ತಮಿಳುನಾಡಿನ ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿಯೊಬ್ಬರು, ಹಿಂದಿ ಗೊತ್ತಿಲ್ಲದವರ ಮೇಲಿನ ಹಿಂದಿ ಹೇರಿಕೆಯು, ಬ್ರಾಹ್ಮಣರಿಗೆ ಕುರಾನ್ ಕೊಟ್ಟಂತೆ ಎಂದು ತನ್ನ ಉನ್ನತ ಅಧಿಕಾರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಬಿ.ಬಾಲಮುರುಗನ್ ಅವರನ್ನು ಕಳೆದ ವರ್ಷ ಚೆನ್ನೈನಲ್ಲಿರುವ ಜಿಎಸ್‌ಟಿ ಕಛೇರಿಯ ಹಿಂದಿ ಸೆಲ್‌ಗೆ ವರ್ಗ ಮಾಡಲಾಗಿತ್ತು. ಈಗ ಅವರು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ (CBIC) ಪತ್ರವೊಂದನ್ನು ಬರೆದಿದ್ದು, ಅದರಲ್ಲಿ, “ಹಿಂದಿ ಸೆಲ್‌ಗೆ ನೇಮಿಸಿರುವ ಅಧಿಕಾರಿಗೆ ಹಿಂದಿಯನ್ನು ಓದಲು-ಬರೆಯಲು ಬರಬೇಕು. ಅಲ್ಲಿ ಕೆಲಸ ಮಾಡಲು ಕನಿಷ್ಟ ಇಚ್ಚೆಯಾದರೂ ಇರಬೇಕು ಎಂಬುದು ನನ್ನ ವಿನಮ್ರ ಸಲಹೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ
ಆಗಸ್ಟ್ 9 ರಂದು ಬರೆದಿರುವ ಪತ್ರದಲ್ಲಿ, “ಹಿಂದಿ ಸೆಲ್‌ನಲ್ಲಿನ ಕೆಲಸದ ಅಧಿಕೃತ ಸಂವಹನದಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸುವುದನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಉತ್ತೇಜಿಸುವುದಾಗಿರುತ್ತದೆ. ನನಗೆ ಹಿಂದಿಯಲ್ಲಿ ABCD ಯೂ ಗೊತ್ತಿಲ್ಲ. ಹಾಗಾಗಿ ಹಿಂದಿ ಕೋಶದಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ. ನನ್ನನ್ನು ಹಿಂದಿ ಕೋಶದಲ್ಲಿ ಪೋಸ್ಟಿಂಗ್ ಮಾಡುವುದು ನನ್ನ ಮೇಲಿನ ಹಿಂದಿ ಹೇರಿಕೆಯಲ್ಲದೇ ಮತ್ತೇನೂ ಅಲ್ಲ. ಇದು ಬ್ರಾಹ್ಮಣನಿಗೆ ಬೈಬಲ್ ಅಥವಾ ಕುರಾನ್ ಕೊಟ್ಟು, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ನಿರ್ದೇಶಿಸುವಂತಿದೆ” ಎಂಬುದಾಗಿ ಹೇಳಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ಹಿಂದಿ ತೆಗೆಯಿರಿ, ಇಲ್ಲ ಎಲ್ಲಾ ಅಧಿಕೃತ 22 ಭಾಷೆಗಳನ್ನು ಬಳಸಿ: ಟಿ.ಎಸ್.ನಾಗಾಭರಣ
“ಹಿಂದಿ ತಿಳಿದಿರುವ ಮತ್ತು ಹಿಂದಿ ಸೆಲ್‌ನಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಧಿಕಾರಿಗಳನ್ನು ಮಾತ್ರ ಅಲ್ಲಿಗೆ ನೇಮಿಸಬೇಕು ಎಂದು, CBIC ಅಧ್ಯಕ್ಷರು ಮತ್ತು ಸಿಬಿಐಸಿಯ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು ನಾನು ವಿನಂತಿಸುತ್ತೇನೆ” ಎಂದಿದ್ದಾರೆ.
“ನಾವು ಸಹಿ ಮಾಡುವ ಖಡತಗಳಲ್ಲಿ ಏನು ಬರೆದಿದೆ ಎಂದು ಅರ್ಥಮಾಡಿಕೊಳ್ಳುವುದಕ್ಕೂ ನಮಗೆ ಸಾಧ್ಯವಿಲ್ಲ. ಇಲ್ಲಿ ಕೆಲಸ ಮಾಡುವ ಅರ್ಧದಷ್ಟು ಜನ ಹಿಂದಿ ಬಲ್ಲವರೇ ಆಗಿದ್ದಾರೆ. ಇದು ನ್ಯಾಯಯೋಚಿತವೇ? ಹಿಂದಿ ಹೇರಿಕೆಯ ರಾಜಕೀಯಕ್ಕೆ ಇಳಿಯಲು ಇಷ್ಟವಿಲ್ಲದಿದ್ದರೂ, ಒಬ್ಬ ಅಧಿಕಾರಿಯನ್ನು ಇದಕ್ಕೆ ಒಳಪಡಿಸುವುದು ಅನ್ಯಾಯವಾಗಿದೆ. ನಾನು CBICಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ” ಎಂದು ಬಾಲಮುರುಗನ್ ಹೇಳಿದ್ದಾರೆ.
CBIC, ಎಲ್ಲಾ IRS ಅಧಿಕಾರಿಗಳ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದ್ದು, ಹಿಂದಿ ಸೆಲ್, ಹಿಂದಿ ಅನುಷ್ಠಾನದ ಬಗ್ಗೆ ತ್ರೈಮಾಸಿಕ ಸಂಖ್ಯಾಶಾಸ್ತ್ರೀಯ ವರದಿಗಳನ್ನು ಸಂಗ್ರಹಿಸುತ್ತದೆ. ಹಾಗಾಗಿ ತನ್ನ ಅಧಿಕೃತ ಕೆಲಸದಲ್ಲಿ ಹಿಂದಿ ಭಾಷೆಯ ಬಳಕೆಯು ಅಗತ್ಯವಾಗಿದೆ.
ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್; ತಯಾರಿಕರಿಗೆ ಬೆದರಿಕೆ!


