ ಹೇಗೆ ಅನ್ನಿಸುತ್ತದೆ ಹಾಗೆ ಮಾಡು, ನಾನು ಏನೇ ಆದರೂ ನಿನ್ನ ಜತೆಗೇ ಇರುತ್ತೇನೆ.”
“ನಾವಿಬ್ರೂ ಹೊಂದಿಕೊಂಡು ಹೋಗಬಹುದು, ಆದರೆ ಇದರ ಬಗ್ಗೆ ನಿನಗೆ ಏನೂ ಅನ್ನಿಸುತ್ತಿಲ್ಲವಾ?”
“ನನಗೂ ಅನ್ನಿಸುತ್ತದೆ. ಆದರೆ ನನಗೆ ನಿನ್ನನ್ನು ಬಿಟ್ಟು ಇನ್ನ್ಯಾರೂ ಬೇಡ. ಇನ್ನೇನೂ ಬೇಡ. ಮತ್ತು ಇದು ಬಹಳ ಸಣ್ಣ ವಿಷಯ ಅಂತ ನನಗೆ ಚೆನ್ನಾಗಿ ತಿಳಿದಿದೆ”
“ಹೌದು, ನಿನಗೆ ಇದೆಲ್ಲ ಬಹಳ ಸರಳ ಅಂತ ತಿಳಿದಿದೆ.“
“ನೀನು ಏನಾದ್ರೂ ಹೇಳು, ಆದರೆ ನನಗೂ ಗೊತ್ತಿದೆ.”
“ನಂಗೋಸ್ಕರ ಒಂದು ಕೆಲಸ ಮಾಡ್ತೀಯ?”
“ನಿಂಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ.”
“ದಯಮಾಡಿ ದಯಮಾಡಿ ದಯಮಾಡಿ ದಯಮಾಡಿ ದಯಮಾಡಿ ದಯಮಾಡಿ ಮಾತಾಡೋದು ನಿಲ್ಲಿಸ್ತೀಯ?”
ಆತ ಏನೂ ಮಾತನಾಡದೆ ತನ್ನ ಎದುರಿಗಿದ್ದ ಸ್ಟೇಷನ್ನಿನ ಗೋಡೆಗೆ ಒರಗಿದ್ದ ಬ್ಯಾಗ್ ಗಳನ್ನು ನೋಡಿದ. ಅವುಗಳ ಮೇಲೆ ಅವರಿಬ್ಬರೂ ಉಳಿದುಕೊಂಡಿದ್ದ ಹೋಟೆಲ್ಗಳ ಸ್ಟಿಕರ್ ಅಂಟಿದ್ದವು.
“ಆದರೆ ನೀನು ಮಾಡ್ಲೇಬೇಕು ಅಂತ ಇಲ್ಲ” ಎಂದ “ಇದ್ಯಾವುದರ ಬಗ್ಗೆಯೂ ನನಗೆ ಚಿಂತೆಯಿಲ್ಲ– “
“ನಾನು ಕಿರುಚಿಬಿಡ್ತೀನಿ” ಎಂದಳು ಆಕೆ.
ಬಾರ್ ನ ಹೆಂಗಸು ಆ ಪರದೆ ಸರಿಸುತ್ತಾ ಎರಡು ಗ್ಲಾಸ್ ಬಿಯರ್ ತಂದು ಆ ಮೇಜಿನ ಮೇಲೆ ಒದ್ದೆಯಾಗಿದ್ದ ರಟ್ಟುಗಳ ಮೇಲಿಟ್ಟಳು “ರೈಲು ಇನ್ನೈದು ನಿಮಿಷಗಳಲ್ಲಿ ಬರುತ್ತದೆ” ಎಂದಳು ಸ್ಪ್ಯಾನಿಷ್ ಭಾಷೆಯಲ್ಲಿ.
“ಏನಂದಳು?” ಎಂದು ಕೇಳಿದಳು.
“ಆ ರೈಲು ಇನ್ನೈದು ನಿಮಿಷದಲ್ಲಿ ಬರುತ್ತದೆ.”
ಆ ಹುಡುಗಿ, ಹೆಂಗಸಿನ ಕಡೆ ತಿರುಗಿ, ಅವಳಿಗೆ ಧನ್ಯವಾದ ಹೇಳುವ ಹಾಗೆ, ಚಂದವಾಗಿ ಮುಗುಳ್ನಕ್ಕಳು.
“ಈ ಬ್ಯಾಗುಗಳನ್ನ ಸ್ಟೇಷನ್ನ ಆ ಕಡೆಗೆ ತೆಗೆದುಕೊಂಡು ಹೋಗಿ ಇಡುತ್ತೇನೆ ” ಎಂದ. ಆಕೆ ಮುಗುಳ್ನಕ್ಕಳು.
“ಸರಿ. ಬೇಗ ಬಾ, ಬಿಯರ್ ಮುಗಿಸೋಣ.”
ಆತ ಎರಡು ದೊಡ್ಡ ಬ್ಯಾಗ್ ಗಳನ್ನ ತೆಗೆದುಕೊಂಡು ಹೋಗಿ ಸ್ಟೇಷನ್ನಿನ ಮತ್ತೊಂದು ಆ ಬದಿಯಲ್ಲಿದ್ದ ಹಳಿಗಳ ಬಳಿಗೆ ಹೋಗಿ ಇಟ್ಟ. ರೈಲು ಬರುತ್ತಿದೆಯಾ ಎಂದು ಒಮ್ಮೆ ನೋಡಿದ, ಇನ್ನೂ ರೈಲಿನ ಸುಳಿವಿರಲಿಲ್ಲ. ಮರಳಿ ಬರುವಾಗ ರೈಲಿಗಾಗಿ ಕಾಯುತ್ತ ಕುಡಿಯುತ್ತಾ ಕೂತ ಗಂಡಸರಿದ್ದ ಬಾರ್ ಕೋಣೆಯ ಮೂಲಕ ಬಂದ. ಒಂದು ರೌಂಡ್ anis**** ಕುಡಿದು ಅಲ್ಲಿದ್ದವರನ್ನೊಮ್ಮೆ ನೋಡಿದ. ಎಲ್ಲರೂ ರೈಲಿಗಾಗಿ ಕಾಯುತ್ತಾ ಕುಳಿತಿದ್ದರು. ಆ ಮಣಿಗಳ ಪರದೆ ಸರಿಸಿ ಹೊರಗೆ ಬಂದ. ಮೇಜಿನ ಬಳಿ ಕುಳಿತಿದ್ದ ಆಕೆ ಅವನನ್ನು ನೋಡಿ ನಕ್ಕಳು.
“ಈಗ ಆರಾಮಾ?” ಎಂದು ಕೇಳಿದ.
“ಆರಾಮಾಗಿದೀನಿ. ಏನು ತೊಂದರೆಯಿಲ್ಲ. ಆರಾಮವಾಗೇ ಇದ್ದೀನಿ” ಎಂದಳು.
* ಎಬ್ರೊ – ಸ್ಪೇನ್ ನ ಒಂದು ನದಿ.
** ರಿಯಾಲ್ ? ಸ್ಪೇನ್ ನ ನೋಟು.
***licorice – ಒಂದು ಔಷದೀಯ ಸಸ್ಯದ ಬೇರಿನಿಂದ ತೆಗೆಯುವ ಸಿಹಿ ದ್ರಾವಣ.
**** anis – anise, ಅಥವಾ aniseed – ಒಂದು ತರಹದ ಹೂವಿನ ಗಿಡದಿಂದ ತೆಗೆಯುವ ದ್ರಾವಣ.


